varthabharthi

ಕರ್ನಾಟಕ

ಸದಾಶಿವ ವರದಿಯನ್ನು ಜಾರಿಗೆ ತರದಿರಲು ಒತ್ತಾಯಿಸಿ ಮನವಿ

ವಾರ್ತಾ ಭಾರತಿ : 12 Jan, 2018

ಚಿಕ್ಕಮಗಳೂರು, ಜ.12: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ನೀಡಿರುವ ವರದಿಯನ್ನು ಯಾವುದೇ ಕಾರಣಕ್ಕೂ ಅನುಷ್ಠಾನಕ್ಕೆ ತರಬಾರದು ಎಂದು ಜಿಲ್ಲಾ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಗೌರವಾಧ್ಯಕ್ಷ ಬಿ.ಟಿ.ಗಂಗಾಧರನಾಯ್ಕ ರಾಜ್ಯ ಸರ್ಕಾರವನ್ನು ಒತ್ತಾಯಿಸಿರು.

ಅವರು ಜಿಲ್ಲಾಧಿಕಾರಿ ಕಛೇರಿಯ ಸಹಾಯಕಿ ಶಾರದಮ್ಮ ಅವರನ್ನು ಶುಕ್ರವಾರ ಭೇಟಿ ಮಾಡಿ ಮನವಿ ಸಲ್ಲಿಸಿ ಮಾತನಾಡಿದ ಅವರು, ಎ.ಜೆ.ಸದಾಶಿವ ಆಯೋಗದ ವರದಿ ಸಂಪೂರ್ಣ ಅವೈಜ್ಞಾನಿಕ ಮತ್ತು ಅಸಂವಿಧಾನಕವಾಗಿದೆ. ಡಾ. ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದ ಮೂಲಭೂತ ಉದ್ದೇಶಗಳನ್ನು ಹಾಗೂ ಆಶಯಗಳನ್ನು ಕಡೆಗಣಿಸಿ ಪರಿಶಿಷ್ಠ ಜಾತಿಯಲ್ಲಿನ ಉಪಜಾತಿಗಳ ಹಿತಾಸಕ್ತಿ ಕಾಪಾಡಲು ಈ ವರದಿಯನ್ನು ಆಯೋಗ ಸಲ್ಲಿಸಿದೆ ಎಂದು ದೂರಿದರು.

ಈ ಅಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತಂದಲ್ಲಿ ಪರಿಶಿಷ್ಠ ಜಾತಿಗಳ ಉಪಜಾತಿಗಳ ನಡುವೆ ದ್ವೇಷ, ಅಸೂಯೆ ಮತ್ತು ಸಂಘರ್ಷಕ್ಕೆ ಕಾರಣವಾಗುತ್ತದೆ. ಪರಿಶಿಷ್ಠ ಜಾತಿಯಲ್ಲಿನ 101 ಜಾತಿಯ ಪ್ರಮುಖರನ್ನು ಕಡೆಗಣಿಸಿ ಈ ವರದಿ ತಯಾರಿಸಲಾಗಿರುವುದರಿಂದ ಅದು ಏಕರೂಪವಾಗಿದೆ. ಈ ವರದಿಯನ್ನು ಅನುಷ್ಠಾನಕ್ಕೆ ತಂದಲ್ಲಿ ದಲಿತ ಶೋಷಿತ ಸಮುದಾಯಗಳ ಐಕ್ಯತೆಯನ್ನು ಬಯಸಿದ್ದ ಡಾ ಬಿ.ಆರ್.ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದಂತಾಗುತ್ತದೆ, ಐಕ್ಯತೆಯಿಂದಿರುವ ದಲಿತ ಸಮುದಾಯವನ್ನು ಛಿದ್ರಗೊಳಿಸಿದಂತಾಗುತ್ತದೆ ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಸಾರ್ವಜನಿಕ ಚರ್ಚೆಗೆ ಇಡಬೇಕು. ಅದುವರೆಗೂ ವರದಿಯನ್ನು ಅನುಷ್ಠಾನಕ್ಕೆ ತರಬಾರದು. ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮುದಾಯಗಳಿಗೆ ನೀಡುತ್ತಿರುವ ಮೀಸಲಾತಿಯ ಪ್ರಮಾಣವನ್ನು ಶೇ50 ರಿಂದ 75 ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಒಕ್ಕೂಟದ ಜಿಲ್ಲಾ ಜಂಜಾರ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ, ತಾಲ್ಲೂಕು ಪಂಚಾಯತ್ ಸದಸ್ಯ ಆನಂದ ನಾಯ್ಕ ಹಳೇಹಟ್ಟಿ, ಜಿಲ್ಲಾ ಕೊರಚ, ಕೊರಮ ಸಮಾಜದ ಪ್ರಧಾನಕಾರ್ಯದರ್ಶಿ ಕೆ.ವಿ.ಮಂಜುನಾಥ್, ನಿವೃತ್ತ ಶಿಕ್ಷಕ ಎಲ್.ಟಿ.ಸೋಮೇಂದ್ರ, ರವಿನಾಯ್ಕ ಉಡುಗೆರೆ ಹಾಜರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)