varthabharthi

ರಾಷ್ಟ್ರೀಯ

ರಿಪಬ್ಲಿಕ್ ಟಿವಿಗೆ ರಾಜೀನಾಮೆ ನೀಡಿ ಶಶಿ ತರೂರ್ ಕ್ಷಮೆ ಕೋರಿದ ಪತ್ರಕರ್ತ

ವಾರ್ತಾ ಭಾರತಿ : 12 Jan, 2018

ಹೊಸದಿಲ್ಲಿ,ಜ.12 : ಕಾಂಗ್ರೆಸ್ ಸಂಸದ ಶಶಿ ತರೂರ್ ಶುಕ್ರವಾರ ಟ್ವಿಟ್ಟರ್ ನಲ್ಲಿ ತಾವು ಹಾಗೂ ರಿಪಬ್ಲಿಕ್ ಟಿವಿಯ ಮಾಜಿ ಪತ್ರಕರ್ತರೊಬ್ಬರು ಜತೆಯಾಗಿರುವ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಈ ಪತ್ರಕರ್ತ ಕ್ಷಮೆ ಕೋರಲು ತಮ್ಮ ಬಳಿ ಬಂದಿದ್ದಾಗಿ ತರೂರ್ ಹೇಳಿಕೊಂಡಿದ್ದಾರೆ.

ತಮಗೆ ಕಿರುಕುಳ ನೀಡಲೆಂದು ಅರ್ನಬ್ ಗೋಸ್ವಾಮಿಯ  ರಿಪಬ್ಲಿಕ್ ಟಿವಿ ವಾಹಿನಿ ಆದೇಶ ನೀಡಿದ್ದನ್ನು ಧಿಕ್ಕರಿಸಿ  ದೀಪು ಅಬಿ ವರ್ಗೀಸ್ ಎಂಬ ಹೆಸರಿನ ಈ ಪತ್ರಕರ್ತ ತಮ್ಮ ಉದ್ಯೋಗಕ್ಕೆ  ರಾಜೀನಾಮೆ ನೀಡಿದ್ದಾಗಿ ಹಾಗೂ ಪ್ರೆಸ್ ಕ್ಲಬ್ ನಲ್ಲಿ ತಮ್ಮನ್ನು ಭೇಟಿಯಾಗಿ ಕ್ಷಮೆ ಕೋರಿದ್ದಾರೆಂದು ತರೂರ್ ಟ್ವೀಟ್ ಮಾಡಿದ್ದಾರೆ.

“ಟಿವಿಎಂ ಪ್ರೆಸ್ ಕ್ಲಬ್ ನಲ್ಲಿ ನನಗೆ ಕಿರುಕುಳ ನೀಡುವಂತೆ ಆದೇಶವನ್ನು ರಿಪಬ್ಲಿಕ್ ಟಿವಿಯಿಂದ ಪಡೆದ ನಂತರ ರಾಜೀನಾಮೆ ನೀಡಿದ ಪತ್ರಕರ್ತ ದೀಪು ಅಬಿ ವರ್ಗೀಸ್ ಅವರ ನೈತಿಕ ಸ್ಥೈರ್ಯ ನನ್ನ ಮನ ಮುಟ್ಟಿದೆ.  ಟೈಮ್ಸ್ ನೌ ವಾಹಿನಿಯ ಕೆಲ ಮಾಜಿ ಉದ್ಯೋಗಿಗಳಂತೆ ಅವರು ತಮ್ಮ ನಡವಳಿಕೆಗೆ ಕ್ಷಮೆ ಕೋರಿದ್ದಾರೆ,'' ಎಂದು ತರೂರು ಟ್ವೀಟ್ ಹೇಳುತ್ತದೆ.

ವರ್ಗೀಸ್ ಕೂಡ ತರೂರ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ ಹಾಗೂ 'ಐ ಜಸ್ಟ್ ವಾಂಟೆಡ್ ಟು ಸ್ಪೀಕ್ ಅಪ್ ಶಶಿ ತರೂರ್' ಎಂದು ಟ್ವೀಟ್ ಮಾಡಿದ್ದಾರೆ. ತಮ್ಮ ಈ ಕ್ರಮಕ್ಕೆ ವರ್ಗೀಸ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಲವರಿಂದ ಪ್ರಶಂಸೆಗೊಳಗಾಗಿದ್ದಾರೆ.

ಶಶಿ ತರೂರ್ ಅವರ ಪತ್ನಿ ಸುನಂದಾ ತರೂರ್ ಹತ್ಯೆಗೆ ಸಂಬಂಧಿಸಿದಂತೆ ಗೋಸ್ವಾಮಿ ಮತ್ತವರ ಟಿವಿ ವಾಹಿನಿ ತರೂರ್ ಅವರ ವಿರುದ್ಧ  ಒಂದು ಅಭಿಯಾನವನ್ನೇ ನಡೆಸುತ್ತಿದ್ದು ಈಗಾಗಲೇ ಈ ಕಾಂಗ್ರೆಸ್ ಸಂಸದ ರಿಪಬ್ಲಿಕ್ ವಾಹಿನಿಯ ವಿರುದ್ಧ ರೂ 2 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಈ ಹಿಂದೆ ಶ್ವೇತಾ ತಿವಾರಿ ಎಂಬ ಹಿರಿಯ ಪತ್ರಕರ್ತೆ ಕೂಡ ರಿಪಬ್ಲಿಕ್ ಚಾನೆಲ್ ನಿಂದ ಹೊರ ಬಂದಿದ್ದು ತನ್ನನ್ನು ತರೂರ್ ಅವರು ಉದ್ದೇಶಪೂರ್ವಕವಾಗಿ  ವಾಹಿನಿಯಲ್ಲಿ ಉದ್ಯೋಗ ಹೊಂದುವಂತೆ ಮಾಡಿದ್ದಾರೆ ಎಂದು ಆರೋಪಿಸಿ ಚಾನೆಲ್ ಆಡಳಿತ ತನಗೆ ನಿರಂತರ ಕಿರುಕುಳ ನೀಡಿತ್ತು ಎಂದು ಆಕೆ ದೂರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)