varthabharthi

ಕರ್ನಾಟಕ

ಮೈಸೂರು: ಇಂದಿರಾ ಕ್ಯಾಂಟೀನ್‍ಗೆ ಸಿಎಂ ಸಿದ್ಧರಾಮಯ್ಯ ಚಾಲನೆ

ವಾರ್ತಾ ಭಾರತಿ : 12 Jan, 2018
Varthabharathi

ಮೈಸೂರು,ಜ.12: ಬಡವರು, ಶ್ರಮಿಕರು, ಅಸಂಘಟಿತ ಕಾರ್ಮಿಕರು ಹಸಿವಿನಿಂದ ನರಳಬಾರದು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ರಿಯಾಯಿತಿ ದರದಲ್ಲಿ ಊಟ, ಉಪಾಹಾರ ಒದಗಿಸುವ ಮಹತ್ವಾಕಾಂಕ್ಷೆಯಿಂದ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಬೆಂಗಳೂರಿನಲ್ಲಿ ಜಾರಿಗೆ ತಂದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಇಂದಿರಾ ಕ್ಯಾಂಟೀನ್‍ಗೆ ಚಾಲನೆ ನೀಡಿದರು.

ನಗರದಲ್ಲಿ ಒಟ್ಟು 11 ಕ್ಯಾಂಟೀನ್‍ಗಳನ್ನು ನಿರ್ಮಿಸಲಾಗಿದೆ. ಆ ಪೈಕಿ ಕಾಡಾ ಕಚೇರಿ ಆವರಣದಲ್ಲಿರುವ ಕ್ಯಾಂಟೀನ್‍ಗೆ ಸಿದ್ದರಾಮಯ್ಯ ಚಾಲನೆ ನೀಡಿದರು. ಮೊದಲ ದಿನ ಚೌಚೌ ಬಾತ್(ಕೇಸರಿಬಾತ್ ಮತ್ತು ಉಪ್ಪಿಟ್ಟು) ಸಿದ್ಧಪಡಿಸಲಾಗಿತ್ತು. ಸಿದ್ದರಾಮಯ್ಯ ಅವರು ತಿಂಡಿ ಸೇವಿಸಿ ನಂತರ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದರು. 

ವಾರದ ಏಳು ದಿನಗಳೂ ಬೆಳಿಗ್ಗೆ 7ರಿಂದ ರಾತ್ರಿ 9ರವರೆಗೆ ಅಥವಾ ರಾತ್ರಿ ಊಟ ಮುಗಿಯುವವರೆಗೆ ಎರಡರಲ್ಲಿ ಯಾವುದು ಬೇಗವಾಗುತ್ತದೋ ಅದರಂತೆ ಕ್ಯಾಂಟೀನ್ ಕಾರ್ಯನಿರ್ವಹಿಸಲಿದೆ. ಪ್ರತಿದಿನದ ತಿಂಡಿ ಮತ್ತು ಊಟದ ಪಟ್ಟಿಯನ್ನು ಕ್ಯಾಂಟೀನ್ ಗೋಡೆ ಮೇಲೆ ಬರೆಯಲಾಗಿದೆ. ಒಂದು ತಿಂಡಿಗೆ 5 ರೂ., ಮಧ್ಯಾಹ್ನ ಮತ್ತು ರಾತ್ರಿ ಹೊತ್ತು ಒಂದು ಊಟಕ್ಕೆ 10 ರೂ. ದರ ನಿಗದಿಪಡಿಸಲಾಗಿದೆ.

ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯೂ ಇದ್ದು, ಅದರಲ್ಲಿಯೂ ತಣ್ಣಗಿನ ನೀರು ಪಡೆಯುವುದಕ್ಕೂ ಅವಕಾಶ ಕಲ್ಪಿಸಲಾಗಿದೆ. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯವಿದೆ. ಕ್ಯಾಂಟೀನ್ ಸುತ್ತ ಕಬ್ಬಿಣದ ಗ್ರಿಲ್‍ಗಳನ್ನು ಅಳವಡಿಸಲಾಗಿದೆ. ಉದ್ಘಾಟನೆ ಹಿನ್ನೆಲೆಯಲ್ಲಿ ಬೆಳಿಗ್ಗೆ ಉಪಾಹಾರವನ್ನು ಉಚಿತವಾಗಿ ವಿತರಿಸಲಾಯಿತು. 

ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕರಾದ ಎಂ.ಕೆ.ಸೋಮಶೇಖರ್, ವಾಸು, ಮಹಾಪೌರ ಎಂ.ಜೆ.ರವಿಕುಮಾರ್, ಉಪ ಮಹಾಪೌರರಾದ ರತ್ನ ಲಕ್ಷ್ಮಣ, ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್, ಮೈಸೂರು ಪೆಯಿಂಟ್ಸ್ ಅಂಡ್ ವಾರ್ನಿಷ್ ಸಂಸ್ಥೆ ಅಧ್ಯಕ್ಷ ಎಚ್.ಎ.ವೆಂಕಟೇಶ್, ಕರ್ನಾಟಕ ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ನಂದಕುಮಾರ್, ನಗರಪಾಲಿಕೆ ಸದಸ್ಯರಾದ ಪುಷ್ಪಲತಾ ಚಿಕ್ಕಣ್ಣ, ಪುರುಷೋತ್ತಮ್, ಕೆ.ಸಿ.ಶೌಕತ್‍ಪಾಷ, ಎಂ.ಸುನೀಲ್, ಎನ್.ಸುನಿಲ್‍ಕುಮಾರ್, ಉಮಾಮಣಿ, ಭಾಗ್ಯವತಿ, ರಮೇಶ್, ತಸ್ಲೀಮ್, ಜಿಲ್ಲಾ ಪಂಚಾಯತ್ ಸದಸ್ಯೆ ಡಾ.ಬಿ.ಪುಷ್ಪಾ ಅಮರನಾಥ್, ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳ ಮಾನಸ, ಮುಡಾ ಸದಸ್ಯ ಶಿವಮಲ್ಲು, ಮಾಜಿ ಸದಸ್ಯ ಭಾಸ್ಕರ ಎಲ್.ಗೌಡ, ಹಿನಕಲ್ ಪ್ರಕಾಶ್, ಕೆಪಿಸಿಸಿ ಸದಸ್ಯೆ ಬಿ.ಎಂ.ವೀಣಾ, ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಕಾರ್ಯದರ್ಶಿ ಎಂ.ರವಿಕುಮಾರ್, ಡಿಸಿಸಿ ಪ್ರಧಾನ ಕಾರ್ಯದರ್ಶಿ ಡೈರಿ ವೆಂಕಟೇಶ್,  ಕಾಂಗ್ರೆಸ್ ನಗರ ಘಟಕ ಹಿಂದುಳಿದ ವರ್ಗಗಳ ವಿಭಾಗದ ಕಾರ್ಯದರ್ಶಿ ಧನಪಾಲ್ ಕುರುಬಾರಹಳ್ಳಿ, ವಕೀಲ ತ್ಯಾಗರಾಜ್, ಎನ್.ಎಸ್.ಗೋಪಿನಾಥ್, ಸುಶೀಲಾ ನಂಜಪ್ಪ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಸಕರಾದ ಎಂ.ಕೆ.ಸೋಮಶೇಖರ್, ವಾಸು ಮಾತನಾಡಿದರು. 

ಇಂದಿರಾ ಕ್ಯಾಂಟೀನ್‍ಗೆ ಮಹಾನಗರಪಾಲಿಕೆಯೂ ಸಹಕಾರ ನೀಡಿದೆ. ಕ್ಯಾಂಟೀನ್‍ಗಳ ಸುತ್ತ ಕಬ್ಬಿಣ ಗ್ರಿಲ್‍ಗಳ ಅಳವಡಿಕೆಗೆ ನಗರಪಾಲಿಕೆ ವತಿಯಿಂದ 2.2. ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕ್ಯಾಂಟೀನ್‍ಗಳಲ್ಲಿ ಸ್ವಚ್ಛತೆ ಕಾಪಾಡುವುದಕ್ಕೂ ನಗರಪಾಲಿಕೆ ಆದ್ಯತೆ ನೀಡಲಾಗಿದೆ.
-ಎಂ.ಜೆ.ರವಿಕುಮಾರ್

ನಗರ ಮಧ್ಯಭಾಗದಲ್ಲಿ ಸಾಮಾನ್ಯವಾಗಿ ಕಾರ್ಮಿಕರು, ಶ್ರಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುವುದರಿಂದ ಅಂತಹ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪನೆಗೆ ಆದ್ಯತೆ ನೀಡಲಾಗಿದೆ. ನಗರದಲ್ಲಿ ಸುಮಾರು 17ರಿಂದ 19 ಬಡಾವಣೆಗಳಲ್ಲಿ ಬಡವರು, ಕಾರ್ಮಿಕರು ಇದ್ದಾರೆ. ಇನ್ನು 6 ತಿಂಗಳಲ್ಲಿ ಆ ಬಡಾವಣೆಗಳಲ್ಲೂ ಕ್ಯಾಂಟೀನ್ ಆರಂಭಿಸಲಾಗುವುದು. ನಗರಪಾಲಿಕೆ ವಾಪ್ತಿಯಲ್ಲಿರುವ 65 ವಾರ್ಡ್‍ಗಳ ಪೈಕಿ ಕನಿಷ್ಠ 30 ವಾರ್ಡ್‍ಗಳಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪನೆ ಮಾಡುವಂತೆ ಮುಖ್ಯಮಂತಿ ಅವರಿಗೆ ಮನವಿ ಮಾಡಬೇಕು.
-ವಾಸು, ಶಾಸಕ.

 

Comments (Click here to Expand)