varthabharthi

ರಾಷ್ಟ್ರೀಯ

ಸಿಐಸಿ ಆಯುಕ್ತರ ನೇಮಕಾತಿಯಲ್ಲಿ ವಿಳಂಬ: ಮಾಹಿತಿ ನೀಡಲು ಪ್ರಧಾನಿ ಕಾರ್ಯಾಲಯಕ್ಕೆ ಸೂಚನೆ

ವಾರ್ತಾ ಭಾರತಿ : 13 Jan, 2018
Varthabharathi

ಹೊಸದಿಲ್ಲಿ, ಜ.13: ಕೇಂದ್ರ ಮಾಹಿತಿ ಆಯೋಗ (ಸಿಐಸಿ)ದಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಿಸಲು ಯಾಕೆ ವಿಳಂಬ ಮಾಡಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಮುಖ್ಯ ಮಾಹಿತಿ ಆಯುಕ್ತ ಆರ್.ಕೆ.ಮಾಥುರ್ ಅವರು ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಸೂಚಿಸಿದ್ದಾರೆ.

 11 ಸದಸ್ಯರ ಸಿಐಸಿಯಲ್ಲಿ ಈಗ ಮೂರು ಹುದ್ದೆಗಳು ಖಾಲಿಯಿವೆ. ಜನವರಿ 15ರಂದು ಮಾಹಿತಿ ಆಯುಕ್ತೆ ಮಂಜುಳಾ ಪ್ರಷೇರ್ ನಿವೃತ್ತಿಯಾಗಲಿದ್ದು ಈ ಮೂಲಕ ಸಿಐಸಿಯ ಹಾಲಿ ಸದಸ್ಯರ ಸಂಖ್ಯೆ 7ಕ್ಕಿಳಿಯಲಿದೆ. ಈಗಾಗಲೇ ಸಿಐಸಿ ಎದುರು ಹಲವಾರು ಪ್ರಕರಣಗಳು ಇತ್ಯರ್ಥಕ್ಕೆ ಬಾಕಿಯಿದ್ದು ಶೀಘ್ರ ನೇಮಕಾತಿ ನಡೆಯದಿದ್ದಲ್ಲಿ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಯಿದೆ.

ಸಿಐಸಿಗೆ ಸದಸ್ಯರ ನೇಮಕಾತಿ ಪ್ರಕ್ರಿಯೆಯ ವಿವರ ಹಾಗೂ ಆಯ್ಕೆ ಸಮಿತಿಯ ಸದಸ್ಯರ ಹೆಸರು ಮತ್ತು ಅವರು ಹೊಂದಿರುವ ಹುದ್ದೆಗಳ ಬಗ್ಗೆ ವಿವರವನ್ನು ಕೋರಿ ನಿವೃತ್ತ ಕಮಾಂಡರ್ ಲೋಕೇಶ್ ಕೆ.ಬಾತ್ರ ಎಂಬವರು 2017ರ ಸೆ.11ರಂದು ಮಾಹಿತಿ ಹಕ್ಕಿನಡಿ ಅರ್ಜಿ ದಾಖಲಿಸಿದ್ದರು. ಇದಕ್ಕೆ ಉತ್ತರವಾಗಿ ತನಗೆ ದೊರೆತ ವಿವರದ ಬಗ್ಗೆ ಅಸಂತೃಪ್ತಿ ಸೂಚಿಸಿದ ಬಳಿಕ 2018ರ ಜನವರಿ 8ರಂದು ಅರ್ಜಿದಾರರು ಹಾಗೂ ಪ್ರತಿವಾದಿಗಳ ಉಪಸ್ಥಿತಿಯಲ್ಲಿ ಆಯೋಗವು ಅರ್ಜಿಯ ಬಗ್ಗೆ ವಿಚಾರಣೆ ನಡೆಸಿತು.

    ಮಾಹಿತಿ ಆಯುಕ್ತರ ಎರಡು ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಿಸಲು 2016ರ ಸೆ.2ರಂದು ಸಿಬ್ಬಂದಿ ನೇಮಕಾತಿ ಮತ್ತು ತರಬೇತಿ ಇಲಾಖೆ ಅರ್ಜಿಗಳನ್ನು ಆಹ್ವಾನಿಸಿತ್ತು. 225 ಮಂದಿ ಅರ್ಜಿ ಸಲ್ಲಿಸಿದ್ದರು. ಆದರೆ ಒಂದು ವರ್ಷ ದಾಟಿದರೂ ಇನ್ನೂ ಹುದ್ದೆಗಳಿಗೆ ಯೋಗ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಸರಕಾರ ವಿಫಲವಾಗಿದೆ ಎಂದು ಬಾತ್ರ ಆಯೋಗದ ಗಮನಕ್ಕೆ ತಂದರು.

ಅಲ್ಲದೆ ಪ್ರಧಾನಮಂತ್ರಿಗಳ ಕಚೇರಿ(ಪಿಎಂಒ)ಯಲ್ಲಿ ಲಭ್ಯವಿರುವ ದಾಖಲೆಗಳ ಮಾಹಿತಿ ಕೋರಿ ತಾನು ಸಲ್ಲಿಸಿದ್ದ ಅರ್ಜಿಯನ್ನು ಪ್ರಧಾನಿಯವರ ಕಚೇರಿಯು ಸಿಬ್ಬಂದಿ ನೇಮಕಾತಿ ಇಲಾಖೆಗೆ ವರ್ಗಾಯಿಸಿದೆ. ಯಾವುದಾದರೂ ಕಾರಣ ನೀಡಿ ಮಾಹಿತಿ ಒದಗಿಸಲು ವಿಳಂಬ ಮಾಡುವುದು ಪ್ರಧಾನಿ ಸಚಿವಾಲಯದ ಮಾಮೂಲಿ ಕ್ರಮವಾಗಿದೆ ಎಂದು ಬಾತ್ರ ಅಸಮಾಧಾನ ಸೂಚಿಸಿದ್ದಾರೆ.

  ಅಲ್ಲದೆ ಪಿಎಂಒದ ಕಾರ್ಯವೈಖರಿಯಿಂದಾಗಿ ತನಗೆ ಅನವಶ್ಯಕ ಖರ್ಚುವೆಚ್ಚವಾಗಿರುವ ಕಾರಣ ತನಗೆ 1 ಲಕ್ಷ ರೂ. ಪರಿಹಾರ ಒದಗಿಸಬೇಕು ಹಾಗೂ ಪ್ರತಿವಾದಿಗಳ ಮೇಲೆ ಆಯೋಗವು ದಂಡ ವಿಧಿಸಬೇಕು ಎಂದು ಬಾತ್ರ ಆಗ್ರಹಿಸಿದ್ದಾರೆ.

 ಬಾತ್ರ ಅವರ ಅರ್ಜಿಯನ್ನು ಸಿಬ್ಬಂದಿ ನೇಮಕಾತಿ ಇಲಾಖೆಗೆ ವರ್ಗಾಯಿಸಿರುವ ಬಗ್ಗೆ ಪಿಎಂಒ ಕಚೇರಿಯನ್ನು ತೀವ್ರವಾಗಿ ತರಾಟೆಗೆತ್ತಿಕೊಂಡಿರುವ ಮುಖ್ಯ ಮಾಹಿತಿ ಆಯುಕ್ತ ಆರ್.ಕೆ.ಮಾಥುರ್, ಅರ್ಜಿಯಲ್ಲಿ ಕೋರಲಾಗಿರುವ ಮಾಹಿತಿಯನ್ನು 15 ದಿನದೊಳಗೆ ಒದಗಿಸುವಂತೆ ಆದೇಶಿಸಿದ್ದಾರೆ. ಆದರೆ ತನಗೆ ಆಗಿರುವ ನಷ್ಟದ ಬಗ್ಗೆ ಬಾತ್ರ ಅಂಕಿಅಂಶದ ಸಹಿತ ಮಾಹಿತಿ ನೀಡದ ಕಾರಣ ಪರಿಹಾರ ನೀಡಬೇಕೆಂಬ ಕೋರಿಕೆಯನ್ನು ಮಾನ್ಯ ಮಾಡಲು ನಿರಾಕರಿಸಿದ್ದಾರೆ.

 

Comments (Click here to Expand)