varthabharthi

ಕ್ರೀಡೆ

ಐಪಿಎಲ್ ಆಟಗಾರರ ಹರಾಜಿನಲ್ಲಿ ಯೂಸುಫ್ ಪಠಾಣ್ ಮೂಲ ಬೆಲೆ ಎಷ್ಟು ಗೊತ್ತಾ?

ವಾರ್ತಾ ಭಾರತಿ : 11 Jan, 2018
Varthabharathi

ಮುಂಬೈ, ಜ.11: ಉದ್ದೀಪನಾ ಮದ್ದು ಸೇವನೆ ನಿಯಮವನ್ನು ಉಲ್ಲಂಘಿಸಿ ಬಿಸಿಸಿಐಯಿಂದ 5 ತಿಂಗಳ ಕಾಲ ನಿಷೇಧಕ್ಕೆ ಒಳಗಾಗಿರುವ ಭಾರತದ ಮಾಜಿ ಆಲ್‌ರೌಂಡರ್ ಯೂಸುಫ್ ಪಠಾಣ್ ಮುಂಬರುವ ಐಪಿಎಲ್ ಹರಾಜಿನಲ್ಲಿ 75 ಲಕ್ಷ ರೂ. ಮೂಲ ಬೆಲೆ ಹೊಂದಿರುತ್ತಾರೆ ಎಂದು ವರದಿಯಾಗಿದೆ.

ಇತ್ತೀಚೆಗೆ ಕೊನೆಗೊಂಡಿರುವ ರಣಜಿ ಟ್ರೋಫಿಯಲ್ಲಿ ಬರೋಡಾ ಪರ ಆಡದಂತೆ ಬಿಸಿಸಿಐ ಯೂಸುಫ್‌ಗೆ ಸೂಚನೆ ನೀಡಿತ್ತು. ಬಿಸಿಸಿಐ ಯೂಸುಫ್‌ಗೆ ವಿಧಿಸಿರುವ 5 ತಿಂಗಳ ನಿಷೇಧದ ಅವಧಿ 2017ರ ಆಗಸ್ಟ್ 15ಕ್ಕೆ ಆರಂಭವಾಗಲಿದ್ದು, ಜ.14,2018ಕ್ಕೆ ಕೊನೆಗೊಳ್ಳಲಿದೆ. ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ಜ.27 ಹಾಗೂ 28 ರಂದು ಬೆಂಗಳೂರಿನಲ್ಲಿ ನಡೆಯಲಿದೆ.

ಯೂಸುಫ್ ಐಪಿಎಲ್‌ನಲ್ಲಿ 2008ರಿಂದ 2010ರ ತನಕ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಆಡಿದ್ದರು. 2011ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದರು. ಯೂಸುಫ್ ಸಹೋದರ, ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಕಳೆದ ವರ್ಷದ ಐಪಿಎಲ್ ಆಟಗಾರರ ಹರಾಜಿನಲ್ಲಿ ಮಾರಾಟವಾಗದೇ ಉಳಿದಿದ್ದರು. ಅವರಿಗೆ ಆಗ 50 ಲಕ್ಷ ರೂ.ನಿಗದಿಯಾಗಿತ್ತು.

‘‘ಯೂಸುಫ್ ಐಪಿಎಲ್‌ನಲ್ಲಿ ಅತ್ಯಂತ ಯಶಸ್ವಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿದ್ದಾರೆ. ಇರ್ಫಾನ್ ಲೀಗ್‌ನ ಪ್ರಮುಖ ಆಲ್‌ರೌಂಡರ್ ಆಗಿದ್ದಾರೆ. ಫ್ರಾಂಚೈಸಿಗಳು ಈ ಇಬ್ಬರ ಮೇಲೆ ಕಣ್ಣಿಡುವ ಸಾಧ್ಯತೆಯಿದೆ’’ ಎಂದು ಮೂಲಗಳು ತಿಳಿಸಿವೆ.

 

Comments (Click here to Expand)