varthabharthi

ಕರ್ನಾಟಕ

ಹನೂರು: 2ನೇ ಹಂತದ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆ

ವಾರ್ತಾ ಭಾರತಿ : 12 Jan, 2018
Varthabharathi

ಹನೂರು,ಜ.12 : ನರೇಗಾ ಯೋಜನೆಯಡಿ ಕಳೆದ 6 ತಿಂಗಳ ಅವಧಿಯಲ್ಲಿ ಅಜ್ಜೀಪುರ ಗ್ರಾಪಂ ವ್ಯಾಪ್ತಿಯಲ್ಲಿ 91 ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲಾಗಿದ್ದು, 40.20 ಲಕ್ಷ ರೂ ಅನುದಾನವನ್ನು ಬಳಕೆ ಮಾಡಿಕೊಳ್ಳಲಾಗಿದೆ ಎಂದು ತಾಪಂ ನರೇಗಾ ಸಂಯೋಜಕ ಮನೋಹರ್ ತಿಳಿಸಿದರು. 

ಹನೂರು ಸಮೀಪದ ಅಜ್ಜೀಪುರ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ಧ 2017-18ನೇ ಸಾಲಿನ 2ನೇ ಹಂತದ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆಯಲ್ಲಿ ಮಾತನಾಡಿದರು. 

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 2000ಕ್ಕೂ ಹೆಚ್ಚು ಕುಟುಂಬಗಳಿದ್ದು, ಇದರಲ್ಲಿ ಬಹುತೇಕ ಕುಟುಂಬಗಳು ನರೇಗಾ ಯೋಜನೆಯಡಿಯ ಕಾಮಗಾರಿಯಲ್ಲಿ ಉದ್ಯೋಗ ಪಡೆದಿದ್ದಾರೆ. ಕಳೆದ 6 ತಿಂಗಳ ಅವಧಿಯಲ್ಲಿ ನರೇಗಾ ಯೋಜನೆಯಡಿ ಗ್ರಾಪಂ ವ್ಯಾಪ್ತಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳಲ್ಲಿ ಕೊಟ್ಟಿಗೆ ನಿರ್ಮಾಣ, ಜಮೀನು ರಸ್ತೆ ಅಭಿವೃದ್ಧಿ, ಮನೆ ನಿರ್ಮಾಣ ಕಾಮಗಾರಿ ಸೇರಿದಂತೆ  ತೋಟಗಾರಿಕೆ, ರೇಷ್ಮೆ ಇಲಾಖೆಗೆ ಸಂಬಂಧಿಸಿದಂತೆ ಹೆಚ್ಚಿನ ಒತ್ತು ನೀಡಲಾಗಿದೆ. ಇದರ ಜತೆಗೆ ಸಾಮೂಹಿಕ ಹಾಗೂ ವೈಯಕ್ತಿಕ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ದಿಸೆಯಲ್ಲಿ 91 ಕಾಮಗಾರಿಗಳಿಗೆ ಕೂಲಿ ಹಣವಾಗಿ 21,29,192 ರೂ ಹಾಗೂ ಸಾಮಾಗ್ರಿ ವೆಚ್ಚವಾಗಿ 18,91,339 ರೂ ಬಳಕೆ ಮಾಡಿಕೊಳ್ಳಲಾಗಿದೆ. ಗ್ರಾಮಸ್ಥರು ನರೇಗಾ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳುವುದರ ಮೂಲಕ ಗ್ರಾಮವು ಅಭಿವೃದ್ಧಿಯತ್ತ ಸಾಗಲು ಸಹಕಾರ ನೀಡಬೇಕು ಎಂದು ತಿಳಿಸಿದರು. 

ಬಳಿಕ ತಾಪಂ ಮಾಜಿ ಅಧ್ಯಕ್ಷ ಮುರುಡೇಶ್ವರಸ್ವಾಮಿ ಮಾತನಾಡಿ, ನರೇಗಾ ಯೋಜನೆಯು ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ. ಈ ಯೋಜನೆಯು ಗ್ರಾಪಂ ಗೆ ವರದಾನವಾಗಿದ್ದು, ಗ್ರಾಮದ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ಆದ್ದರಿಂದ ಗ್ರಾಪಂ ವ್ಯಾಪ್ತಿಯ ಕುಟುಂಬ ಸದಸ್ಯರು ಈ ಯೋಜನೆಯಡಿ ಉದ್ಯೋಗವನ್ನು ಪಡೆದುಕೊಳ್ಳುವುದರ ಮೂಲಕ ಕೂಲಿಯನ್ನು ಪಡೆಯಬಹುದು. ಈ ಯೋಜನೆಯಡಿ ಉದ್ಯೋಗ ಪಡೆಯದೇ ಇದ್ದವರು ಗ್ರಾಪಂಗೆ ಅರ್ಜಿ ಸಲ್ಲಿಸಿ ಉದ್ಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಬಸವರಾಜಮ್ಮ, ಸದಸ್ಯರಾದ ಪುಟ್ಟಸಿದ್ದಮ್ಮ, ಮಹದೇವ, ಗೋವಿಂದರಾಜು, ಶೋಭಾ, ಗ್ರಾಪಂ ಕಾರ್ಯದರ್ಶಿ ದಾಸ್ ಹಾಗೂ ಗ್ರಾಮಸ್ಥರು ಹಾಜರಿದ್ದರು. 

 

Comments (Click here to Expand)