varthabharthi

ಬೆಂಗಳೂರು

ಜೆಸಿಬಿ ಪಕ್ಷಗಳನ್ನು ಕೈಬಿಡಿ: ಎಸ್.ಆರ್.ಹಿರೇಮಠ

ವಾರ್ತಾ ಭಾರತಿ : 12 Jan, 2018
Varthabharathi

ಬೆಂಗಳೂರು, ಜ.12: ಜನವಿರೋಧಿ ಜೆಸಿಬಿ ಪಕ್ಷಗಳ ಬೆಂಬಲಿಸುವುದನ್ನು ಬಿಟ್ಟು, ಜನಪರ್ಯಾಯ ಚಳವಳಿ ಮೂಲಕ ರಾಜಕಾರಣ ಮಾಡಬೇಕಿದೆ ಎಂದು ಸಮಾಜ ಪರಿವರ್ತನೆ ಸಮುದಾಯ ಸಂಸ್ಥಾಪಕ ಎಸ್.ಆರ್.ಹಿರೇಮಠ ಹೇಳಿದರು.

ಶುಕ್ರವಾರ ನಗರದ ಗಾಂಧಿಭವನದ ಸಮೀಪ ಭೂಮಿ-ವಸತಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವಂತೆ ಆಗ್ರಹಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಸತ್ಯಾಗ್ರಹ ಬೆಂಬಲಿಸಿ ಅವರು ಮಾತನಾಡಿದರು.

ಬಡವರಿಗೆ ಸಣ್ಣ ಮನೆ ನೀಡಲು ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಕೊಟ್ಟ ಭರವಸೆಯನ್ನು ಈಡೇರಿಸುತ್ತಿಲ್ಲ. ಕರಾಳ ಕಾನೂನುಗಳು ಜಾರಿಯಾಗುತ್ತಲೇ ಇವೆ ಎಂದ ಅವರು, ಹೋರಾಟಗಾರರು ಆತ್ಮಾವಲೋಕನ ಮಾಡಿಕೊಂಡು, ಜನವಿರೋಧಿ ಜೆಸಿಬಿ ಪಕ್ಷಗಳಾದ ಬಿಜೆಪಿ, ಜೆಡಿಎಸ್, ಕಾಂಗ್ರೆಸ್‌ಅನ್ನು ಅಳಿಸಿ ಜನಪರ್ಯಾಯ ಚಳವಳಿ ರೂಪಿಸಬೇಕಿದೆ ಎಂದರು.

ಅಕ್ರಮಗಳಿಗೆ, ಅವ್ಯವಹಾರಗಳಿಗೆ ಕಡಿವಾಣ ಹಾಕಲೇಬೇಕಿದೆ. ರಾಜಕಾರಣಿಗಳು ಪ್ರಜಾಪ್ರಭುತ್ವದಲ್ಲಿ ಉದ್ಧಟತನ ಮಾಡುತ್ತಿದ್ದು, ಎಲ್ಲ ಭೂಮಿಗಳನ್ನು ಕಾರ್ಪೋರೆಟ್ ಕುಳಗಳಿಗೆ ಧಾರೆ ಎರೆಯುತ್ತಿದ್ದಾರೆ. ಇನ್ನು ಬಡವರಿಗೆ ಭೂಮಿ-ವಸತಿ ದೊರೆಯುವರೆಗೂ ಹೋರಾಟ ನಿಲ್ಲುವುದಿಲ್ಲ ಎಂದರು.

ವಿಚಾರವಾದಿ ಜಿ.ರಾಮಕೃಷ್ಣ ಮಾತನಾಡಿ, ಮಾಧ್ಯಮಗಳು ಜನಹೋರಾಟಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಸರಳ ಮೂಲಭೂತ ಹಕ್ಕುಗಳನ್ನು ಸರಕಾರ ನಿರಾಕರಣೆ ಮಾಡುತ್ತಿರುವುದನ್ನು ಮಾಧ್ಯಮಗಳು ಜನಸಾಮಾನ್ಯರಿಗೆ ತಿಳಿಸದೆ, ಮೋಸ ಮಾಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನೂರಾರು ಎಕರೆ ಗುಳುಂ ಆಗುತ್ತಿರುವುದನ್ನು ಸ್ವತಃ ನಾವು ನೀವೆಲ್ಲರೂ ಗಮನಿಸುತ್ತಿದ್ದೇವೆ. ಅವರಿಗೆ ಸರಕಾರದ ಬೆಂಬಲವೂ ಸಿಗುತ್ತದೆ ಎಂದ ಅವರು, ಹೋರಾಟಗಳು ನಿರಂತರ ನಡೆಯುವಂತೆ ಮಾಡುವ ಪರಿಸ್ಥಿತಿಗೆ ದೂಡಿದ್ದಾರೆ. ಮತ ನೀಡುವವರಲ್ಲಿ ನಾವೂ ಇದ್ದೇವೆ ಎಂಬುದನ್ನು ರಾಜಕಾರಣಿಗಳು ಮರೆತಿದ್ದಾರೆ ಎಂದರು.

ಈ ವೇಳೆ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಜಾನ್ ವೆಸ್ಲಿ ಸೇರಿ ಪ್ರಮುಖರಿದ್ದರು.

 

Comments (Click here to Expand)