varthabharthi

ಕರ್ನಾಟಕ

ಕಾಂಗ್ರೆಸ್ ಸರಕಾರ ಹೆಣ್ಣು ಮಕ್ಕಳ ಸೌಲಭ್ಯಗಳನ್ನು ಕಿತ್ತುಕೊಂಡಿದೆ: ಬಿಎಸ್‌ವೈ

ವಾರ್ತಾ ಭಾರತಿ : 12 Jan, 2018

ಚಿಕ್ಕಬಳ್ಳಾಪುರ, ಜ.12: ಸಿಎಂ ಸಿದ್ದರಾಮಯ್ಯ ಜಾರಿಗೊಳಿಸುತ್ತಿರುವ ಕಾನೂನುಗಳಿಂದ ರಾಜ್ಯದ ಜನತೆ ಸವಲತ್ತುಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದರು.

ಲಿಯನ್ಸ್ ಪೆಟ್ರೋಲ್ ಬಂಕ್ ಬಳಿ ಆಯೋಜಿಸಿದ್ದ ಪರಿರ್ವತನಾ ರ್ಯಾಲಿಯ ಬಹಿರಂಗ ಸಭೆಯಲ್ಲಿ ಮಾತನಾಡಿ, ಬಿಜೆಪಿ ಆಡಳಿತಾವಧಿಯಲ್ಲಿದ್ದ 3 ಲಕ್ಷ ಭಾಗ್ಯಲಕ್ಷ್ಮೀ ಫಲಾನುಭವಿಗಳನ್ನು ಸದ್ಯ ಕಾಂಗ್ರೆಸ್ ಸರಕಾರ 1 ಲಕ್ಷಕ್ಕೆ ಇಳಿಸುವ ಮೂಲಕ ಹೆಣ್ಣುಮಕ್ಕಳ ಸವಲತ್ತುಗಳನ್ನು ಕಸಿದುಕೊಂಡಿದೆ. ಕಾಂಗ್ರೆಸ್ ಸರಕಾರ ದೇಶ ಕಂಡ ಭ್ರಷ್ಟ ಸರಕಾರವಾಗಿದ್ದು, ಕೇಂದ್ರದಿಂದ ರಾಜ್ಯಕ್ಕೆ ರವಾನೆಯಾಗುತ್ತಿರುವ ಅಕ್ಕಿ, ಗೋದಿಯನ್ನು ಕಳ್ಳಸಾಗಣೆ ಮಾಡುವ ಮೂಲಕ ಬಡ ಜನತೆಗೆ ಮೋಸ ಮಾಡಲಾಗುತ್ತಿದೆ. ಎತ್ತಿನ ಹೊಳೆ ಯೋಜನೆ ಸೇರಿದಂತೆ ಹಲವು ಯೋಜನೆಗಳು ಜನಪರ ಕಾಳಜಿಯಿಲ್ಲದೆ ಹಣ ಲೂಟಿ ಮಾಡುವ ಯೋಜನೆಯಾಗಿದೆ ಎಂದು ಆರೋಪಿಸಿದರು.

ಪಕ್ಷದ ರಾಜ್ಯ ಉಸ್ತುವಾರಿ ಮುರಳಿಧರ್ ರಾವ್ ಮಾತನಾಡಿ, ಕೇಂದ್ರ ಸರಕಾರ ಕಳೆದ ಮೂರೂವರೆ ವರ್ಷಗಳಲ್ಲಿ ರಾಜ್ಯಕ್ಕೆ ನೀಡಿರುವ 3 ಲಕ್ಷ ಕೋಟಿ ರೂ. ಅನುದಾನ ಹಿಂದುಳಿದವರ ಏಳಿಗೆಗೆ ವಿನಿಯೋಗಿಸುವ ಬದಲು ಕಾಂಗ್ರೆಸ್ ನಾಯಕರಿಗೆ ಸೇರುತ್ತಿತ್ತು. ಇದನ್ನು ಪ್ರಶ್ನಿಸಿ ಅನುದಾನ ಲೆಕ್ಕ ಕೊಡಿ ಎಂದಿದ್ದಕ್ಕೆ ಸಿದ್ದರಾಮಯ್ಯ ಅವರ ಬಟ್ಟೆ ಹರಿದುಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಮಾಜಿ ಗೃಹ ಮಂತ್ರಿ ಆರ್.ಅಶೋಕ್ ಮಾತನಾಡಿದರು. ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್, ಯಾತ್ರೆಯ ಸಂಚಾಲಕ ಎಂ.ಎನ್. ಶಶಿಧರ್, ಪಕ್ಷದ ಜಿಲ್ಲಾಧ್ಯಕ್ಷ ಡಾ.ಜಿ.ವಿ. ಮಂಜುನಾಥ್, ರೈತ ಮೋರ್ಚದ ರಾಜ್ಯ ಉಪಾಧ್ಯಕ್ಷ ರಾಮರೆಡ್ಡಿ, ಎಸ್ಸಿ ಮೋರ್ಚದ ರಾಜ್ಯ ಕಾರ್ಯದರ್ಶಿ ವಿಜಯಕುಮಾರ್, ಮಾಜಿ ಶಾಸಕಿ ಜ್ಯೋತಿರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

‘ಸಿಎಂ ಕ್ಷಮೆಯಾಚಿಸಲಿ’
ಬಿಜೆಪಿ, ಆರೆಸ್ಸೆಸ್ ಹಾಗೂ ಬಜರಂಗದಳವನ್ನು ಉಗ್ರಗಾಮಿ ಸಂಘಟನೆಗಳೆಂದು ಹೇಳಿಕೆ ನೀಡುವ ಮೂಲಕ ಸಿಎಂ ಅಕ್ಷಮ್ಯ ಅಪರಾಧ ಎಸಗಿದ್ದು, ಕೂಡಲೇ ಜನರ ಕ್ಷಮೆಯಾಚಿಸಬೇಕೆಂದು ಮಾಜಿ ಸಿಎಂ ಯಡಿಯೂರಪ್ಪ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಹೇಳಿಕೆಯನ್ನು ಖಂಡಿಸಿ ರಾಜ್ಯಾದ್ಯಂತ ಹೋರಾಟ ಆರಂಭವಾಗಿದೆ. ಮುಂದಿನ ಮೂರು ತಿಂಗಳಲ್ಲಿ ರಾಜ್ಯ ಬಿಟ್ಟು ಕಾಂಗ್ರೆಸ್ ಸರಕಾರವೇ ತೊಲಗಲಿದೆ ಎಂದ ಅವರು, ರಾಜ್ಯದ 150ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುವುದು ಖಚಿತವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಈ ಬಾರಿ ಮೂರರಿಂದ ನಾಲ್ಕು ಸ್ಥಾನ ಗೆಲುವ ಬಗ್ಗೆ ವಿಶ್ವಾಸವಿದೆ ಎಂದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)