varthabharthi

ನಿಮ್ಮ ಅಂಕಣ

‘ಚುನಾವಣಾ ಬಾಂಡ್ ಯೋಜನೆ’ಯ ಅಸಲಿ ಉದ್ದೇಶವೇನು?

ವಾರ್ತಾ ಭಾರತಿ : 11 Jan, 2018
ಸುರೇಶ್ ಭಟ್, ಬಾಕ್ರಬೈಲ್

ಮೋದಿ ಸರಕಾರ ಹೀಗೆ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡು ಚುನಾವಣಾ ಬಾಂಡ್‌ಗಳ ಉದ್ದೇಶ ರಾಜಕೀಯ ದೇಣಿಗೆಗಳ ವ್ಯವಸ್ಥೆಯ ಶುದ್ಧೀಕರಣ ಎಂದು ಟಾಂಟಾಂ ಮಾಡುತ್ತಿದೆ. ಆದರೆ ಚುನಾವಣಾ ಬಾಂಡ್‌ಗಳು ನಿಜವಾಗಿಯೂ ಹಾಗೂ ಪ್ರಾಮಾಣಿಕವಾಗಿಯೂ ರಾಜಕೀಯ ವ್ಯವಸ್ಥೆಯನ್ನು ಪರಿಶುದ್ಧಗೊಳಿಸಲಿವೆಯೇ ಎಂದು ಕೇಳಿದರೆ ಇಲ್ಲವೆಂದೇ ಹೇಳಬೇಕಾಗುತ್ತದೆ. ವಾಸ್ತವದಲ್ಲಿ ಮೋದಿಯವರು ಯಥಾಪ್ರಕಾರ ಜನರ ಕಣ್ಣಿಗೆ ಮಂಕುಬೂದಿ ಎರಚುವ ತನ್ನ ಎಂದಿನ ಚಾಳಿಯನ್ನು ಇಲ್ಲಿಯೂ ಮುಂದುವರಿಸಿದ್ದಾರೆ.

2014ರ ಚುನಾವಣೆಗಳಲ್ಲಿ ಭಾರತೀಯ ಜನತಾ ಪಕ್ಷ ಅಭೂತಪೂರ್ವ ವಿಜಯ ಸಾಧಿಸಿ ಕೇಂದ್ರದಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯಕ್ರಮ ಭಾರೀ ವೇಗದಲ್ಲಿ ಮುಂದುವರಿಯುತ್ತಿದೆ. ಕಳೆದ ಸುಮಾರು ಮೂರೂವರೆ ವರ್ಷಗಳ ಅವಧಿಯಲ್ಲಿ ದಲಿತ, ಅಲ್ಪಸಂಖ್ಯಾತರ ಮೇಲೆ ಹೆಚ್ಚಿದ ದೈಹಿಕ ಮತ್ತು ಮಾನಸಿಕ ದಾಳಿಗಳು, ಕೋಮು ಧ್ರುವೀಕರಣದ ಪ್ರಕ್ರಿಯೆಗಳೇ ಮೊದಲಾದ ಘಟನೆಗಳೆಲ್ಲವೂ ಸಂಘ ಪರಿವಾರ ತನ್ನ ಈ ಗುಪ್ತ ಅಜೆಂಡಾದ ದಿಕ್ಕಿನಲ್ಲಿ ಹಾಕುತ್ತಿರುವ ದೊಡ್ಡ ದೊಡ್ಡ ಹೆಜ್ಜೆಗಳಾಗಿವೆ. ಇದಕ್ಕೆ ಇತ್ತೀಚಿನ ಸೇರ್ಪಡೆಯೆಂದರೆ ಮೋದಿ ಸರಕಾರದ ‘ಚುನಾವಣಾ ಬಾಂಡ್ ಯೋಜನೆ’. ಫೆಬ್ರವರಿ 2, 2017ರ ಬಜೆಟ್ ಅಧಿವೇಶನದಲ್ಲಿ ಮಾತನಾಡಿದ ವಿತ್ತಮಂತ್ರಿ ಅರುಣ್ ಜೇಟ್ಲಿ, ‘‘ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 70 ವರ್ಷಗಳೇ ಸಂದರೂ ಮುಕ್ತ ಹಾಗೂ ನ್ಯಾಯಯುತ ಚುನಾವಣೆಗಳಿಗೆ ಅತ್ಯಗತ್ಯವಿರುವ ರಾಜಕೀಯ ದೇಣಿಗೆಗಳ ವಿಷಯದಲ್ಲಿ ಪಾರದರ್ಶಕತೆ ತರಲು ಸಾಧ್ಯವಾಗಿಲ್ಲ; ಆದರೆ ಮೋದಿ ಸರಕಾರ ಇದನ್ನು ಬದಲಾಯಿಸಲಿದೆ’’ ಎಂದು ಘೋಷಿಸಿದರು. ಪಾರದರ್ಶಕತೆ ಬಗ್ಗೆ ಮಹಾ ಕಾಳಜಿಯುಳ್ಳವರಂತೆ ತೋರಿಸಿಕೊಳ್ಳುತ್ತಾ ಚುನಾವಣಾ ಬಾಂಡ್ ಯೋಜನೆಯನ್ನು ಸಂಸತ್ತಿನ ಮುಂದಿಟ್ಟರು. ‘‘ದಾನಿಗಳು ಚುನಾವಣಾ ಬಾಂಡ್‌ಗಳನ್ನು ಕೇವಲ ಚೆಕ್ಕು ಅಥವಾ ಡಿಜಿಟಲ್ ಮಾರ್ಗದ ಮೂಲಕವೇ ಖರೀದಿಸಬಹುದಾಗಿದೆ; ದಾನಿಗಳಿಂದ ಪಡೆಯುವ ಬಾಂಡ್‌ಗಳನ್ನು ಆಯಾ ರಾಜಕೀಯ ಪಕ್ಷ ತನ್ನ ಖಾತೆಯಲ್ಲಿ ಜಮೆ ಮಾಡಬೇಕಾಗುತ್ತದೆ; ಇದು ಇಡೀ ವ್ಯವಸ್ಥೆಯನ್ನು ಪಾರದರ್ಶಕಗೊಳಿಸಲಿದೆ’’ ಎಂದು ಭಾಷಣ ಬಿಗಿದರು. ಅದನ್ನು ಆಲಿಸಿದ ಮೋದಿ ಭಕ್ತರು ಇನ್ನೇನು ಒಳ್ಳೆಯ ದಿನಗಳು ಬಂದೇ ಬಿಡಲಿವೆ ಎಂದು ಕುಣಿದಾಡಿದ್ದರೆ ಅದರಲ್ಲಿ ಆಶ್ಚರ್ಯವಿಲ್ಲ.

ಇದಾದ 11 ತಿಂಗಳ ನಂತರ ಜನವರಿ 2, 2018ರಂದು ದೇಶದ ರಾಜಕೀಯ ದೇಣಿಗೆ ವ್ಯವಸ್ಥೆಯನ್ನು ಪರಿಶುದ್ಧಗೊಳಿಸಲು ಚುನಾವಣಾ ಬಾಂಡ್‌ಗಳ ಯೋಜನೆ ಕುರಿತು ಮೋದಿ ಸರಕಾರದ ಅಧಿಕೃತ ಪ್ರಕಟಣೆ ಹೊರಬಿದ್ದಿದೆ. ಅದೇ ದಿನ ಮಾತನಾಡಿದ ಅರುಣ್ ಜೇಟ್ಲಿ, ‘‘ಜನರಲ್ಲಿ ತಪ್ಪು ತಿಳಿವಳಿಕೆಗಳೇನಾದರೂ ಇದ್ದರೆ ಅವನ್ನು ಹೋಗಲಾಡಿಸಲು ಇಚ್ಛಿಸುತ್ತೇನೆ....... ಈಗ ರಾಜಕೀಯ ಪಕ್ಷಗಳಿಗೆ ಎಷ್ಟು ದೇಣಿಗೆ ಬರುತ್ತದೆ, ಯಾವ ಮೂಲಗಳಿಂದ ಬರುತ್ತದೆ ಎನ್ನುವುದು ತಿಳಿಯುವುದಿಲ್ಲ....... ಚುನಾವಣಾ ಬಾಂಡ್‌ಗಳು ಈ ವ್ಯವಸ್ಥೆಯನ್ನು ಗಣನೀಯವಾಗಿ ಪರಿಶುದ್ಧಗೊಳಿಸುತ್ತವೆ; ದಾನಿಗಳಿಂದ ರಾಜಕೀಯ ಪಕ್ಷಗಳಿಗೆ ಸಂದಾಯವಾಗುವ ಹಣವನ್ನು ಹೆಚ್ಚು ಪರಿಶುದ್ಧವಾಗಿಸುವುದರೊಂದಿಗೆ ಇಡೀ ಪ್ರಕ್ರಿಯೆ ಗಮನಾರ್ಹವಾಗಿ ಪಾರದರ್ಶಕವಾಗಿರುವುದನ್ನು ಖಚಿತಪಡಿಸುತ್ತವೆ’’ ಎಂದು ಕೊಚ್ಚಿದರು.

ಮೋದಿ ಸರಕಾರ ಹೀಗೆ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡು ಚುನಾವಣಾ ಬಾಂಡ್‌ಗಳ ಉದ್ದೇಶ ರಾಜಕೀಯ ದೇಣಿಗೆಗಳ ವ್ಯವಸ್ಥೆಯ ಶುದ್ಧೀಕರಣ ಎಂದು ಟಾಂಟಾಂ ಮಾಡುತ್ತಿದೆ. ಆದರೆ ಚುನಾವಣಾ ಬಾಂಡ್‌ಗಳು ನಿಜವಾಗಿಯೂ ಹಾಗೂ ಪ್ರಾಮಾಣಿಕವಾಗಿಯೂ ರಾಜಕೀಯ ವ್ಯವಸ್ಥೆಯನ್ನು ಪರಿಶುದ್ಧಗೊಳಿಸಲಿವೆಯೇ ಎಂದು ಕೇಳಿದರೆ ಇಲ್ಲವೆಂದೇ ಹೇಳಬೇಕಾಗುತ್ತದೆ. ವಾಸ್ತವದಲ್ಲಿ ಮೋದಿಯವರು ಯಥಾಪ್ರಕಾರ ಜನರ ಕಣ್ಣಿಗೆ ಮಂಕುಬೂದಿ ಎರಚುವ ತನ್ನ ಎಂದಿನ ಚಾಳಿಯನ್ನು ಇಲ್ಲಿಯೂ ಮುಂದುವರಿಸಿದ್ದಾರೆ. ಅಸಲಿಗೆ ನೋಟು ರದ್ದತಿಯ ಭರವಸೆಗಳ ಹಾಗೆ ಚುನಾವಣಾ ಬಾಂಡ್‌ಗಳ ಭರವಸೆಗಳೂ ಬರೀ ಪೊಳ್ಳು ಭರವಸೆಗಳಾಗಿವೆ! ಪಾರದರ್ಶಕತೆಯ ಹೆಸರಲ್ಲಿ ಬಿಡುಗಡೆಗೊಳ್ಳಲಿರುವ ಈ ಚುನಾವಣಾ ಬಾಂಡ್ ಯೋಜನೆಯನ್ನು ನಿಜವಾಗಿ ಢೋಂಗಿ ಯೋಜನೆಯೆಂದು ಕರೆಯುವುದೇ ಸೂಕ್ತ. ಅದು ಹೇಗೆಂದು ನೋಡೋಣ.

ಜನವರಿ 2ರಂದು ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಪ್ರಕಟಿಸಿರುವ ಮೋದಿ ಸರಕಾರದ ಮಾಧ್ಯಮ ಮಾಹಿತಿ ಇಲಾಖೆ, ಅದರ ಎಲ್ಲಾ ವಿವರಗಳನ್ನು ಸಾರ್ವಜನಿಕರಿಗೆ ಒದಗಿಸಿಲ್ಲ. ಇಲಾಖೆ ನೀಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಕೇವಲ ಐದು ಹೊಸ ಮಾಹಿತಿಗಳಿವೆ.

♦ ಬಾಂಡ್‌ಗಳನ್ನು ಕೇವಲ ಸ್ಟೇಟ್ ಬ್ಯಾಂಕಿನ ನಿರ್ದಿಷ್ಟ ಶಾಖೆಗಳಿಂದಷ್ಟೆ ಖರೀದಿಸಬಹುದು.

♦ ಬಾಂಡ್‌ಗಳು ರೂ. 1,000, 10,000, 1 ಲಕ್ಷ, 10 ಲಕ್ಷ ಮತ್ತು 1 ಕೋಟಿ ಮುಖಬೆಲೆಗಳಲ್ಲಿ ಲಭ್ಯವಾಗಲಿವೆ.

♦ ಬಾಂಡ್‌ಗಳನ್ನು ಖರೀದಿಸಿದ 15 ದಿನಗಳೊಳಗಾಗಿ ಅವನ್ನು ಕೇವಲ ನೋಂದಾಯಿತ ರಾಜಕೀಯ ಪಕ್ಷಗಳಿಗೆ ಮಾತ್ರ ದೇಣಿಗೆಯಾಗಿ ನೀಡಬೇಕು. 15 ದಿನಗಳ ನಂತರ ಆ ಬಾಂಡುಗಳಿಗೆ ಬೆಲೆ ಇರುವುದಿಲ್ಲ.

♦ ಕಳೆದ ಮಹಾ ಚುನಾವಣೆ ಅಥವಾ ಅಸೆಂಬ್ಲಿ ಚುನಾವಣೆಗಳಲ್ಲಿ ಶೇಕಡಾ 1ಕ್ಕಿಂತ ಕಡಿಮೆ ಮತ ಗಳಿಸಿದ ರಾಜಕೀಯ ಪಕ್ಷಗಳಿಗೆ ಬಾಂಡ್‌ಗಳ ಸೌಲಭ್ಯ ಇರುವುದಿಲ್ಲ.

♦ ಬಾಂಡ್‌ಗಳನ್ನು ಕೇಂದ್ರ ಸರಕಾರ ನಿರ್ದಿಷ್ಟವಾಗಿ ನಮೂದಿಸಬಹುದಾದಂತೆ ಜನವರಿ, ಎಪ್ರಿಲ್, ಜುಲೈ ಮತ್ತು ಅಕ್ಟೋಬರ್ ತಿಂಗಳಲ್ಲಿ ಬರೀ 10 ದಿನಗಳ ಕಾಲ ಮಾರಾಟ ಮಾಡಲಾಗುವುದು. ಮಹಾ ಚುನಾವಣೆಗಳ ಸಂದರ್ಭದಲ್ಲಿ ಮಾರಾಟಕ್ಕೆ 30 ಹೆಚ್ಚುವರಿ ದಿನಗಳನ್ನು ಒದಗಿಸಲಾಗುವುದು.

ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳಿಗೆ ಯಾರೆಲ್ಲ ದೇಣಿಗೆ ನೀಡುತ್ತಾರೆ, ಆ ದೇಣಿಗೆಗಳ ಮೊತ್ತವೆಷ್ಟು ಮತ್ತು ದೇಣಿಗೆಯ ಫಲಾನುಭವಿಗಳು ಯಾರು ಇವೇ ಮುಂತಾದ ವಿವರಗಳನ್ನು ತಿಳಿಯುವ ಹಕ್ಕು ಪ್ರಜೆಗಳಿಗಿದೆ. ಆದರೆ ಮೋದಿ ಸರಕಾರ ಭಾರೀ ಪ್ರಚಾರದೊಂದಿಗೆ ಘೋಷಿಸಿದ ಈ ಚುನಾವಣಾ ಬಾಂಡ್ ಯೋಜನೆಯಲ್ಲಿ ಬಾಂಡ್‌ಗಳ ಖರೀದಿದಾರರು ಯಾರೆಂಬ ಮಾಹಿತಿಯನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಲಾಗುವುದಿಲ್ಲ! ನಿಜ ಹೇಳಬೇಕೆಂದರೆ ಕಳೆದ ಬಜೆಟ್ ಅಧಿವೇಶನದಲ್ಲಿ ಬಾಂಡ್ ಯೋಜನೆಯ ಪ್ರಸ್ತಾಪ ಬಂದಾಗಲೆ ಅದರ ಬಗ್ಗೆ ಅನುಮಾನಗಳು ಮೂಡತೊಡಗಿದ್ದವು. ಮುಂದಿನ ಕೆಲವು ದಿನಗಳೊಳಗಾಗಿ ಲೋಕಸಭೆಯಲ್ಲಿರುವ ಬಹುಮತವನ್ನು ಬಳಸಿಕೊಂಡು ಜನಪ್ರಾತಿನಿಧ್ಯ, ಆದಾಯ ತೆರಿಗೆ, ಕಂಪೆನಿ ಮತ್ತು ರಿಸರ್ವ್ ಬ್ಯಾಂಕ್ ಕಾಯ್ದೆಗಳಿಗೆ ತಿದ್ದುಪಡಿಗಳನ್ನು ಮಾಡಲಾಯಿತು. ವಾಸ್ತವದಲ್ಲಿ ಈ ತಿದ್ದುಪಡಿ ಮಸೂದೆಗಳಿಗೆ ಎರಡೂ ಸಭೆಗಳ ಅನುಮೋದನೆ ಬೇಕಿತ್ತು. ಮೋದಿ ಸರಕಾರದ ಮುಂದಿದ್ದ ಸಮಸ್ಯೆಯೆಂದರೆ ಲೋಕಸಭೆಯಲ್ಲಿ ಬಿಜೆಪಿಗೆ ಬಹುಮತವಿದ್ದರೂ ರಾಜ್ಯಸಭೆಯಲ್ಲಿ ಇರಲಿಲ್ಲ. ಆದರೆ ಮೋದಿ ಸರಕಾರ ಹಣಕಾಸಿನ ಮಸೂದೆಗೆ ಕೇವಲ ಲೋಕಸಭೆಯ ಅಂಗೀಕಾರ ಸಾಕು ಎಂಬ ನಿಯಮವನ್ನು ಬಳಸುವ ಮೂಲಕ ವಂಚನೆಯ ಹಾದಿಯನ್ನು ಹಿಡಿಯಿತು. ಹೀಗೆ ಮಾರ್ಚ್ 23, 2017ರಂದು 40 ತಿದ್ದುಪಡಿಗಳನ್ನು ಹಣಕಾಸಿನ ಮಸೂದೆಗಳ ಶೀರ್ಷಿಕೆಯ ಅಡಿಯಲ್ಲಿ ಲೋಕಸಭೆಯಲ್ಲಿ ಮಂಡಿಸಿ ಅವಕ್ಕೆ ಅನುಮೋದನೆ ಪಡೆದುಕೊಂಡಿತು. ತಿದ್ದುಪಡಿಗಳು ನಿಜವಾಗಿ ದೇಣಿಗೆಗಳ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸುವ ಬದಲು ಇನ್ನಷ್ಟು ಅಪಾರದರ್ಶಕಗೊಳಿಸುತ್ತವೆ! ಈ ಕೆಳಗಿನ ಅಂಶಗಳನ್ನು ಪರಿಗಣಿಸಿದಾಗ ಮೋದಿ ಸರಕಾರದ ಅಪ್ರಾಮಾಣಿಕತೆ ಮತ್ತು ಅದು ಪ್ರಜೆಗಳಿಗೆ ಮಾಡಿರುವ ವಂಚನೆ ಬಹಳ ಸ್ಪಷ್ಟವಾಗಿ ಬಯಲಾಗುತ್ತದೆ.

♦ ಬಾಂಡ್‌ಗಳಲ್ಲಿ ಅವನ್ನು ಖರೀದಿಸುವವರ ಹೆಸರನ್ನು ಬರೆಯುವ ಅಗತ್ಯವಿಲ್ಲ ಎಂಬ ನಿಯಮವನ್ನು ಮಾಡಲಾಗಿದೆ. ದೇಣಿಗೆ ನೀಡುವವರ ಹೆಸರುಗಳನ್ನು ಗೌಪ್ಯವಾಗಿ ಇರಿಸುವುದು ಎಲ್ಲಿಯ ಪಾರದರ್ಶಕತೆ?

♦ ಈ ಹಿಂದೆ ಕಾರ್ಪೊರೇಟುಗಳು ನೀಡುವ ದೇಣಿಗೆಗೆ ಶೇಕಡಾ 7.5ರ ಮಿತಿಯನ್ನು ಹೇರಲಾಗಿತ್ತು ಮಾತ್ರವಲ್ಲ ಯಾವ ರಾಜಕೀಯ ಪಕ್ಷಗಳಿಗೆ ಎಷ್ಟು ಹಣ ನೀಡಲಾಗಿದೆ ಎಂಬುದರ ವಿವರಗಳನ್ನೂ ನೀಡಬೇಕಿತ್ತು. ಆದರೆ ಮೋದಿ ಸರಕಾರ ಕಂಪೆನಿ ಕಾಯ್ದೆಗೆ ಮಾಡಿದ ತಿದ್ದುಪಡಿಯ ಫಲವಾಗಿ ಇಂದು ಆ ಮಿತಿಯನ್ನು ಪೂರ್ತಿಯಾಗಿ ತೆಗೆದುಹಾಕಲಾಗಿದೆ.

♦ ಸಂಸ್ಥೆಯೊಂದರ ಆಯವ್ಯಯ ಪಟ್ಟಿಯಲ್ಲಿ ದೇಣಿಗೆಯ ಮೊತ್ತವನ್ನು ತೋರಿಸಬೇಕು ಎಂಬ ನಿಯಮ ಇದೆಯಾದರೂ ದೇಣಿಗೆದಾರರ ವಿವರಗಳನ್ನು ತೋರಿಸಬೇಕು ಎಂಬ ನಿಯಮ ಮಂಗಮಾಯವಾಗಿದೆ! ಆದರೆ ಅದೇ ವೇಳೆ ಸರಕಾರಕ್ಕೆ ಖರೀದಿಯ ಸಕಲ ವಿವರಗಳೂ ಲಭ್ಯವಾಗುತ್ತವೆ. ಇದು ಹೇಗೆಂದರೆ ಬಾಂಡ್ ಖರೀದಿಸುವವರು ಕಡ್ಡಾಯವಾಗಿ ಕೆವೈಸಿ ಅಂದರೆ ಆಧಾರ್, ಪ್ಯಾನ್ ಕಾರ್ಡು ಇತ್ಯಾದಿ ದಾಖಲೆಗಳನ್ನು ಒದಗಿಸಬೇಕಾಗಿದೆ. ಸ್ವಾಭಾವಿಕವಾಗಿ ಈ ಮಾಹಿತಿಗಳೆಲ್ಲ ಬಾಂಡ್ ಮಾರಾಟ ಮಾಡಿದ ಬ್ಯಾಂಕಿನಿಂದ ರಿಸರ್ವ್ ಬ್ಯಾಂಕಿಗೆ, ಅಲ್ಲಿಂದ ನೇರವಾಗಿ ಸರಕಾರಕ್ಕೆ ತಲುಪಲಿವೆ!

ಮೋದಿ ಸರಕಾರದ ಈ ಪ್ರಕಟಣೆಗೆ ಚುನಾವಣಾ ಆಯೋಗದ ನಿರ್ದೇಶಕರಾದ ನಿಖಿಲ್ ಕುಮಾರ್ ಎಂಬವರು ವಿರೋಧ ವ್ಯಕ್ತಪಡಿಸಿದ್ದಾರೆ. ಅವರು ಈ ಕುರಿತು ಸಂಸತ್ತಿನ ಕಾನೂನು ಮತ್ತು ಸಿಬ್ಬಂದಿ ಸಮಿತಿಗೆ ಸಲ್ಲಿಸಿರುವ ಲಿಖಿತ ಮನವಿಯೊಂದರಲ್ಲಿ (287/PSC/02/Coord-2017) ಪಕ್ಷಗಳು ಚುನಾವಣಾ ಬಾಂಡ್‌ಗಳ ಮೂಲಕ ಪಡೆಯುವ ದೇಣಿಗೆಯ ವಿವರಗಳನ್ನು ಆಯೋಗಕ್ಕೆ ಸಲ್ಲಿಸಬೇಕಾಗಿಲ್ಲ ಎಂದು ಜನಪ್ರಾತಿನಿಧ್ಯ ಕಾಯ್ದೆಗೆ ತಿದ್ದುಪಡಿ ಮಾಡಿರುವುದು ಒಂದು ಹಿಮ್ಮುಖ ಹೆಜ್ಜೆ; ಇದರಿಂದ ಪಾರದರ್ಶಕತೆ ಬಗ್ಗೆ ಸಂಶಯ ಉಂಟಾಗಲಿದೆ ಎಂದು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಪ್ರತಿಪಕ್ಷಗಳಿಗೆ ಭಾರೀ ದೊಡ್ಡ ಸಮಸ್ಯೆ ಎದುರಾಗಲಿದೆ. ಏಕೆಂದರೆ ಪ್ರತಿಪಕ್ಷಗಳಿಗೆೆ ಬಾಂಡ್‌ಗಳನ್ನು ನೀಡುವ ದಾನಿಗಳ ಗುರುತು, ಪರಿಚಯ ಮತ್ತಿತರ ವೈಯಕ್ತಿಕ ವಿವರಗಳೆಲ್ಲವೂ ಮೋದಿ ಸರಕಾರಕ್ಕೆ ರವಾನೆಯಾಗುತ್ತವೆ. ಅದು ಕೂಡಲೇ ಆ ದಾನಿಗಳ ಮೇಲೆ ಒತ್ತಡ ಹೇರಿ ಅವರು ಕೇವಲ ಬಿಜೆಪಿಗೆ ದೇಣಿಗೆ ನೀಡುವಂತೆ ಮಾಡಲಿದೆ. ಬಿಜೆಪಿಯ ಭಾಗ್ಯದ ಬಾಗಿಲು ಪೂರ್ತಿ ತೆರೆಯಲಿದೆ. ಅದರ ತಿಜೋರಿಗೆ ಹಣದ ಹೊಳೆಯೇ ಹರಿದುಬರಲಿದೆ. ಈ ರೀತಿಯಾಗಿ ಪ್ರತಿಪಕ್ಷಗಳನ್ನೆಲ್ಲ ನಿರ್ನಾಮಗೊಳಿಸುವುದೇ ಚುನಾವಣಾ ಬಾಂಡ್ ಯೋಜನೆಯ ಹಿಂದೆ ಅಡಗಿರುವ ಗುಪ್ತ ಉದ್ದೇಶವಾಗಿದೆ. ಇದಕ್ಕೋಸ್ಕರವೇ ಮೋದಿ, ಅಮಿತ್ ಶಾ ಮತ್ತು ಸಂಘ ಪರಿವಾರದ ಇನ್ನಿತರ ಮುಖಂಡರು 2014ರಿಂದ ಆರಂಭಿಸಿ ಪದೇಪದೇ ಕಾಂಗ್ರೆಸ್ ಮುಕ್ತ ಭಾರತದ ಬಗ್ಗೆ ಮಾತಾಡುತ್ತಾ ಬಂದಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತ ಅಂದರೆ ನಿಜವಾಗಿ ಪ್ರತಿಪಕ್ಷ ಮುಕ್ತ ಭಾರತ. ಏಕೆಂದರೆ ಕಾಂಗ್ರೆಸ್ ಬಿಟ್ಟು ಮಿಕ್ಕೆಲ್ಲ ರಾಷ್ಟ್ರ ಮಟ್ಟದ ಪ್ರತಿಪಕ್ಷಗಳು ದುರ್ಬಲಗೊಂಡು ಹೆಚ್ಚುಕಡಿಮೆ ನಗಣ್ಯವಾಗಿವೆ. ಸಂಘ ಪರಿವಾರದ ಅಂತಿಮ ಗುರಿಯಾದ ‘ಹಿಂದೂ ರಾಷ್ಟ್ರ’ ಎನ್ನುವುದು ಪ್ರತಿಪಕ್ಷಗಳಿರದ (ಅಥವಾ ತೀರ ದುರ್ಬಲ ಪ್ರತಿಪಕ್ಷಗಳಿರುವ) ಒಂದು ಧರ್ಮಾಧರಿತ, ಸರ್ವಾಧಿಕಾರಿ ಫ್ಯಾಶಿಸ್ಟ್ ಪ್ರಭುತ್ವವಾಗಿರುತ್ತದೆ. ಹೀಗಾಗಿ ಪ್ರತಿಪಕ್ಷಗಳನ್ನು ನಾಶಗೊಳಿಸಲು ಹೊರಟಿರುವ ಈ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಹಿಂದೂ ರಾಷ್ಟ್ರ ಸ್ಥಾಪನೆಯ ದಿಕ್ಕಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಎಂದು ಕರೆಯುವುದರಲ್ಲಿ ತಪ್ಪಿಲ್ಲ. ಆದರೆ ಸಂಘ ಪರಿವಾರ ಒಂದು ಅತ್ಯುತ್ತಮ ನಾಣ್ಣುಡಿಯನ್ನು ಮರೆತಂತಿದೆ. ‘‘ಕೆಲವರನ್ನು ಕೆಲಕಾಲ ಮೂರ್ಖರನ್ನಾಗಿಸಬಹುದು. ಕೆಲವರನ್ನು ಸದಾಕಾಲ ಮೂರ್ಖರನ್ನಾಗಿಸಬಹುದು. ಆದರೆ ಎಲ್ಲರನ್ನೂ ಸದಾಕಾಲ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ.’’ ಸಂಘ ಪರಿವಾರ ತಾನು ಭಾರತದ ಎಲ್ಲಾ ಪ್ರಜೆಗಳನ್ನು ಎಲ್ಲಾ ಕಾಲಗಳಲ್ಲೂ ಮೂರ್ಖರನ್ನಾಗಿಸಬಲ್ಲೆ ಎಂದು ಭಾವಿಸಿದ್ದರೆ ಅದಕ್ಕಿಂತ ದೊಡ್ಡ ತಪ್ಪುತಿಳುವಳಿಕೆ ಇನ್ನೊಂದಿರದು.

***********

(ದ ವಯರ್. ಇನ್‌ನಲ್ಲಿ ಜಗದೀಪ್ ಎಸ್.ಚೊಕರ್; ಎನ್‌ಡಿ ಟಿವಿ.ಕಾಮ್‌ನಲ್ಲಿ ಮಹುವಾ ಮೊಯ್ತ್ರ; ವಿವೇಕ್ ಕೌಲ್ಸ್ ಡೈರಿಯಲ್ಲಿ ವಿವೇಕ್ ಲೇಖನಗಳು)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)