varthabharthi

ಕರ್ನಾಟಕ

ಬಿಜೆಪಿಯಿಂದ ಶವ ರಾಜಕಾರಣ: ಪಿಎಫ್‍ಐ ಪ್ರತಿಭಟನೆ

ವಾರ್ತಾ ಭಾರತಿ : 12 Jan, 2018
Varthabharathi

ಶಿವಮೊಗ್ಗ, ಜ. 12: ತನ್ನ ಸ್ವಾರ್ಥ ರಾಜಕೀಯ ಹಿತಾಸಕ್ತಿಗಾಗಿ ಬಿಜೆಪಿಯು ಶವ ರಾಜಕಾರಣ ಮಾಡುತ್ತಿದೆ. ಅಮಾಯಕರ ಹೆಣ ಮುಂದಿಟ್ಟುಕೊಂಡು ಗೊಂದಲ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‍ಐ) ಸಂಘಟನೆಯು ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು. 

ಕಳೆದ 4 ವರ್ಷದಿಂದ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿರುವ ಬಿಜೆಪಿ ಪಕ್ಷವು ಮತ್ತೆ ಅಧಿಕಾರ ಪಡೆಯಲು ಹವಣಿಸುತ್ತಿದೆ. ಇದಕ್ಕಾಗಿಯೇ ಕೋಮು ರಾಜಕಾರಣ ನಡೆಸುತ್ತಿದೆ. ಹಿಂದೂ, ಮುಸ್ಲಿಮರ ನಡುವೆ ವಿಷ ಬೀಜ ಬಿತ್ತುವ ಹೀನ ರಾಜಕಾರಣಕ್ಕೆ ಮುಂದಾಗಿದೆ. ಇದಕ್ಕಾಗಿಯೇ ಅಮಾಯಕರ ಹೆಣಗಳನ್ನು ಮುಂದಿಟ್ಟುಕೊಂಡು ಶಾಂತಿ ಕದಡುವ ಯತ್ನ ನಡೆಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. 

ಬೇರೆ ಬೇರೆ ಕಾರಣಗಳಿಂದ ಮೃತಪಟ್ಟವರನ್ನು, ಕೊಲೆಯಾದವರನ್ನು ಮುಸ್ಲಿಮರೇ ಕೊಲೆ ಮಾಡಿದ್ಧಾರೆಂದು ಸುಳ್ಳು ಪ್ರಚಾರ ನಡೆಸುತ್ತಿದೆ. ಸಂಸದೆ ಶೋಭಾ ಕರಂದ್ಲಾಜೆಯವರು ಮುಸ್ಲಿಮರಿಂದ 23 ಹಿಂದೂಗಳ ಹತ್ಯೆಯಾಗಿದೆ ಎಂಬ ಸುಳ್ಳು ವರದಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಿದ್ದಾರೆ. ಇದು ಬಿಜೆಪಿ ಪಕ್ಷದ ದಿವಾಳಿತನದ ಸೂಚನೆಯಾಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ. 

ಸಂಘ ಪರಿವಾರದ ಕಾರ್ಯಕರ್ತರಿಂದ ಕರಾವಳಿ ಭಾಗದಲ್ಲಿ ಸರಿ ಸುಮಾರು 13 ಹಿಂದೂಗಳ ಹತ್ಯೆ ನಡೆದಿದ್ದರೂ ಅದನ್ನು ಪಟ್ಟಿಯಲ್ಲಿ ಸೇರಿಸದೆ ನಕಲಿ ಧರ್ಮಪ್ರೇಮ ತೋರಲಾಗಿದೆ. ಮಂಗಳೂರಿನ ಕಾಟಿಪಳ್ಳದಲ್ಲಿ ನಡೆದ ದೀಪಕ್‍ರಾವ್ ಕೊಲೆಯಲ್ಲಿ ಮುಸ್ಲಿಂ ಸಂಘಟನೆಗಳ ಮೇಲೆ ಆರೋಪ ಮಾಡಿದ್ದು, ಬಿಜೆಪಿಗೇ ಕೊಲೆ ಆರೋಪ ತಿರುಗಿ ಬರುತ್ತಿದೆ ಎಂದರು. 

ಬಿಜೆಪಿ ಅಧಿಕಾರ ದಾಹಕ್ಕೆ ಇನ್ನೆಷ್ಟು ಬಲಿ ಎಂಬ ಘೋಷಣೆಯೊಂದಿಗೆ ಬಿಜೆಪಿ ಶವ ರಾಜಕೀಯದ ವಿರುದ್ದ ಸಂಘಟನೆ ಪ್ರತಿಭಟನೆ ನಡೆಸುತ್ತಿದೆ. ಬಿಜೆಪಿಯ ಸ್ವಾರ್ಥ ರಾಜಕೀಯವನ್ನು ಜನರಿಗೆ ಮನವರಿಕೆ ಮಾಡಿಕೊಡುವ, ಜನಜಾಗೃತಿ ಮೂಡಿಸುವ ಕೆಲಸವನ್ನು ಸಂಘಟನೆ ಮಾಡಲಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಪ್ರತಿಭಟನೆಯಲ್ಲಿ ಪಿಐಫ್‍ಐ ಜಿಲ್ಲಾಧ್ಯಕ್ಷ ಶಾಹಿದ್ ಖಾನ್, ಮುಖಂಡರಾದ ನಾಸಿರ್ ಅಹಮ್ಮದ್, ಸಲೀಂ, ಮುಜೀಬ್, ಕಲೀಂ ಸೇರಿದಂತೆ ಮೊದಲಾದವರಿದ್ದರು. 

 

Comments (Click here to Expand)