varthabharthi

ವೈವಿಧ್ಯ

ಬ್ಯಾಂಕುಗಳಿಗೆ ಸಂಬಂಧಿಸಿದ ಒಂದು ಅಪಾಯಕಾರಿ ಮಸೂದೆ ಎಫ್‌ಆರ್‌ಡಿಐ

ವಾರ್ತಾ ಭಾರತಿ : 13 Jan, 2018
ಪ್ರಭಾತ್ ಪಟ್ನಾಯಕ್ ಅನುವಾದ: ಟಿ. ಎಸ್. ವೇಣುಗೋಪಾಲ್

ಸಾಲ ಮರುಪಾವತಿಸದ ಕಾರ್ಪೊರೇಟುಗಳು ಹಣಮರುಪಾವತಿ ಮಾಡುವುದಕ್ಕೆ ಸರಕಾರ ಕ್ರಮತೆಗೆದುಕೊಳ್ಳಬೇಕು. ಅದನ್ನು ಬಿಟ್ಟು, ಠೇವಣಿದಾರರು ಅಂತಹ ಕಾರ್ಪೊರೇಟುಗಳ ದುರ್ಬಳಕೆಗೆ ದಂಡ ತೆರುವಂತೆ ಮಾಡುತ್ತಿರುವುದು ದೊಡ್ಡ ಅಣಕ. ಒಟ್ಟು ಸುಸ್ತಿಸಾಲದಲ್ಲಿ ಈ ಕಾರ್ಪೊರೇಟರುಗಳ ಪಾಲು ಶೇ. 75ರಷ್ಟಿದೆ. ನಿಜವಾಗಿ ಠೇವಣೆದಾರರ ಸಂಪನ್ಮೂಲವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವವರು ಅವರು.

ಸರಕಾರಕ್ಕೆ ಭಾರತದ ಆರ್ಥಿಕತೆಯ ಸಂಸ್ಥೆಗಳನ್ನು ಹಾಳುಗೆಡವದೇ ಹೋದರೆ ನೆಮ್ಮದಿಯೇ ಇಲ್ಲ ಅನ್ನಿಸುತ್ತದೆ. ಅಷ್ಟೇ ಅಲ್ಲ ಅದನ್ನು ಎಂದೆಂದಿಗೂ ಮತ್ತೆ ಸರಿಪಡಿಸುವುದಕ್ಕೆ ಸಾಧ್ಯವಾಗಬಾರದು. ಈಗ ಆ ಸಾಲಿನಲ್ಲಿ ಹಣಕಾಸು ನಿರ್ಣಯ ಹಾಗೂ ಠೇವಣಿ ವಿಮಾ ಮಸೂದೆ (FRDI) ತರುತ್ತಿದೆ. ಅದನ್ನು ಚಳಿಗಾಲದ ಅಧಿವೇಶನದ ಕೊನೆಯ ದಿನ ಮಂಡಿಸಿತು. ಅದು ಈಗ ಸೆಲೆಕ್ಟ್ ಕಮಿಟಿಯ ಮುಂದೆ ಇದೆ. ಈ ಮಸೂದೆಯ ಪ್ರಕಾರ ಒಂದು ನಿರ್ಣಯ ಮಂಡಳಿಯನ್ನು ಸ್ಥಾಪಿಸಲಾಗುತ್ತದೆ. ಅದರಲ್ಲಿ ಹೆಚ್ಚಾಗಿ ಕೇಂದ್ರ ಸರಕಾರದ ಅಧಿಕಾರಿಗಳು ಇರುತ್ತಾರೆ. ಅದು ಸಂಕಷ್ಟದಲ್ಲಿರುವ ಬ್ಯಾಂಕುಗಳ ನೆರವಿಗೆ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ವಾಪಸು ಬಾರದ ಸಾಲದ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಠೇವಣಿ ಹಣವೂ ಸೇರಿದಂತೆ ಸಾಲಗಾರನ ಹಣವನ್ನು ಬಳಸಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಇಲ್ಲಿಯವರೆಗೆ ಕೇಂದ್ರ ಸರಕಾರ ರಾಷ್ಟ್ರೀಕೃತ ಬ್ಯಾಂಕುಗಳನ್ನು ಅವುಗಳ ಬೇಲ್‌ಔಟ್-ಸಂಕಷ್ಟಗಳಿಂದ ಹೊರತರಲು ಬಜೆಟ್‌ನಲ್ಲಿ ಅವಕಾಶ ಮಾಡಿಕೊಳ್ಳುತ್ತಿತ್ತು. ಆದರೆ ಹಾಗೆ ಬೇಲ್‌ಔಟ್ ಮಾಡುವುದು ತಪ್ಪು, ಒಳಗಿನಿಂದಲೇ ಪರಿಹಾರ ಕಂಡುಕೊಳ್ಳಬೇಕು, ಅಂದರೆ ಬೇಲ್‌ಇನ್ ಮಾಡಬೇಕು ಅನ್ನುವುದು ಇತ್ತೀಚಿನ ವಾದ. ಅಂದರೆ ಕೇಂದ್ರ ಸರಕಾರ ‘ಸಂಕಷ್ಟ’ದಲ್ಲಿರುವ ಹಣಕಾಸು ಸಂಸ್ಥೆಗಳಿಗೆ ನೆರವಾಗಬಾರದು. ಠೇವಣಿದಾರರ ಠೇವಣಿಯೂ ಸೇರಿದಂತೆ ಸಾಲಗಾರರ ನಿಧಿಗಳನ್ನು ಬಳಸಿಕೊಂಡು ಅದು ಬಿಕ್ಕಟ್ಟಿನಿಂದ ಹೊರಬರಬೇಕು.

ಇಲ್ಲಿಯವರೆಗೆ ಎಲ್ಲಾ ಠೇವಣಿಗಳ ಮೇಲೆ ಸ್ವತಃ ಬ್ಯಾಂಕುಗಳೇ ಒಂದು ಲಕ್ಷದವರೆಗೆ ವಿಮೆ ಮಾಡಿಸಿರುತ್ತಿದ್ದವು. ಬ್ಯಾಂಕ್ ವಿಫಲಗೊಂಡ ಸಂದರ್ಭದಲ್ಲಿ ಆ ಹಣ ಠೇವಣಿದಾರನಿಗೆ ಸಿಗುತ್ತಿತ್ತು. ಇನ್ನು ಮುಂದೆ ರಿಸರ್ವ್ ಬ್ಯಾಂಕಿನ ಅಂಗಸಂಸ್ಥೆಯಾದ ಠೇವಣಿ ವಿಮೆ ಹಾಗೂ ಸಾಲ ಖಾತ್ರಿ ನಿಗಮ ಇರುವುದಿಲ್ಲ. ಅದರ ಸ್ಥಳದಲ್ಲಿ ಇನ್ಯಾವುದೇ ಸಂಸ್ಥೆಯನ್ನು ಮಸೂದೆಯಲ್ಲಿ ಸೂಚಿಸಿಲ್ಲ.

ಠೇವಣಿ ವಿಮೆಯಂತಹ ವ್ಯವಸ್ಥೆಯಿಂದಾಗಿ ಜನರಲ್ಲಿ ತಮ್ಮ ಠೇವಣಿಯ ಬಗ್ಗೆ ಸ್ವಲ್ಪಮಟ್ಟಿನ ವಿಶ್ವಾಸ ಮೂಡಿತ್ತು. ಅದಕ್ಕಿಂತ ಹೆಚ್ಚಾಗಿ ಈ ಎಲ್ಲಾ ಬ್ಯಾಂಕುಗಳೂ ಸರಕಾರಿ ಸ್ವಾಮ್ಯದ ಬ್ಯಾಂಕುಗಳಾದ್ದರಿಂದ, ಅವು ವಿಫಲವಾಗುವುದಕ್ಕೆ ಸರಕಾರ ಬಿಡುವುದಿಲ್ಲ ಎಂಬ ನಂಬಿಕೆ ಅವರಿಗೆ ಹೆಚ್ಚಿನ ಸುರಕ್ಷೆಯ ಭಾವನೆಯನ್ನು ಮೂಡಿಸಿತ್ತು. ಈ ನಂಬಿಕೆಯಿಂದಲೇ ಲಕ್ಷಾಂತರ ಠೇವಣೆದಾರರು ಅದರಲ್ಲೂ ವಿಶೇಷವಾಗಿ ಪಿಂಚಣಿದಾರರು ಹಾಗೂ ಹಿರಿಯ ಪ್ರಜೆಗಳು ತಮ್ಮ ಆದಾಯವನ್ನು ಠೇವಣಿಯ ರೂಪದಲ್ಲಿ ಬ್ಯಾಂಕಿನಲ್ಲಿ ಇಡುತ್ತಿದ್ದರು. ಅಂತಹ ಠೇವಣಿಗಳಿಗೆ ಶೇರು, ಮ್ಯುಚುಯಲ್ ಫಂಡ್ ಅಂತಹ ಇನ್ನಿತರ ಹೂಡಿಕೆಗಳಲ್ಲಿ ಸಿಗುತ್ತಿದ್ದ ಬಡ್ಡಿಗಿಂತ ಕಡಿಮೆ ಬಡ್ಡಿ ಸಿಗುತ್ತಿತ್ತು. ಆದರೂ ಬ್ಯಾಂಕಿನ ಮೇಲಿನ ವಿಶ್ವಾಸದಿಂದಾಗಿ ಅವರು ಅಲ್ಲೇ ಠೇವಣಿ ಇಡುತ್ತಿದ್ದರು. ಇನ್ನು ಮುಂದೆ ಅದೇ ವಿಶ್ವಾಸ ಉಳಿಯುವುದು ಕಷ್ಟ. ಒಂದು ಕಾಲದಲ್ಲಿ ಜನ ಗೋಲಕದಲ್ಲಿ ಹಣ ಇಡುತ್ತಿದ್ದರು. ಆಗ ಅವರು ಬ್ಯಾಂಕುಗಳನ್ನು ನಂಬುತ್ತಿರಲಿಲ್ಲ. ಅದನ್ನೆಲ್ಲಾ ಯಾರೋ ಅಪರಿಚಿತ ಖಾಸಗಿ ವ್ಯಕ್ತಿಗಳು ನಿಯಂತ್ರಿಸುತ್ತಿರುತ್ತಾರೆ. ಅವರೆಲ್ಲಾ ಯಾವುದಕ್ಕೂ ಹಿಂಜರಿಯದ ಜನ ಅನ್ನುವ ಭಾವನೆ ಇತ್ತು. ಬ್ಯಾಂಕ್ ರಾಷ್ಟ್ರೀಕರಣವಾದ ಮೇಲೆ ಪರಿಸ್ಥಿತಿ ಬದಲಾಯಿತು. ಬ್ಯಾಂಕುಗಳೆಲ್ಲಾ ಸರಕಾರದ ಮಾಲಕತ್ವಕ್ಕೆ ಬಂದವು. ಸರಕಾರ ಯಾವುದೇ ಕಾರಣಕ್ಕೂ ಠೇವಣಿದಾರರ ಹಿತಾಸಕ್ತಿಗಳನ್ನು ಬಿಟ್ಟುಕೊಡುವುದಿಲ್ಲ, ತಮ್ಮ ಠೇವಣಿ ಬ್ಯಾಂಕ್‌ನಲ್ಲಿ ಸುರಕ್ಷಿತವಾಗಿರುತ್ತದೆ ಎನ್ನುವ ವಿಶ್ವಾಸ ಜನರಲ್ಲಿ ಮೂಡಿತು. ಈಗ ಆ ಭರವಸೆ ಕಡಿಮೆಯಾಗಿದೆ. ನೋಟು ಅಮಾನ್ಯದಿಂದ ಜನರಿಗೆ ನಗದಿನಲ್ಲಿ ವಿಶ್ವಾಸ ಕಡಿಮೆಯಾಗಿದೆ.

ಈಗ ನಗದಿನಲ್ಲಾಗಲೀ ಹಾಗೂ ಬ್ಯಾಂಕಿನ ಠೇವಣಿಯ ರೂಪದಲ್ಲಾಗಲಿ, ಹಣವನ್ನು ಉಳಿತಾಯ ಮಾಡುವುದು ಸುರಕ್ಷಿತವಲ್ಲ. ರಾಜ್ಯದ ಮಾಲಕತ್ವದಲ್ಲಿರುವ ವಿಮೆ ಹಾಗೂ ಇತರ ಹಣಕಾಸು ಕಂಪೆನಿಗಳಿಗೂ ಎಫ್‌ಆರ್‌ಡಿಐ ಮಸೂದೆ ಅನ್ವಯವಾಗುತ್ತದೆ. ಹಾಗಾಗಿ ಅವೂ ಕೂಡ ಸಣ್ಣಪುಟ್ಟ ಉಳಿತಾಯಗಾರರಿಗೆ ಆಕರ್ಷಕ ಯೋಜನೆಗಳಲ್ಲ. ಅಂದರೆ ಇಂದಿನ ಆರ್ಥಿಕತೆಯಲ್ಲಿ ಜನ ನಗದಿನ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಅವರಿಗೆ ಚಿನ್ನ, ಭೂಮಿ ಇಂತಹ ಆಸ್ತಿಗಳಲ್ಲಿ ಹಣತೊಡಗಿಸುವುದು ಹೆಚ್ಚು ‘ಸುರಕ್ಷಿತ’ ಅನ್ನಿಸುತ್ತಿದೆ. ಹೀಗೆ ಜನ ನಗದನ್ನು ಬಿಟ್ಟು ಬೇರೆ ರೀತಿಯ ಉಳಿತಾಯದ ಕಡೆ ವಾಲುತ್ತಿರುವುದು ಅರ್ಥಶಾಸ್ತ್ರದ ದೃಷ್ಟಿಯಿಂದ ಒಂದು ಹಿನ್ನ್ನಡೆ. ಆದರೆ ಬಿಜೆಪಿ ಆ ನಿಟ್ಟಿನಲ್ಲೇ ಸಾಗುತ್ತಿದೆ.

ಎಫ್‌ಆರ್‌ಡಿಐ ಅನ್ನುವುದು ಬಿಜೆಪಿ ಸರಕಾರದ ಚಿಂತನೆಯಲ್ಲ ನಿಜ. ಅದನ್ನು ಹಣಕಾಸು ಸುಸ್ಥಿರ ಸಮಿತಿ ಸೂಚಿಸಿದ್ದು. 2008ರ ಜಾಗತಿಕ ಹಣಕಾಸು ಬಿಕ್ಕಟ್ಟಿನ ಸಂದರ್ಭದಲ್ಲಿ ಸುಸ್ಥಿರ ಸಮಿತಿಯನ್ನು ಸ್ಥಾಪಿಸಲಾಯಿತು. ಭವಿಷ್ಯದಲ್ಲಿ ಹಾಗೆ ಬಿಕ್ಕಟ್ಟಿನಲ್ಲಿ ಸಿಲುಕಿದ ಹಣಕಾಸು ಸಂಸ್ಥೆಗಳನ್ನು ರಕ್ಷಿಸುವುದಕ್ಕೆಂದು ಬಜೆಟ್ಟಿನ ಸಂಪನ್ಮೂಲಗಳನ್ನು ಬಳಸುವಂತಾಗಬಾರದು ಅನ್ನುವ ಉದ್ದೇಶದಿಂದ ಅದನ್ನು ರೂಪಿಸಲಾಗಿತ್ತು. ಅಮೆರಿಕದ ಹಣಕಾಸು ವ್ಯವಸ್ಥೆ ಆ ಸಮಯದಲ್ಲಿ ಅದನ್ನು ಸ್ಥಾಪಿಸಿತ್ತು. ಹಣಕಾಸು ಸುಸ್ಥಿತಿ ಸಮಿತಿಯ ಶಿಫಾರಸುಗಳನ್ನು ಒಪ್ಪಿಕೊಂಡ ಜಿ-20ದೇಶಗಳಲ್ಲಿ ಭಾರತ ಕೂಡ ಒಂದು. ಆ ಅಂಗೀಕಾರದ ಪರಿಣಾಮವೇ ಎಫ್‌ಆರ್‌ಡಿಐ ಮಸೂದೆ.

ಆದರೆ ಖಾಸಗಿ ಒಡೆತನದ ಹಣಕಾಸು ವ್ಯವಸ್ಥೆಯನ್ನು ಉಳಿಸುವುದಕ್ಕೆ ತೆರಿಗೆದಾರರ ಹಣ ಬಳಸುವುದಕ್ಕೂ ಸರಕಾರಿ ಸ್ವಾಮ್ಯದ ಹಣಕಾಸು ವ್ಯವಸ್ಥೆಯನ್ನು ಉಳಿಸುವುದಕ್ಕೆ ಅದನ್ನು ಬಳಕೆ ಮಾಡಿಕೊಳ್ಳುವುದಕ್ಕೂ ಒಂದು ಮೂಲಭೂತವಾದ ವ್ಯತ್ಯಾಸವಿದೆ. ಖಾಸಗಿ ವ್ಯವಸ್ಥೆಗೆ ಒಂದು ಲೆಜಿಟಿಮೆಸಿ-ನ್ಯಾಯಸಮ್ಮತಿ ಇರುವುದಿಲ್ಲ. ಸರಕಾರಿ ಸ್ವಾಮ್ಯದ ವ್ಯವಸ್ಥೆಗೆ ಲೆಜಿಟಿಮೆಸಿ ಇರುತ್ತದೆ. ಜೊತೆಗೆ ಪರಿಸ್ಥಿತಿ ಗಂಭೀರವಾಗುವವರೆಗೆ ಸರಕಾರ ಕಾಯಬೇಕಾ ಗಿಲ್ಲ. ತನ್ನ ಸ್ವಾಮ್ಯದಲ್ಲಿರುವ ಬ್ಯಾಂಕುಗಳು ಕೆಟ್ಟ ಸಾಲದಲ್ಲಿ ಸಿಲುಕದಂತೆ ರಕ್ಷಿಸಲು ಮೊದಲೇ ಕ್ರಮತೆಗೆದುಕೊಳ್ಳಬಹುದು. ಹಾಗೆ ಮುನ್ನೆಚ್ಚರಿಕೆಯ ಕ್ರಮ ತೆಗೆದುಕೊಂಡರೆ ಬ್ಯಾಂಕುಗಳನ್ನು ಉಳಿಸುವುದಕ್ಕೆ ತೆರಿಗೆದಾರರ ಹಣವನ್ನು ಬಳಸಬೇಕಾದ ಪ್ರಮೇಯವೇ ಬರುವುದಿಲ್ಲ. ಮುಂದುವರಿದ ರಾಷ್ಟ್ರಗಳು ಅನುಭವಿಸಿದ ಸ್ಥಿತಿಯಂತೂ ಖಂಡಿತಾ ಬರುವುದಿಲ್ಲ. ಆ ಪ್ರಮಾಣದ ಹಣವೂ ಬೇಕಾಗುವುದಿಲ್ಲ. ಆಗಿನ ಬಿಕ್ಕಟ್ಟಿನ ಪರಿಸ್ಥಿತಿಯಲ್ಲೂ ಭಾರತದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಇಂತಹ ಅಪಾಯಕಾರಿ ಆಸ್ತಿಯ ಪ್ರಮಾಣ ತುಂಬಾ ಕಡಿಮೆ ಇತ್ತು. ಹಾಗಾಗಿ ಖಾಸಗಿ-ಕ್ಷೇತ್ರದ ಬೆಳವಣಿಗೆಯನ್ನು ಅತ್ಯುತ್ಸಾಹದಿಂದ ಪ್ರಚಾರ ಮಾಡುತ್ತಿದ್ದವರಿಗೂ ರಾಷ್ಟ್ರೀಕರಣದಿಂದ ಭಾರತಕ್ಕೆ ಅನುಕೂಲ ವಾಗಿದೆ ಎಂದು ಒಪ್ಪಿಕೊಳ್ಳುವುದು ಅನಿವಾರ್ಯವಾಗಿತ್ತು. ಹಾಗಾಗಿ ಭಾರತದಲ್ಲಿ ಶ್ರೀಮಂತ ಬಂಡವಾಳಶಾಹಿ ರಾಷ್ಟ್ರಗಳು ರೂಪಿಸಿರುವ ಸಾಕಷ್ಟು ಬಂಡವಾಳ ಉಳಿಸಿಕೊಳ್ಳುವ ನಿಯಮ ಅಥವಾ ಬೇಲ್‌ಔಟ್‌ಗೆ ಬದಲಾಗಿ ಬೇಲ್‌ಇನ್ ವ್ಯವಸ್ಥೆ, ಇವೆಲ್ಲಾ ತೀರಾ ಅಸಂಗತ ಕ್ರಮಗಳು. ಆದರೆ ಬಿಜೆಪಿ ಸರಕಾರಕ್ಕೆ ನಮ್ಮ ಆರ್ಥಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ತನ್ನದೇ ಆದ ಯಾವುದೇ ಕಲ್ಪನೆಯೂ ಇಲ್ಲ. ಅದು ನವ-ಉದಾರವಾದಿ ಪಂಡಿತರು ಹೇಳುವ ಕ್ರಮಗಳನ್ನು ಕುರುಡಾಗಿ ಅನುಸರಿಸುತ್ತಿೆ. ಅದಕ್ಕೆ ಇವೆಲ್ಲಾ ಅರ್ಥವಾಗುತ್ತಿಲ್ಲ.

ಠೇವಣಿದಾರರ ಠೇವಣಿಗೆ ಯಾವುದೇ ಬಗೆಯ ಆತಂಕವೂ ಇಲ್ಲ. ಅದನ್ನು ರಕ್ಷಿಸಲಾಗುತ್ತದೆ ಎಂದು ಅರುಣ್ ಜೇಟ್ಲಿ ಭರವಸೆ ಕೊಟ್ಟಿದ್ದಾರೆ. ಆದರೆ ಅದು ಹೇಗೆ ಎಂಬುದು ಸ್ಪಷ್ಟವಾಗಿಲ್ಲ. ಬ್ಯಾಂಕಿನ ಪರಿಸ್ಥಿತಿ ಗಂಭೀರವಾದಾಗ ಯಾವುದನ್ನೆಲ್ಲಾ ರಕ್ಷಿಸಬೇಕು ಅಂತ ಎಫ್‌ಆರ್‌ಡಿಐ ಒಂದು ಪಟ್ಟಿಯನ್ನು ಕೊಟ್ಟಿದೆ. ಅದರಲ್ಲಿ ವಿಮೆ ಇಲ್ಲದ ಠೇವಣಿ ಐದನೆಯದು. ಅವರ ಠೇವಣಿಯ ಮೌಲ್ಯದಲ್ಲಿ ಯಾವುದೇ ನಷ್ಟವು ಆಗುವುದಿಲ್ಲ ಎಂದು ಹೇಳಲಾಗುತ್ತಿದೆ. ಅವರ ಠೇವಣಿಗಳನ್ನು ಇಕ್ವಿಟಿಗೆ ಪರಿವರ್ತಿಸಲಾಗುತ್ತದೆ. ಅಂದರೆ ಬ್ಯಾಂಕುಗಳ ಸ್ಥಿತಿ ಗಂಭೀರಗೊಂಡಾಗ ಅದು ಠೇವಣಿದಾರರ ನಿಧಿಯನ್ನು ಬಳಸಿಕೊಂಡು ತಾವಾಗಿಯೇ ಬಂಡವಾಳ ಹೂರಣ ಮಾಡಿಕೊಳ್ಳಬೇಕು. ಈಗಿನಂತೆ ಬಜೆಟ್ಟಿನಲ್ಲಿ ಅದಕ್ಕಾಗಿ ಯಾವುದೇ ಸಂಪನ್ಮೂಲವನ್ನು ಬಳಸಲಾಗುವುದಿಲ್ಲ. ಈ ಕ್ರಮದಿಂದ ಠೇವಣಿದಾರರಿಗೆ ರಕ್ಷಣೆ ಸಿಗುವುದಕ್ಕಿಂತ ಹೆಚ್ಚಾಗಿ ಸರಕಾರಿ ಕ್ಷೇತ್ರದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವುದಕ್ಕೆ ಒಂದು ಕಳ್ಳದಾರಿ ಸಿಕ್ಕಂತಾಯಿತು ಅಷ್ಟೆ.

ಇದರಿಂದ ಠೇವಣಿದಾರರಿಗೆ ರಕ್ಷಣೆ ಸಿಗುವುದಿಲ್ಲ. ಯಾಕೆಂದರೆ ಬ್ಯಾಂಕುಗಳು ಸಂಕಷ್ಟದಲ್ಲಿದ್ದಾಗ ಠೇವಣಿಯನ್ನು ಇಕ್ವಿಟಿಯಲ್ಲಿ ಹೂಡುತ್ತದೆ. ಆಗ ಸ್ವಾಭಾವಿಕವಾಗಿಯೇ ಇಕ್ವಿಟಿಗಳ ಬೆಲೆಯೂ ಕುಸಿದಿರುತ್ತದೆ. ಹಾಗಾಗಿ ಆ ಪ್ರಕ್ರಿಯೆಯಲ್ಲಿ ಠೇವಣಿದಾರರಿಗೆ ಸಾಕಷ್ಟು ನಷ್ಟವಾಗುತ್ತದೆ. ಜೊತೆಗೆ ತಮ್ಮ ಹಣವನ್ನು ಭಾಗಶಃ ಆದರೂ ಮರಳಿಪಡೆಯುವ ದೃಷ್ಟಿಯಿಂದ ಅವರು ಈ ಇಕ್ವಿಟಿಗಳನ್ನು ಖಾಸಗಿ ಕಾರ್ಪೊರೇಟುಗಳಿಗೆ ಮಾರುವ ಸಾಧ್ಯತೆಗಳೇ ಹೆಚ್ಚು. ಅಂದರೆ ಇದು ಹೆಚ್ಚುಕಮ್ಮಿ ಸರಕಾರಿ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಿದಂತೆ. ನಿರ್ಣಾಯಕ ಸಮಿತಿಯಲ್ಲಿರುವ ಕೆಲವು ಸರಕಾರಿ ಪ್ರತಿನಿಧಿಗಳು ಸರಕಾರಿ ಕ್ಷೇತ್ರದ ಬ್ಯಾಂಕುಗಳು ಖಾಸಗಿಯವರ ಕೈಗೆ ಹೋಗುವುದಕ್ಕೆ ಅನುಕೂಲ ಮಾಡಿಕೊಡಬಹುದು ಅಷ್ಟೆ. ಅಷ್ಟೇ ಅಲ್ಲ ಖಾಸಗಿ ಕಾರ್ಪೊರೇಟು ಗಳಿಗೆ ತೀರಾ ಅಗ್ಗದ ಬೆಲೆಗೆ ಕೊಟ್ಟುಬಿಡಲೂ ಬಹುದು. ಅದು ಪಾರ್ಲಿಮೆಂಟಿನ ಗಮನಕ್ಕೆ ಬರುವ ಆವಶ್ಯಕತೆಯೇ ಇಲ್ಲ. ಎಲ್ಲವೂ ಕೆಲವು ಅಧಿಕಾರಿಗಳ ಮರ್ಜಿಗೆ ಬಿಟ್ಟ ವಿಷಯವಾಗಿಬಿಡುತ್ತದೆ.

 ಹಾಗಂತ ಬ್ಯಾಂಕುಗಳನ್ನು ರಕ್ಷಿಸುವುದಕ್ಕೆ ತೆರಿಗೆದಾರರ ಹಣವನ್ನು ಬಳಸುವುದು ಸರಿಯಾ ಅಂತ ಕೇಳಬಹುದು. ಅದಕ್ಕೆ ತಾತ್ವಿಕವಾದ ಉತ್ತರ ಹೌದು. ಬ್ಯಾಂಕುಗಳು ತಮ್ಮ ಸಾಮಾಜಿಕ ಕರ್ತವ್ಯವನ್ನು ಪಾಲಿಸುತ್ತಿದ್ದರೆ ಹಾಗೆ ಮಾಡುವುದು ಸರಿ. ಆದರೆ ಬ್ಯಾಂಕುಗಳು ಸಟ್ಟಾ ವ್ಯವಹಾರದಲ್ಲಿ ಎದ್ದ ಗುಳ್ಳೆಗಳಿಗೆ ಹಣಕಾಸು ನೀಡುತ್ತಾ ಸಂಕಷ್ಟಕ್ಕೆ ಸಿಲುಕಿದ್ದರೆ ಅವರನ್ನು ರಕ್ಷಿಸುವುದಕ್ಕೆ ತೆರಿಗೆದಾರರ ಹಣ ಬಳಸುವುದು ನ್ಯಾಯವಲ್ಲ. ಆದರೆ ರಾಷ್ಟ್ರೀಕೃತ ಬ್ಯಾಂಕುಗಳು ಇರುವುದು ಈ ಕೆಲಸಕ್ಕಲ್ಲ. ಅಂದರೆ ತೆರಿಗೆದಾರರ ಹಣ ತಾತ್ವಿಕವಾಗಿ ರಾಷ್ಟ್ರೀಕೃತ ಬ್ಯಾಂಕುಗಳನ್ನು ರಕ್ಷಿಸುವುದಕ್ಕೆ ಬಳಸಬಹುದು. ಆದರೆ ಅಂತಹ ಬ್ಯಾಂಕುಗಳ ಚಟುವಟಿಕೆಗಳ ಮೇಲೆ ಒಂದು ಪ್ರಜಾಸತ್ತಾತ್ಮಕ ನಿಯಂತ್ರಣ ಇರಬೇಕು. ಅವುಗಳು ಕೇವಲ ಸರಕಾರಿ ಒಡೆತನದ ಸಂಸ್ಥೆಗಳಾದರೆ ಸಾಲದು, ಅವುಗಳನ್ನು ನಿಯಂತ್ರಿಸುವ ಪ್ರಜಾಸತ್ತಾತ್ಮಕ ವ್ಯವಸ್ಥೆಯೂ ಇರಬೇಕು. ಆಗಷ್ಟೇ ಅವುಗಳಿಗೆ ತೆರಿಗೆದಾರರ ನೆರವು ಸಿಗಬಹುದು.

ತೆರಿಗೆದಾರರು ಹಾಗೂ ಠೇವಣಿದಾರರ ನಡುವೆ ಒಂದು ರೀತಿಯ ಬಿರುಕನ್ನು ಮೂಡಿಸುವ ಪ್ರಯತ್ನ ನಡೆಯುತ್ತಿದೆ. ಇದು ನಮ್ಮ ಗಮನವನ್ನು ಬೇರೆಡೆಗೆ ಸೆಳೆದು ಎಫ್‌ಆರ್‌ಡಿಐ ಜಾರಿಗೆ ತರುವ ಒಂದು ಯತ್ನವಷ್ಟೆ. ಬ್ಯಾಂಕುಗಳ ಸುಸ್ತಿ ಸಾಲಕ್ಕೆ ಸಂಬಂಧಿಸಿದಂತೆ ಸಾಕಷ್ಟು ಗದ್ದಲ ಸೃಷ್ಟಿಯಾಗಿದೆ. ಆದರೆ ಹೀಗೆ ಹಿಂದಿರುಗಿ ಬಾರದ ಒಟ್ಟು ಸಾಲದ ಮೊತ್ತ, ಒಟ್ಟು ಬ್ಯಾಂಕುಗಳ ಸಾಲದ ಶೇ. 12ರಷ್ಟೂ ಇಲ್ಲ. ಅದರಲ್ಲೂ ಶೇ. 90ರಷ್ಟು ರಾಷ್ಟ್ರೀಕೃತ ಬ್ಯಾಂಕುಗಳ ಸಾಲಗಳು. ಒಟ್ಟಾರೆ ಬ್ಯಾಂಕಿಂಗ್ ವ್ಯವಹಾರವನ್ನು ಗಮನಿಸಿದರೆ ಅದೂ ಗಾಬರಿಯಾಗುವಷ್ಟು ಹೆಚ್ಚಲ್ಲ. ಜೊತೆಗೆ ಸರಕಾರ 2.11 ಲಕ್ಷ ಕೋಟಿ ರೂಪಾಯಿಗಳ ಮರುಹೂರಣವನ್ನು ಮಾಡಿದೆ. ಹಾಗಾಗಿ ಅಂತಹ ಬ್ಯಾಂಕುಗಳ ಸ್ಥಿತಿ ಸದ್ಯಕ್ಕೆ ತೀರಾ ಗಂಭೀರವಾಗಿಬಿಡುವ ಸಾಧ್ಯತೆಗಳಿಲ್ಲ. ತೆರಿಗೆದಾರರು ಹಾಗೂ ಠೇವಣಿದಾರರ ನಡುವಿನ ಹಿತಾಸಕ್ತಿಯಲ್ಲಿ ಬಿರುಕಿದೆ ಎನ್ನುವ ನೆಪದಲ್ಲಿ ಅದನ್ನು ಪಾರ್ಲಿಮೆಂಟಿನಲ್ಲಿ ಮಂಡಿಸಲಾಗಿದೆ. ಅಂತಹ ಬಿರುಕು ಉಂಟಾಗುವ ಸಾಧ್ಯತೆಗಳು ಕಡಿಮೆ. ನಾವು ಜಾಗ್ರತೆಯಿಂದ ಇದ್ದರೆ ಅದನ್ನು ತಪ್ಪಿಸಬಹುದು. ಹಾಗಾಗಿ ಆ ಸಮರ್ಥನೆ ಅಸಂಗತ ಅಷ್ಟೇ ಅಲ್ಲ ಅದು ನಿಜವಾಗಿ ಕಿಡಿಗೇಡಿತನ.

ಸಾಲ ಮರುಪಾವತಿಸದ ಕಾರ್ಪೊರೇಟುಗಳು ಹಣಮರು ಪಾವತಿ ಮಾಡುವುದಕ್ಕೆ ಸರಕಾರ ಕ್ರಮತೆಗೆದುಕೊಳ್ಳಬೇಕು. ಅದನ್ನು ಬಿಟ್ಟು, ಠೇವಣಿದಾರರು ಅಂತಹ ಕಾರ್ಪೊರೇಟುಗಳ ದುರ್ಬಳಕೆಗೆ ದಂಡ ತೆರುವಂತೆ ಮಾಡುತ್ತಿರುವುದು ದೊಡ್ಡ ಅಣಕ. ಒಟ್ಟು ಸುಸ್ತಿಸಾಲದಲ್ಲಿ ಈ ಕಾರ್ಪೊರೇಟ್‌ಗಳ ಪಾಲು ಶೇ. 75ರಷ್ಟಿದೆ. ನಿಜವಾಗಿ ಠೇವಣೆದಾರರ ಸಂಪನ್ಮೂಲವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವವರು ಅವರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)