varthabharthi

ಕ್ರೀಡೆ

ಆಸ್ಟ್ರೇಲಿಯನ್ ಓಪನ್‌

ನಡಾಲ್, ಫೆಡರರ್‌ಗೆ ಅಗ್ರ ಶ್ರೇಯಾಂಕ

ವಾರ್ತಾ ಭಾರತಿ : 12 Jan, 2018

ಮೆಲ್ಬೋರ್ನ್, ಜ.11: ಮುಂದಿನ ವಾರ ಆರಂಭವಾಗಲಿರುವ ವರ್ಷದ ಮೊದಲ ಗ್ರಾನ್‌ಸ್ಲಾಮ್ ಟೂರ್ನಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಆರು ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಕ್ 14ನೇ ಶ್ರೇಯಾಂಕ ಪಡೆದಿದ್ದಾರೆ. ರಫೆಲ್ ನಡಾಲ್ ಹಾಗೂ ರೋಜರ್ ಫೆಡರರ್ ಕ್ರಮವಾಗಿ ಮೊದಲ ಹಾಗೂ ಎರಡನೇ ಶ್ರೇಯಾಂಕ ಪಡೆದಿದ್ದಾರೆ ಎಂದು ಆಯೋಜಕರು ಗುರುವಾರ ತಿಳಿಸಿದ್ದಾರೆ.

ಆಸ್ಟ್ರೇಲಿಯನ್ ಓಪನ್‌ನ ಡ್ರಾ ಪ್ರಕ್ರಿಯೆ ಮಂಗಳವಾರ ಇಲ್ಲಿ ನಡೆದಿದೆ. ಟೂರ್ನಿಯು ಜ.15 ರಿಂದ ಆರಂಭವಾಗಲಿದೆ.

ನಡಾಲ್ ಶ್ರೇಯಾಂಕದಲ್ಲಿ ಹಾಲಿ ಚಾಂಪಿಯನ್ ಫೆಡರರ್‌ಗಿಂತ ಮುಂದಿದ್ದಾರೆ. ಮಹಿಳೆಯರ ಸಿಂಗಲ್ಸ್‌ನಲ್ಲಿ ಸಿಮೊನಾ ಹಾಲೆಪ್ ಹಾಗೂ ಕರೊಲಿನ್ ವೋಝ್ನಿಯಾಕಿ ಕ್ರಮವಾಗಿ ಒಂದು ಹಾಗೂ 2ನೇ ಶ್ರೇಯಾಂಕ ಪಡೆದಿದ್ದಾರೆ.

ಎಟಿಪಿ ವಿಶ್ವ ರ್ಯಾಂಕಿಂಗ್ ಪ್ರಕಾರ ಶ್ರೇಯಾಂಕ ನಿರ್ಧಾರವಾಗುತ್ತದೆ. ಈ ಬಾರಿಯ ಟೂರ್ನಿಯಲ್ಲಿ ಗಾಯದ ಸಮಸ್ಯೆಯಿಂದಾಗಿ ಆ್ಯಂಡಿ ಮರ್ರೆ ಹಾಗೂ ಕೀ ನಿಶಿಕೊರಿ, ಹಾಲಿ ಚಾಂಪಿಯನ್ ಸೆರೆನಾ ವಿಲಿಯಮ್ಸ್ ಆಡುತ್ತಿಲ್ಲ. ಫೆಡರರ್ 20ನೇ ಗ್ರಾನ್‌ಸ್ಲಾಮ್ ಪ್ರಶಸ್ತಿಯ ಮೇಲೆ ಕಣ್ಣಟ್ಟಿದ್ದಾರೆ. ಸ್ವಿಸ್‌ನ ಸ್ಟಾನ್ ವಾವ್ರಿಂಕ ವಿಂಬಲ್ಡನ್ ಬಳಿಕ ಯಾವುದೇ ಟೂರ್ನಿಯಲ್ಲಿ ಆಡಿಲ್ಲ. ಆಸ್ಟ್ರೇಲಿಯನ್ ಓಪನ್‌ನಲ್ಲಿ ವಾವ್ರಿಂಕ 9ನೇ ಶ್ರೇಯಾಂಕ ಪಡೆದಿದ್ದಾರೆ.

►ವಿಶ್ವದ ನಂ.1 ಹಾಲೆಪ್‌ಗೆ ಡೆಸ್ಟನೀ ಮೊದಲ ಎದುರಾಳಿ

  ರೋಮಾನಿಯದ ವಿಶ್ವದ ನಂ.1 ಆಟಗಾರ್ತಿ ಸಿಮೊನಾ ಹಾಲೆಪ್ ಆಸ್ಟ್ರೇಲಿಯನ್ ಓಪನ್‌ನ ತನ್ನ ಮೊದಲ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯದ ವೈರ್ಲ್ಡ್‌ಕಾರ್ಡ್ ಆಟಗಾರ್ತಿ ಡೆಸ್ಟನೀ ಆಯಾವಾರನ್ನು ಎದುರಿಸಲಿದ್ದಾರೆ. ಹಾಲೆಪ್ ಕ್ವಾರ್ಟರ್ ಫೈನಲ್‌ನಲ್ಲಿ ಕರೊಲಿನಾ ಪ್ಲಿಸ್ಕೋವಾರನ್ನು ಎದುರಿಸುವ ಸಾಧ್ಯತೆಯಿದೆ. ಹಾಲೆಪ್ ಮೆಲ್ಬೋರ್ನ್ ನಲ್ಲಿ ಮೊದಲ ಸುತ್ತಿನಲ್ಲಿ ನಾಲ್ಕು ಬಾರಿ ಸೋತಿದ್ದಾರೆ. 23 ಬಾರಿ ಗ್ರಾನ್‌ಸ್ಲಾಮ್ ಚಾಂಪಿಯನ್ ಆಗಿರುವ ಸೆರೆನಾ ವಿಲಿಯಮ್ಸ್ ಆಸ್ಟ್ರೇಲಿಯನ್ ಓಪನ್‌ನಿಂದ ಹಿಂದೆ ಸರಿದಿರುವ ಕಾರಣ ಈ ಬಾರಿ ಟೂರ್ನಿಯು ಮುಕ್ತವಾಗಿದೆ. ಬ್ರಿಟನ್‌ನ ಜೋಹನ್ನಾ ಕೊಂಟಾ ತನ್ನ ಮೊದಲ ಪಂದ್ಯದಲ್ಲಿ ಅಮೆರಿಕದ ಮ್ಯಾಡಿಸನ್ ಬ್ರೆಂಗ್ಲೆ ಅವರನ್ನು ಎದುರಿಸಲಿದ್ದಾರೆ. ಡೆನ್ಮಾರ್ಕ್‌ನ ಮಾಜಿ ನಂ.1 ಆಟಗಾರ್ತಿ ಕರೊಲಿನ್ ವೋಝ್ನಿಯಾಕಿ ರೊಮಾನಿಯದ ಮಿಹೆಲಾ ಬುರ್ಝಾ ರ್ನೆಸ್ಕುರನ್ನು ಎದುರಿಸು ವುದರೊಂದಿಗೆ ತನ್ನ ಅಭಿಯಾನ ಆರಂಭಿಸಲಿದ್ದಾರೆ. ವಿಂಬಲ್ಡನ್ ಚಾಂಪಿಯನ್ ಗಾರ್ಬೈನ್ ಮುಗುರುಝ ಮೊದಲ ಸುತ್ತಿನಲ್ಲಿ ಫ್ರಾನ್ಸ್ ನ ಜೆಸ್ಸಿಕಾ ಪೊಂಚೆಟ್‌ರನ್ನು ಎದುರಿಸಲಿದ್ದಾರೆ. ಮುಗುರುಝ ಕ್ವಾರ್ಟರ್‌ಫೈನಲ್‌ನಲ್ಲಿ ಫ್ರಾನ್ಸ್‌ನ ಇನ್ನೋರ್ವ ಆಟಗಾರ್ತಿ ಕರೊಲಿನ್ ಗಾರ್ಸಿಯಾರನ್ನು ಎದುರಿಸುವ ಸಾಧ್ಯತೆಯಿದೆ. 2008ರ ಚಾಂಪಿಯನ್ ಮರಿಯಾ ಶರಪೋವಾ ಮೊದಲ ಸುತ್ತಿನ ಪಂದ್ಯದಲ್ಲಿ 47ನೇ ರ್ಯಾಂಕಿನ ಜರ್ಮನಿಯ ಟಟ್‌ಜನಾ ಮರಿಯಾರನ್ನು ಎದುರಿಸಲಿದ್ದಾರೆ. 37ರ ಹರೆಯದ ಎವರ್‌ಗ್ರೀನ್ ಆಟಗಾರ್ತಿ ವೀನಸ್ ವಿಲಿಯಮ್ಸ್ ಸ್ವಿಸ್‌ನ ಬೆಲಿಂದ ಬೆನ್ಸಿಕ್‌ರನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದ್ದಾರೆ. ವಿಲಿಯಮ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ ಉಕ್ರೇನ್‌ನ ಎಲಿನಾ ಸ್ವಿಟೋಲಿನಾರನ್ನು ಎದುರಿಸುವ ನಿರೀಕ್ಷೆಯಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)