varthabharthi

ವೈವಿಧ್ಯ

ವಿವೇಕಾನಂದ ವಾಣಿ

ವಾರ್ತಾ ಭಾರತಿ : 12 Jan, 2018
ಸಿ. ರಾಜೇಶ್ವರ ರಾವ್

ನಮ್ಮ ರಾಷ್ಟ್ರೀಯ ಚಳವಳಿಯನ್ನು ಬಹುವಾಗಿ ಪ್ರಭಾವಿಸಿದ ಭಾರತದ ಸುಪುತ್ರ ವಿವೇಕಾನಂದರ ಜನ್ಮದಿನ ಜನವರಿ 12. 19ನೇ ಶತಮಾನದ ಉತ್ತರಾರ್ಧದಲ್ಲಿ ದೇಶವು ವಿದೇಶಿ ಆಳ್ವಿಕೆಯಡಿಯಲ್ಲಿ ನಲುಗಿಹೋಗುತ್ತಿದ್ದಾಗ, ದೇಶದ ಸಂಪತ್ತು ಲೂಟಿಯಾಗುತ್ತಿದ್ದಾಗ, ದೇಶದ ಸ್ವಾಭಿಮಾನ, ಸಂಸ್ಕೃತಿಗಳಿಗೆ ಸ್ಥಾನವೇ ಇಲ್ಲದಿದ್ದಾಗ ದೇಶಕ್ಕೆ ಸ್ವಾತಂತ್ರದ ಕಲ್ಪನೆಯೇ ಇಲ್ಲದಿದ್ದಾಗ, ವಿವೇಕಾನಂದರ ಪ್ರಖರ ಭಾಷಣಗಳು, ಬರಹಗಳು ಕ್ರಾಂತಿಕಾರಿಗಳ ಹೊಸ ಪೀಳಿಗೆಯನ್ನೇ ಸೃಜಿಸಿದವು.

 ಮೂಕವಿಸ್ಮಿತ ಜನತೆಯನ್ನು ಬಡಿದೆಬ್ಬಿಸಲು, ರಾಷ್ಟ್ರೀಯ ಪುನುರುತ್ಥಾನಕ್ಕಾಗಿ ಹಮ್ಮಿಕೊಂಡ ಸಶಕ್ತಕಾರ್ಯಸೂಚಿಯಂತೆ ಅವರ ಭಾಷಣಗಳು ಇರುತ್ತಿದ್ದವು. ಅವರು ಶೋಷಕ ವರ್ಗದ ವಿರುದ್ಧ, ಸವಲತ್ತು ಉಳ್ಳವರ ವಿರುದ್ಧ, ಲಾಭಕೋರರ ವಿರುದ್ಧ ಮಾತನಾಡಿದರು. ಹಾಗೇಯೇ ಬಡವರ, ದುಡಿಯುವವರ, ದಮನಿತರ ಪರವಾಗಿ ನಿಂತರು. ಭವಿಷ್ಯವು ದಮನಿತರ ಜಗತ್ತೇ ಎಂದರು. ಹೋರಾಟ ಮತ್ತು ಐಕ್ಯತೆ ಅವರ ಗುರಿಯಾಗಿದ್ದವು.

ವಿವೇಕಾನಂದರು ಹಿಂದೂ ಧರ್ಮದಲ್ಲಿ ನವವೇದಾಂತ ಚಳವಳಿಯನ್ನು ಹುಟ್ಟುಹಾಕಿದ ಧಾರ್ಮಿಕ ಪ್ರಚಾರಕರಾಗಿದ್ದರು. ಅವರು ಮತಾಂಧತೆ, ಸಂಕುಚಿತ ಭಾವನೆಗಳು ಪ್ರಾಂತೀಯತೆ, ಜಾತಿ ಭೇದ, ಅವಿಚಾರಕತೆಯ ಕುರಿತು, ಮಾನವ ಘನತೆಗೂ ಬ್ರಾತೃತ್ವಕ್ಕೂ ಕುಂದುತರುವ ಎಲ್ಲಾ ಅಂಶಗಳ ಬಗ್ಗೆ ಸಿಡಿದೆದ್ದರು.

ನಮ್ಮ ರಾಷ್ಟ್ರೀಯ ಪುನುರುತ್ಥಾನಕ್ಕೆ, ತತ್ತ್ವಜಿಜ್ಞಾಸೆಗೆ ಮತ್ತು ಅಧ್ಯಾತ್ಮ ರಂಗಕ್ಕೆ ವಿವೇಕಾನಂದರು ನೀಡಿದ ಪ್ರಾಯೋಗಿಕವಾದ ಕೊಡುಗೆಯ ಬಗ್ಗೆ ನಾವಿಲ್ಲಿ ವೌಲ್ಯಮಾಪನ ಮಾಡಲು ಹೊರಟಿಲ್ಲ; ಆದರೆ ಅವರ ಕೆಲವು ಜ್ವಲಂತ ಹೇಳಿಕೆಗಳನ್ನು ಇಲ್ಲಿ ಉದಾಹರಿಸಿ, ಸೂಕ್ಷ್ಮಮತಿಯ ಓದುಗರಿಗೆ ರಾಷ್ಟ್ರನಿರ್ಮಾಣದ ಬಗೆಗೆ ಮತ್ತು ರಾಷ್ಟ್ರೀಯ ಪುನುರುಜ್ಜೀವನದ ಬಗೆಗೆ ಸ್ವಾಮಿಗಳ ನುಡಿಗಳನ್ನು ದಾಖಲಿಸುವುದು ಖಚಿತ.

 ವಿವೇಕಾನಂದರು ಎಲ್ಲರನ್ನೂ ಉದ್ದೇಶಿಸಿ ನುಡಿದದ್ದು ಹೀಗೆ ‘‘ನೀವು ಯಾರ ಪರವಾಗಿ ಇದ್ದೀರಿ? ಕೆಲವೇ ಮಂದಿ ಶೋಷಕರ ಪರವಾಗಿಯೋ ಅಥವಾ ಕೋಟ್ಯಂತರ ಮಂದಿ ಅವಿದ್ಯಾವಂತರ, ಶೋಷಿತರ, ದಮನಿತರ ಪರವಾಗಿಯೋ?’’ ಇದಕ್ಕೆ ಅವರೇ ಉತ್ತರಿಸಿರುವುದು ಹೀಗೆ: ‘‘ ಭಾರತಕ್ಕಿರುವ ಒಂದೇ ಭರವಸೆಯೆಂದರೆ ಇಲ್ಲಿನ ಜನತೆ ಇಲ್ಲಿನ ಉಚ್ಚವರ್ಗಗಳು ಭೌತಿಕವಾಗಿ ಮತ್ತು ನೈತಿಕವಾಗಿ ಸತ್ತಿವೆ’’ ಬಡವರಿಗೆ ನೀಡಬೇಕಾದ ಸಹಾಯ ಮತ್ತು ಸವಲತ್ತುಗಳ ಕುರಿತು ಅವರು ಹೀಗೆಂದಿದ್ದಾರೆ: ‘‘ಬ್ರಾಹ್ಮಣರಿಗೆ, ಜ್ಞಾನ ಸಂಪಾದನೆಗಾಗಿ ಆಸಕ್ತಿ ಆನುವಂಶೀಯವಾಗಿ ಬಂದಿದೆ. ಆದರೆ, ಅಸ್ಪಶ್ಯರಲ್ಲಿ ಅದಿಲ್ಲ, ಹಾಗಿರುವಾಗ ಬ್ರಾಹ್ಮಣರ ವಿದ್ಯಾಭ್ಯಾಸಕ್ಕೇಕೆ ಹಣ ಖರ್ಚು ಮಾಡಬೇಕು? ಅದನ್ನು ಅಸ್ಪಶ್ಯರಿಗಾಗಿ ವ್ಯಯಿಸಿರಿ, ನಿಶ್ಯಕ್ತರಿಗೆ ಸಹಾಯ ಮಾಡಿ ಅವರಿಗೆ ಅದು ಹೆಚ್ಚು ಸಲ್ಲಬೇಕು.’’

 ನವಭಾರತವು ಎಲ್ಲಿಂದ ಉಗಮವಾಗುತ್ತೆ? ವಿವೇಕಾನಂದರ ಉತ್ತರ ಹೀಗೆ ‘‘ನೇಗಿಲನ್ನು ಕೈಯಲ್ಲಿ ಹಿಡಿದ ರೈತರ ಗುಡಿಸಿಲಿನಿಂದ, ಮೀನುಗಾರರ ಹಟ್ಟಿಗಳೊಳಗಿನಿಂದ, ಚಮ್ಮಾರನ, ಝಾಡಮಾಲಿಯ ಮನೆಗಳಿಂದ ನವಭಾರತವು ಹರಿದು ಬರುತ್ತದೆ. ಕಿರಾಣಿ ಅಂಗಡಿ, ಪಿಂಗಣಿ ಕೆಲಸಗಾರನ ಕುಲುಮೆಯೊಳಗಿನಿಂದ, ಮಾರುಕಟ್ಟೆಯಿಂದ, ಕಾರ್ಖಾನೆಗಳಿಂದ ಹುಟ್ಟಿ ಬರುತ್ತದೆ. ಗುಡ್ಡ, ಪರ್ವತಗಳಿಂದ, ಕಾಡು ಮೇಡುಗಳಿಂದ ಅದು ತೂರಿ ಬರುತ್ತದೆ.

‘‘ಸಾವಿರಾರು ವರ್ಷಗಳಿಂದ ಈ ಸಾಮಾನ್ಯ ಜನರು ದಬ್ಬಾಳಿಕೆಯಿಂದ ನಲುಗಿದ್ದಾರೆ. ಗೊಣಗದೆ ನೊಂದಿದ್ದಾರೆ. ಆದ್ದರಿಂದಲೇ ಅವರಲ್ಲಿ ಕಷ್ಟಸಹಿಷ್ಣುತೆ ಮೈಗೂಡಿದೆ. ಅನಂತ ಕಷ್ಟಕೋಟಲೆಗಳನ್ನು ಅವರು ಸಹಿಸಿದ್ದಾರೆ. ಆದ್ದರಿಂದಲೇ ಅವರಲ್ಲಿ ಅಗಣಿತ ಕರ್ತೃತ್ವ ಶಕ್ತಿಯಿದೆ’’

ಈ ದುಡಿಯುವ ವರ್ಗವನ್ನೇ ಸ್ವಾಮಿಗಳು ‘ಶೂದ್ರ’ ರೆಂದು ಕರೆಯುತ್ತಾರೆ. ಅವರು ಈ ‘ಶೂದ್ರ’ರೊಂದಿಗೆ ಸಮೀಕರಿಸಿಕೊಳ್ಳುತ್ತಾರೆ. ಭವಿಷ್ಯದಲ್ಲಿ ಇವರಿಗೆ ರಾಜಕೀಯ ಶಕ್ತಿ ಹಸ್ತಾಂತರಗೊಳ್ಳುವುದನ್ನು ಕಾಣುತ್ತಾರೆ.

‘‘ಶೂದ್ರರು ಮೇಲೆದ್ದು ಬರುವ ಕಾಲ ಬಂದೇ ಬರುತ್ತದೆ. ಇವರು ಒಂದು ವರ್ಗವಾಗಿ ಸಮಾಜದ ಚುಕ್ಕಾಣಿ ಹಿಡಿಯುತ್ತಾರೆ’’

ಈ ವರ್ಗಗಳು ಒಟ್ಟಾಗುವುದೆಂದು ವಿವೇಕಾನಂದರು ಭವಿಷ್ಯ ನುಡಿಯುತ್ತಾರೆ: ‘‘ಈ ಬಗೆಯ ಪುನರುತ್ಥಾನದ ಚಿಹ್ನೆಗಳು ಭಾರತದಲ್ಲಿ ಕಾಣಿಸಿಕೊಳ್ಳಲು ಮೊದಲಾಗಿವೆ. ಈಗ ನಡೆಯುತ್ತಿರುವ ಮುಷ್ಕರಗಳೇ ಇದಕ್ಕೆ ಸಾಕ್ಷಿ. ಉಚ್ಚ ವರ್ಗಗಳು ಎಷ್ಟೇ ಪ್ರಯತ್ತಿಸಿದರೂ ಕೆಳವರ್ಗಗಳನ್ನು ನಿಯಂತ್ರಿಸಲಾರವು.’’

ಸ್ವಾಮೀಜಿಯವರಿಗೆ ಜನಸಾಮಾನ್ಯರ ಶಕ್ತಿಯ ಬಗ್ಗೆ ಅಮಿತ ನಂಬುಗೆಯಿತ್ತು. ರೈತಾಪಿ ಜನರ ರಕ್ತಹೀರುವ ಪಾಳೇಗಾರಿ ವರ್ಗದ ಅವನತಿಯ ಬಗ್ಗೆ ಅರಿವಿತ್ತು. ಅವರು ಹೇಳುವಂತೆ ‘‘ಭಾರತಕ್ಕೆ ಇರುವ ಭರವಸೆಯು ಜನತೆಯೊಂದೇ, ಉಚ್ಚವರ್ಗಗಳು ಭೌತಿಕವಾಗಿ ಮತ್ತು ನೈತಿಕವಾಗಿ ಸತ್ತಿವೆ.’’

ಸ್ವಾಮಿಗಳು ಪಾಳೇಗಾರಿಕೆಯ ಅವನತಿಯ ಬಗ್ಗೆ ಎಷ್ಟು ಕೋಪದಿಂದ ಮತ್ತು ದ್ವೇಷದಿಂದ ಹೇಳುತ್ತಾರೆಂಬುದು ಇನ್ನಷ್ಟು ಸ್ಪಷ್ಟವಾಗಲು, ಅವರ ಭಾಷಣದ ಈ ಭಾಗ ನೋಡಿ: ‘‘ನೀವು ಆರ್ಯರ ಸಂತತಿ ಎಂದು ಎಷ್ಟೇ ಹೇಳಿಕೊಂಡರೂ ದಿನ, ರಾತ್ರಿ ಪ್ರಾಚೀನ ಭಾರತದ ವಿಜೃಂಭಣೆಯ ಬಗ್ಗೆ ಎಷ್ಟೇ ಹಾಡಿ ಹೊಗಳಿದರೂ, ನೀವು ಹುಟ್ಟಿನಿಂದ ಶ್ರೇಷ್ಠರೆಂದು ಎಷ್ಟು ಬಾರಿ ಬೊಬ್ಬಿರಿದರೂ ಉಚ್ಚ ವರ್ಗಕ್ಕೆ ಸೇರಿದ ಭಾರತೀಯರಾದ ನೀವು ಜೀವಂತವಾಗಿದ್ದೀರಾ? ನೀವೀಗಾಗಲೇ ಹತ್ತು ಸಾವಿರ ವರ್ಷಗಳ ಹೆಣಗಳಾಗಿದ್ದೀರಿ’’

‘‘ನಿಮ್ಮ ಪೂರ್ವಿಕರು ನಡೆದಾಡುವ ಹೆಣಗಳೆಂದು ಕರೆದು ದೂಷಿಸುವ ಜನತೆಯಲ್ಲೇ ಭಾರತಕ್ಕೆ ಬೇಕಾದ ಕೆಚ್ಚು ಉಳಿದಿರುವುದು ಇವರನ್ನು ಬಿಟ್ಟರೆ ಉಳಿದ ನೀವೆಲ್ಲಾ ಚಲಿಸುವ ಹೆಣಗಳೇ’’

‘‘ನಿಮ್ಮ ಬಂಗಲೆಗಳು, ನಿಮ್ಮ ಸಾಮಾನು ಸರಂಜಾಮುಗಳೆಲ್ಲಾ ಮ್ಯೂಸಿಯಂನಲ್ಲಿ ಸಂಗ್ರಹಿಸಿದ ವಸ್ತುಗಳಂತೆ ತೋರುತ್ತವೆ. ಅವುಗಳಲ್ಲ್ಲಿ ಜೀವಂತಿಕೆಯಿಲ್ಲ. ಈ ಮಾಯಾ ಪ್ರಪಂಚದಲ್ಲಿ ನೀವುಗಳೇ ನಿಜವಾದ ಮಾಯೆ. ಮರುಭೂಮಿಯಲ್ಲಿ ಕಾಣುವ ಬಿಸಿಲ್ಗುದುರೆಯಂತೆ. ಭಾರತದಲ್ಲಿ ಉಚ್ಚ ವರ್ಗಗಳಾದ ನೀವಿದ್ದೀರಿ ಭೂತಕಾಲದ ಪಳೆಯುಳಿಕೆಗಳಂತೆ.....ಭವಿಷ್ಯದಲ್ಲಿ ನಿಮ್ಮ ಸ್ಥಾನ ಶೂನ್ಯ’’ ‘‘ಕನಸಿನ ಲೋಕದ ಪರದೇಶಿಗಳಂತೆ ನೀವು ಈ ಭೂಮಿಯಲ್ಲೇಕೆ ಕಾಲ ತಳ್ಳುತ್ತಿದ್ದೀರಿ? ರಕ್ತ ಮಾಂಸಗಳಿಲ್ಲದ ಕಂಕಾಲದಂತೆ ಪ್ರಾಚೀನ ಭಾರತ ಪಳೆಯುಳಿಕೆಗಳು ನೀವು. ನೀವು ಅತೀ ಶೀಘ್ರವಾಗಿ ಧೂಳಿಪಟವಾಗಿ ಗಾಳಿಯಲ್ಲಿ ಕರಗಿಹೋಗಬಾರದೇಕೆ? ನೀವು ಕಣ್ಣಿಗೆ ಕಾಣದೆ ಹಾಳಾಗಿ ಹೋದಾಗಲೇ ನವ ಭಾರತವೊಂದು ಉದಯಿಸಿ ನಿಮ್ಮ ಸ್ಥಾನ ತುಂಬುತ್ತದೆ’’

‘ಶೂದ್ರರ ರಾಜ್ಯ’ ಹೇಗಿರಬೇಕು ಎಂಬುದರ ಬಗ್ಗೆ ವಿವೇಕಾನಂದರಿಗೆ ಅನುಮಾನಗಳಿದ್ದವು. ಆದರೂ ಅವರು ಹೀಗೆನ್ನುತ್ತಾರೆ ‘‘ನಾನು ಸಮಾಜವಾದಿ. ಇದು ಅತಿ ಸಮರ್ಪಕ ವ್ಯವಸ್ಥೆ ಎಂದೇನಲ್ಲ. ಆದರೆ ಪೂರ್ತಿರೊಟ್ಟಿ ಇಲ್ಲದಿದ್ದಾಗ ಅರ್ಧ ರೊಟ್ಟಿಯಾದರೂ ವಾಸಿಯಲ್ಲವೇ?’’

 ಆದರ್ಶವಾದಿ, ತತ್ತ್ವಜ್ಞಾನಿ, ನವವೇದಾಂತದ ಹರಿಕಾರ ವಿವೇಕಾನಂದರು ಯುವಜನರನ್ನು ಉದ್ದೇಶಿಸಿ ಮಾತನಾಡುವಾಗ ನೇರವಾಗಿ ಹೀಗೆ ಹೇಳುತ್ತಾರೆ: ‘‘ಬಡವರನ್ನು, ಅವಿದ್ಯಾವಂತರನ್ನು, ದೀನ ದಲಿತರನ್ನು ಸಹಾನುಭೂತಿಯಿಂದ ನೋಡಿ, ಅವರಿಗಾಗಿ ಹೋರಾಡಿ’’

‘‘ಭೌತಿಕನಾಗರಿಕತೆಯ ಬಗ್ಗೆ ನಾವು ಮೂರ್ಖತನದಿಂದ ಮಾತನಾಡುತ್ತೇವೆ. (ಕೈಗೆಟುಕದ ದ್ರಾಕ್ಷಿ ಹುಳಿಯಲ್ಲವೇ). ಭೌತಿಕನಾಗರಿಕತೆಯೂ ಅಷ್ಟೇ ಏಕೆ ಭೋಗಸಂಪತ್ತು, ಬಡವರಿಗೆ ಕೆಲಸ ಕೊಡಲು ಬೇಕೆ ಬೇಕು. ಅನ್ನ! ಆಹಾರ ನೀಡದ ದೇವರನ್ನು ನಾನು ನಂಬಲಾರೆ. ಇಲ್ಲಿ ಅನ್ನ ನೀಡದೆ ಸ್ವರ್ಗದಲ್ಲಿ ಚಿರ ಆನಂದ ನೀಡುವ ದೇವರು ಬೇಡ. ಭಾರತವು ಮೇಲೇಳಬೇಕಾದರೆ, ಇಲ್ಲಿನ ಬಡವರಿಗೆ ಅನ್ನ ಬೇಕು. ವಿದ್ಯೆಬೇಕು. ಪುರೋಹಿತಶಾಹಿಯೆಂಬ ಕೆಡಕು ನಿವಾರಣೆಯಾಗಬೇಕು...ಹೆಚ್ಚು ಅನ್ನವಿದ್ದರೆ ಹೆಚ್ಚು ಮಂದಿಗೆ ಅವಕಾಶ.’’

ವಿವೇಕಾನಂದರಿಗೆ ವೇದಾಂತವು ಎಲ್ಲಾ ಧರ್ಮಗಳ ತಾಯಿಬೇರು. ಅದೇ ರಾಷ್ಟ್ರೀಯ ಪುನುರುತ್ಥಾನಕ್ಕೆ ವಾಹಕಮಿತಿ. ಧರ್ಮಲ್ಲೆ ಇರುವ ಮಿತಿಗಳ ಬಗ್ಗೆಯೂ ಅವರಿಗೆ ಅರಿವಿತ್ತು. ಹಾಗಾಗಿ ಅವರು ‘‘ಸಾಮಾಜಿಕ ನಿಯಮಗಳು ಧರ್ಮ ಸಮ್ಮತಿಯಂತೆ ಆಯಾ ಕಾಲದ ಆರ್ಥಿಕ ಪರಿಸ್ಥಿತಿಗಳನ್ನನುಸರಿಸಿ ಸೃಷ್ಟಿಗೊಂಡವು. ಸಾಮಾಜಿಕ ವಿಚಾರದಲ್ಲಿ ಧರ್ಮ ಹಸ್ತಕ್ಷೇಪ ಮಾಡುವುದು ಅಕ್ಷಮ್ಯ ಅಪರಾಧ.... ಹಸ್ತಕ್ಷೇಪದಿಂದ ದೂರವಿರಿ! ನಿಮ್ಮ ಎಲ್ಲೆಯೊಳಗೆ ನೀವು ಇರಿ. ಎಲ್ಲವೂ ಸರಿಹೋಗುತ್ತದೆ’’ ಮುಂದುವರಿದು ಅವರು ಹೀಗೆಂದಿದ್ದಾರೆ: ‘‘ಹಸಿದ ಜನತೆಗೆ ಧರ್ಮ ಬೋಧನೆಯು, ಅವರಿಗೆ ಅವಮಾನ ಮಾಡಿದಂತೆ. ಹಸಿದ ಹೊಟ್ಟೆಗೆ ಜಾತಿ ಪದ್ಧತಿ ಬೋಧಿಸುವುದು ನಿಂದನೆ ಮಾಡಿದಂತೆ’’

 ‘‘ಹಸಿದ ವ್ಯಕ್ತಿಗೆ ಅಧ್ಯಾತ್ಮ ಬೋಧಿಸುವುದೂ ಅಪನಿಂದೆಯೇ.’’ ಧರ್ಮದ ತಾಯಿಬೇರು ಯಾವುದು? ಮೂಲದಲ್ಲಿ ಎಲ್ಲ ಧರ್ಮವೂ ಒಂದೇ ಎಂಬುದರ ಬಗ್ಗೆ ವಿವೇಕಾನಂದರ ಮಾತಿದು:

 ‘‘ಪ್ರತಿ ಧರ್ಮವೂ ಮಾನವನನ್ನು ಭೌತಿಕವಾಗಿ ಪರಿಗಣಿಸಿಯೇ ದೇವರನ್ನು ಸೃಜಿಸಿಕೊಂಡಿದೆ. ಒಬ್ಬನೇ ದೇವರು ಎಲ್ಲಾ ಧರ್ಮಗಳ ಸ್ಫೂರ್ತಿಯಾಗಿದ್ದಾನೆ. ಅಲ್ಲದೆ ವಿವಿಧ ಧರ್ಮಗಳ ನಡುವೆ ಒಡನಾಟವು ಇಂದಿನ ಅಗತ್ಯವಾಗಿದೆ ’’

ಧರ್ಮದ ಮೂಲತತ್ತ್ವಗಳನ್ನು ಮರೆತಾಗ ಏನಾಗುತ್ತದೆ - ತತ್ತ್ವಗಳ ದೃಷ್ಟಿಯಿಂದ ಮರೆಯಾದಾಗ ಮತ್ತು ಭಾವವೇಶಗಳೇ ತುಂಬಿಕೊಂಡಾಗ, ಧರ್ಮವು ಅವನತಿಗೊಂಡು ಮತಾಂಧತೆಯತ್ತ ಮತ್ತು ಮತಾಭಿಮಾನದತ್ತ ಹೊರಳುತ್ತದೆ.

ಆರೆಸ್ಸೆಸ್ ಮತ್ತು ವಿಶ್ವ ಹಿಂದೂ ಪರಿಷತ್‌ನ ‘ಹಿಂದುತ್ವ’ ವಾದಿಗಳು ವಿವೇಕಾನಂದರ ಯಾವ ಅಂಶವನ್ನು ಮೈಗೂಡಿಸಿಕೊಂಡಿದ್ದಾರೆ, ಅವರ ಹಿಂದೂ ಪ್ರಜ್ಞೆಗೂ ವಿವೇಕಾನಂದರು ಹೇಳಿದ ಹಿಂದೂ ಪ್ರಜ್ಞೆಗೂ ಏನು ಸಾಮ್ಯವಿದೆ, ಕೋಮುವಾದಕ್ಕೂ ಮತಾಂಧತೆಗೂ ಯಾವ ವಿವೇಕಾನಂದರನ್ನು ಅವರು ತಮ್ಮದಾಗಿಸಿಕೊಂಡಿದ್ದಾರೆ?

ಕೃಪೆ: ನವಕರ್ನಾಟಕ ಪ್ರಕಾಶನ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)