varthabharthi

ರಾಷ್ಟ್ರೀಯ

ಏರ್‌ಸೆಲ್-ಮ್ಯಾಕ್ಸಿಸ್ ಪ್ರಕರಣ: ಕಾರ್ತಿ ಚಿದಂಬರಂ ಚೆನ್ನೈ, ದಿಲ್ಲಿ ಕಚೇರಿ ಮೇಲೆ ಇ.ಡಿ ದಾಳಿ

ವಾರ್ತಾ ಭಾರತಿ : 13 Jan, 2018

ಹೊಸದಿಲ್ಲಿ, ಜ.13: ಏರ್‌ಸೆಲ್-ಮ್ಯಾಕ್ಸಿಸ್ ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಶನಿವಾರ ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರ ದಿಲ್ಲಿ ಮತ್ತು ಚೆನ್ನೈ ಕಚೇರಿ ಮೇಲೆ ದಾಳಿ ನಡೆಸಿದೆ.

2006ರಲ್ಲಿ ಅಂದಿನ ವಿತ್ತ ಸಚಿವರಾಗಿದ್ದ ಪಿ. ಚಿದಂಬರಂ ಅವರು ವಿದೇಶಿ ಹೂಡಿಕೆ ಪ್ರೋತ್ಸಾಹ ಮಂಡಳಿಗೆ ನೀಡಿದ ಅನುಮತಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ತನಿಖೆ ನಡೆಸುತ್ತಿದೆ. ಚಿದಂಬರಂ ಅಂದು ಈ ಅನುಮತಿ ನೀಡಿದ ಸಂದರ್ಭದಲ್ಲಿದ್ದ ಪರಿಸ್ಥಿತಿಯ ತನಿಖೆಯನ್ನು ನಡೆಸುತ್ತಿರುವುದಾಗಿ ಕೇಂದ್ರ ತನಿಖಾ ಸಂಸ್ಥೆ ತಿಳಿಸಿದೆ.

ಡಿಸೆಂಬರ್ 1, 2017ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿಯವರ ಸಂಬಂಧಿ ಹಾಗೂ ಇತರರ ನಿವಾಸ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು. 2013ರಲ್ಲಿ ವಿದೇಶಿ ನೇರ ಹೂಡಿಕೆಗೆ ಅನುಮತಿ ನೀಡಲಾಗಿದ್ದ ಬಹುರಾಷ್ಟ್ರೀಯ ಕಂಪೆನಿಗೆ ಬಾಡಿಗೆಗೆ ನೀಡಲಾಗಿದೆ ಎಂದು ಹೇಳಲಾಗಿದ್ದ ತಮಗೆ ಸೇರಿದ ಗುಡ್ಗಾಂವ್‌ನ ಆಸ್ತಿಯನ್ನು ಕಾರ್ತಿಯವರು ಮಾರಾಟ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.

ಹಣ ವಂಚನೆ ತಡೆ ಕಾಯ್ದೆ (ಪಿಎಂಎಲ್‌ಎ) ಯಡಿ ಜಪ್ತಿಗೊಳಗಾಗುವುದನ್ನು ತಪ್ಪಿಸಿಕೊಳ್ಳಲು ಕಾರ್ತಿ ತಮ್ಮ ಹಲವು ಬ್ಯಾಂಕ್ ಖಾತೆಗಳನ್ನು ಮುಚ್ಚಿದ್ದರು ಮತ್ತು ಉಳಿದ ಇತರ ಬ್ಯಾಂಕ್ ಖಾತೆಗಳನ್ನು ಮುಚ್ಚಲು ಯತ್ನಿಸಿದ್ದರು ಎಂದು ಇ.ಡಿ ಆರೋಪಿಸಿದೆ.

ಏರ್‌ಸೆಲ್-ಮ್ಯಾಕ್ಸಿಸ್ ವಿದೇಶಿ ನೇರ ಹೂಡಿಕೆಗೆ ವಿದೇಶಿ ಹೂಡಿಕೆ ಪ್ರೋತ್ಸಾಹ ಮಂಡಳಿ ಅನುಮತಿಯನ್ನು 2006ರ ಮಾರ್ಚ್‌ನಲ್ಲಿ ಅಂದಿನ ವಿತ್ತ ಸಚಿವರಾದ ಚಿದಂಬರಂ ಅವರು ನೀಡಿದ್ದರು. ಆದರೆ ಅವರಿಗೆ ಕೇವಲ 600 ಕೋಟಿ ರೂ. ವರೆಗಿನ ಯೋಜನೆಗಳಿಗೆ ಮಾತ್ರ ಅನುಮತಿ ನೀಡುವ ಹಕ್ಕಿದ್ದು ಅದಕ್ಕಿಂತ ಹೆಚ್ಚಿನ ಮೊತ್ತದ ಯೋಜನೆಗಳಿಗೆ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯ ಅನುಮತಿ ಪಡೆಯುವ ಅಗತ್ಯವಿದೆ ಎಂದು ಇ.ಡಿ ತಿಳಿಸಿದೆ. ಆದರೆ ಚಿದಂಬರಂ ಅವರು 3,500 ಕೋಟಿ ರೂ. ಮೊತ್ತದ ಏರ್‌ಸೆಲ್-ಮ್ಯಾಕ್ಸಿಸ್ ಯೋಜನೆಗೆ ಸಂಪುಟ ಸಮಿತಿಯ ಅನುಮತಿ ಪಡೆದಿರಲಿಲ್ಲ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)