varthabharthi

ಕರಾವಳಿ

ಅಂತರ್ ಶಾಲಾ-ಕಾಲೇಜು ರಾಜ್ಯಮಟ್ಟದ ಕರಾಟೆ ಸ್ಪರ್ಧೆ

ಕರಾಟೆಯಿಂದ ಹೆಣ್ಣು ಮಕ್ಕಳು ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ-ಶಕುಂತಳಾ ಶೆಟ್ಟಿ

ವಾರ್ತಾ ಭಾರತಿ : 13 Jan, 2018

ಪುತ್ತೂರು, ಜ. 13: ದೈಹಿಕ, ಮಾನಸಿಕ ಸಾಮರ್ಥ್ಯ ಹೆಚ್ಚಿಸುವ ಕರಾಟೆ ಪ್ರಸ್ತುತ ದಿನಗಳಲ್ಲಿ ಜನಪ್ರಿಯ ಪಡೆಯುತ್ತಿದ್ದು, ಆತ್ಮ ವಿಶ್ವಾಸದ ಜೊತೆಗೆ ಆತ್ಮ ರಕ್ಷಣೆಗೆ ಅತ್ಯಂತ ಉಪಕಾರಿಯಾಗುವ ಕರಾಟೆಯನ್ನು ಹೆಣ್ಣು ಮಕ್ಕಳು ಅಭ್ಯಾಸ ಮಾಡುವ ಮೂಲಕ ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ ಎಂದು ರಾಜ್ಯ ಸಂಸದೀಯ ಕಾರ್ಯದರ್ಶಿಯಾದ ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.

ಅವರು ಶನಿವಾರ ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಹಾಗೂ ಮಂಗಳೂರು ಇನ್ಸಿಟ್ಯೂಟ್ ಆಫ್ ಕರಾಟೆ ಎಂಡ್ ಅಲೈಡ್ ಆರ್ಟ್ಸ್‌ನ ಜಂಟಿ ಆಶ್ರಯದಲ್ಲಿ ನಡೆದ ಅಂತರ್ ಶಾಲಾ-ಕಾಲೇಜು ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಪ್-2018 ನ್ನು ಉದ್ಘಾಟಿಸಿ ಮಾತನಾಡಿದರು. ಪುತ್ತೂರಿನಲ್ಲಿ ಈ ಬಾರಿ ರಾಜ್ಯಮಟ್ಟದ ಕರಾಟೆ ಏರ್ಪಡಿಸಿರುವ ಸಂಘಟಕರ ಕಾರ್ಯ ಶ್ಲಾಘನೀಯವಾಗಿದ್ದು, ಸ್ಪರ್ಧೆಯ ಅವಕಾಶವನ್ನು ವಿದ್ಯಾರ್ಥಿಗಳೆಲ್ಲರೂ ಪಡೆದುಕೊಂಡು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಬೇಕು ಎಂದರು.

 ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವರಾಮಯ್ಯ ವೈ. ಮಾತನಾಡಿ ದೈಹಿಕವಾಗಿ, ಮಾನಸಿಕವಾಗಿ ತನ್ನನ್ನು ಕಾಪಾಡಿಕೊಳ್ಳುವ ವಿಷಯವನ್ನು ಎಲ್ಲರೂ ಒಪ್ಪತಕ್ಕಂತಹದ್ದು. ಈ ನಿಟ್ಟಿನಲ್ಲಿ ವಿಶೇಷ ಕೌಶಲ್ಯ ಹೊಂದಿರುವ ಕರಾಟೆ ಪ್ರಸ್ತುತ ವಿದ್ಯಾರ್ಥಿಗಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಅತೀ ಅಗತ್ಯ. ಹಿಂದೆ ದೆಹಲಿಯಲ್ಲಿ ನಡೆದ ನಿರ್ಭಯಾ ಹತ್ಯೆ ಪ್ರಕರಣದಿಂದ ಇಡೀ ದೇಶ ತಲ್ಲಣಗೊಂಡಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರಕಾರ ಪ್ರತೀ ಹಳ್ಳಿಹಳ್ಳಿಗಳು ಸೇರಿದಂತೆ ನಗರ ಪ್ರದೇಶದ ಶಾಲಾ-ಕಾಲೇಜುಗಳಲ್ಲಿ ಕರಾಟೆಯನ್ನು ಕಡ್ಡಾಯಗೊಳಿಸಿದೆ. ಅದರಲ್ಲೂ ಹೆಣ್ಣು ಮಕ್ಕಳಲ್ಲಿ ಆತ್ಮಸ್ಥೈರ್ಯದ ಜತೆ ತಮ್ಮನ್ನು ರಕ್ಷಿಸುವ ನಿಟ್ಟಿನಲ್ಲಿ ಅಭ್ಯಾಸ ಮಾಡುವಂತೆ ಮೊದಲ ಅದ್ಯತೆ ನೀಡಲಾಗಿದೆ ಎಂದರು.

ಮಂಗಳೂರು ಇನ್ಸಿಟ್ಯೂಟ್ ಆಫ್ ಕರಾಟೆ ಆ್ಯಂಡ್ ಅಲೈಡ್ ಆರ್ಟ್ಸ್‌ನ ಮುಖ್ಯ ಶಿಕ್ಷಕ ಕ್ಯೋಶಿ ಪ್ರವೀಣ್ ಕುಮಾರ್ ಮಾತನಾಡಿ ಕರಾಟೆ ಕೇವಲ ಆತ್ಮರಕ್ಷಣೆ ಕಲೆಯಾಗಿ ಪ್ರಸ್ತುತ ಉಳಿದಿಲ್ಲ. ಬದಲಾಗಿದೆ ಒಂದು ಕ್ರೀಡೆಯಾಗಿ ವಿಶ್ವದಾದ್ಯಂತ ಜನಪ್ರಿಯತೆ ಗಳಿಸುತ್ತಿದೆ. ಒಲಿಂಪಿಕ್‌ನಲ್ಲೂ ಕ್ರೀಡೆಯಾಗಿ ಸೇರ್ಪಡೆ ಗೊಂಡ ಕರಾಟೆಯನ್ನು ಬೆಳೆಸುವ ನಿಟ್ಟಿನಲ್ಲಿ ಪ್ರತಿ ವರ್ಷ ಸ್ಪರ್ಧಾ ಕೂಟವನ್ನು ಏರ್ಪಡಿಸುತ್ತಿದ್ದು, ಅದರಲ್ಲೂ ಶಾಲಾ ವಿದ್ಯಾರ್ಥಿಗಳು ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕೋಸ್ಕರ ನಾಲ್ಕು ವರ್ಷಗಳಿಂದ ಅಂತರ್ ಶಾಲಾ-ಕಾಲೇಜು ಮಟ್ಟದ ಕರಾಟೆ ಸ್ಪರ್ಧಾ ಕೂಟವನ್ನು ಹಮ್ಮಿಕೊಂಡಿದ್ದು, ಈ ಬಾರಿ ಪುತ್ತೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಕರಾಟೆ ತರಬೇತು ಸಂಸ್ಥೆಯ ಸ್ಥಾಪಕ ಸೇಡಿಯಾಪು ಜನಾರ್ದನ ಭಟ್, ವಿವೇಕಾನಂದ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ವೆಂಕಟೇಶ್ವರ ಅಮೈ, ಆಡಳಿತ ಮಂಡಳಿ ಸಂಚಾಲಕ ಮುರಳೀಧರ ಕೆ., ಮುಖ್ಯ ಶಿಕ್ಷಕ ಸತೀಶ್ ಕುಮಾರ್ ರೈ, ಕರಾಟೆ ಶಿಕ್ಷಕ ಆನಂದ ದೇವಾಡಿಗ ಉಪಸ್ಥಿತರಿದ್ದರು.

ಇನ್ಸಿಟ್ಯೂಟ್ ಆಫ್ ಕರಾಟೆ ಎಂಡ್ ಅಲೈಡ್ ಆರ್ಟ್ಸ್‌ನ ಪುತ್ತೂರು ಶಾಖೆಯ ಮುಖ್ಯ ಶಿಕ್ಷಕ ಶಿಹಾನ್ ಎಂ.ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಇನ್ಸಿಟ್ಯೂಟ್ ಆಫ್ ಕರಾಟೆ ಎಂಡ್ ಅಲೈಡ್ ಆರ್ಟ್ಸ್‌ನ ಸದಸ್ಯ ಗೋಪಾಲ್ ವಂದಿಸಿದರು. ಬಿಇಎಂ ಶಾಲಾ ಮುಖ್ಯ ಶಿಕ್ಷಕ ಮನೋಹರ ಕುಮಾರ್, ಪಶು ವೈದ್ಯಾಧಿಕಾರಿ ಡಾ.ಉಷಾ ಎನ್. ಕಾರ್ಯಕ್ರಮ ನಿರೂಪಿಸಿದರು.

ರಾಜ್ಯದ ಸುಮಾರು 200 ಶಾಲಾ-ಕಾಲೇಜುಗಳಿಂದ 1500 ಕ್ಕೂ ಮಿಕ್ಕಿ ಸ್ಪರ್ಧಾಳುಗಳು ಪಾಲ್ಗೊಂಡಿದ್ದರು. ಎರಡು ದಿನಗಳ ಕಾಲ ಮ್ಯಾಟ್ ಅಂಕಣದಲ್ಲಿ ಸ್ಪರ್ಧಾ ಕೂಟ ನಡೆಯಲಿದ್ದು, ಇದಕ್ಕಾಗಿ ಏಳು ಮ್ಯಾಟ್ ಅಂಕಣವನ್ನು ನಿರ್ಮಿಸಲಾಗಿದೆ. ಸ್ಪರ್ಧಾ ಫಲಿತಾಂಶಕ್ಕಾಗಿ ಎಲ್‌ಇಡಿ ಡಿಸ್‌ಪ್ಲೆ ಅಳವಡಿಸಲಾಗಿದೆ. ಪ್ರತೀ ಅಂಕಣದಲ್ಲೂ ಎಲ್‌ಇಡಿ ಮೂಲಕ ಸ್ಪರ್ಧೆಯ ಮಾಹಿತಿ ನೀಡಲಾಗುವ ವ್ಯವಸ್ಥೆ ಕಲ್ಪಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)