varthabharthi

ಬೆಂಗಳೂರು

ರೈತರ ಉತ್ಪನ್ನಗಳಿಗೆ ನಿಗದಿತ ಬೆಲೆ ಅಗತ್ಯ: ಪ್ರಕಾಶ್ ಕಮ್ಮರಡಿ

ವಾರ್ತಾ ಭಾರತಿ : 11 Jan, 2018
Varthabharathi

ಬೆಂಗಳೂರು, ಜ.11: ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ನಿಗದಿಗೊಳಿಸಿ, ಕೃಷಿ ಯಂತ್ರೋಪಕರಣಗಳ ಮೇಲಿನ ಮಾರಾಟ ತೆರಿಗೆಗೆ ಸಂಪೂರ್ಣ ವಿನಾಯಿತಿ ಸೇರಿ ಸುಧಾರಣಾ ಕ್ರಮಗಳನ್ನು ಕೈಗೊಂಡು ರೈತರಿಗೆ ನೆರವಾಗಲು ಯೋಜನೆ ರೂಪಿಸಲಾಗಿದೆ ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಪ್ರಕಾಶ್ ಕಮ್ಮರಡಿ ತಿಳಿಸಿದ್ದಾರೆ.

ಗುರುವಾರ ನಗರದ ಕೃಷಿ ಬೆಲೆ ಆಯೋಗದ ಸಭಾಂಗಣದಲ್ಲಿ ಜಿಎಸ್‌ಟಿ ಹಾಗೂ ಗರಿಷ್ಠ ಮುಖಬೆಲೆಯ ನೋಟು ಅಮಾನ್ಯೀಕರಣ ಕುರಿತು ಎಪಿಎಂಸಿ ಮುಖ್ಯಸ್ಥರು, ರೈತ ಮುಖಂಡರು, ತಜ್ಞರು ಮತ್ತು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಗರಿಷ್ಠ ಮುಖಬೆಲೆಯ ನಗದು ಅಮಾನ್ಯೀಕರಣ, ಸರಕು ಸೇವಾ ತೆರಿಗೆಯಿಂದ ರೈತರ ಉತ್ಪನ್ನಗಳ ಮಾರಾಟದ ಮೇಲೆ ತೀವ್ರ ಪರಿಣಾಮ ಬೀರಿದೆ. ಇದರಿಂದ ರೈತರ ಮೇಲಾಗಿರುವ ಪರಿಣಾಮಗಳನ್ನು ಮನಗಂಡು ಸೂಕ್ತ ಪರಿಹಾರ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ರೈತರಿಗೆ ಕೃಷಿ ಯಂತ್ರೋಪಕರಣದ ಬಳಕೆ ಅಗತ್ಯವಿದ್ದು, ಇವುಗಳ ಮೇಲಿನ ಜಿಎಸ್‌ಟಿ ತೆರಿಗೆಗೆ ಸಂಪೂರ್ಣ ವಿನಾಯಿತಿ ನೀಡುವಂತೆ ಜಿಎಸ್‌ಟಿ ಸಮಿತಿಗೆ ಶಿಫಾರಸ್ಸು ಮಾಡಲಾಗುವುದು. ಸರಕಾರ ನೀಡುವ ಬೆೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಕೃಷಿ ಉತ್ಪನ್ನಗಳ ವಹಿವಾಟು ನಡೆಸದಂತೆ ಕಾನೂನಾತ್ಮಕವಾಗಿ ಬೆಲೆ ನಿಗದಿಗೊಳಿಸುವಂತೆ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.

ರಾಜ್ಯದ ಕೃಷಿ, ತೋಟಗಾರಿಕೆ ಬೆಳೆಗಳ ಪ್ರಸಕ್ತ ಸಾಲಿನ ಉತ್ಪಾದನಾ ವೆಚ್ಚವನ್ನು ವೈಜ್ಞಾನಿಕವಾಗಿ ಲೆಕ್ಕಾಚಾರ ಹಾಕಿ ಆರ್ಥಿಕ ಆದಾಯ, ಬೆಲೆ ಮುನ್ಸೂಚನೆ, ಸಮಗ್ರ ವರದಿ ತಯಾರಿಸಿ ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಕಳೆದ ಸಾಲಿನಲ್ಲಿ ರಾಜ್ಯ ಸರಕಾರ 1ಕ್ವಿಂಟಾಲ್ ರೂ 5,500ರೂ.ನಂತೆ ಬೆಂಬಲ ಬೆಲೆ ನೀಡಿ, 33 ಲಕ್ಷ ಕ್ವಿಂಟಾಲ್ ತೊಗರಿ ಖರೀದಿಸಿತ್ತು. ಈ ಸಾಲಿನಲ್ಲಿ 6,000 ರೂ. ನೀಡಿ ಖರೀದಿಸಲು ಸಿದ್ಧವಿದೆ ಎಂದರು. ಇನ್ನು 27,000 ರೂ. ಗಳಿಗೆ ಕೆಂಪು ಅಡಿಕೆ ಖರೀದಿಸಲಾಗಿದ್ದು, ಇದು ರೈತರ ಉತ್ಪಾದನಾ ವೆಚ್ಚದ ಮೇಲಿನ ಶೇ.40% ರಷ್ಟು ಲಾಭದಾಯಕ ದರವಾಗಿದೆ ಎಂದು ಪ್ರಕಾಶ್ ಕಮ್ಮರಡಿ ತಿಳಿಸಿದರು.

ಕೃಷಿ ಇಲಾಖೆಯ ಆಯುಕ್ತ ಸತೀಶ್ ಮಾತನಾಡಿ, ಮಾರುಕಟ್ಟೆಯ ಬೆಲೆಗಳು ಕೃಷಿ ಕ್ಷೇತ್ರದ ಏರಿಳಿತಗಳನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಹೇಳಿದರು.

 

Comments (Click here to Expand)