varthabharthi

ಸಂಪಾದಕೀಯ

ನ್ಯಾಯಕ್ಕಾಗಿ ಬೀದಿಗಿಳಿದ ಸುಪ್ರೀಂಕೋರ್ಟ್

ವಾರ್ತಾ ಭಾರತಿ : 13 Jan, 2018

ಈ ದೇಶದ ಪ್ರಜಾಸತ್ತೆಯನ್ನು ಕಳೆದ ಆರು ದಶಕಗಳಿಂದ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿಕೊಂಡು ಬಂದಿರುವ ಸುಪ್ರೀಂಕೋರ್ಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಬೀದಿಯಲ್ಲಿ ನಿಂತು ‘ಪ್ರಜಾಪ್ರಭುತ್ವ ಅಪಾಯದಲ್ಲಿದೆ’ ಎಂದು ಗಂಟಾಘೋಷವಾಗಿ ಹೇಳುತ್ತಿದೆ. ನೆರೆಯ ಪಾಕಿಸ್ತಾನದಲ್ಲಿ ನಾವು ವೀಕ್ಷಿಸುತ್ತಾ ಬಂದಿರುವ ವಿದ್ಯಮಾನಗಳು ಇದೀಗ ಭಾರತದಲ್ಲೂ ಸಂಭವಿಸುತ್ತಿರುವುದು ಭಾರತ ‘ವಿಶ್ವಗುರು’ ಆಗುವ ಸೂಚನೆಯಂತೂ ಅಲ್ಲ. ಮೈ ತುಂಬಾ ಕ್ರಿಮಿನಲ್ ಆರೋಪಗಳನ್ನು ಹೊತ್ತ ನಾಯಕರ ಕೈಗೆ ಈ ದೇಶದ ಚುಕ್ಕಾಣಿ ಸಿಕ್ಕಿದಾಗ ಅವರು ಮಾಡುವ ಮೊತ್ತ ಮೊದಲ ಕೆಲಸವೇ, ನ್ಯಾಯ ವ್ಯವಸ್ಥೆಯಲ್ಲಿ ಹಸ್ತಕ್ಷೇಪ. ನರೇಂದ್ರ ಮೋದಿಯ ನೇತೃತ್ವದ ಸರಕಾರ ಕೇಂದ್ರದಲ್ಲಿ ಅಧಿಕಾರ ಹಿಡಿದ ಬೆನ್ನಿಗೇ ಇಂತಹ ಹಸ್ತಕ್ಷೇಪ ಮಾಧ್ಯಮಗಳಲ್ಲಿ ಚರ್ಚೆಯ ವಸ್ತುವಾಯಿತು. ನ್ಯಾಯಾಧೀಶರ ಆಯ್ಕೆಯ ವಿಷಯ ನ್ಯಾಯಾಂಗ ಮತ್ತು ಶಾಸಕಾಂಗದ ನಡುವಿನ ತಿಕ್ಕಾಟದ ವಿಷಯವಾಯಿತು. ಸರಕಾರ ಬಹಿರಂಗವಾಗಿಯೇ ನ್ಯಾಯಾಂಗ ವ್ಯವಸ್ಥೆಯ ಮೇಲೆ ಹಸ್ತಕ್ಷೇಪ ನಡೆಸಲು ಯತ್ನಿಸಿ ಮುಖಭಂಗವನ್ನೂ ಅನುಭವಿಸಿತು. ಅಲ್ಲಿಂದ ಆರಂಭವಾದ ತಿಕ್ಕಾಟ ಇದೀಗ ಸುಪ್ರೀಂಕೋರ್ಟ್‌ನ ನಾಲ್ವರು ಹಿರಿಯ, ಮುತ್ಸದ್ದಿ ನ್ಯಾಯಾಧೀಶರು ಸಾರ್ವಜನಿಕವಾಗಿ ಪತ್ರಿಕಾಗೋಷ್ಠಿ ಮಾಡಿ ತಮ್ಮ ಅಹವಾಲನ್ನು ದೇಶದ ಮುಂದಿಟ್ಟು ಸುಪ್ರೀಂಕೋರ್ಟ್‌ಗೆ ನ್ಯಾಯ ಕೊಡಿ ಎಂದು ಕೇಳುವ ಹಂತಕ್ಕೆ ತಲುಪಿದೆ.

 ಇಡೀ ದೇಶವೇ ತಲ್ಲಣಿಸುವಂತಹ ಈ ಬೆಳವಣಿಗೆಗಳಿಗೆ ಕಾರಣಗಳನ್ನು ಹುಡುಕುತ್ತಾ ಹೋದಂತೆ ಅದು ಮತ್ತೆ ಸರಕಾರದ ಬುಡಕ್ಕೇ ಬಂದು ನಿಲ್ಲುತ್ತದೆ. ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣ ಮುನ್ನೆಲೆಗೆ ಬರುತ್ತದೆ. ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್‌ನಲ್ಲಿ ಆಗ ಗುಜರಾತಿನ ಗೃಹ ಸಚಿವರಾಗಿದ್ದ, ಹಾಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ, ಪ್ರಧಾನಿ ಮೋದಿಯ ಅತ್ಯಂತ ಆಪ್ತರೂ ಆಗಿರುವ ಅಮಿತ್ ಶಾ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು. ಈ ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ವಿಚಾರಣೆಯನ್ನು ಸಿಬಿಐ ವಿಶೇಷ ನ್ಯಾಯಾಧೀಶರಾಗಿರುವ ಬಿ. ಎಚ್. ಲೋಯಾ ಅವರು ನಡೆಸುತ್ತಿದ್ದ ಸಂದರ್ಭದಲ್ಲಿ, ಅವರಿಗೆ ನೂರು ಕೋಟಿ ರೂಪಾಯಿಯ ಆಮಿಷವನ್ನು ಇನ್ನೊಬ್ಬ ನ್ಯಾಯಾಧೀಶರು ಒಡ್ಡಿದ್ದರು ಎಂದು ಕುಟುಂಬ ಆರೋಪಿಸಿದೆ. ಆದರೆ ಲೋಯಾ ಅವರು ಇದಕ್ಕೆ ಒಪ್ಪಿರಲಿಲ್ಲ. ಇದಾದ ಬಳಿಕ ಲೋಯಾ ಅವರು ನಿಗೂಢವಾಗಿ ಮೃತಪಟ್ಟರು. ಸರಕಾರ ಅವರ ಸಾವನ್ನು ಹೃದಯಾಘಾತ ಎಂದು ಘೋಷಿಸಿತ್ತು. ಆದರೆ ಅವರ ಮೃತದೇಹದಲ್ಲಿ ಗಾಯಗಳಿದ್ದವು ಎಂದು ಕುಟುಂಬ ಆರೋಪ ಮಾಡಿದೆ. ವಿಶೇಷವೆಂದರೆ, ಅವರು ತೀರಿ ಹೋದ ಎರಡೇ ವಾರದಲ್ಲಿ ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣದ ವಿಚಾರಣೆ ನಡೆಸಿದ ಹೊಸ ನ್ಯಾಯಾಧೀಶರು ಅಮಿತ್ ಶಾ ಅವರನ್ನು ಪ್ರಕರಣದಿಂದ ಮುಕ್ತಗೊಳಿಸಿದರು. ಇದೀಗ ಲೋಯಾ ಅವರ ಸಾವು ಕೊಲೆಯೋ-ಹೃದಯಾಘಾತವೋ ಎಂಬ ಚರ್ಚೆ ಎದ್ದಿದೆ. ಲೋಯಾ ಅವರದು ಕೊಲೆಯಾಗಿದ್ದರೆ, ಆ ಕೊಲೆಯ ಅಗತ್ಯ ಯಾರದಾಗಿತ್ತು ಎನ್ನುವುದನ್ನು ಊಹಿಸುವುದು ತೀರಾ ಸುಲಭ. ಇದೇ ಸಂದರ್ಭದಲ್ಲಿ ಲೋಯಾ ಅವರಿಗೆ ನೂರು ಕೋಟಿ ರೂಪಾಯಿ ಆಮಿಷ ಒಡ್ಡಿರುವ ಹಿಂದೆ ಯಾರಿದ್ದಾರೆ ಎನ್ನುವುದೂ ತನಿಖೆಗೆ ಅರ್ಹವಾಗಿರುವ ವಿಷಯ. ಲೋಯಾ ಅವರ ಸಾವು ಇದೀಗ ಮತ್ತೆ ನ್ಯಾಯಾಲಯದ ಕಟಕಟೆಯೇರಿದೆ. ‘ನ್ಯಾಯ ವ್ಯವಸ್ಥೆ’ ತನಗೆ ತಾನೇ ನ್ಯಾಯ ದಕ್ಕಿಸಿಕೊಳ್ಳಲು ಒದ್ದಾಟ ನಡೆಸುವಂತಹ ಸ್ಥಿತಿ ಈಗ ನಿರ್ಮಾಣವಾಗಿದೆ. ಆದರೆ ಲೋಯಾ ಪ್ರಕರಣವನ್ನು ತನಗೆ ಬೇಕಾದ ನ್ಯಾಯಾಧೀಶರಿಗೆ ವಹಿಸುವ ಮೂಲಕ, ತೀರ್ಪನ್ನು ತನ್ನ ಪರವಾಗಿಸಿಕೊಳ್ಳಲು ಕೆಲವು ಶಕ್ತಿಗಳು ಯತ್ನಿಸುತ್ತಿವೆ ಎನ್ನುವುದು ನಾಲ್ವರು ನ್ಯಾಯಾಧೀಶರ ಪತ್ರಿಾಗೋಷ್ಠಿಯ ಮೂಲಕ ಬಹಿರಂಗವಾಗಿದೆ.

ನಾಲ್ವರು ನ್ಯಾಯಾಧೀಶರು ಇದೀಗ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯ ವಿರುದ್ಧ ಮಾತನಾಡಿದ್ದಾರೆ. ಹೀಗೆ ವಿರುದ್ಧ ಮಾತನಾಡಿರುವ ನ್ಯಾಯಾಧೀಶರು ಅತ್ಯಂತ ಹಿರಿಯರು, ಪ್ರಬುದ್ಧರು ಮತ್ತು ಮುತ್ಸದ್ದಿಗಳೂ ಆಗಿದ್ದಾರೆ ಎನ್ನುವುದು ಗಮನಾರ್ಹ. ಆದುದರಿಂದ, ಇವರ ಮಾತುಗಳನ್ನು ದೇಶ ಗಂಭೀರವಾಗಿ ಆಲಿಸಬೇಕಾಗಿದೆ. ಅವರ ಪತ್ರಿಕಾ ಹೇಳಿಕೆ, ಸುಪ್ರೀಂಕೋರ್ಟ್ ನ್ನು ರಾಜಕೀಯ ಶಕ್ತಿಗಳು ನಿಯಂತ್ರಿಸುತ್ತಿವೆ ಎನ್ನುವುದನ್ನು ಧ್ವನಿಸುತ್ತಿದೆ. ಮುಖ್ಯ ನ್ಯಾಯ ಮೂರ್ತಿಗಳು ಕೆಲವು ಸೂಕ್ಷ್ಮವಾಗಿರುವ, ಗಂಭೀರವಾಗಿರುವ, ದೇಶದ ಹಿತಾಸಕ್ತಿಯ ಮೇಲೆ ಭಾರೀ ಪರಿಣಾಮ ಬೀರುವ ಪ್ರಕರಣಗಳನ್ನು ಕೆಲವು ನಿರ್ದಿಷ್ಟ ನ್ಯಾಯಾಧೀಶರಿಗೆ ಮುಖ್ಯವಾಗಿ ಕಡಿಮೆ ಅನುಭವಿಗಳಾಗಿರುವ ನ್ಯಾಯಾಧೀಶರಿಗೆ ವರ್ಗಾಯಿಸುತ್ತಿದ್ದಾರೆ ಎನ್ನುವುದು ಇವರ ಬಹುಮುಖ್ಯ ಆರೋಪವಾಗಿದೆ. ಅಂತಹ ಸೂಕ್ಷ್ಮ ಪ್ರಕರಣಗಳಲ್ಲಿ ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣವೂ ಒಂದು ಎನ್ನುವುದನ್ನು ಅವರು ಹೇಳಿದ್ದಾರೆ. ಅಂದರೆ ರಾಜಕೀಯ ಶಕ್ತಿಯ ಪರವಾಗಿ ತೀರ್ಪು ಬರುವಂತೆ ಮಾಡಲು ಕೆಲವು ಪ್ರಕರಣಗಳನ್ನು ಉದ್ದೇಶಪೂರ್ವಕವಾಗಿ ನ್ಯಾಯಮೂರ್ತಿಗಳು ಹಂಚುತ್ತಿದ್ದಾರೆ ಎನ್ನುವುದನ್ನು ನ್ಯಾಯಾಧೀಶರು ಪರೋಕ್ಷವಾಗಿ ಹೇಳುತ್ತಿದ್ದಾರೆ. ಇದು ನಿಜವೇ ಆಗಿದ್ದರೆ ದೇದ ಪಾಲಿಗೆ ಇದು ಅಪಾಯಕಾರಿ ಸಂಗತಿ.

 ಸೇನೆಯ ಮೇಲೆ ಸರಕಾರ ನಡೆಸುತ್ತಿರುವ ಹಸ್ತಕ್ಷೇಪಗಳು ಕೆಲ ಸಮಯ ಸುದ್ದಿಯಲ್ಲಿತ್ತು. ತಮ್ಮ ರಾಜಕೀಯ ದುರುದ್ದೇಶಗಳಿಗೆ ಸೇನೆಯನ್ನು ನರೇಂದ್ರ ಮೋದಿ ಬಳಸಿಕೊಂಡದ್ದು ಸಾಕಷ್ಟು ಟೀಕೆಗೂ ಕಾರಣವಾಯಿತು. ಸೇನೆ ನಡೆಸುವ ಕಾರ್ಯಾಚರಣೆಗಳನ್ನು ಸರಕಾರದ ಸಾಧನೆಗಳಿಗೆ ತಳಕು ಹಾಕಿದ್ದು, ಸರ್ಜಿಕಲ್ ದಾಳಿಯ ಬಳಿಕ ಸೇನೆಯಿಂದ ಪತ್ರಿಕಾಗೋಷ್ಠಿ ಮಾಡಿಸಿರುವುದು, ಸೇನೆಯ ಸಾಧನೆಯನ್ನು ಅಂದಿನ ರಕ್ಷಣಾ ಸಚಿವರು ಆರೆಸ್ಸೆಸ್‌ನಂತಹ ಕೋಮುವಾದಿ ಸಂಘಟನೆಗಳ ಹೆಗಲಿಗೆ ರವಾನಿಸಿದ್ದು ಇವೆಲ್ಲವೂ ದೇಶದ ಭದ್ರತೆಯ ಮೇಲೆ, ರಕ್ಷಣೆಯ ಮೇಲೆ ನೇರ ಪರಿಣಾಮ ಉಂಟು ಮಾಡಿದೆ. ಸೇನೆಯ ನೈತಿಕ ಸ್ಥೈರ್ಯದ ಮೇಲೂ ದುಷ್ಪರಿಣಾಮ ಉಂಟು ಮಾಡಿದೆ. ಇದೀಗ, ದೇಶದ ಹಿತಾಸಕ್ತಿಯನ್ನು ಕಾಪಾಡುವ ಇನ್ನೊಂದು ಪ್ರಮುಖ ಅಂಗವಾಗಿರುವ ನ್ಯಾಯ ವ್ಯವಸ್ಥೆಯಲ್ಲೂ ಸರಕಾರ ಹಸ್ತಕ್ಷೇಪ ಮಾಡಲು ಹೋಗಿ ವಿಶ್ವದ ಮುಂದೆ ದೇಶದ ಪ್ರಜಾಸತ್ತೆಯ ಘನತೆಯನ್ನು ಕುಗ್ಗಿಸುವಂತೆ ಮಾಡಿದೆ. ನ್ಯಾಯ ವ್ಯವಸ್ಥೆಯನ್ನು ತನ್ನ ಮೂಗಿನ ನೇರಕ್ಕೆ ಒಬ್ಬ ಸರ್ವಾಧಿಕಾರಿಯಷ್ಟೇ ದುರ್ಬಳಕೆ ಮಾಡಬಲ್ಲ. ನಾಲ್ವರು ನ್ಯಾಯಾಧೀಶರು ಇದನ್ನೇ ದೇಶದ ಮುಂದೆ ಬಹಿರಂಗಪಡಿಸಿದ್ದಾರೆ. ನ್ಯಾಯವ್ಯವಸ್ಥೆ ಪಾರದರ್ಶಕವಾಗದೆ, ಯಾವುದೋ ಒಂದು ರಾಜಕೀಯ ಹಿತಾಸಕ್ತಿಗೆ ಪೂರಕವಾಗಿ ಕೆಲಸ ಮಾಡತೊಡಗಿದರೆ, ಮುಂದಿನ ದಿನಗಳಲ್ಲಿ ದೇಶ ಅಪಾಯಕ್ಕೆ ಸಿಲುಕಿಕೊಳ್ಳಲಿದೆ ಎಂದು ಅವರು ಎಚ್ಚರಿಸಿದ್ದಾರೆ. ಬಹುಶಃ ಇಂದಿರಾಗಾಂಧಿ ಯ ಕಾಲದ ತುರ್ತು ಪರಿಸ್ಥಿತಿಯ ಬಳಿಕ, ದೇಶದಲ್ಲಿ ಇದೇ ಮೊದಲ ಬಾರಿಗೆ ನ್ಯಾಯ ವ್ಯವಸ್ಥೆ ಹೀಗೆ ಬೀದಿಗೆ ಬಿದ್ದಿರುವುದು. ನ್ಯಾಯಾಧೀಶರೇ ತಮ್ಮ ಬದುಕಿನ ಕುರಿತಂತೆ ಅಭದ್ರತೆಯನ್ನು ಹೊಂದಿದರೆ, ಪಾರದರ್ಶಕವಾಗಿ ನ್ಯಾಯ ನೀಡುವ ವಾತಾವರಣ ಸುಪ್ರೀಂಕೋರ್ಟ್‌ನಲ್ಲಿಲ್ಲ ಎಂದು ಹೇಳಿದರೆ ಈ ದೇಶ ಇನ್ನಾರ ಮೇಲೆ ಭರವಸೆ ಇಡಬೇಕು? ಧರೆಯೇ ಹತ್ತಿ ಉರಿದರೆ ಇನ್ನೆಲ್ಲಿ ಉಳಿವು? ಎಂಬಂತಾಗಿದೆ.

 ವರ್ಷಗಳ ಹಿಂದೆ ಒಬ್ಬ ನ್ಯಾಯಾಧೀಶರು ಗಂಡು ನವಿಲಿನ ಕಣ್ಣೀರಿನಿಂದ ಹೆಣ್ಣು ನವಿಲು ಗರ್ಭ ಧರಿಸುತ್ತದೆ ಎಂದು ಮಾಧ್ಯಮಗಳ ಮುಂದೆ ಹೇಳಿ ನ್ಯಾಯವ್ಯವಸ್ಥೆಯನ್ನು ನಗೆಪಾಟಲಿಗೀಡು ಮಾಡಿದ್ದರು. ಅಷ್ಟೇ ಅಲ್ಲ, ಗೋರಕ್ಷಣೆಗೆ ನೀಡಿರುವ ತೀರ್ಪಿಗೆ ತಮ್ಮ ಈ ಉದಾಹರಣೆಯನ್ನು ಸಮರ್ಥನೆಯಾಗಿ ಬಳಸಿಕೊಂಡರು. ಇಂತಹ ನ್ಯಾಯಾಧೀಶರು ತಮ್ಮ ಅಧಿಕಾರಾವಧಿಯಲ್ಲಿ ತನ್ನ ಸ್ಥಾನಕ್ಕೆ ಎಷ್ಟರಮಟ್ಟಿಗೆ ನ್ಯಾಯ ನೀಡಿರಬಹುದು ಎಂಬ ಅನುಮಾನ ಕಾಡುವುದು ಸಹಜವಾಗಿದೆ. ಇದೀಗ ಸರಕಾರ ಇಂತಹ ಗಂಡು ನವಿಲುಗಳನ್ನು ಆಯಕಟ್ಟಿನ ಸ್ಥಾನದಲ್ಲಿ ಕೂರಿಸಿ ಅವರ ಕೈಗೆ ತಮ್ಮ ಮೇಲಿರುವ ಪ್ರಕರಣಗಳನ್ನು ವಿಚಾರಣೆಗೆ ಒಪ್ಪಿಸುತ್ತಿದೆ. ಅಂದರೆ ಹೆಸರಿಗಷ್ಟೇ ವಿಚಾರಣೆ. ಆರೋಪಿಗಳು ತಮ್ಮ ತೀರ್ಪನ್ನು ತಾವೇ ಬರೆದುಕೊಳ್ಳುವಂತಹ ಪರಿಸ್ಥಿತಿ. ಇದು ಹೀಗೇ ಮುಂದುವರಿದರೆ, ಮುಂದಿನ ದಿನಗಳಲ್ಲಿ ಸುಪ್ರೀಂಕೋರ್ಟ್ ಪ್ರಧಾನಿ ಕಚೇರಿಯ ಒಂದು ಭಾಗವಾಗುವ ಮಟ್ಟಕ್ಕೆ ಇಳಿಯಬಹುದು. ಆದುದರಿಂದ ನಾಲ್ವರು ನ್ಯಾಯಾಧೀಶರ ಆತಂಕವನು ್ನ ದೇಶ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ದೇಶದ ಪ್ರಜಾಸತ್ತೆಯ ವರ್ಚಸ್ಸಿಗೆ ಇದು ಧಕ್ಕೆ ತಂದಿದೆ. ಪ್ರಧಾನಿ ತನ್ನ ವೌನ ಮುರಿದು ಸುಪ್ರೀಂಕೋರ್ಟ್‌ನ ಘನತೆಯನ್ನು ಎತ್ತಿ ಹಿಡಿಯುವ ಭರವಸೆಯನ್ನು ನೀಡಬೇಕಾಗಿದೆ. ಸುಪ್ರೀಂಕೋರ್ಟ್‌ನ ಘನತೆಯ ಅಳಿವು ಉಳಿವಿನ ಮೇಲೆಯೇ ಈ ದೇಶದ ಪ್ರಜಾಸತ್ತೆಯ ಅಳಿವು ಉಳಿವು ನಿಂತಿದೆ ಎನ್ನುವ ಎಚ್ಚರಿಕೆಯೊಂದಿಗೆ ಪ್ರಧಾನಿ ಮುಂದಡಿಯಿಡಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)