varthabharthi

ಕ್ರೀಡೆ

ಭಾರತಕ್ಕೆ ಆಸ್ಟ್ರೇಲಿಯ ಮೊದಲ ಎದುರಾಳಿ

ಜ.13ರಿಂದ ಅಂಡರ್-19 ವಿಶ್ವಕಪ್

ವಾರ್ತಾ ಭಾರತಿ : 12 Jan, 2018

ಕ್ರೈಸ್ಟ್‌ಚರ್ಚ್(ನ್ಯೂಝಿಲೆಂಡ್), ಜ.12: ಐಸಿಸಿ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿ ಶನಿವಾರ ನ್ಯೂಝಿಲೆಂಡ್‌ನಲ್ಲಿ ಆರಂಭವಾಗಲಿದೆ. ಮೂರು ಬಾರಿಯ ಚಾಂಪಿಯನ್ ಭಾರತ ಸೇರಿದಂತೆ ಒಟ್ಟು 16 ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ.

 ಯುವ ಆಟಗಾರರಿಗೆ ಅತ್ಯಂತ ಪ್ರಮುಖವಾಗಿರುವ ಈ ಟೂರ್ನಿಯ ಮೂಲಕ ವಿರಾಟ್ ಕೊಹ್ಲಿ ಹಾಗೂ ಸ್ಟೀವನ್ ಸ್ಮಿತ್‌ರಂತಹ ಪ್ರತಿಭಾವಂತರು ಬೆಳಕಿಗೆ ಬಂದಿದ್ದಾರೆ. ಹೀಗಾಗಿ ಪ್ರತಿ ಆವೃತ್ತಿಯ ಟೂರ್ನಿಯು ಹೆಚ್ಚು ಮಹತ್ವ ಪಡೆಯುತ್ತಾ ಬಂದಿದೆ.

ಶನಿವಾರ ಪಾಕಿಸ್ತಾನ ತಂಡ ಅಫ್ಘಾನಿಸ್ತಾನ ತಂಡವನ್ನು ಎದುರಿಸುವ ಮೂಲಕ ಟೂರ್ನಿ ಆರಂಭವಾಗಲಿದೆ. ಮೊದಲ ದಿನ ಆತಿಥೇಯ ನ್ಯೂಝಿಲೆಂಡ್ ತಂಡ ಹಾಲಿ ಚಾಂಪಿಯನ್ ವೆಸ್ಟ್‌ಇಂಡೀಸ್‌ನ್ನು ಎದುರಿಸಲಿದೆ.

 ಏಷ್ಯಾಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿರುವ ಭಾರತ ತಂಡ ರವಿವಾರ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯವನ್ನು ಮುಖಾಮುಖಿಯಾಗಲಿದೆ. ‘‘ನಾವು ಈ ಟೂರ್ನಮೆಂಟ್‌ನ್ನು ಆಡಿರಲಿಲ್ಲ. 1988ರ ಬಳಿಕ 10 ವರ್ಷಗಳ ಕಾಲ ಕಿರಿಯರ ವಿಶ್ವಕಪ್ ಆಯೋಜಿಸಿರಲಿಲ್ಲ. ಹಾಗಾಗಿ ಈ ಟೂರ್ನಿಯಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ನಿಮಗೆ ಈ ಟೂರ್ನಿಯಲ್ಲಿ ಭಾಗವಹಿಸುವ ಉತ್ತಮ ಅವಕಾಶ ಲಭಿಸಿದೆ ಎಂದು ಆಟಗಾರರಿಗೆ ಹೇಳಿದ್ದೇನೆ’’ ಎಂದು ಭಾರತದ ಅಂಡರ್-19 ತಂಡದ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಅಂಡರ್-19 ವಿಶ್ವಕಪ್‌ನ ಪ್ರತಿ ಆವೃತ್ತಿಯಲ್ಲೂ ಉತ್ತಮ ಆಟಗಾರರು ಬೆಳಕಿಗೆ ಬಂದಿದ್ದಾರೆ. 2016ರ ಆವೃತ್ತಿಯಲ್ಲಿ ರಿಷಬ್ ಪಂತ್ ಹಾಗೂ ಅಲ್ಝಾರಿ ಜೋಸೆಫ್ ಉತ್ತಮ ಪ್ರದರ್ಶನದಿಂದ ಗಮನ ಸೆಳೆದಿದ್ದರು. ಮೂರು ಬಾರಿಯ ಚಾಂಪಿಯನ್ ಭಾರತ ಫೈನಲ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಸೋತಿತ್ತು.

ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಆಟಗಾರರು ಈಗಾಗಲೇ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದು, ಭಾರೀ ನಿರೀಕ್ಷೆ ಮೂಡಿಸಿದ್ದಾರೆ.

ಭಾರತದ ನಾಯಕ ಪೃಥ್ವಿ ಶಾ, ಸಹ ಆಟಗಾರ ಶುಭಂ ಗಿಲ್, ಆಸ್ಟ್ರೇಲಿಯದ ನಾಯಕ ಜೇಸನ್ ಸಂಘ, ಪಾಕಿಸ್ತಾನದ ವೇಗಿ ಶಾಹೀನ್ ಅಫ್ರಿದಿ, ಅಫ್ಘಾನಿಸ್ತಾನದ ಉದಯೋನ್ಮುಖ ಆಟಗಾರ ಬಶೀರ್ ಶಾ ಭರವಸೆ ಮೂಡಿಸಿದ್ದಾರೆ.

ಶಾ, ಗಿಲ್, ಸಂಘ ಹಾಗೂ ಶಾ ಈಗಾಗಲೇ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಶತಕ ದಾಖಲಿಸಿದ್ದಾರೆ. ಎಡಗೈ ವೇಗದ ಬೌಲರ್ ಅಫ್ರಿದಿ ಖ್ವಾದ್-ಇ-ಆಝಂ ಟ್ರೋಫಿಯಲ್ಲಿ 39 ರನ್‌ಗೆ 8 ವಿಕೆಟ್‌ಗಳನ್ನು ಕಬಳಿಸಿದ್ದರು. ಅಫ್ಘಾನ್‌ನ 17ರ ಹರೆಯದ ಬಶೀರ್ ಶಾ ಏಳು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 121.77ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿ ಆಸ್ಟ್ರೇಲಿಯದ ಬ್ಯಾಟಿಂಗ್ ದಂತಕತೆ ಡೊನಾಲ್ಡ್ ಬ್ರಾಡ್ಮನ್(95.14) ಬ್ಯಾಟಿಂಗ್ ಸರಾಸರಿಯನ್ನು ಮುರಿದಿದ್ದರು.

ಭಾರತದ ನಾಯಕ ಶಾ ಜೂನಿಯರ್ ಮಟ್ಟದ ಕ್ರಿಕೆಟ್‌ನಲ್ಲಿ ಮಿಂಚಿದ್ದಲ್ಲದೆ ರಣಜಿ ಟ್ರೋಫಿಯ ತನ್ನ ಚೊಚ್ಚಲ ಪಂದ್ಯದಲ್ಲಿ ಶತಕ ಸಿಡಿಸಿದ್ದರು. ಟೂರ್ನಿಯಲ್ಲಿ ಸ್ಟೀವ್ ವಾ ಹಾಗೂ ಮಖಾಯ ಎನ್‌ಟಿನಿ ಪುತ್ರರಾದ ಆಸ್ಟಿನ್ ಹಾಗೂ ಥಂಡೊ ಭಾಗವಹಿಸುತ್ತಿದ್ದಾರೆ. ಈ ಇಬ್ಬರು ಕ್ರಮವಾಗಿ ಆಸ್ಟ್ರೇಲಿಯ ಹಾಗೂ ದಕ್ಷಿಣ ಆಫ್ರಿಕವನ್ನು ಪ್ರತಿನಿಧಿಸಲಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯದ ಸಿಇಒ ಜೇಮ್ಸ್ ಸೌಥರ್‌ಲ್ಯಾಂಡ್ ಪುತ್ರ ಕೂಡ ಟೂರ್ನಿಯಲ್ಲಿ ಆಡುತ್ತಿದ್ದಾರೆ.

ಐಪಿಎಲ್ ಆಟಗಾರರ ಹರಾಜು ಈ ತಿಂಗಳಾಂತ್ಯದಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಫ್ರಾಂಚೈಸಿಗಳು ಅಂಡರ್-19 ವಿಶ್ವಕಪ್‌ನ ಮೇಲೆ ಕಣ್ಣಿಟ್ಟಿದ್ದಾರೆ. ಪಂತ್ 2016ರಲ್ಲಿ ಬಾಂಗ್ಲಾದೇಶದಲ್ಲಿ ಉತ್ತಮ ಪ್ರದರ್ಶನ ನೀಡಿದಾಗ ಡೆಲ್ಲಿ ತಂಡ ಅವರನ್ನು 1.9 ಕೋ.ರೂ.ಗೆ ಖರೀದಿಸಿತ್ತು.

ಜ.13 ರಿಂದ ಫೆ.5ರ ತನಕ 22 ದಿನಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ 16 ತಂಡಗಳು ಏಳು ತಾಣಗಳಲ್ಲಿ ಆಡಲಿದ್ದು, 20 ಪಂದ್ಯಗಳು ನಡೆಯುತ್ತವೆ.

ಭಾರತ ಕ್ರಿಕೆಟ್ ತಂಡ

ಪೃಥ್ವಿ ಶಾ(ನಾಯಕ), ಶುಭಂ ಗಿಲ್, ಆರ್ಯನ್, ಅಭಿಷೇಕ್ ಶರ್ಮ, ಅರ್ಶದೀಪ್ ಸಿಂಗ್, ಹಾರ್ವಿಕ್ ದೇಸಾಯಿ, ಮನ್ಜೋ ತ್ ಕಾರ್ಲ, ಕಮಲೇಶ್ ನಗರ್‌ಕೋಟಿ, ಪಂಕಜ್ ಯಾದವ್, ರಿಯಾನ್ ಪರಾಗ್, ಇಶಾಂತ್ ಪೊರೆಲ್, ಹಿಮಾಂಶು ರಾಣಾ, ಅನುಕೂಲ್ ರಾಯ್, ಶಿವಂ ಮಾವಿ ಹಾಗೂ ಶಿವ ಸಿಂಗ್.

ಭಾರತದ ವೇಳಾಪಟ್ಟಿ

►ಜನವರಿ 14, ರವಿವಾರ

  ಆಸ್ಟ್ರೇಲಿಯ ವಿರುದ್ಧ

►ಜನವರಿ 16, ಮಂಗಳವಾರ

  ಪಪುವಾ ನ್ಯೂ ಗಿನಿ ವಿರುದ್ಧ

►ಜನವರಿ 19, ಶುಕ್ರವಾರ

  ಝಿಂಬಾಬ್ವೆ ವಿರುದ್ಧ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)