varthabharthi

ಆರೋಗ್ಯ

ಕ್ಯಾನ್ಸರ್‌ ದೂರವಿಡಬೇಕೆ ?... ಈ 8 ಆಹಾರಗಳನ್ನು ಸೇವಿಸಲೇಬೇಡಿ

ವಾರ್ತಾ ಭಾರತಿ : 13 Jan, 2018

ಕ್ಯಾನ್ಸರ್ ಒಂದು ಸಂಕೀರ್ಣ ಕಾಯಿಲೆಯಾಗಿದ್ದು, ಅನೇಕ ಸಂಭಾವ್ಯ ಕಾರಣಗಳನ್ನು ಹೊಂದಿದೆ. ಆನುವಂಶಿಕತೆ, ತಂಬಾಕು ಸೇವನೆ, ಆಹಾರ ಮತ್ತು ದೈಹಿಕ ಚಟುವಟಿಕೆಯಂತಹ ಜೀವನಶೈಲಿ ಅಂಶಗಳು, ಕೆಲವು ಸೋಂಕುಗಳು, ವಿವಿಧ ರಾಸಾಯನಿಕಗಳು ಮತ್ತು ವಿಕಿರಣಗಳಿಗೆ ತೆರೆದುಕೊಳ್ಳುವಿಕೆ ಇತ್ಯಾದಿಗಳು ಕ್ಯಾನ್ಸರ್‌ಗೆ ಗೊತ್ತಿರುವ ಕಾರಣಗಳಾಗಿವೆ.

 ಕಳಪೆ ಆಹಾರ ಮತ್ತು ಕ್ರಿಯಾಶೀಲತೆ ಇಲ್ಲದಿರುವುದು ವ್ಯಕ್ತಿಯಲ್ಲಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಲ್ಲ ಎರಡು ಪ್ರಮುಖ ಕಾರಣಗಳಾಗಿವೆ ಎನ್ನುವುದನ್ನು ಸಂಶೋಧನೆಗಳು ಬೆಳಕಿಗೆ ತಂದಿವೆ. ಇಂತಹ ಕೆಲವು ಕಾರಣಗಳನ್ನು ನಾವೇ ನಿಯಂತ್ರಿಸಬಹುದು ಎನ್ನುವುದು ಒಳ್ಳೆಯ ಅಂಶವಾಗಿದೆ. ಧೂಮ್ರಪಾನ ವರ್ಜನೆಯ ಜೊತೆಗೆ ಆರೋಗ್ಯಕರ ತೂಕವನ್ನು ಕಾಯ್ದುಕೊಳ್ಳುವಿಕೆ, ದೈಹಿಕ ಕ್ರಿಯಾಶೀಲತೆ ಮತ್ತು ಸಸ್ಯಾಹಾರವನ್ನು ಮುಖ್ಯವಾಗಿಟ್ಟುಕೊಂಡು ಆರೋಗ್ಯಕರ ಆಹಾರದ ಆಯ್ಕೆ ಇತ್ಯಾದಿಗಳು ಕ್ಯಾನ್ಸರ್‌ನ ಅಪಾಯವನ್ನು ತಗ್ಗಿಸಲು ನಾವು ಮಾಡಬಹುದಾದ ಕೆಲವು ಮುಖ್ಯ ಕೆಲಸಗಳಾಗಿವೆ.

ವಿಶ್ವ ಕ್ಯಾನ್ಸರ್ ಸಂಶೋಧನಾ ನಿಧಿಯ ವರದಿಯಂತೆ ಅಮೆರಿಕದಲ್ಲಿ ಪತ್ತೆಯಾಗಿರುವ ಎಲ್ಲ ಕ್ಯಾನ್ಸರ್‌ಗಳ ಪೈಕಿ ಶೇ.20ರಷ್ಟು ಪ್ರಕರಣಗಳು ದೈಹಿಕ ಜಡತೆ, ಬೊಜ್ಜು, ಅತಿಯಾದ ಮದ್ಯ ಸೇವನೆ, ಕಳಪೆ ಆಹಾರಕ್ಕೆೆ ಸಂಬಂಧಿಸಿದ್ದು ಇವನ್ನ್ನು ತಡೆಯಬಹುದಾಗಿದೆ.

ಕ್ಯಾನ್ಸರ್‌ಗೆ ಕಾರಣವಾಗುವ ಈ ಎಂಟು ಆಹಾರಗಳ ಸೇವನೆಯ ವಿರುದ್ಧ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ರಿಫೈನ್ಡ್ ಸಕ್ಕರೆ ಮತ್ತು ಕೃತಹ ಸಿಹಿಕಾರಕಗಳು

ರಿಫೈನ್ಡ್ ಸಕ್ಕರೆ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ ಮಾತ್ರವಲ್ಲ, ಅದು ಕ್ಯಾನ್ಸರ್ ಕೋಶಗಳಿಗೂ ಉತ್ತಮ ಆಹಾರವಾಗಿ ಅವುಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಹಲವಾರು ವರ್ಷಗಳಿಂದ ಇದು ಕ್ಯಾನ್ಸರ್‌ಗೆ ಗೊತ್ತಿರುವ ಕಾರಣವಾಗಿದೆ. ಹೈ ಫ್ರುಕ್ಟೋಸ್ ಕಾರ್ನ್ ಸಿರಪ್‌ನಂತಹ ಅತ್ಯಧಿಕ ಫ್ರುಕ್ಟೋಸ್‌ನ್ನು ಒಳಗೊಂಡಿರುವ ಕೃತಕ ಸಿಹಿಕಾರಕಗಳು ಕ್ಯಾನ್ಸರ ಕೋಶಗಳ ಬೆಳವಣಿಗೆ ಮತ್ತು ಹರಡುವಿಕೆಯನ್ನು ಉತ್ತೇಜಿಸುತ್ತವೆ. ಈ ಸಿಹಿಕಾರಕಗಳು ಈ ಕೋಶಗಳ ಚಯಾಪಚಯ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತವೆ. ಹೀಗಾಗಿ ಯಾವುದೇ ಖಾದ್ಯವನ್ನು ಸಿಹಿಯಾಗಿಸಲು ರಿಫೈನ್ಡ್ ಸ್ಕಕರೆ ಮತ್ತು ಕೃತಕ ಸಿಹಿಕಾರಕಗಳ ಬದಲು ಜೇನು, ಬೆಲ್ಲ, ಮೇಪಲ್ ಸಿರಪ್ ಅಥವಾ ಸ್ಟೀವಿಯಾ ಗಿಡದ ಎಲೆಗಳನ್ನು ಬಳಸಬಹುದಾಗಿದೆ.

ಸಂಸ್ಕರಿತ ಮಾಂಸ

ಬೇಕನ್, ಹಾಟ್ ಡಾಗ್, ಸಾಸೇಜ್‌ನಂತಹ ಸಂಸ್ಕರಿತ ಮಾಂಸವು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಅಪಾಯವನ್ನು ಶೇ.67ರಷ್ಟು ಹೆಚ್ಚಿಸುತ್ತದೆ ಎನ್ನುವುದನ್ನು ಸಂಶೋಧನೆಗಳು ದೃಢಪಡಿಸಿವೆ. ಸಂಸ್ಕರಿತ ಮಾಂಸವು ನೈಟ್ರೇಟ್‌ಗಳು ಸೇರಿದಂತೆ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕಗಳು ಮತ್ತು ಸಂರಕ್ಷಕಗಳನ್ನು ಒಳಗೊಂಡಿರುತ್ತದೆ. ಇವು ಮಾಂಸದ ರುಚಿಯನ್ನೇನೋ ಹೆಚ್ಚಿಸುತ್ತವೆ, ಆದರೆ ಕ್ಯಾನ್ಸರ್‌ಗೆ ಕಾರಣವಾಗುತ್ತವೆ. ವಿಶೇಷವಾಗಿ ಸ್ಮೋಕ್ಡ್ ಮೀಟ್ ಸ್ಮೋಕಿಂಗ್ ಪ್ರಕ್ರಿಯೆ ವೇಳೆ ಟಾರ್ ಅನ್ನು ಹೀರಿಕೊಂಡಿರುವದರಿಂದ ಹೆಚ್ಚು ಅನಾರೋಗ್ಯಕಾರಿಯಾಗಿದೆ.

ಫಾರ್ಮ್ ಮೀನುಗಳು

ಫಾರ್ಮ್‌ಗಳಲ್ಲಿ ಮೀನುಗಳನ್ನು ಬೆಳೆಸುವಾಗ ಅವುಗಳಿಗೆ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಿಂದ ಕಾಯಿಲೆಗಳನ್ನು ತಡೆಯಲು ಆ್ಯಂಟಿ ಬಯಾಟಿಕ್‌ಗಳು, ಕೀಟನಾಶಕಗಳು ಮತ್ತು ಇತರ ಕ್ಯಾನ್ಸರ್‌ಕಾರಕ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಅಲ್ಲದೆ ಈ ಮೀನುಗಳಲ್ಲಿ ಸಮುದ್ರದ ಮೀನುಗಳಷ್ಟು ಒಮೆಗಾ-3 ಫ್ಯಾಟಿ ಆ್ಯಸಿಡ್ ಇರುವುದಿಲ್ಲ.

ಸಂಸ್ಕರಿತ ಮತ್ತು ಸ್ಮೋಕ್ಡ್ ಆಹಾರಗಳು

ಸಂಸ್ಕರಿತ ಆಹಾರಗಳು ದೀರ್ಘ ಕಾಲ ಉಳಿಯುವಂತಾಗಲು ಅವುಗಳಿಗೆ ನೈಟ್ರೇಟ್‌ನಂತಹ ಸಂರಕ್ಷಗಳನ್ನು ಸೇರಿಸಲಾಗಿರುತ್ತದೆ. ಇಂತಹ ಆಹಾರಗಳ ಸೇವನೆಯಿಂದ ಕಾಲಕ್ರಮೇಣ ಅವುಗಳಿಗೆ ಸೇರಿಸಲಾಗಿದ್ದ ರಾಸಾಯನಿಕಗಳು ನಮ್ಮ ಶರೀರದಲ್ಲಿ ಸಂಗ್ರಹಗೊಳ್ಳುತ್ತವೆ. ಅಂತಿಮವಾಗಿ ಇಂತಹ ವಿಷಪದಾರ್ಥಗಳು ಜೀವಕೋಶಗಳಿಗೆ ಹಾನಿಯನ್ನುಂಟು ಮಾಡಿ ಕ್ಯಾನ್ಸರ್‌ಗೆ ಕಾರಣವಾಗುತ್ತವೆ. ಸ್ಮೋಕ್ಡ್ ಆಹಾರಗಳನ್ನು ಅಧಿಕ ಉಷ್ಣತೆಯಲ್ಲಿ ಸಿದ್ಧಗೊಳಿಸುವುದರಿಂದ ಅದರಲ್ಲಿಯ ನೈಟ್ರೇಟ್‌ಗಳು ಇನ್ನೂ ಹೆಚ್ಚಿನ ಅಪಾಯಕಾರಿ ನೈಟ್ರೇಟ್‌ಗಳಾಗಿ ಪರಿವರ್ತನೆಗೊಳ್ಳುತ್ತವೆ.

ಜಲಜನಕಯುಕ್ತ ಖಾದ್ಯತೈಲ

ಜಲಜನಕಯುಕ್ತ ತೈಲಗಳ ಜೀವಿತಾವಧಿಯನ್ನು ಹೆಚ್ಚಿಸಲು ಅವುಗಳ ಮೂಲ ರಾಸಾಯನಿಕ ಸ್ವರೂಪವನ್ನು ಬದಲಿಸಲಾಗಿರುತ್ತದೆ. ವಾಸನೆಯನ್ನು ಅಡಗಿಸಲು ಮತ್ತು ರುಚಿಯನ್ನು ಹೆಚ್ಚಿಸಲು ಈ ತೈಲಗಳಿಗೆ ರಾಸಾಯನಿಕಗಳನ್ನೂ ಸೇರಿಸಲಾಗಿರುತ್ತದೆ. ಜಲಜನಕಯುಕ್ತ ಮತ್ತು ಸಂಸ್ಕರಿತ ಆಹಾರಗಳಲ್ಲಿರುವ ಭಾಗಶಃ ಜಲಜನಕಯುಕ್ತ ಖಾದ್ಯತೈಲಗಳು ಸ್ತನ ಕ್ಯಾನ್ಸರ್‌ನ ಅಪಾಯವನ್ನು ಇಮ್ಮಡಿಗೊಳಿಸುತ್ತವೆ ಎನ್ನುವುದನ್ನು ಸಂಶೋಧನೆಗಳು ದೃಢಪಡಿಸಿವೆ.

ಬಟಾಟೆಯ ಚಿಪ್ಸ್

ಇವುಗಳನ್ನು ಜಲಜನಕಯುಕ್ತ ಸಸ್ಯಜನ್ಯ ತೈಲಗಳಲ್ಲಿ ಕರಿಯಲಾಗುತ್ತದೆ ಮತ್ತು ನಂತರ ಅತಿಯಾದ ಉಪ್ಪನ್ನು ಬೆರೆಸಲಾಗುತ್ತದೆ. ಪ್ರತಿದಿನ ಕೇವಲ ಒಂದು ಔನ್ಸ್ ಬಟಾಟೆ ಚಿಪ್ಸ್ ತಿನ್ನುವುದರಿಂದ ಶರೀರದ ತೂಕ ವರ್ಷದಲ್ಲಿ ಸರಾಸರಿ ಎರಡು ಪೌಂಡ್‌ಗಳಷ್ಟು ಹೆಚ್ಚುತ್ತದೆ ಎನ್ನುವುದನ್ನು ನ್ಯೂ ಇಂಗ್ಲಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟಗೊಂಡಿರುವ ಅಧ್ಯಯನವು ಬೆಟ್ಟು ಮಾಡಿದೆ. ಅಲ್ಲದೆ ಈ ಚಿಪ್ಸ್ ಕೊಲೆಸ್ಟ್ರಾಲ್ ಜೊತೆಗೆ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುವ ಸೋಡಿಯಂ ಮಟ್ಟವನ್ನೂ ಹೆಚ್ಚಿಸುತ್ತವೆ. ಅವುಗಳು ಗರಿಗರಿಯಾಗಿರಲು ಅಧಿಕ ಉಷ್ಣತೆಯಲ್ಲಿ ಕರಿಯಲಾಗುವುದರಿಂದ ಅವು ಸಿಗರೇಟ್‌ಗಳಲ್ಲಿರುವ ಕ್ಯಾನ್ಸರ್‌ಕಾರಕ ಅಕ್ರಿಲಮೈಡ್ ಉತ್ಪತ್ತಿಗೂ ಕಾರಣವಾಗುತ್ತವೆ.

ಮೈಕ್ರೋವೇವ್ ಪಾಪ್‌ಕಾರ್ನ್

ಮೈಕ್ರೋವೇವ್ ಪಾಪ್‌ಕಾರ್ನ್‌ಗಳು ಅನುಕೂಲಕರ ಮತ್ತು ತುಲನಾತ್ಮಕವಾಗಿ ಆರೋಗ್ಯಕರ ತಿನಿಸೂ ಹೌದು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಈ ಕಾರ್ನ್ ಪ್ಯಾಕ್ ಮಾಡಲಾಗುವ ಬ್ಯಾಗಗಳು ಪರ್ಫ್ಲೋರೊಕ್ಟಾನಿಯಕ್ ಎಂಬ ರಾಸಾಯನಿಕದ ಲೇಪನವನ್ನು ಹೊಂದಿರುತ್ತವೆ. ಇದು ಅಪಾಯಕಾರಿಯಾಗಿದ್ದು, ಪಾಪ್‌ಕಾರ್ನ್ ಮೂಲಕ ಶರೀರದಲ್ಲಿ ಸೇರಿ ಸ್ತನ, ಮೂತ್ರಪಿಂಡ, ಗುದ, ಮೂತ್ರಕೋಶ, ಪ್ರಾಸ್ಟೇಟ್ ಗ್ರಂಥಿ, ಲ್ಯೂಕೆಮಿಯಾ ಮತ್ತು ಲಿಂಫೋಮಾ ಕ್ಯಾನ್ಸರ್‌ಗಳ ಅಪಾಯವನ್ನು ಗಣನೀಯವಾಗಿ ಹೆಚ್ಚಿಸುತ್ತದೆ.

ರಿಫೈನ್ಡ್ ಬಿಳಿಯ ಹಿಟ್ಟು

ಹಿಟ್ಟನ್ನು ರಿಫೈನ್ ಮಾಡಿದಾಗ ಅದರಲ್ಲಿಯ ಎಲ್ಲ ಪೋಷಕಾಂಶಗಳು ತೆಗೆಯಲ್ಪಡುತ್ತವೆ ಮತ್ತು ಅದನ್ನು ಗ್ರಾಹಕರಿಗೆ ಹೆಚ್ಚು ಆಕರ್ಷಕವನ್ನಾಗಿಸಲು ಕ್ಲೋರಿನ್ ಅನಿಲದಿಂದ ಬ್ಲೀಚ್ ಮಾಡಲಾಗುತ್ತದೆ. ಇಂತಹ ಹಿಟ್ಟು ಶರೀರದಲ್ಲಿ ಇನ್ಸುಲಿನ್ ಮಟ್ಟದ ಏರಿಳಿತಕ್ಕೆ ಕಾರಣವಾಗುತ್ತದೆ. ನಮ್ಮ ಶರೀರವು ಕಾರ್ಬೊಹೈಡ್ರೇಟ್‌ಗಳನ್ನು ಸಕ್ಕರೆಯನ್ನಾಗಿ ಪರಿವರ್ತಿಸುತ್ತದೆ. ಹೀಗಾಗಿ ಬಿಳಿಯ ಹಿಟ್ಟನ್ನು ಒಳಗೊಂಡಿರುವ ಉತ್ಪನ್ನಗಳು ಹೆಚ್ಚಿನ ಇನ್ಸುಲಿನ್ ಪ್ರತಿರೋಧಕ್ಕೆ ಕಾರಣವಾಗುತ್ತವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)