varthabharthi

ಸುಗ್ಗಿ

ನರೇಂದ್ರ ನಾಯಕ್ ಜೀವನ ಕಥನ

ಮೂಢನಂಬಿಕೆಯೆಂಬ ಮೌಢ್ಯದ ಸುತ್ತ...

ವಾರ್ತಾ ಭಾರತಿ : 13 Jan, 2018
ನಿರೂಪಣೆ: ಸತ್ಯಾ ಕೆ.

 

ಭಾಗ 28

ಅನುಕೂಲ ಶಾಸ್ತ್ರ ನಮ್ಮ ಸಮಾಜದಲ್ಲಿ ಬಹಳವಾಗಿ ಬೇರೂರಿದೆ. ಮುಖ್ಯವಾಗಿ ವಿವಾಹದ ವಿಷಯಗಳಲ್ಲಿ ಎಲ್ಲವೂ ಕ್ರಮಬದ್ಧವಾಗಿರಬೇಕು ಎಂದು ಪಟ್ಟು ಹಿಡಿಯುವವರು ಕೊನೆಗೆ ಬಲಿಬೀಳುವುದು ಮೂಢನಂಬಿಕೆಯೆಂಬ ನಂಬಿಕೆಗೆ. ಸಮಾಜದಲ್ಲಿ ಇಂತಹ ಒಬ್ಬರ ಅತಿಯಾದ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳುವವರೇ ಅಧಿಕ. ಅಂದಹಾಗೆ ಮೌಢ್ಯಗಳ ವಿಚಾರ ಬಂದಾಗ ನಮ್ಮಲ್ಲಿ ಜಾತಿ, ಧರ್ಮದ ಸಂಕೋಲೆಗಳಿರುವುದಿಲ್ಲ. ಎಲ್ಲಾ ಧರ್ಮ, ಜಾತಿಯಲ್ಲೂ ಇದು ಆಳವಾಗಿ ಬೇರೂರಿದೆ. ಮೌಢ್ಯದ ವಿಚಾರದಲ್ಲಿ ನಾವು ಜಾತ್ಯತೀತತೆಯ ಮನಸ್ಥಿತಿಯಲ್ಲಿ ಇದ್ದೇವೆಂದೇ ಹೇಳಬಹುದು.

ದೇಶದಲ್ಲೇ ಸಾಕ್ಷರತೆ, ಅಭಿವೃದ್ಧಿ ಹೊಂದಿದ, ಬುದ್ಧಿವಂತರ ಜಿಲ್ಲೆ ದಕ್ಷಿಣ ಕನ್ನಡ. ಹಾಗಿದ್ದರೂ ನಮ್ಮ ಜಿಲ್ಲೆಯೂ ಈ ಮೂಢನಂಬಿಕೆ, ಪವಾಡ ಪುರುಷ, ಭೂತ ಪ್ರೇತಗಳ ಬಗ್ಗೆ ನಂಬಿಕೆ ಹೊಂದಿರಲು ಕಾರಣ? ಇದನ್ನು ನಾವು ತಿಳಿದುಕೊಳ್ಳಬೇಕಾಗಿದೆ. ಕಳೆದ ಎರಡು ದಶಕಗಳಿಂದಲೂ ಹೆಚ್ಚಿನ ಕಾಲ ಕರ್ನಾಟಕದ ವಿಚಾರವಾದ ಆಂದೋಲನಗಳಲ್ಲಿ ಕಾರ್ಯೋನ್ಮುಖನಾಗಿರುವ ವೇಳೆ ನಾನು ಈ ಬಗ್ಗೆ ನನ್ನ ಅಭಿಪ್ರಾಯ, ವಿಚಾರ ಹಾಗೂ ಅನುಭವಗಳನ್ನು ಹಂಚಿಕೊಂಡಿದ್ದೇನೆ. ನನ್ನ ಅನುಭವಗಳು, ನನ್ನ ಅನಿಸಿಕೆಗಳು ಯಾರನ್ನೂ ಅವಮಾನಿಸುವುದು, ನೋಯಿಸುವುದಲ್ಲ. ಬದಲಾಗಿ ಈ ಮೂಢನಂಬಿಕೆಗಳ ಮೌಢ್ಯಗಳಿಗೆ ಬಲಿಯಾಗಿ ಶೋಷಣೆಗೊಳಗಾಗುವುದನ್ನು ತಪ್ಪಿಸಿ, ಮಾನಸಿಕ ಧೈರ್ಯ ತುಂಬುವುದಷ್ಟೇ ನನ್ನ ಉದ್ದೇಶ.

ಸುಮಾರು ಮೂರು ದಶಕಗಳ ಹಿಂದೆ ಮಂಗಳೂರಿನಿಂದ ಉಡುಪಿಗೆ ತಲುಪಲು ಕನಿಷ್ಠ ಅರ್ಧದಿನ ಬೇಕಾಗಿತ್ತು. ಈಗ ಈ ಪ್ರಯಾಣವನ್ನು ಒಂದೂವರೆ ಎರಡು ಗಂಟೆಯೊಳಗೆ ಪೂರೈಸಬಹುದು. ಅಂದು ಸ್ವಲ್ಪ ಮಟ್ಟಿನ ವ್ಯಾಪಾರ, ಹಂಚು ತಯಾರಿಕೆ, ಬೇಸಾಯ ಬಿಟ್ಟರೆ ಇಲ್ಲಿನ ಜೀವನೋಪಾಯ ಬೇರೆ ಇರಲಿಲ್ಲ. ಆದರೆ ಈಗ ಬ್ಯಾಂಕಿಂಗ್, ಸರಕಾರಿ ಶಿಕ್ಷಣ ಮತ್ತು ಖಾಸಗಿ ಸಂಸ್ಥೆಗಳಲ್ಲಿ ನಮ್ಮವರು ಉದ್ಯೋಗದಲ್ಲಿದ್ದಾರೆ. ಆಧುನಿಯ ವೈದ್ಯಕೀಯ ಸೌಲಭ್ಯಗಳು ಲಭ್ಯವಿದೆ. ಒಂದು ಸಮಯದಲ್ಲಿ ಮಂಗಳೂರಿನವರಿಗೆ ಉದ್ಯೋಗವೆಂದರೆ ಅದು ಮುಂಬೈಗೆ ಹೋಗಿ ಬದುಕು ಕಟ್ಟಿಕೊಳ್ಳುವ ಪರಿಸ್ಥಿತಿ. ಪ್ರಸ್ತುತ ವಿದೇಶದಲ್ಲಿ ಉದ್ಯೋಗವನ್ನು ಅರಸಿ ಹೋಗುವವರು ಹೆಚ್ಚಿದ್ದಾರೆ. ಎಲ್ಲಾ ಕ್ಷೇತ್ರದಲ್ಲೂ ನಮ್ಮೂರಿನವರು ಮಿಂಚುತ್ತಿದ್ದಾರೆ. ಇದರ ನಡುವೆ ಪವಾಡಗಳು, ಮೂಢನಂಬಿಕೆಗಳಿಗೂ ಕೊರತೆಯಿಲ್ಲ.

ಕಳೆದ ಶತಮಾನದಲ್ಲಿ ಆಗಿರುವ ಪ್ರಗತಿ ಮುಖ್ಯವಾಗಿ ತಾಂತ್ರಿಕ ರಂಗದ್ದು. ಜಗತ್ತಿನ ಯಾವುದೇ ಮೂಲೆಯಲ್ಲಿ ಸೃಷ್ಟಿಯಾದ ತಂತ್ರಜ್ಞಾನ ಕೆಲವೇ ಸಮಯದಲ್ಲಿ ಇಲ್ಲಿ ಲಭ್ಯವಾಗುತ್ತದೆ. ಮೇಲ್ನೋಟಕ್ಕೆ ನಮ್ಮ ಜಿಲ್ಲೆ ಅನೇಕ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದೆ. ಅದ್ಭುತ ಮುನ್ನಡೆಯನ್ನು ಕಂಡಿದೆ. ಆದರೆ ಈ ಪ್ರಗತಿ ಜನರ ಬದುಕಿನ ಮೇಲ್ಮೈಯನ್ನು ಮಾತ್ರವೇ ಬದಲಿಸಿದೆ. ನಾವು ಇಂದು ಅತ್ಯಾಧುನಿಕ ವೇಷ ಭೂಷಣಗಳನ್ನು ಧರಿಸಿ, ಲೇಟೆಸ್ಟ್ ಮಾಡಲ್ ಕಾರು, ಫ್ರಿಜ್ ಟಿವಿಗಳನ್ನು ಉಪಯೋಗಿಸುತ್ತಿರಬಹುದು. ಆದರೆ ನಮ್ಮ ಮನೋಸ್ಥಿತಿ ಮಾತ್ರ ಅರ್ಧ ಶತಮಾನದ ಹಿಂದಿನ ನಮ್ಮ ಅಜ್ಜನನ್ನು ಮೀರಿ ಬೆಳೆದಿಲ್ಲ. ಅವರು ನೆಟ್ಟ ಆಲದ ಮರಕ್ಕೆ ನಾವು ಇನ್ನೂ ನೇಣು ಹಾಕಿಕೊಳ್ಳುತ್ತಿದ್ದೇವೆ. ಪ್ರಾಯಶಃ ಅವರು ಬಳ್ಳಿಯಿಂದ ತಯಾರಾದ ಹಗ್ಗವನ್ನು ನೇಣಿಗೆ ಉಪಯೋಗಿಸಿಕೊಳ್ಳುತ್ತಿದ್ದರೆ, ನಾವು ಅತ್ಯಾಧುನಿಕ ನೈಲಾನ್ ಹಗ್ಗವನ್ನು ಸಾಕಷ್ಟು ಅಲಂಕಾರಗಳೊಂದಿಗೆ ಉಪಯೋಗಿಸಿಕೊಳ್ಳುತ್ತಿದ್ದೇವೆ. ಇದೇ ನಮ್ಮ ಮತ್ತು ಅವರ ನಡುವಿನ ವ್ಯತ್ಯಾಸ.

ಚಿಕ್ಕ ವಯಸ್ಸಿನಲ್ಲಿ ತನ್ನ ಅಸಹಾಯಕತೆ, ಪರಾವಲಂಬನೆಯ ಸ್ಥಿತಿಯಲ್ಲಿ ತಾಯಿಯೇ ಮಗುವಿಗೆ ಆಸರೆ. ಮೂಢನಂಬಿಕೆಯನ್ನು ಬಲವಾಗಿ ನಂಬಿರುವ ತಾಯಿ ತನ್ನ ಮಗುವಿನ ಮೇಲಿನ ಪ್ರೀತಿಯಿಂದ ಈ ಮೂಢನಂಬಿಕೆಗಳನ್ನು ತನ್ನದಾಗಿಸಿಕೊಳ್ಳುತ್ತಾಳೆ. ತನ್ನ ಮಗುವಿಗೂ ಅದಕ್ಕೆ ತಕ್ಕುದಾಗಿ ನಡೆಯಲು ತಿಳಿಸುತ್ತಾಳೆ. ಇದು ಬಾಲ್ಯದಲ್ಲಿಯೇ ಮಗುವಿನ ಮನಸ್ಸಿನ ಮೇಲೆ ಆಳವಾಗಿ ಬೇರೂರಿಬಿಡುತ್ತದೆ. ವೈಚಾರಿಕ ಪ್ರಜ್ಞೆ ಜಾಗೃತವಾದಾಗ ಇದನ್ನು ತಿರಸ್ಕರಿಸಲು ಪ್ರಯತ್ನಿಸಿದಾಗ ಅದು ಸುಲಭವಾಗಿರುವುದಿಲ್ಲ. ಆಚರಣೆಗಳು, ನಂಬಿಕೆಗಳನ್ನು ನಾನು ವಿರೋಧಿಸುವುದಿಲ್ಲ. ಬದಲಾಗಿ ಆ ನಂಬಿಕೆ ಹೆಸರಿನಲ್ಲಿ ಮೌಢ್ಯವನ್ನು ಪೋಷಿಸುವ, ಶ್ರೀಮಂತಿಕೆ, ಪ್ರತಿಷ್ಠೆಯನ್ನು ಮೆರೆಯುವ ಬಗ್ಗೆಯಷ್ಟೆ ನನ್ನ ವಿರೋಧ.

ಹಳ್ಳಿಯಲ್ಲಿದ್ದು, ಆರ್ಥಿಕವಾಗಿ ಹಿಂದುಳಿದ ವರ್ಗದಿಂದ ಬಂದ ವ್ಯಕ್ತಿ ಪರವೂರಿಗೆ ಹೋಗಿ ಹಣ ಸಂಪಾದಿಸಿ ಊರಿಗೆ ಬರುತ್ತಾನೆ. ತನ್ನ ವರ್ಚಸ್ಸು ಮೆರೆಸಲು ತನ್ನಲ್ಲಿರುವ ಶ್ರೀಮಂತಿಕೆಯನ್ನು ಪ್ರದರ್ಶಿಸಲು ಮುಂದಾಗುತ್ತಾನೆ. ಹಣದ ಮೂಲಕ ಸಾಮಾಜಿಕ ಸ್ಥಾನಮಾನದ ಜತೆಗೆ ಮೂಢನಂಬಿಕೆಯನ್ನೂ ಆತ ಬಿತ್ತಲಾರಂಭಿಸುತ್ತಾನೆ. ಇದು ತಲೆತಲಾಂತರವಾಗಿ ಮುಂದುವರಿಯುತ್ತದೆ.

ಇಂತಹ ವ್ಯಕ್ತಿಯು ಜೀವನದಲ್ಲಿ ತಾವು ಯಾವುದೇ ರೀತಿಯ ನಿರ್ಧಾರಕ್ಕೂ ಮುನ್ನ ಯಾವುದೋ ಒಂದು ಕ್ಷೇತ್ರ ಅಥವಾ ಸ್ಥಳ ಅಥವಾ ವ್ಯಕ್ತಿಯ ಮೇಲೆ ಅವಲಂಬಿತನಾಗುತ್ತಾನೆ. ಕಾಕತಾಳೀಯವಾಗಿ ಕೆಲವೊಮ್ಮೆ ಆತನ ನಂಬಿಕೆಯು ನಿಜವಾದರೆ ಆ ನಂಬಿಕೆ ಮತ್ತಷ್ಟು ಬಲವಾಗುತ್ತದೆ. ಹೀಗೆ ಇದು ಮುಂದುವರಿಯುತ್ತದೆ. ಒಂದೊಮ್ಮೆ ಭವಿಷ್ಯವು ಸುಳ್ಳಾದಾಗ ಪೇಚಾಡುತ್ತಾನೆ. ತನ್ನ ನಂಬಿಕೆಯಲ್ಲಿ ಯಾವುದೋ ದೋಷವಾಗಿರಬೇಕು, ಅಪಚಾರವಾಗಿರಬೇಕು ಎಂದು ತಿಳಿದು ಅದರ ಪರಿಹಾರಕ್ಕಾಗಿ ಹೆಣಗಾಡುತ್ತಾನೆ. ಈ ಹೆಣಗಾಟದ ನಡುವೆ ಕೆಲವೊಮ್ಮೆ ಆತ ತನ್ನ ಆರೋಗ್ಯ, ಉದ್ಯೋಗ ಎಲ್ಲವನ್ನೂ ಕಳೆದು ಕಂಗಾಲಾಗುವುದೇ ಹೆಚ್ಚು. ಕೊನೆಗೆ ಆತನ ನಂಬಿಕೆಗಳೇ ಆತನಿಗೆ ಮುಳುವಾಗಿಬಿಡುತ್ತದೆ.

ಅನುಕೂಲ ಶಾಸ್ತ್ರ ನಮ್ಮ ಸಮಾಜದಲ್ಲಿ ಬಹಳವಾಗಿ ಬೇರೂರಿದೆ. ಮುಖ್ಯವಾಗಿ ವಿವಾಹದ ವಿಷಯಗಳಲ್ಲಿ ಎಲ್ಲವೂ ಕ್ರಮಬದ್ಧವಾಗಿರಬೇಕು ಎಂದು ಪಟ್ಟು ಹಿಡಿಯುವವರು ಕೊನೆಗೆ ಬಲಿಬೀಳುವುದು ಮೂಢನಂಬಿಕೆಯೆಂಬ ನಂಬಿಕೆಗೆ. ಸಮಾಜದಲ್ಲಿ ಇಂತಹ ಒಬ್ಬರ ಅತಿಯಾದ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳುವವರೇ ಅಧಿಕ. ಅಂದ ಹಾಗೆ ಮೌಢ್ಯಗಳ ವಿಚಾರ ಬಂದಾಗ ನಮ್ಮಲ್ಲಿ ಜಾತಿ, ಧರ್ಮದ ಸಂಕೋಲೆಗಳಿರುವುದಿಲ್ಲ. ಎಲ್ಲಾ ಧರ್ಮ, ಜಾತಿಯಲ್ಲೂ ಇದು ಆಳವಾಗಿ ಬೇರೂರಿದೆ. ಮೌಢ್ಯದ ವಿಚಾರದಲ್ಲಿ ನಾವು ಜಾತ್ಯತೀತತೆಯ ಮನಸ್ಥಿತಿಯಲ್ಲಿ ಇದ್ದೇವೆಂದೇ ಹೇಳಬಹುದು. ಅದರಲ್ಲೂ ಸುಶಿಕ್ಷಿತ ಸಮಾಜವೂ ಈ ಮೌಢ್ಯಗಳ ದಾಸರಾಗಿರುವುದನ್ನು ನಾವು ನಮ್ಮ ಸುತ್ತ ಮುತ್ತ ಕಾಣುತ್ತಿರುತ್ತೇವೆ. ಕಾಸ್ಮಿಕ್ ಹೀಲಿಂಗ್, ರೇಕಿ, ಮ್ಯಾಗ್ನೆಟೋ ಥೆರಪಿ ಮೊದಲಾದವುಗಳನ್ನು ಹೇಳುವ ಹುಸಿ ವಿಜ್ಞಾನಿಗಳಿಗೂ ನಮ್ಮಲ್ಲಿ ಬೇಡಿಕೆ ಬಹಳ.

ಇನ್ನು ಈ ಮೂಢನಂಬಿಕೆಗಳನ್ನು ಪ್ರಚಾರ ಮಾಡುವಲ್ಲಿ, ಆಳುವ ಪಕ್ಷಗಳು, ರಾಜಕಾರಣಿಗಳೂ ಮುಂಚೂಣಿಯಲ್ಲಿದ್ದಾರೆ. ಫಲಜ್ಯೋತಿಷ್ಯವನ್ನು ವಿಶ್ವವಿದ್ಯಾನಿಲಯಗಳಲ್ಲಿ ಕಲಿಸಲು, ಇದಕ್ಕೆ ಪದವಿ ನೀಡಲು ಪ್ರಸ್ತಾವನೆ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವನದ್ಧಿ ಇಲಾಖೆ ಸಚಿವರಿಂದಲೇ ಬಂದಿತ್ತು ಎಂಬುದು ಇದಕ್ಕೆ ಉದಾಹರಣೆ. ಬೂದಿ ಬಾಬಾಗಳ ಪಾದಗಳಿಗೆ ಎರಗುವ ಮಂತ್ರಿಗಳು, ಜಾತಕ- ಭವಿಷ್ಯಗಳನ್ನು ನಂಬುವ ಮುಖ್ಯಮಂತ್ರಿ, ಸಚಿವರು, ಪ್ರಧಾನಿಗಳು ನಮ್ಮ ದೇಶದಲ್ಲಿರುವಾಗ ವೈಜ್ಞಾನಿಕ ಪ್ರಗತಿ ಹೇಗೆ ಸಾಧ್ಯ ಎಂಬುದು ಮಾತ್ರ ಪ್ರಶ್ನೆ?

ಈ ಮೂಢನಂಬಿಕೆಗಳ ಇನ್ನೊಂದು ಮುಖ ಕೋಮುವಾದ ಎನ್ನಬಹುದು. ಕೋಮು ಸಾಮರಸ್ಯವಿದ್ದ ಈ ದೇಶದಲ್ಲಿ ಕೋಮುವಾದದ ದಳ್ಳುರಿ ಹತ್ತಿದಾಗ ಅದು ಎಲ್ಲಾ ಕಡೆಯೂ ವ್ಯಾಪಿಸುತ್ತದೆ. ಆದರೆ ಅದು ಹರಡದಂತೆ ಎಚ್ಚರಿಕೆ ವಹಿಸುವುದು ವಿಚಾರವಾದವನ್ನು ಪ್ರತಿಪಾದಿಸುವ, ವೈಜ್ಞಾನಿಕ ಮನೋಭಾವವನ್ನು ಹೊಂದಿರುವವರ ಕರ್ತವ್ಯ.ಮೂಢನಂಬಿಕೆಗಳನ್ನು ದೂರೀಕರಿಸುವ ಜತೆಗೆ ಕೋಮುವಾದ, ಜಾತಿವಾದಗಳನ್ನು ಸಹ ತಿರಸ್ಕರಿಸುವುದು ಅತೀ ಅಗತ್ಯ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)