varthabharthi

ಬೆಂಗಳೂರು

ವಾರದಲ್ಲಿ ಎರಡು ದಿನ ಬಿಸಿಯೂಟಕ್ಕೆ ಸಿರಿಧಾನ್ಯ: ಕೃಷ್ಣಬೈರೇಗೌಡ

ವಾರ್ತಾ ಭಾರತಿ : 12 Jan, 2018

ಬೆಂಗಳೂರು, ಜ.12: ರಾಜ್ಯಾದ್ಯಂತ ಶಾಲಾ ಮಕ್ಕಳಲ್ಲಿ ಅಪೌಷ್ಠಿಕತೆ ನಿವಾರಣೆ ಮಾಡುವ ಸಲುವಾಗಿ ಎಲ್ಲ ಸರಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ವಾರದಲ್ಲಿ ಎರಡು ದಿನಗಳ ಕಾಲ ಸಿರಿಧಾನ್ಯಗಳಿಂದ ತಯಾರಿಸಿದ ಆಹಾರ ನೀಡಲಾಗುತ್ತದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಕೃಷಿ ಇಲಾಖೆಯು ಅಕ್ಷಯ ಪಾತ್ರ ಸಂಸ್ಥೆಯ ಸಹಯೋಗದಲ್ಲಿ ಇಂಟರ್ ನ್ಯಾಷನಲ್ ಕ್ರಾಪ್ಸ್ ರೀಸರ್ಚ್ ಇನ್ಸ್‌ಟಿಟ್ಯೂಟ್ ಫಾರ್ ದಿ ಸೆಮಿ ಆರಿಡ್ ಟ್ರಾಫಿಕ್ಸ್ ಸಂಸ್ಥೆಯ ಮಾರ್ಗದರ್ಶನದಲ್ಲಿ ನಗರದ ಹಲವು ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಸಿರಿಧಾನ್ಯಗಳಿಂದ ತಯಾರಿಸಿದ ಆಹಾರ ತಲುಪಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಾರಂಭಿಕ ಹಂತವಾಗಿ ಕುಮಾರಸ್ವಾಮಿ ಲೇಔಟ್‌ನಲ್ಲಿರುವ ಒಂದು ಸರಕಾರಿ ಶಾಲೆಯಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಉಳಿದಂತೆ ನಗರದ ವಿವಿಧ 10 ಸರಕಾರಿ ಮತ್ತು ಅನುದಾನಿತ ಶಾಲೆಗಳ 1,622 ಮಕ್ಕಳಿಗೆ ಸಿರಿಧ್ಯಾನ್ಯಯುಕ್ತ ಆಹಾರ ತಲುಪಿಸುವ ಯೋಜನೆ ಇದಾಗಿದೆ. ಈ ಶೈಕ್ಷಣಿಕ ವರ್ಷ ಇದು ಮುಂದುವರೆಯಲಿದೆ. ನಂತರ ಅದಕ್ಕೆ ಸಂಬಂಧಿಸಿದ ತಜ್ಞರ ಸಮಿತಿ ಈ ಆಹಾರ ಪದ್ಧತಿಯಿಂದ ಮಕ್ಕಳ ಆರೋಗ್ಯದ ಮೇಲೆ ಆಗಿರುವ ಪರಿಣಾಮ ಕುರಿತು ವರದಿ ಸಲ್ಲಿಸಲಿದ್ದಾರೆ. ಅದರ ಸಾಧಕ-ಬಾಧಕ ಪರಿಶೀಲಿಸಿ, ರಾಜ್ಯಾದ್ಯಂತ ಈ ಯೋಜನೆ ಜಾರಿಗೆ ತರಲಾಗುವುದು ಎಂದು ಹೇಳಿದರು.

ಸಿರಿಧಾನ್ಯಗಳಾದ ರಾಗಿ, ಸಾಮೆ, ಸಜ್ಜೆ, ನವಣೆ, ಬುರುಗು, ಊದಲು, ಜೋಳದಿಂದ ತಯಾರಿಸಿದ ಬಿಸಿಬೇಳೆ ಬಾತ್, ಕೊಬ್ಬರಿ ರೈಸ್, ಪೊಂಗಲ್, ಕಿಚಡಿ, ಪಲಾವ್‌ನ್ನು ಬಿಸಿಯೂಟದ ಜತೆಗೆ ವಾರಕ್ಕೆ ಎರಡು ಬಾರಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಈ ಮೂಲಕ ಮಕ್ಕಳಿಗೆ ಸ್ವಾಭಾವಿಕವಾಗಿ ಪೌಷ್ಠಿಕಾಂಶಭರಿತ ಆಹಾರ ನೀಡಲಾಗುವುದು. ಈ ಸಿರಿಧಾನ್ಯಗಳಿಂದ ಮಧುಮೇಹವನ್ನು ನಿಯಂತ್ರಿಸಬಹುದು. ಪೌಷ್ಠಿಕಾಂಶ ಭದ್ರತೆಗೆ ದೇಶಕ್ಕೆ ಇದು ಮಾದರಿಯಾಗಿದೆ ಎಂದರು.

ಇತ್ತೀಚೆಗೆ ಮಕ್ಕಳಲ್ಲಿ ಮಧುಮೇಹ ಪ್ರಕರಣ ಹೆಚ್ಚು ಕಂಡುಬರುತ್ತಿದೆ. ಇದರಿಂದ ಕೇವಲ ಮಕ್ಕಳ ಮೇಲೆ ಮಾತ್ರವಲ್ಲದೆ ಸಮಾಜ ಹಾಗೂ ದೇಶಕ್ಕೆ ಹಾನಿ. ಹಾಗಾಗಿ ಅಗತ್ಯ ಪೌಷ್ಠಿಕಾಂಶ ಪೂರೈಕೆಗೆ ಹೆಚ್ಚು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಅಕ್ಷಯ ಪಾತ್ರೆ ಫೌಂಡೇಷನ್ ಉಪಾಧ್ಯಕ್ಷ ಚಂಚಲಪತಿ ದಾಸ ಅವರು ಮಾತನಾಡಿ, ಸರಕಾರಿ ಶಾಲಾ ಮಕ್ಕಳಿನಲ್ಲಿನ ಅಪೌಷ್ಠಿಕತೆ ಹೋಗಲಾಡಿಸಲು ರಾಜ್ಯ ಸರಕಾರ ಮತ್ತು ಇಕ್ರಿಸ್ಯಾಟ್ ಜತೆಗೂಡಿ ಈ ಕಾರ್ಯಕ್ರಮ ರೂಪಿಸಲಾಗಿದೆ. ಪ್ರಾಯೋಗಿಕ ಅವಧಿ ಮುಗಿದ ನಂತರ ಅದರಿಂದ ಹೊರಬರುವ ವರದಿ ಆಧರಿಸಿ ರಾಜ್ಯಾದ್ಯಂತ ಶೀಘ್ರದಲ್ಲೇ ವಿಸ್ತರಿಸಲಾಗುವುದು ಎಂದು ಹೇಳಿದರು.

ಶೇ.10 ಹೆಚ್ಚಳ
ರಾಜ್ಯದಲ್ಲಿ ಸಿರಿಧಾನ್ಯಗಳನ್ನು ಸೇವನೆ ಮಾಡುವವರ ಸಂಖ್ಯೆ ಹೆಚ್ಚಾದಂತೆ, ಅದನ್ನು ಬೆಳೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದುವರೆಗೂ ರಾಗಿ, ಜೋಳ, ಸಜ್ಜೆಯಂತಹ ಸಿರಿಧಾನ್ಯಗಳನ್ನು 18 ಲಕ್ಷ ಹೆಕ್ಟೇರ್‌ನಲ್ಲಿ ಹಾಗೂ ಇತರೆ ಸಿರಿಧ್ಯಾನಗಳನ್ನು 42 ಸಾವಿರ ಹೆಕ್ಟೇರ್‌ನಲ್ಲಿ ಬೆಳೆಯಲಾಗುತ್ತಿದೆ. ಆದರೆ, ಈ ಬಾರಿ ಬೆಳೆ ಪ್ರಮಾಣ ಶೇ.10ರಷ್ಟು ಹೆಚ್ಚಿದೆ.
-ಕೃಷ್ಣ ಬೈರೇಗೌಡ, ಕೃಷಿ ಸಚಿವ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)