varthabharthi

ಕ್ರೀಡೆ

2ನೇ ಟೆಸ್ಟ್: ಶಿಖರ್ ಧವನ್ ಬದಲಿಗೆ ರಾಹುಲ್

ವಾರ್ತಾ ಭಾರತಿ : 11 Jan, 2018

ಜೋಹಾನ್ಸ್‌ಬರ್ಗ್, ಜ.11: ಮೊದಲ ಟೆಸ್ಟ್‌ನಲ್ಲಿ ಆಡುವ ಅವಕಾಶದಿಂದ ವಂಚಿತರಾಗಿದ್ದ ಕರ್ನಾಟಕದ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಸೆಂಚೂರಿಯನ್‌ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ನಲ್ಲಿ ಇನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತವಾಗಿದೆ.

 ಭಾರತ ಕೇಪ್‌ಟೌನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಇನ್ನೂ ಒಂದು ದಿನ ಆಟ ಬಾಕಿ ಇರುವಾಗಲೇ 72 ರನ್‌ಗಳಿಂದ ಸೋತಿತ್ತು. ಯುವ ಬೌಲರ್ ಜಸ್‌ಪ್ರಿತ್ ಬುಮ್ರಾ ಅನುಭವಿ ಆಟಗಾರರಾದ ಇಶಾಂತ್ ಶರ್ಮ ಹಾಗೂ ಉಮೇಶ್ ಯಾದವ್ ಬದಲಿಗೆ ಆಡುವ 11ರ ಬಳಗಕ್ಕೆ ಸೇರ್ಪಡೆಯಾಗಿ ಅಚ್ಚರಿ ಮೂಡಿಸಿದ್ದರು.

ರಾಹುಲ್‌ಗೆ ವಿಶ್ರಾಂತಿ ನೀಡಿ ಶಿಖರ್ ಧವನ್ ಹಾಗೂ ಮುರಳಿ ವಿಜಯ್‌ಗೆ ಮೊದಲ ಟೆಸ್ಟ್‌ನಲ್ಲಿ ಇನಿಂಗ್ಸ್ ಆರಂಭಿಸುವ ಅವಕಾಶ ನೀಡಲಾಗಿತ್ತು. ಅಜಿಂಕ್ಯ ರಹಾನೆ ಬದಲಿಗೆ ರೋಹಿತ್ ಶರ್ಮರನ್ನು 5ನೇ ಕ್ರಮಾಂಕದಲ್ಲಿ ಆಡಿಸಲಾಗಿತ್ತು. ಆದರೆ, ಈನಿರ್ಧಾರ ಫಲ ನೀಡಿಲ್ಲ.

ರಾಹುಲ್ ಶನಿವಾರ ಆರಂಭವಾಗಲಿರುವ ಎರಡನೇ ಟೆಸ್ಟ್‌ನಲ್ಲಿ ಆಡುವುದು ಖಚಿತವಾಗಿದೆ. 25ರ ಹರೆಯದ ರಾಹುಲ್ ನಾಗ್ಪುರದಲ್ಲಿ ನಡೆದಿದ್ದ ಟೆಸ್ಟ್ ಹೊರತುಪಡಿಸಿ ಉಳಿದೆಲ್ಲಾ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ರಾಹುಲ್ ಅವರು ಧವನ್ ಬದಲಿಗೆ 11ರ ಬಳಗ ಸೇರಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)