varthabharthi

ಕರ್ನಾಟಕ

ಬಿಜೆಪಿ ಹಾಗೂ ಸಂಘ ಪರಿವಾರದ ಮೇಲೆ ಕ್ರಮಕ್ಕೆ ಒತ್ತಾಯಿಸಿ ಧರಣಿ

ವಾರ್ತಾ ಭಾರತಿ : 12 Jan, 2018

ಚಿಕ್ಕಮಗಳೂರು, ಜ.12: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಜರಂಗದಳ ಮತ್ತುಸಂಘಪರಿವಾರ ಇತರೆ ಗುಂಪುಗಳು ಕ್ರಿಮಿನಲ್ ಚಟುವಟಿಕೆಗಳನ್ನು ನಡೆಸುತ್ತಿದ್ದು, ಸೂಕ್ತ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು  ತಹಸಿಲ್ದಾರ್ ಮೂಲಕ ಗೃಹ ಮಂತ್ರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ನಗರದ ತಾಲ್ಲೂಕು ಕಛೇರಿಯಿಂದ ಹೊರಟ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಹನುಮಂತಪ್ಪ ವೃತ್ತದಲ್ಲಿ ಬಿಜೆಪಿ ಹಾಗೂ ಸಂಘಪರಿವಾರದ ವಿರುದ್ದ ಪ್ರತಿಭಟನೆ ನಡೆಸಿದರು. 

ಮಾಜಿ ವಿಎಂಎಲ್‍ಸಿ ಗಾಯಿತ್ರಿ ಶಾಂತೇಗೌಡ ಮಾತನಾಡಿ, ಮುಖ್ಯಮಂತ್ರಿಗಳ ವಿರುದ್ದ ಮಾತನಾಡುವ ಯೋಗ್ಯತೇ ಹರಕುಬಾಯಿ ಶೋಭಾ ಕರದ್ಲಾಜೆ ಹಾಗೂ ಬಚ್ಚಲು ಬಾಯಿ ಸಿ.ಟಿ.ರವಿಗೆ ಇಲ್ಲ. ಇವರ ಯೋಗ್ಯತೆ ಏನೆಂದು ಇಡೀ ರಾಜ್ಯಕ್ಕೆ ತಿಳಿದ ವಿಚಾರ ಎಂದರು.

ಈ ಸಮಯದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್ ವಿಜಯಕುಮಾರ್ ಮಾತನಾಡಿ, ಸಂಘ ಪರಿವಾರದ ವಿವಿಧ ಗುಂಪುಗಳು ರಾಜ್ಯದಲ್ಲಿ ಶಾಂತಿಭಂಗ ಸೃಷ್ಟಿಸುತ್ತಿದ್ದಾರೆ. ಇತ್ತೀಚೆಗೆ ಮೂಡಿಗೆರೆಯ ವಿದ್ಯಾರ್ಥಿನಿ ಧನ್ಯಶ್ರೀ ಬಿಜೆಪಿ ಯುವ ಮೋರ್ಚಾ ಮತ್ತು ಭಜರಂಗದಳ ಮುಖಂಡರ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದೊಂದು ತಿಂಗಳಿನಲ್ಲಿ ಧಾನಮ್ಮ, ದೀಪಕ್ ರಾಜ್, ಬಶೀರ್ ಕೊಲೆ ಪ್ರಕರಣಗಳ ಸಹಿತ ಸುಬ್ರಹ್ಮಣ್ಯದಲ್ಲಿ ನಟ-ನಟಿಯರ ಮೇಲೆ ಹಲ್ಲೆಗಳಂತಹ ಹತ್ತು ಹಲವು ಕೃತ್ಯಗಳಲ್ಲಿ ಸಂಘ ಪರಿವಾರದವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.

ಅರಣ್ಯ ಮತ್ತು ವಸತಿ ವಿಹಾರ ನಿಗಮದ ಅಧ್ಯಕ್ಷ ಎ.ಎನ್ ಮಹೇಶ್ ಮಾತನಾಡಿ, ರಾಷ್ಟ್ರದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆ ಸತ್ತುಹೋಗಿರುವಂತೆ ಭಾಸವಾಗುತ್ತಿದೆ. ಅಂಬೇಡ್ಕರ್ ಬರೆದ ಸಂವಿಧಾನಕ್ಕೆ ಅಪಚಾರವಾಗುತ್ತಿದೆ. ಎಲ್ಲಾ ವರ್ಗ, ಧರ್ಮದವರು ಸಹಬಾಳ್ವೆಯಿಂದ ಸಾಗಬೇಕೆಂದು ಸಂವಿಧಾನದಲ್ಲಿದ್ದರೂ, ಕೇಂದ್ರದ ಬಿಜೆಪಿ ಸರ್ಕಾರ ಧರ್ಮ ಸಂಘರ್ಷವನ್ನು ಹುಟ್ಟುಹಾಕುತ್ತಿದೆ. ಸಂವಿಧಾನದ ಆಶಯಗಳಿಗೆ ತಿಲಾಂಜಲಿ ಇಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಂಚಾಯತ್ ರಾಜ್ ರಾಜ್ಯಸಂಚಾಲಕ ಬಿ.ಎಂ.ಸಂದೀಪ್ ಮಾತನಾಡಿ, ಶಾಸಕ ಸಿ.ಟಿ.ರವಿ ದೊಡ್ಡಜನರ ಮೇಲೆ ಮಾತನಾಡಿ ದೊಡ್ಡ ವ್ಯಕ್ತಿಯಾಗಲು ಹೊರಟಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಪಂ ಕ್ಷೇತ್ರಗಳಲ್ಲೂ ಗೆಲ್ಲಲು ಲಾಯಕ್ಕಿಲ್ಲ ಎಂದಿರುವ ಸಿ.ಟಿ.ರವಿ ಸ್ವತಃ ಜಿಪಂ ಚುನಾವಣೆಯಲ್ಲಿ ಸ್ಪರ್ಧಿಸಿ 4ನೇ ಸ್ಥಾನಕ್ಕೆ ಹೋಗಿದ್ದನ್ನು ಮರೆತಿದ್ದಾರೆ. ಚಿಕ್ಕಮಗಳೂರಿನಲ್ಲಿ ಕ್ರಿಕೇಟ್ ಬೆಟ್ಟಿಂಗ್, ಡಿ.ವೈ.ಎಸ್.ಪಿ ಕಲ್ಲಪ್ಪ ಹಂಡಿಬಾಗ್ ಆತ್ಮಹತ್ಯೆ ಪ್ರಕರಣ, ವೇಶ್ಯವಾಟಿಕೆ ಹಗರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವವರು ಸಿ.ಟಿ ರವಿಯ ಶಿಷ್ಯರೇ ಎಂಬುದು ಅವರಿಗೆ ಮರೆತು ಹೋಗಿದೆ ಎಂದು ಆರೋಪಿಸಿದರು.

ಈ ವೇಳೆ ಸಿ.ಡಿ.ಎ ಅಧ್ಯಕ್ಷ ಹನೀಫ್, ಜಿಲ್ಲಾ ಉಪಾಧ್ಯಕ್ಷ ಶಾಂತೇಗೌಡ, ಬ್ಲಾಕ್ ಅಧ್ಯಕ್ಷ ಮಂಜೇಗೌಡ, ವಕ್ತಾರ ರೂಬೆನ್ ಮೊಸಸ್, ಸೇವಾದಳದ ಅಧ್ಯಕ್ಷ ಸಿಲ್ವರ್ ಸ್ಟರ್, ಐ.ಟಿ.ಸೆಲ್ ಅಧ್ಯಕ್ಷ ಕಾರ್ತಿಕ್ ಜಿ.ಚೆಟ್ಟಿಯಾರ್, ನಗರಸಭಾ ಸದಸ್ಯ ಸುರೇಖ ಸಂಪತ್ ರಾಜ್, ಯುವ ಅಧ್ಯಕ್ಷ ಶಿವಕುಮಾರ್, ಪುಷ್ಪಲತಾ ಉಪಸ್ಥಿತರಿದ್ದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)