varthabharthi

ಅಂತಾರಾಷ್ಟ್ರೀಯ

ಅಪ್ರಾಪ್ತ ಬಾಲಕಿಯ ಅತ್ಯಾಚಾರ, ಕೊಲೆ: ಪಾಕಿಸ್ತಾನಾದ್ಯಂತ ಪ್ರತಿಭಟನೆ

ವಾರ್ತಾ ಭಾರತಿ : 12 Jan, 2018

ಇಸ್ಲಾಮಾಬಾದ್, ಜ.12: ಏಳು ವರ್ಷ ಪ್ರಾಯದ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಿ ಪಾಕಿಸ್ತಾನದಲ್ಲಿ ಗುರುವಾರದಂದು ಹಲವು ಕಡೆ ಪ್ರತಿಭಟನೆಗಳು ನಡೆದವು. ಇಂಥ ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರು ಸಂಪೂರ್ಣವಾಗಿ ವಿಫಲರಾಗುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.

ಕಸುರ್ ಪಟ್ಟಣದಲ್ಲಿ ಒಂದು ವರ್ಷದಲ್ಲಿ ನಡೆದ 12ನೇ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇದಾಗಿದ್ದು ಇದು ಯಾವುದೋ ಸರಣಿ ಹಂತಕನ ಕೆಲಸವಾಗಿರಬಹುದು ಎಂಬ ಆತಂಕ ಸ್ಥಳೀಯರಲ್ಲಿ ಮನೆಮಾಡಿದೆ.

ಬುಧವಾರದಂದು ಪ್ರತಿಭಟನಾಕಾರರ ಮೇಲೆ ಪೊಲೀಸರು ಗುಂಡು ಹಾರಿಸಿದ ಪರಿಣಾಮ ಇಬ್ಬರು ಮೃತಪಟ್ಟಿದ್ದರು. ಗುರುವಾರದಂದು ಶಾಲಾ-ಕಾಲೇಜುಗಳು, ಕಚೇರಿಗಳು ಮತ್ತು ಅಂಗಡಿಮುಂಗಟ್ಟುಗಳನ್ನು ಮುಚ್ಚಲಾಗಿತ್ತು ಎಂದು ವರದಿ ತಿಳಿಸಿದೆ.

ಘಟನೆಯನ್ನು ಖಂಡಿಸಿ ಕರಾಚಿ, ಫೈಸಲಾಬಾದ್ ಸೇರಿದಂತೆ ಪಾಕಿಸ್ತಾನದ ಉದ್ದಗಲಕ್ಕೂ ಪ್ರತಿಭಟನೆಗಳು ನಡೆಸಲಾಗಿದೆ. ಘಟನೆ ನಡೆದಿರುವ ಲಾಹೋರ್‌ನ ಕಸುರ್ ಗ್ರಾಮದಲ್ಲಿ ಪ್ರತಿಭಟನಾಕಾರರು ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು. ಇದರಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಜನರು ಪರದಾಡುವಂತಾಯಿತು ಎಂದು ವರದಿ ತಿಳಿಸಿದೆ.

ಏಳರ ಹರೆಯದ ಝೈನಾಬ್ ಅನ್ಸಾರಿಯ ಮೃತದೇಹವು ಆಕೆ ನಾಪತ್ತೆಯಾದ ನಾಲ್ಕು ದಿನಗಳ ಬಳಿಕ ಮಂಗಳವಾರದಂದು ಕಸದ ತೊಟ್ಟಿಯಲ್ಲಿ ಸಿಕ್ಕಿತ್ತು.

ಪಂಜಾಬ್ ಪ್ರಾಂತದ ಮುಖ್ಯಮಂತ್ರಿಯಾಗಿರುವ ಶಹಬಾಝ್ ಶರೀಫ್ ಝೈನಾಬ್ ಮನೆಗೆ ತೆರಳಿ ತಪ್ಪಿತಸ್ಥರನ್ನು ಕಾನೂನು ಶಿಕ್ಷೆಗೆ ಗುರಿಪಡಿಸುವ ಭರವಸೆಯನ್ನು ಆಕೆಯ ಹೆತ್ತವರಿಗೆ ನೀಡಿದ್ದಾರೆ ಎಂದು ಸರಕಾರಿ ವಕ್ತಾರರು ತಿಳಿಸಿದ್ದಾರೆ. ಝೈನಾಬ್‌ಳನ್ನು ಅಪಹರಣ ಮಾಡಿದವರ ಬಗ್ಗೆ ಸುಳಿವು ನೀಡಿದವರಿಗೆ 10 ಮಿಲಿಯನ್ ರೂ. ನೀಡುವುದಾಗಿ ಶರೀಫ್ ಘೋಷಿಸಿದ್ದಾರೆ.

ಅನ್ಸಾರಿಯ ಇಬ್ಬರು ಸಂಬಂಧಿಕರ ವಿಚಾರಣೆಯನ್ನು ನಡೆಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 26 ಸ್ಥಳೀಯ ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಅವರ ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ ಎಂದು ಪತ್ರಿಕೆ ವರದಿ ಮಾಡಿದೆ. ಸದ್ಯ ಪೊಲೀಸರು ವೈದ್ಯಕೀಯ ಸಾಕ್ಷಿಯ ಪರಿಶೀಲನೆಗೆ ಕಾಯುತ್ತಿರುವುದಾಗಿ ವರದಿ ತಿಳಿಸಿದೆ.

ಆದರೆ ಪೊಲೀಸರು ಅಪರಾಧಿಗಳನ್ನು ಬಂಧಿಸುತ್ತಾರೆ ಎಂಬ ಬಗ್ಗೆ ಝೈನಾಬ್ ಕುಟುಂಬಕ್ಕೆ ನಂಬಿಕೆಯಿಲ್ಲ. ನಮಗೆ ಪೊಲೀಸರ ಮೇಲೆ ನಿರೀಕ್ಷೆಯಿಲ್ಲ. ನಾವು ಅವರಿಗೆ ಸಿಸಿ ಟಿವಿ ದೃಶ್ಯಾವಳಿಗಳನ್ನು ನೀಡಿದರೂ ಅವರಿಂದ ಏನೂ ಮಾಡಲು ಸಾಧ್ಯವಾಗಿಲ್ಲ ಎಂದು ಮೃತಳ ಚಿಕ್ಕಪ್ಪ ಹಾಫೀಝ್ ಮುಹಮ್ಮದ್ ಅದ್ನನ್ ತಿಳಿಸಿದ್ದಾರೆ.

ಅಪಹರಣಕಾರರು ಮೃತದೇಹವನ್ನು ಎಸೆಯಲು ನಾಲ್ಕು ದಿನಗಳ ಕಾಲ ಕಾದರು. ಆ ಸಮಯದಲ್ಲಿ ಆಕೆಯ ಮನೆಮಂದಿ ಆಕೆಗಾಗಿ ಹುಡುಕಿ ಸುಸ್ತಾಗಿರುತ್ತಾರೆ ಎಂಬುದು ಅವರಿಗೆ ತಿಳಿದಿತ್ತು. ಅಪಹರಣಕಾರರು ಸ್ಥಳೀಯರೇ ಆಗಿದ್ದು ಝೈನಾಬ್ ಮನೆಯವರೊಂದಿಗೆ ಆತ್ಮೀಯತೆ ಬೆಳೆಸಿಕೊಂಡಿದ್ದರು. ಹಾಗಾಗಿಯೇ ಆಕೆಯನ್ನು ಪುಸಲಾಯಿಸಿ ಹೊರಗೆ ಕರೆದುಕೊಂಡು ಹೋಗಿದ್ದಾರೆ ಎಂದು ಅದ್ನನ್ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)