varthabharthi

ಬೆಂಗಳೂರು

ತಂಬಾಕು ಸೇವನೆ

ರಾಜ್ಯದಲ್ಲಿ ಪ್ರತಿನಿತ್ಯ ಕ್ಯಾನ್ಸರ್ ಗೆ ತುತ್ತಾಗುವವರ ಸಂಖ್ಯೆ ಎಷ್ಟು ಗೊತ್ತೇ ?

ವಾರ್ತಾ ಭಾರತಿ : 11 Jan, 2018

-ವಾರ್ಷಿಕ 2,688 ಮಂದಿ ಸಾವು
-ಪ್ರತಿವರ್ಷ 51 ಸಾವಿರ ಮಂದಿಗೆ ಕ್ಯಾನ್ಸರ್ ಕಾಯಿಲೆ

ಬೆಂಗಳೂರು, ಜ. 11: ರಾಜ್ಯದಲ್ಲಿ ತಂಬಾಕು ಬಳಕೆ ಪ್ರಮಾಣ ಶೇ.6ರಷ್ಟು ಕಡಿಮೆಯಾಗಿದ್ದು, ತಂಬಾಕು, ಮತ್ತದರ ಉತ್ಪನ್ನಗಳ ಬಳಕೆ ಪ್ರಮಾಣ ಕಡಿಮೆ ಮಾಡುವ ಬಗ್ಗೆ ಜನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ವಿಧಾನಸಭೆ ಅರ್ಜಿಗಳ ಸಮಿತಿ ಅಧ್ಯಕ್ಷರೂ ಆಗಿರುವ ವಿಧಾನಸಭೆಯ ಉಪಾಧ್ಯಕ್ಷ ಎನ್.ಎಚ್.ಶಿವಶಂಕರರೆಡ್ಡಿ ಸಲಹೆ ಮಾಡಿದ್ದಾರೆ.

ಗುರುವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಜಾಗತಿಕ ವಯಸ್ಕರ ತಂಬಾಕು ಸೇವನೆ ಸರ್ವೇಕ್ಷಣೆ(ಗ್ಯಾಟ್) ವರದಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಸಮೀಕ್ಷೆ ವರದಿಯಂತೆ ತಂಬಾಕು ಬಳಕೆಯ ಪ್ರಮಾಣ ಶೇ.28.2ರಿಂದ ಶೇ.22.8ಕ್ಕೆ ಇಳಿಕೆಯಾಗಿದೆ. ಒಟ್ಟಾರೆ ಸರಾಸರಿ ಶೇ.5ರಿಂದ ಶೇ.6ರಷ್ಟು ತಂಬಾಕು ಸೇವನೆ ಕಡಿಮೆಯಾಗಿದೆ ಎಂದರು.

ತಂಬಾಕು ಉತ್ಪನ್ನಗಳ ಸೇವನೆಯಿಂದ ರಾಜ್ಯದಲ್ಲಿ ಪ್ರತಿನಿತ್ಯ 20 ಮಂದಿ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದು, 51 ಸಾವಿರಕ್ಕೂ ಹೆಚ್ಚು ಮಂದಿ ಪ್ರತಿವರ್ಷ ಕ್ಯಾನ್ಸರ್ ಮತ್ತು ಕ್ಯಾನ್ಸರ್ ಸಂಬಂಧಿ ರೋಗಗಳಿಗೀಡಾಗುತ್ತಿದ್ದಾರೆ. ವಾರ್ಷಿಕ 2,688 ಮಂದಿ ತಂಬಾಕು ಉತ್ಪನ್ನಗಳ ಸೇವನೆಯಿಂದ ಸಾವನ್ನಪ್ಪುತ್ತಿದ್ದಾರೆ. ಹೃದಯಾಘಾತ, ಪಾರ್ಶ್ವವಾಯು ಸೇರಿ ಹಲವು ಗಂಭೀರ ಸ್ವರೂಪದ ಕಾಯಿಲೆಗಳಿಗೆ ಮೂಲ ತಂಬಾಕು ಉತ್ಪನ್ನಗಳ ಸೇವೆನೆ, ಹೀಗಾಗಿ ಈ ಬಗ್ಗೆ ಹೆಚ್ಚಿನ ಜಾಗೃತಿ ಅತ್ಯಗತ್ಯ ಎಂದು ಹೇಳಿದರು.

ದೇಶದಲ್ಲಿಯೇ ಕರ್ನಾಟಕ ರಾಜ್ಯದಲ್ಲಿ ತಂಬಾಕು ಉತ್ಪನ್ನಗಳನ್ನು ಶಾಲಾ-ಕಾಲೇಜು ಆವರಣಗಳಲ್ಲಿ ನಿಷೇಧಿಸಿರುವುದರಿಂದ ಇದರ ಬಳಕೆ ಇಳಿಕೆಯಾಗಲು ಕಾರಣ ಎಂದ ಅವರು, ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೇಕ್ಷಣಾ ವರದಿಯಂತೆ 10 ವರ್ಷಗಳಲ್ಲಿ ತಂಬಾಕು ಬಳಕೆ ಶೇ.11ರಷ್ಟು ಕಡಿಮೆಯಾಗಿದೆ ಎಂದರು.

ಆ ನಿಟ್ಟಿನಲ್ಲಿ ಸರಕಾರ ತೆಗೆದುಕೊಂಡ ದಿಟ್ಟ ನಿಲುವು ಪರಿಣಾಮಕಾರಿಯಾಗಿ ಜಾರಿಯಾಗಿದೆ ಎಂಬುದು ಸಮೀಕ್ಷೆಯಿಂದ ಸ್ಪಷ್ಟವಾಗಿದೆ. ರಾಜ್ಯದ ಜನರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಮತ್ತಷ್ಟು ಜಾಗೃತಿ ಮೂಡಿಸಲು ಸರಕಾರ ಕ್ರಮ ಜರುಗಿಸುವುದು ಅಗತ್ಯ ಎಂದು ಅವರು ಹೇಳಿದರು.

ತಂಬಾಕು ಉತ್ಪನ್ನಗಳ ಮೇಲೆ ಶೇ.85ರಷ್ಟು ಚಿತ್ರ ಸಹಿತ ಎಚ್ಚರಿಕೆ ಸಂದೇಶವನ್ನು ಮುದ್ರಿಸಬೇಕೆಂದು ಸರಕಾರದ ನಿಯಮವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದ್ದು ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ತೆಗೆದುಕೊಂಡ ಈ ನಿಲುವಿಗೆ ಅರ್ಜಿ ಸಮಿತಿ ನ್ಯಾಯಪೀಠವನ್ನು ಅಭಿನಂದಿಸುತ್ತೇವೆ ಎಂದು ಅವರು ಶ್ಲಾಘಿಸಿದರು.

ಈ ಹಿಂದಿನ ಸರ್ವೆ ವರದಿಯಲ್ಲಿ ಧೂಮಪಾನಿಗಳ ಆರೋಗ್ಯ ಕಾರ್ಯಕರ್ತರು ಧೂಮಪಾನವನ್ನು ತ್ಯಜಿಸುವ ಸಲಹೆಯನ್ನು ನೀಡಿದ್ದಾರೆ. ಶೇ.58.2ರಷ್ಟು ಧೂಮಪಾನಿಗಳು ಇದನ್ನು ಅನುಷ್ಠಾನಗೊಳಿಸಿ ಧೂಮಪಾನವನ್ನು ತ್ಯಜಿಸಿದ್ದಾರೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದರು.

ಆರೋಗ್ಯ ವಿಶ್ವ ವಿದ್ಯಾಲಯಗಳು, ಆಸ್ಪತ್ರೆಗಳು, ವೈದ್ಯಕೀಯ ಕಾಲೇಜು, ತಂಬಾಕು ಚಟವನ್ನು ಬಿಡುವಂತೆ ಆಪ್ತ ಸಲಹೆ ನೀಡುವಲ್ಲಿ ಹಾಗೂ ದುಶ್ಚಟವನ್ನು ಬಿಡಿಸುವಲ್ಲಿ ಹೆಚ್ಚಿನ ಪಾತ್ರವಹಿಸಬೇಕೆಂದ ಅವರು, ಪ್ರತಿ ಐವರಲ್ಲಿ ಒಬ್ಬ ವ್ಯಕ್ತಿ ಧೂಮಪಾನ ಕುರಿತಾದ ಜಾಹೀರಾತುಗಳಿಂದ ಆಕರ್ಷಿತವಾಗುತ್ತಿದ್ದು, ಈ ದಿಸೆಯಲ್ಲಿ ಸ್ಥಳೀಯ ಸಂಸ್ಥೆಗಳು ಸೂಕ್ತ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೆಂದು ಸಮಿತಿ ಸರಕಾರಕ್ಕೆ ಶಿಫಾರಸ್ಸು ಮಾಡಿದೆ ಎಂದರು.

ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ: ವಿಧಾನಸೌಧ, ಹೈಕೋರ್ಟ್ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಸೇರಿ ತಂಬಾಕು ಉತ್ಪನ್ನಗಳ ಸೇವನೆ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಗೃಹ ಇಲಾಖೆಗೆ ಸೂಕ್ತ ನಿರ್ದೇಶನ ನೀಡಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.
ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಜಯಸೇಠ್, ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್, ಶಾಸಕರೂ ಹಾಗೂ ಸಮಿತಿ ಸದಸ್ಯರಾದ ಶಿವರಾಂ ಹೆಬ್ಬಾರ್, ಮಂಜುನಾಥ್ ಗೌಡ, ನಾರಾಯಣಗೌಡ ಸೇರಿದಂತೆ ಇನ್ನಿತರರು ಹಾಜರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)