varthabharthi

ಸಿನಿಮಾ

ಪವರ್‌ಫುಲ್ ಪಾತ್ರದಲ್ಲಿ ಶ್ರದ್ಧಾ

ವಾರ್ತಾ ಭಾರತಿ : 12 Jan, 2018
Varthabharathi

ಶಹೀದ್ ಕಪೂರ್ ಹಾಗೂ ಶ್ರದ್ಧಾ ಕಪೂರ್, 2014ರಲ್ಲಿ ತೆರೆಕಂಡ ‘ಹೈದರ್’ ಚಿತ್ರದಲ್ಲಿ ಮೊದಲ ಬಾರಿಗೆ ಜೊತೆಯಾಗಿ ನಟಿಸಿದ್ದರು. ವಿಶಾಲ್ ಭಾರಧ್ವಾಜ್ ನಿರ್ದೇಶನದ ಈ ಚಿತ್ರದಲ್ಲಿ ಶಹೀದ್-ಶ್ರದ್ಧಾ ಜೋಡಿಯ ಅಭಿನಯವನ್ನು ಬಾಲಿವುಡ್ ಪ್ರೇಕ್ಷಕರು ಅಪಾರವಾಗಿ ಮೆಚ್ಚಿಕೊಂಡಿದ್ದರು. ಈ ಚಿತ್ರ ಭರ್ಜರಿ ಯಶಸ್ಸು ಕಂಡರೂ ಆನಂತರ ಈ ಜೋಡಿ ಮತ್ತೆ ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಿದ್ದಿಲ್ಲ. ಇದೀಗ, ಈ ಇಬ್ಬರು ಕಪೂರ್‌ಗಳು ಮತ್ತೊಮ್ಮೆ ಜೊತೆಯಾಗಿ ಅಭಿನಯಿಸುವ ಕಾಲ ಕೂಡಿಬಂದಿದೆ. ‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’ ಖ್ಯಾತಿಯ ಶ್ರೀನಾರಾಯಣ ಸಿಂಗ್ ನಿರ್ದೇಶನದ ಚಿತ್ರದಲ್ಲಿ ಶಹೀದ್ ಜೊತೆ ಶ್ರದ್ಧಾ ನಟಿಸುವುದು ಬಹುತೇಕ ಖಚಿತವಾಗಿದೆ.

ಇತ್ತೀಚೆಗಷ್ಟೇ ನಿರ್ದೇಶಕ ಶ್ರೀನಾರಾಯಣ ಸಿಂಗ್, ಶ್ರದ್ಧಾಗೆ ಚಿತ್ರದಲ್ಲಿ ಆಕೆಯ ಪಾತ್ರದ ಬಗ್ಗೆ ವಿವರಿಸಿದ್ದರು. ಚಿತ್ರದಲ್ಲಿ ಶಹೀದ್‌ಗೆ ನಾಯಕಿಯಾಗಿ ಬಾಲಿವುಡ್‌ನ ಜನಪ್ರಿಯ ನಾಯಕಿಯರಲ್ಲೊಬ್ಬರನ್ನು ಆಯ್ಕೆ ಮಾಡಲು ನಿರ್ಮಾಪಕರು ತೀರ್ಮಾ ನಿಸಿದ್ದರು. ಮೊದಲಿಗೆ ಕತ್ರಿನಾ ಕೈಫ್‌ಗೆ ಈ ಕೊಡುಗೆ ನೀಡಲಾಗಿತ್ತಾದರೂ, ಆಕೆ ಬೇರೆ ಚಿತ್ರಗಳಲ್ಲಿ ಬ್ಯುಸಿಯಾಗಿದ್ದರು. ಹೀಗಾಗಿ ಶ್ರದ್ಧಾಗೆ ಈ ಪಾತ್ರ ಒಲಿದಿದೆ.ಅಂದಹಾಗೆ ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಶಹೀದ್ ಕಪೂರ್, ನ್ಯಾಯವಾದಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿದ್ಯುತ್ ವಿತರಣಾ ಕಂಪೆನಿಗಳ ವಿರುದ್ಧ ಶ್ರೀಸಾಮಾನ್ಯನೊಬ್ಬನ ಹೋರಾಟದ ಕುರಿತ ಕಥಾವಸ್ತುವನ್ನು ಚಿತ್ರವು ಹೊಂದಿದೆ. ಚಿತ್ರದಲ್ಲಿ ಶ್ರದ್ಧಾಳ ಪಾತ್ರವು ಅತ್ಯಂತ ಪವರ್‌ಫುಲ್ ಆಗಿದ್ದು, ಆಕೆಗೆ ಹೊಸ ಇಮೇಜ್ ನೀಡಲಿದೆಯೆಂದು ಚಿತ್ರತಂಡ ಹೇಳಿಕೊಂಡಿದೆ.

ಪ್ರಸ್ತುತ ಶ್ರದ್ಧಾ, ಬಾಹುಬಲಿ ಹೀರೋ ಪ್ರಭಾಸ್ ಅಭಿನಯದ ಸಾಹೊ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆನಂತರ ಅವರು, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್‌ರ ಕುರಿತಾದ ಬಯೋಪಿಕ್‌ನಲ್ಲಿ ನಟಿಸುತ್ತಿದ್ದಾರೆ.

 

Comments (Click here to Expand)