varthabharthi

ಕರ್ನಾಟಕ

ಎ.ಜೆ.ಸದಾಶಿವ ಆಯೋಗದ ವರದಿ ವಿರೋಧಿಸಿ ಪ್ರತಿಭಟನೆ

ವಾರ್ತಾ ಭಾರತಿ : 12 Jan, 2018
Varthabharathi

ಶಿವಮೊಗ್ಗ, ಜ. 12: ಎ.ಜೆ.ಸದಾಶಿವ ಆಯೋಗದ ವರದಿ ಅವೈಜ್ಞಾನಿಕವಾಗಿದೆ. ಪರಿಶಿಷ್ಟ ಜಾತಿಗಳನ್ನು ಛಿದ್ರಗೊಳಿಸುವ ಹುನ್ನಾರವಾಗಿದೆ. ಸಾರ್ವಜನಿಕ ಚರ್ಚೆಗೊಳಪಡಿಸದೆ ವರದಿ ಜಾರಿಗೆ ಕ್ರಮಕೈಗೊಳ್ಳಬಾರದೆಂದು ಆಗ್ರಹಿಸಿ, ಮೀಸಲಾತಿ ಸಂರಕ್ಷಣಾ ಒಕ್ಕೂಟವು ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಅರ್ಪಿಸಿತು. 

ಸದಾಶಿವ ಆಯೋಗ ತನಗೆ ನೀಡಲಾದ ಮೂಲಭೂತ ಉದ್ದೇಶ ಹಾಗೂ ಆಶಯ ಕಡೆಗಣಿಸಿ, ಪರಿಶಿಷ್ಟ ಜಾತಿಯಲ್ಲಿನ ಒಂದು ಉಪಜಾತಿಯ ಹಿತಾಸಕ್ತಿ ಕಾಪಾಡಲು ಮುಂದಾದಂತೆ ಕಾಣುತ್ತಿದೆ. ವರದಿಯು ನ್ಯಾಯ ಸಮ್ಮತವಾಗಿಲ್ಲ. ದಲಿತ ಸಮುದಾಯಗಳೊಳಗೆ ಪರಸ್ಪರ ದ್ವೇಷ, ಅಸೂಯೆ, ಅನುಮಾನ, ಅವಹೇಳನ ಹಾಗೂ ಜಾತಿ ಜಾತಿಗಳ ನಡುವೆ ಸಂಘರ್ಷ ಹುಟ್ಟು ಹಾಕುವಂತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಆಯೋಗವು ಸಮಗ್ರವಾಗಿ ದಲಿತ ಸಮುದಾಯಗಳ ಆರ್ಥಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕ ಸ್ಥಾನಮಾನಗಳ ಕುರಿತಂತೆ ವಸ್ತುನಿಷ್ಠ ಸಮೀಕ್ಷೆ ಮಾಡಬೇಕಾಗಿತ್ತು. ಕೆಲ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿ, ಕೆಲವೇ ಕೆಲವರ ಅಭಿಪ್ರಾಯ ಪಡೆದು, ಪರಿಶಿಷ್ಟ ಜಾತಿಯಲ್ಲಿನ 101 ಜಾತಿಯ ಪ್ರಮುಖರನ್ನು ಕಡೆಗಣಿಸಿ ವರದಿ ಸಿದ್ದಪಡಿಸಿದೆ. ಈ ವರದಿಯು ಸಂಪೂರ್ಣ ಅವೈಜ್ಞಾನಿಕವಾದುದಾಗಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ. 

ಪರಿಶಿಷ್ಟ ಜಾತಿಯಲ್ಲಿನ 76 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯ 99 ಜಾತಿಗಳನ್ನು ಕಡೆಗಣಿಸಿ ಐಕ್ಯತೆಯಿಂದ ಇರುವ ದಲಿತ ಸಮುದಾಯವನ್ನು ಛಿದ್ರಗೊಳಿಸುವ ಹುನ್ನಾರ ಅಡಗಿದೆ. ಸದಾಶಿವ ಆಯೋಗದ ವರದಿಯನ್ನು ಸಾರ್ವಜನಿಕ ಚರ್ಚೆಗೊಳಪಡಿಸದೆ ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬಾರದು. ದಲಿತ, ಹಿಂದುಳಿದ, ಅಲ್ಪಸಂಖ್ಯಾತರು ಇತ್ಯಾದಿ ಸಮುದಾಯಗಳಿಗೆ ನೀಡಲಾಗುತ್ತಿರುವ ಮೀಸಲಾತಿ ಮಿತಿ ಹೆಚ್ಚಳ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. 

ಪ್ರತಿಭಟನೆಯಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಎಂ.ವೈ.ನಾನ್ಯಾನಾಯ್ಕ, ಕಾರ್ಯದರ್ಶಿ ನಾಗೇಶ್ ನಾಯ್ಕ, ಹೆಚ್.ಹನುಮಂತಪ್ಪ, ಆರ್.ಸಿ.ನಾಯ್ಕ, ಕೆ.ಪಿ. ಕೃಷ್ಣ ಮೂರ್ತಿ, ಬಿ.ಎನ್.ಸುರೇಶ್ ಬನ್ನೂರು ಸೇರಿದಂತೆ ಮೊದಲಾದವರಿದ್ದರು. 

 

Comments (Click here to Expand)