varthabharthi

ಸಂಪಾದಕೀಯ

ಬೀದಿ ರೌಡಿಗಳ ವಿರುದ್ಧ ಎಚ್ಚೆತ್ತುಕೊಳ್ಳಬೇಕಾದ ಪೋಷಕರು

ವಾರ್ತಾ ಭಾರತಿ : 11 Jan, 2018

ಸುಮಾರು ಐದು ವರ್ಷಗಳ ಹಿಂದೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ಆತ್ಮಹತ್ಯೆ ಪ್ರಕರಣಗಳು ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಒಳಗಾಗಿದ್ದವು. ಆತ್ಮಹತ್ಯೆ ಮಾಡಿಕೊಂಡ ಇಬ್ಬರೂ ಹೆಣ್ಣು ಮಕ್ಕಳು ಬಿಲ್ಲವ ಸಮುದಾಯಕ್ಕೆ ಸೇರಿದ ಬಡ ಕುಟುಂಬದಿಂದ ಬಂದವರು. ಒಬ್ಬಾಕೆ ಒಂದು ಕಾರ್ಖಾನೆಯಲ್ಲಿ ತನ್ನ ಕುಟುಂಬಕ್ಕಾಗಿ ದುಡಿಯುತ್ತಿದ್ದಳು. ಆ ಕಾರ್ಖಾನೆಯಲ್ಲಿ ಆಕೆಗೆ ಕೆಲಸ ತೆಗೆಸಿಕೊಟ್ಟಿರುವುದು ಸ್ಥಳೀಯ ಮುಸ್ಲಿಮ್ ಯುವಕ. ಆದುದರಿಂದ ಆತನೊಂದಿಗೆ ಆಕೆ ಆತ್ಮೀಯವಾಗಿದ್ದಳು. ಎದುರಾದಾಗ ಕಷ್ಟ ಸುಖ ಹಂಚಿಕೊಳ್ಳುತ್ತಿದ್ದರು. ಇದು ಸ್ಥಳೀಯ ಸಂಘಪರಿವಾರದ ಕಣ್ಣಿಗೆ ಬಿತ್ತು. ಯಾವುದೇ ಅನ್ಯ ಮತೀಯರೊಂದಿಗೆ ಹಿಂದೂ ಹೆಣ್ಣು ಮಕ್ಕಳು ಮಾತನಾಡುವುದು ಪ್ರೀತಿ, ಪ್ರೇಮಕ್ಕೆ ಸಂಬಂಧಿಸಿದ ವಿಷಯ ಮಾತ್ರ ಎಂದು ತಿಳಿದುಕೊಂಡಿರುವ ಇವರು ತಕ್ಷಣ ಇಬ್ಬರ ಮೇಲೆ ಮುಗಿ ಬಿದ್ದರು. ಆಕೆ ಈ ಸಂದರ್ಭದಲ್ಲಿ ತನ್ನ ಗೆಳೆಯನನ್ನು ಸಮರ್ಥಿಸಿ ಮಾತನಾಡಿದ್ದಳು. ಇದು ಸಂಘಪರಿವಾರದ ಕಾರ್ಯಕರ್ತರನ್ನು ಇನ್ನಷ್ಟು ಕೆರಳಿಸಿತ್ತು. ಈ ಸಂದರ್ಭದಲ್ಲಿ ಹುಡುಗಿಗೆ ಅವಾಚ್ಯವಾಗಿ ನಿಂದಿಸಿದ್ದಲ್ಲದೆ, ಆಕೆಯ ಮನೆಗೆ ಹೋಗಿ ಬೆದರಿಕೆ ಹಾಕಿದ್ದರು. ತರುಣಿಯ ಕುರಿತಂತೆ ಎಲ್ಲರೆದುರೇ ನಿಂದನೆಯ ಮಾತುಗಳನ್ನಾಡಿದ್ದರು. ತನ್ನ ಪಾಡಿಗೆ ದುಡಿದು ಕುಟುಂಬವನ್ನು ನೋಡಿಕೊಳ್ಳುತ್ತಿದ್ದ ತರುಣಿಗೆ ಇದರಿಂದ ಆಘಾತವಾಗಿತ್ತು. ಅಂದು ರಾತ್ರಿಯೇ ಆಕೆ ಆತ್ಮಹತ್ಯೆ ಮಾಡಿಕೊಂಡಳು. ಈ ಸಂಬಂಧ ಆತ್ಮಹತ್ಯೆ ಪತ್ರವನ್ನು ಬರೆದಿಟ್ಟಿದ್ದಳಾದರೂ, ಅದು ಯಾವ ಪ್ರಯೋಜನಕ್ಕೂ ಬರಲಿಲ್ಲ. ಆಕೆಯನ್ನು ಪರೋಕ್ಷವಾಗಿ ಕೊಂದು ಹಾಕಿರುವ ಸಂಘಪರಿವಾರದ ಆ ಗೂಂಡಾಗಳು ಈಗಲೂ ಮಾನ ಮರ್ಯಾದೆಗಳ ಹಂಗಿಲ್ಲದೆ ಓಡಾಡುತ್ತಲೇ ಇದ್ದಾರೆ.

ಹೆಜಮಾಡಿಯಲ್ಲಿ ಇನ್ನೊಬ್ಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಳು. ಬಸ್ ನಿರ್ವಾಹಕನ ಜೊತೆಗೆ ಪ್ರೇಮವಿದೆ ಎಂದು ಸಂಘ ಪರಿವಾರದ ಕಾರ್ಯಕರ್ತರು ಆಕೆಯನ್ನೂ, ಆಕೆಯ ಗೆಳೆಯನನ್ನೂ ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದರು ಅಷ್ಟೇ ಅಲ್ಲ, ಹುಡುಗಿಯ ಮೇಲೆ ಹಲ್ಲೆಯನ್ನೂ ಮಾಡಿದ್ದರು. ಪೊಲೀಸ್ ಠಾಣೆಯನ್ನು ಜೀವಮಾನದಲ್ಲಿ ಕಂಡಿರದ ಆಕೆ ಇದರಿಂದ ತೀವ್ರವಾಗಿ ಆಘಾತಕ್ಕೀಡಾದಳು. ಪೊಲೀಸರು ಆಕೆಯ ಮೇಲೆ ದೌರ್ಜನ್ಯ ಎಸಗಿದ ಸಂಘಪರಿವಾರದ ಕಾರ್ಯಕರ್ತರ ಮೇಲೆ ಯಾವ ದೂರನ್ನೂ ದಾಖಲಿಸಲಿಲ್ಲ. ಬದಲಿಗೆ, ಆಕೆಯ ತಂದೆಯನ್ನು ಕರೆಸಿ ಅವರಿಗೆ ಬೆದರಿಕೆ ಒಡ್ಡಿದ್ದರು. ಮಗಳಿಗೆ ‘ಮರ್ಯಾದೆ’ ಕಲಿಸಿ ಎಂದು ಹೇಳಿ ಅವಮಾನಿಸಿದ್ದಾರೆ. ಮಾಧ್ಯಮಗಳಲ್ಲಿ ಈ ಘಟನೆ ವರ್ಣರಂಜಿತವಾಗಿ ಪ್ರಕಟವಾಗಿತ್ತು. ಮಗಳನ್ನು ಮನೆಗೆ ಕರೆದುಕೊಂಡು ಹೋದ ಪಾಲಕರು, ಆಕೆಯನ್ನು ತರಾಟೆಗೆ ತೆಗೆದುಕೊಂಡು ಕಣ್ಣೀರಿಟ್ಟಿದ್ದರು. ಅಂದು ರಾತ್ರಿ ಆ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಳು. ಇಂತಹ ಆತ್ಮಹತ್ಯೆಗಳು ಇತ್ತೀಚಿನ ದಿನಗಳಲ್ಲಿ ಕರಾವಳಿಯಾದ್ಯಂತ ಮರುಕಳಿಸುತ್ತಿದೆ. ಇತ್ತೀಚೆಗೆ ಮೂಡಿಗೆರೆಯಲ್ಲಿ ಓರ್ವ ವಿದ್ಯಾರ್ಥಿನಿ ಸಂಘಪರಿವಾರದ ಇಂತಹದೇ ಕೃತ್ಯಕ್ಕೆ ಬಲಿಯಾದಳು. ಈ ಸಂಘಪರಿವಾರದ ಕಾರ್ಯಕರ್ತರಿಂದಾಗಿ ಹಿಂದೂ ಧರ್ಮದ ತರುಣಿಯರು ಮಾನ ಮರ್ಯಾದೆಯೊಂದಿಗೆ ಬದುಕುವುದು ಕಷ್ಟವಾಗುತ್ತಿದೆ.

ಇಷ್ಟಕ್ಕೂ ಬೀದಿಯಲ್ಲಿ ಅನೈತಿಕ ಪೊಲೀಸ್ ಗಿರಿ ನಡೆಸುವ ಈ ಸಂಘಪರಿವಾರ ಕಾರ್ಯಕರ್ತರ ಹಿನ್ನೆಲೆಯಾದರೂ ಹೇಗಿದೆ? ಇತ್ತೀಚೆಗೆ ವಿದ್ಯಾರ್ಥಿನಿಯೊಬ್ಬಳಿಗೆ ಹಲ್ಲೆ ನಡೆಸಿದ ಸಂಘಪರಿವಾರ ಕಾರ್ಯಕರ್ತರ ಮೇಲೆ ದೂರು ಸಲ್ಲಿಸಲಾಯಿತು. ಅವರೆಲ್ಲರೂ ಕ್ರಿಮಿನಲ್ ಹಿನ್ನೆಲೆ ಇರುವ ಯುವಕರು. ಒಂದಲ್ಲ ಒಂದು ದರೋಡೆ, ಕೊಲೆಯತ್ನ ಕೇಸುಗಳು ಅವರ ಮೇಲೆ ದಾಖಲಾಗಿವೆ. ಯಾವ ಸಂಸ್ಕಾರ, ಗುಣ ನಡತೆಗಳ ಅರಿವಿಲ್ಲದ ಇವರ ಮನೆಯ ಸ್ಥಿತಿಗತಿ ಹೃದಯವಿದ್ರಾವಕವಾಗಿದೆ. ಓರ್ವ ಸಂಘಪರಿವಾರ ಕಾರ್ಯಕರ್ತನ ಮನೆಯಲ್ಲಿ ಮೂವರು ಯುವತಿಯರು ಮದುವೆಯೇ ಇಲ್ಲದೆ ಕಾಲ ಕಳೆಯುತ್ತಿದ್ದಾರೆ. ತಾಯಿ ಮತ್ತು ಈ ಹೆಣ್ಣು ಮಕ್ಕಳು ಬೀಡಿಕಟ್ಟಿ ಸಂಸಾರ ಸಾಗಿಸುತ್ತಿದ್ದರೆ, ಊರಿನ ತರುಣಿಯರಿಗೆ ಗುಣನಡತೆ ಕಲಿಸುವ ಈ ಸಂಘಪರಿವಾರ ಕಾರ್ಯಕರ್ತ ತನ್ನ ತಾಯಿ ಬೀಡಿ ಕಟ್ಟಿದ ಹಣವನ್ನು ವಸೂಲಿ ಮಾಡಿ, ರಾತ್ರಿ ಕುಡಿಯುವುದಕ್ಕೆ ಬಳಸುತ್ತಿದ್ದ. ಸಂಘಪರಿವಾರದ ಹೆಸರಿನಲ್ಲಿ ಬೀದಿಗಳಲ್ಲಿ ಪುಂಡಾಟ ನಡೆಸುವ ಬಹುತೇಕ ಪುಡಿ ರೌಡಿಗಳು ಇಂತಹದೇ ಹಿನ್ನೆಲೆಯಿರುವವರು. ಮನೆಗೂ ಮಾರಿ, ಊರಿಗೂ ಮಾರಿಯಾಗಿ ಬದುಕುತ್ತಿರುವವರು. ಇಂತಹ ಆಯೋಗ್ಯರು ಯಾವುದೋ ಹೆಣ್ಣು ಮಕ್ಕಳನ್ನು ತಡೆದು ನಿಲ್ಲಿಸಿ ಅವರಿಗೆ ಸಂಸ್ಕಾರ ಕಲಿಸಲು ಹೊರಟಿರುವುದು ಹಿಂದೂ ಧರ್ಮದ ಅತೀ ದೊಡ್ಡ ದುರಂತವಾಗಿದೆ.

ಯಾವುದೇ ಚಾರಿತ್ರದ ಹಿನ್ನೆಲೆಯಿರದ ಈ ಸಂಘಪರಿವಾರದ ಗೂಂಡಾಗಳು ಯಾವುದೋ ಮನೆಯ ಹೆಣ್ಣು ಮಕ್ಕಳು ಯಾರೊಡನೆ ಮಾತನಾಡಬೇಕು, ಯಾರೊಡನೆ ಬೆರೆಯಬೇಕು ಎನ್ನುವುದನ್ನು ನಿರ್ಧರಿಸಲು ಮುಖ್ಯ ಕಾರಣವೇ ಕಾನೂನು ವ್ಯವಸ್ಥೆಯ ವೈಫಲ್ಯ. ಯಾವುದೋ ಹುಡುಗಿ ಇನ್ನಾವುದೋ ಧರ್ಮದ ಹುಡುಗನ ಜೊತೆಗೆ ಮಾತನಾಡುತ್ತಿದ್ದಾಳೆ ಅಥವಾ ವ್ಯವಹರಿಸುತ್ತಿದ್ದಾಳೆ ಎಂದರೆ ಅದರ ಬಗ್ಗೆ ಮಾತನಾಡುವ ಹಕ್ಕು ಇರುವುದು ಪೋಷಕರಿಗೆ ಮಾತ್ರ. ಇದನ್ನು ಪೊಲೀಸರಿಗೆ ಪ್ರತ್ಯೇಕವಾಗಿ ಹೇಳಿಕೊಡಬೇಕಾಗಿಲ್ಲ. ್ನ ಸಾಕಿ, ಸಲಹಿ, ಆಕೆಗೆ ವಿದ್ಯಾಭ್ಯಾಸ ನೀಡುತ್ತಿರುವ ತಂದೆ ತಾಯಿಯರ ಜಾಗದಲ್ಲಿ ನಿಂತು ಬೀದಿ ಬದಿಯ ಕ್ರಿಮಿನಲ್ ಒಬ್ಬ ಯುವತಿಗೆ ಥಳಿಸಿ, ಆಕೆಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಾಗ ಮೊತ್ತ ಮೊದಲು ಪೊಲೀಸರು ಕ್ರಮ ತೆಗೆದುಕೊಳ್ಳಬೇಕಾದುದು ಆ ಸಂಘಪರಿವಾರ ಗೂಂಡಾನ ವಿರುದ್ಧ. ಆದರೆ ದಕ್ಷಿಣ ಕನ್ನಡಜಿಲ್ಲೆಯಲ್ಲಿ ನಡೆದು ಬರುತ್ತಿರುವುದು ಅದಕ್ಕೆ ತದ್ವಿರುದ್ಧ. ಹುಡುಗ-ಹುಡುಗಿಯರಿಗೆ ಥಳಿಸಿದ ಸಂಘಪರಿವಾರ ಕಾರ್ಯಕರ್ತರನ್ನು ಪೊಲೀಸ್ ಇಲಾಖೆಯ ಒಂದು ವಿಭಾಗವೋ ಎಂಬಂತೆ ಠಾಣೆಯಲ್ಲಿ ಉಪಚರಿಸಲಾಗುತ್ತದೆ. ಹಲ್ಲೆ ಗೀಡಾಗಿರುವ ತರುಣ ತರುಣಿಯರ ಮೇಲೆಯೇ ಪೊಲೀಸರು ಕೇಸು ದಾಖಲಿಸುತ್ತಾರೆ. ಅಷ್ಟೇ ಅಲ್ಲದೆ, ಪಾಲಕರನ್ನು ಕರೆಸಿ ಅವರಿಗೂ ಪೊಲೀಸರು ಬೆದರಿಕೆಯೊಡ್ಡುತ್ತಾರೆ.

ಹುಡುಗ ಹುಡುಗಿಯರನ್ನು ಥಳಿಸಲು ಸಂಘಪರಿವಾರಕ್ಕೆ ಹಕ್ಕನ್ನು ಕೊಟ್ಟವರು ಯಾರು? ಅಂತಹ ಜವಾಬ್ದಾರಿಯನ್ನು ಪೊಲೀಸ್ ಇಲಾಖೆಯೋ ಅಥವಾ ಸಮುದಾಯವೋ ಅವರಿಗೆ ನೀಡಿದೆಯೇ? ಇಲ್ಲವೆಂದಾದ ಮೇಲೆ, ಆ ಕೃತ್ಯ ಎಸಗಿದ ಕಾರ್ಯಕರ್ತರ ಮೇಲೆ ಪೊಲೀಸರು ಸ್ವಯಂ ದೂರು ದಾಖಲಿಸಬೇಕಲ್ಲವೆ? ಯಾಕೆ ದೂರು ದಾಖಲಿಸುತ್ತಿಲ್ಲ? ಅಂದರೆ ಈ ಸಂಘಪರಿವಾರ ಗೂಂಡಾಗಳಿಗೆ ಪೊಲೀಸ್ ಇಲಾಖೆಯ ಆಶೀರ್ವಾದ ಇದೆ ಎಂದಾಯಿತಲ್ಲವೇ? ಮಹಿಳೆಯರ ಮಾನವನ್ನು ಬೀದಿಯಲ್ಲಿ ಹರಾಜು ಹಾಕುವ, ಅವರು ಯಾರ ಜೊತೆಗೆ ಮಾತನಾಡಬೇಕು, ಮಾತನಾಡಬಾರದು ಎಂದು ನಿರ್ಧರಿಸುವ ಹಕ್ಕನ್ನು ಸಂಘಪರಿವಾರಕ್ಕಾಗಲಿ, ಇನ್ನಾವುದೇ ಹೊರಗಿನ ಸಂಘಟನೆಗಳಿಗೆ ಇಲ್ಲ. ಒಂದು ವೇಳೆ ಅಂತಹ ಘಟನೆ ನಡೆದರೆ ಮೊತ್ತ ಮೊದಲು ಆ ಸಂಘಟನೆಯ ಕಾರ್ಯಕರ್ತರ ವಿರುದ್ಧ ಕೇಸು ದಾಖಲಾಗಬೇಕು. ಆಗ ಮಾತ್ರ ಇಂತಹ ಘಟನೆಗಳು ಮರುಕಳಿಸದಿರಬಹುದು.

ಇತ್ತೀಚೆಗೆ ಇಂತಹದೇ ಒಂದು ಪ್ರಕರಣದಲ್ಲಿ ಸಂಘಪರಿವಾರ ವಿದ್ಯಾರ್ಥಿನಿಯರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಾಗ, ವಿದ್ಯಾರ್ಥಿನಿಯರ ಪಾಲಕರು ಅತ್ಯಂತ ಮುತ್ಸದ್ದಿತನದಿಂದ ವರ್ತಿಸಿದರು. ವಿದ್ಯಾರ್ಥಿನಿಯರ ಬೆಂಬಲಕ್ಕೆ ನಿಂತ ಪೋಷಕರು, ಸಂಘಪರಿವಾರ ಕಾರ್ಯಕರ್ತರ ವಿರುದ್ಧವೇ ಕೇಸು ದಾಖಲಿಸಿದರು. ಬಂಟ್ವಾಳದಲ್ಲಿ ದಲಿತ ಕುಟುಂಬವು ತಮಗೆ ನಡತೆ ಹೇಳಿಕೊಡಲು ಬಂದ ಸಂಘಪರಿವಾರದ ವಿರುದ್ಧ ದೂರು ದಾಖಲಿಸಿ, ದುಷ್ಕರ್ಮಿಗಳ ಬಂಧನಕ್ಕೆ ಕಾರಣವಾಗಿದೆ. ಇದನ್ನು ಎಲ್ಲ ಪೋಷಕರು ಅನುಸರಿಸಿದರೆ, ಅಮಾಯಕ ತರುಣಿಯರ ಆತ್ಮಹತ್ಯೆಗಳಿಗೆ ಕಡಿವಾಣ ಹಾಕಬಹುದು. ಯಾರಾದರೂ ಸಂಘಪರಿವಾರ ಕಾರ್ಯಕರ್ತರು ತಮ್ಮ ಮಕ್ಕಳಿಗೆ ಬೆದರಿಕೆ ಹಾಕಿದಾಗ, ತಕ್ಷಣ ಅವರ ವಿರುದ್ಧ ದೂರು ದಾಖಲಿಸುವ ಪ್ರವೃತ್ತಿ ಪೋಷಕರಲ್ಲಿ ಬೆಳೆಯಬೇಕು. ಆ ಮೂಲಕ ತಮ್ಮ ಮಕ್ಕಳಲ್ಲೂ ಆತ್ಮವಿಶ್ವಾಸ, ಆತ್ಮಾಭಿಮಾನವನ್ನು ಬಿತ್ತಬೇಕು. ಬೀದಿ ರೌಡಿಗಳಿಂದ ಸಂಸ್ಕಾರ ಕಲಿಯುವ ದೌರ್ಭಾಗ್ಯ ಮಕ್ಕಳಿಗಿಲ್ಲ ಎನ್ನುವುದನ್ನು ಈ ಮೂಲಕ ಎಲ್ಲ ಪೋಷಕರು ಸ್ಪಷ್ಟ ಪಡಿಸಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)