varthabharthi

ನಿಮ್ಮ ಅಂಕಣ

ಹಿಂದೂಗಳು ಬಿಜೆಪಿಗೆ ಮಾತ್ರ ವೋಟು ಕೊಟ್ಟಿದ್ದಾರೆಯೇ?

ವಾರ್ತಾ ಭಾರತಿ : 12 Jan, 2018
-ಉದಯರಾಜ್ ಬಿ. ಆಳ್ವಾ, ಕಾಟಿಪಳ್ಳ
Varthabharathi

ಮಾನ್ಯರೇ, 

ಭಾರತದ ಜನಸಂಖ್ಯೆಯಲ್ಲಿ ಒಟ್ಟು ಹಿಂದೂಗಳು ಶೇ. 82 ಇದ್ದಾರೆ. ಅದರಲ್ಲಿ 2014ರ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಗೆ ವೋಟು ಕೊಟ್ಟವರು ಕೇವಲ ಶೇ. 32 ಮಾತ್ರ. ಉಳಿದ ಶೇ. 50 ಮಂದಿ ಮೋದಿ ಹಾಗೂ ಬಿಜೆಪಿಯ ವಿರುದ್ಧ ವೋಟು ಕೊಟ್ಟಿದ್ದಾರೆ. 2013 ರಲ್ಲಿ ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರಕಾರವನ್ನು ಅರಿಸಿರುವುದು ಇಂತಹ ಬಹುಸಂಖ್ಯಾತ ಹಿಂದೂಗಳೇ.
ಇದರ ಅರ್ಥ ಬಹುಸಂಖ್ಯಾತ ಹಿಂದೂಗಳು ಬಿಜೆಪಿಯ ವಿರುದ್ಧ ಇದ್ದಾರೆ ಎಂದು ಸುಲಭವಾಗಿ ತರ್ಕಿಸಬಹುದು. ಆದುದರಿಂದ ಕೇಸರಿ ಸಂಘಟನೆಯವರು ಮತ್ತ್ತು ಬಿಜೆಪಿಯವರು ಹಿಂದೂಗಳ ವೋಟು ಕೇವಲ ತಮ್ಮ ಏಕಸಾಮ್ಯ ಎನ್ನುವಂತೆ ವರ್ತಿಸುತ್ತಾ ಸಿದ್ದರಾಮಯ್ಯನವರ ಹಿಂದೂ ಹಿನ್ನೆಲೆಯ ಬಗ್ಗೆ ಪ್ರಶ್ನಿಸಲು ನೈತಿಕ ಅಧಿಕಾರ ಹೊಂದ್ದಾರೆಯೇ? 2013ರಲ್ಲಿ ಕರ್ನಾಟಕದಲ್ಲಿ ಬಿಜೆಪಿಗೆ ಕೇವಲ ಶೇ. 20 ಹಿಂದೂಗಳು ಮಾತ್ರ ವೋಟು ಹಾಕಿದ್ದರು, ಯಡಿಯೂರಪ್ಪನವರ ಕೆಜೆಪಿಗೆ ಶೇ. 10 ಹಿಂದೂಗಳು ವೋಟು ಹಾಕಿದ್ದರು. ಆದರೆ ಶೇ. 50 ಹಿಂದೂಗಳು ಆಗಲೂ ಬಿಜೆಪಿವಿರುದ್ಧ, ಅಂದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಪರವಾಗಿ ವೋಟು ಹಾಕಿದ್ದರು. ಹಾಗಿರುವಾಗ ಬಿಜೆಪಿಯ ವಿರುದ್ಧ ಮತ ಹಾಕಿದವರನ್ನೆಲ್ಲಾ ಹಿಂದೂ ಧರ್ಮದ ವಿರೋಧಿಗಳು ಎಂದು ಕುರುಡಾಗಿ ಕರೆಯುವುದು ಬಹುಸಂಖ್ಯಾತ ಮತದಾರರಿಗೆ ಘೋರ ಅವಮಾನ ಮಾಡಿದಂತೆ. ಮಾತ್ರವಲ್ಲದೆ ಬಿಜೆಪಿಯವರು ಬಹುಸಂಖ್ಯಾತ ಹಿಂದೂ ಮತದಾರರ ವಿವೇಚನಾ ಶಕ್ತಿಯನ್ನೇ ಪ್ರಶ್ನಿಸಿದಂತೆ ಆಗುತ್ತಿದೆ.
ಹಾಗಾಗಿ ಬಿಜೆಪಿಯ ವಿರುದ್ಧ ಇರುವವರನ್ನೆಲ್ಲಾ ಸಾರಾಸಗಟಾಗಿ ‘ಹಿಂದೂ ವಿರೋಧಿಗಳು’ ಎಂದು ಸಂಘಪರಿವಾರಿಗರು ಕುರುಡಾಗಿ ಬ್ರಾಂಡ್ ಮಾಡುವುದನ್ನು ಬಿಡಬೇಕು. ಸಂಘ ಪರಿವಾರದವರ ದೃಷ್ಟಿಯಲ್ಲಿ ಕೇವಲ ಬ್ರಾಹ್ಮಣರು ಮಾತ್ರ ನೈಜ ಹಿಂದೂ ಎನ್ನುವಂತಿದೆ. ‘ಅಹಿಂದ’ ಎಂದರೆ ಕೇವಲ ಮುಸ್ಲಿಂ ಅಥವಾ ಕ್ರೈಸ್ತರಲ್ಲ. ಅಹಿಂದದಲ್ಲಿ ಇರುವ ಹೆಚ್ಚಿನ ಸಮುದಾಯ ಹಿಂದೂಗಳೇ ಆಗಿದ್ದಾರೆ. ಅವರೆಲ್ಲಾ ಹಿಂದುಳಿದ ಮತ್ತು ದಲಿತ ವರ್ಗದವರು. ಬಿಜೆಪಿಗಿಂತ ಹೆಚ್ಚು ಹಿಂದೂಗಳು ಇತರ ಪಕ್ಷಗಳ ಬೆಂಬಲಿಗರಾಗಿದ್ದಾರೆ. ಕೇವಲ ಈ ಹಿಂದೂಗಳ ವೋಟು ಇತರ ಪಕ್ಷಗಳಲ್ಲಿ ಹಂಚಿ ಹರಿದು ಹೋಗುತ್ತಿರುವುದರಿಂದ ಅಲ್ಪಸಂಖ್ಯೆಯಲ್ಲಿ ಹಿಂದೂಗಳ ವೋಟು ಪಡೆದು ಕೇಸರಿ ಪಕ್ಷ ಗೆಲ್ಲಲು ಸಾಧ್ಯವಾಗಿರುವುದು. ಇನ್ನಾದರೂ ಅವರು ಹೆಚ್ಚಿನ ಹಿಂದೂಗಳು ತಮ್ಮ ವಿರುದ್ಧವಾಗಿದ್ದಾರೆ ಎಂಬುದನ್ನೂ ಅರ್ಥ ಮಾಡಿಕೊಳ್ಳಲಿ.

 

Comments (Click here to Expand)