varthabharthi

ಕರ್ನಾಟಕ

ಧನ್ಯಾ ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸಲು ಆಗ್ರಹಿಸಿ ಧರಣಿ

ವಾರ್ತಾ ಭಾರತಿ : 12 Jan, 2018
Varthabharathi

ಮೂಡಿಗೆರೆ, ಜ.12: ಧನ್ಯಾ ಆತ್ಮಹತ್ಯೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಬಿಎಸ್‍ಪಿ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು. 

ಪ್ರವಾಸಿ ಮಂದಿರದ ಆವರಣದಿಂದ ಮೆರವಣಿಗೆ ಆರಂಭಿಸಿ ಬಳಿಕ ಲಯನ್ಸ್ ವೃತ್ತದಲ್ಲಿ ದಿಢೀರ್ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದರಿಂದ ಪ್ರತಿಭಟನಾ ಸ್ಥಳಕ್ಕೆ ಪಿಎಸ್‍ಐ ರಫೀಕ್ ಆಗಮಿಸಿ, ರಸ್ತೆ ತಡೆಯನ್ನು ನಿಯಂತ್ರಿಸಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ನಂತರ ಪ್ರತಿಭಟನಾಕಾರರು ತಾಲೂಕು ಕಚೇರಿವರೆಗೆ ಮೆರವಣಿಗೆ ಸಾಗಿ ತಹಸೀಲ್ದಾರ್‍ಗೆ ಮನವಿ ಸಲ್ಲಿಸಿದರು.

ಈ ವೇಳೆ ಬಿಎಸ್‍ಪಿ ಜಿಲ್ಲಾ ಕಾರ್ಯದರ್ಶಿ ಲೋಕವಳ್ಳಿ ರಮೇಶ್ ಮಾತನಾಡಿ, ಧನ್ಯಾ ಪ್ರಕರಣದ ಎಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಬೇಕು. ಜಿಲ್ಲಾ ವರಿಷ್ಠಾಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಂಡಿರುವುದು ಶ್ಲಾಘನಾರ್ಹ. ತನಿಖೆ ಮಾಡುತ್ತಿರುವ ಪೊಲೀಸರು ಯಾವುದೇ ಒತ್ತಡಗಳಿಗೆ ಒಳಗಾಗಬಾರದು. ಧನ್ಯಾ ಪ್ರಕರಣದ ಆರೋಪಿಗಳ ಜೊತೆಗೆ ಶಾಂತಿ ಕದಡುವ ಹೇಳಿಕೆಗಳನ್ನು ನೀಡುವವರನ್ನು ಬಂಧಿಸಿ ಗಡೀಪಾರು ಮಾಡಬೇಕು. ಧನ್ಯಾ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. 

ಈ ವೇಳೆ ಮುಖಂಡರಾದ ಮಂಜಯ್ಯ, ಮರಗುಂದ ಪ್ರಸನ್ನ, ಪಿ.ಕೆ.ಮಂಜುನಾಥ್, ರಾಮು, ಶ್ರೀಕಾಂತ್, ಯು.ಬಿ.ನಾಗೇಶ್, ಜೈಪಾಲ್, ರತೀಶ್ ಮತ್ತಿತರರಿದ್ದರು. 

 

Comments (Click here to Expand)