varthabharthi

ಕರಾವಳಿ

ಸ್ವಾಮಿ ವಿವೇಕಾನಂದ ಜಗತ್ತಿನ ಆಸ್ತಿಯೇ ಹೊರತು ಒಬ್ಬರ ಸೊತ್ತಲ್ಲ: ಸಚಿವ ಪ್ರಮೋದ್

ವಾರ್ತಾ ಭಾರತಿ : 13 Jan, 2018

ಉಡುಪಿ, ಜ.13: ಇಡೀ ಜಗತ್ತಿಗೆ ಸಹಿಷ್ಣತೆಯ ಬದುಕು ಕಲಿಸಿಕೊಟ್ಟ ಸ್ವಾಮಿ ವಿವೇಕಾನಂದರು ಇಡೀ ಜಗತ್ತಿನ ಆಸ್ತಿಯೇ ಹೊರತು ಯಾವುದೇ ಒಬ್ಬರ ಸೊತ್ತಲ್ಲ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಹಾಗೂ ಕ್ರೀಡೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಉಡುಪಿ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಪರ್ಕಳ ಲಯನ್ಸ್ ಕ್ಲಬ್, ಲಯನೆಸ್ ಕ್ಲಬ್ ಮತ್ತು ಲಿಯೋ ಕ್ಲಬ್‌ನ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ ಪ್ರಯುಕ್ತ ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣ ದಲ್ಲಿ ಶನಿವಾರ ಹಮ್ಮಿಕೊಳ್ಳಲಾದ ರಾಷ್ಟ್ರೀಯ ಯುವ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ತನ್ನ ಧರ್ಮವನ್ನು ಪ್ರೀತಿಸಿ, ಇತರೆ ಧರ್ಮಕ್ಕೆ ಗೌರವ ಸಲ್ಲಿಸುವಂತೆ ಸಂದೇಶ ನೀಡಿರುವ ಸ್ವಾಮಿ ವಿವೇಕಾನಂದರು ಯುವಜನತೆಗೆ ಸ್ಛೂರ್ತಿಯಾಗಿದ್ದಾರೆ. ಆದರೆ ಇಂದು ಕೆಲವು ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ವಿವೇಕಾನಂದ ರನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ. ವಿವೇಕಾನಂದ ಸಿದ್ಧಾಂತಗಳನ್ನು ತಾವು ಮಾತ್ರವೇ ಗುತ್ತಿಗೆ ವಹಿಸಿಕೊಂಡವರಂತೆ ವರ್ತಿಸುತ್ತಿಸುವುದು ಅವರಿಗೆ ಮಾಡುವ ಮಹಾ ಅವಮಾನ ಎಂದು ಅವರು ಹೇಳಿದರು.

ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಮಾತನಾಡಿ, ಸ್ವಾಮಿ ವಿವೇಕಾ ನಂದರು ದೇಶದ ಪ್ರೇರಣಾ ಶಕ್ತಿಯಾಗಿದ್ದಾರೆ. ಅವರಿಗೆ ಭಾರತವನ್ನು ಜಗದ್ಗುರು ಮಾಡುವ ಕಲ್ಪನೆ ಹೊಂದಿದ್ದರು. ಅದನ್ನು ಇಂದು ನನಸು ಮಾಡಲು ಪ್ರತಿ ಯೊಬ್ಬರು ಕೈ ಜೋಡಿಸಬೇಕು ಎಂದು ತಿಳಿಸಿದರು.

ಉಡುಪಿ ಡಿವೈಎಸ್ಪಿ ಎಸ್.ಜೆ.ಕುಮಾರಸ್ವಾಮಿ, ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ, ಉಪನ್ಯಾಸಕ ಡಾ.ರಾಮದಾಸ ಪ್ರಭು, ಪರ್ಕಳ ಲಯನ್ಸ್ ಕ್ಲಬ್ ಅಧ್ಯಕ್ಷ ಹರೀಶ್ ಸುವರ್ಣ, ವಿದ್ಯಾರ್ಥಿನಿ ಕ್ಷೇಮಾ ಪಾಲಕ ಡಾ.ರಾಮ ರಾಯ ಆಚಾರ್ಯ ಉಪಸ್ಥಿತರಿದ್ದರು.

ಯುವ ಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮೊದಲು ನಗರದ ಬೋರ್ಡ್ ಹೈಸ್ಕೂಲ್‌ನಿಂದ ಹೊರಟ ವಿದ್ಯಾರ್ಥಿಗಳ ಜಾಥಾಕ್ಕೆ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಚಾಲನೆ ನೀಡಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)