varthabharthi

ಬೆಂಗಳೂರು

ಚರ್ಚೆಯ ಮೂಲಕ ಸಮಸ್ಯೆಗೆ ಪರಿಹಾರ: ಡಿ.ಎಚ್.ಶಂಕರಮೂರ್ತಿ

ವಾರ್ತಾ ಭಾರತಿ : 11 Jan, 2018

ಬೆಂಗಳೂರು, ಜ.11: ಭಾರತದ ಸಂವಿಧಾನ ಜಗತ್ತಿನಲ್ಲಿಯೇ ಅತ್ಯುತ್ತಮವಾದ ಸಂವಿಧಾನವಾಗಿದ್ದು, ಚರ್ಚೆ ಮೂಲಕ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ತಿಳಿಸಿದರು.

ಗುರುವಾರ ಕರ್ನಾಟಕ ಸರಕಾರದ ಸಂಸದೀಯ ವ್ಯವಹಾರಗಳ ಇಲಾಖೆ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಸಹಯೋಗದಲ್ಲಿ ನಗರದಲ್ಲಿ ಹಮ್ಮಿಕೊಂಡಿದ್ದ, ರಾಜ್ಯಮಟ್ಟದ ಯುವ ಸಂಸತ್ ಸ್ವರ್ಧೆಯಲ್ಲಿ ಪಾಲ್ಗೊಂಡು ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಭಾರತದಲ್ಲಿ ವೇದ ಉಪನಿಷತ್ತು, ರಾಜಮಹಾರಾಜರ ಕಾಲದಲ್ಲಿ ಸಹ ಜನ ಪ್ರತಿನಿಧಿಗಳ ಸಂಸತ್ತು ಚಾಲ್ತಿಯಲ್ಲಿತ್ತು. ಸಭಾಪತಿ ಪದವನ್ನು ವೇದಗಳಿಂದ ಆಯ್ದುಕೊಳ್ಳಲಾಗಿದೆ. ನಮ್ಮ ದೇಶದಲ್ಲಿ ಸಾವಿರಾರು ವರ್ಷಗಳಿಂದ ಚರ್ಚೆಯ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ವ್ಯವಸ್ಥೆಯನ್ನು ರೂಢಿಸಿಕೊಂಡು ಬಂದಿದೆ ಎಂದು ಹೇಳಿದರು.

ಮಕ್ಕಳಲ್ಲಿ ಪ್ರಜಾಪ್ರಭುತ್ವದ ಕುರಿತು ಅರಿವು ಮೂಡಿಸಲು ಇಂತಹ ಸ್ವರ್ಧೆಗಳು ಪರಿಣಾಮಕಾರಿಯಾಗುತ್ತವೆ. ಮಕ್ಕಳಲ್ಲಿ ಸಂಸತ್ ಹೇಗೆ ವ್ಯವಹರಿಸುತ್ತದೆ ಎಂಬ ಅರಿವು ಮೂಡಿಸಿದಂತಾಗುತ್ತದೆ. ಪ್ರತಿ ಜಿಲ್ಲೆಗಳಿಂದ ಪ್ರಥಮ ಹಾಗೂ ದ್ವಿತೀಯ ಬಹುಮಾನ ಗಳಿಸಿದ ಮಕ್ಕಳಿಗೆ ರಾಜ್ಯಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಭಾರತ ಮಟ್ಟಕ್ಕೆ ಕಳುಹಿಸಿಕೊಡಲಾಗುವುದು ಎಂದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಪ್ರಜಾಪ್ರಭುತ್ವದ ಉಳಿಗಾಗಿ ಚರ್ಚೆ ಅಗತ್ಯವಾಗಿದ್ದು, ವಿಷಯಗಳ ಕುರಿತು ಗುಂಪಾಗಿ ಚರ್ಚಿಸಿದಾಗ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳಬಹುದು ಹಾಗೂ ಸಮಾಜಕ್ಕೆ ಉತ್ತಮವಾದ ಕಾನೂನುಗಳನ್ನು ರೂಪಿಸಬಹುದು ಎಂದು ಹೇಳಿದರು.

ರಾಜ್ಯಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 64 ಮಕ್ಕಳು ಭಾಗವಹಿಸಿದ್ದರು. ಆಯ್ಕೆಯಾದ 10 ಮಕ್ಕಳಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಅಪರ ಕಾರ್ಯದರ್ಶಿ ಜಿ.ಶ್ರೀಧರ್ ಸೇರಿ ಪ್ರಮುಖರಿದ್ದರು.

ವಿವಿಧ ದೇಶಗಳ ಸಂಸತ್ತು ಹಾಗೂ ಸಂವಿಧಾನಗಳ ಬಗ್ಗೆ ಅಧ್ಯಯನ ಮಾಡಿ, ಸಂವಿಧಾನ ರಚಿಸಿದ ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಅವರಿಗೆ ನಾವು ಚಿರಋಣಿಯಾಗಿರಬೇಕು. ಬುದ್ಧನ ಕಾಲದಲ್ಲೂ ಸಂಸತ್ತಿನ ಉಲ್ಲೇಖವಿದೆ. ಕರ್ನಾಟಕದಲ್ಲಿ ಬಸವಣ್ಣನ ಕಲ್ಪನೆ, ಸಮಾಜದ ವಿವಿಧ ಜನ ಪ್ರತಿನಿಧಿಗಳೊಂದಿಗೆ ಸಭೆ ಸೇರಿ ಚರ್ಚಿಸುತ್ತಿದ್ದು, ಇಂದು ನಮಗೆಲ್ಲ ಮಾದರಿಯಾಗಿದೆ.
-ಟಿ.ಬಿ.ಜಯಚಂದ್ರ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)