varthabharthi

ಬೆಂಗಳೂರು

ವೋಲ್ವೋ ಬಸ್ ಅಪಘಾತ: ಮೃತರ ಕುಟುಂಬಕ್ಕೆ ತಲಾ 3ಲಕ್ಷ ರೂ.ಪರಿಹಾರ; ಸಾರಿಗೆ ಸಚಿವ ಎಚ್.ಎಂ.ರೇವಣ್ಣ

ವಾರ್ತಾ ಭಾರತಿ : 13 Jan, 2018

ಬೆಂಗಳೂರು, ಜ. 13: ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ವೋಲ್ವೋ ಬಸ್ ಚಾಲಕನ ನಿಯಂತ್ರಣ ತಪ್ಪಿ ಹಾಸನದ ಸಮೀಪ ಹಳ್ಳಕ್ಕೆ ಮುಗುಚ್ಚಿಬಿದ್ದ ಪರಿಣಾಮ ಎಂಟು ಮಂದಿ ಸಾವನ್ನಪ್ಪಿರುವ ಘಟನೆ ನನ್ನಲ್ಲಿ ತೀವ್ರ ದಿಗ್ಭ್ರಮೆ ಮೂಡಿಸಿದೆ ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ತಿಳಿಸಿದ್ದಾರೆ.

ಮೃತರ ಕುಟುಂಬಕ್ಕೆ ತಲಾ 3 ಲಕ್ಷ ರೂ.ಪರಿಹಾರ ನೀಡಲಾಗುವುದು. ಅಲ್ಲದೆ, ಗಾಯಗೊಂಡಿರುವ ಎಲ್ಲ ಪ್ರಯಾಣಿಕರ ವೈದ್ಯಕೀಯ ವೆಚ್ಚವನ್ನು ನಿಗಮದಿಂದಲೇ ಭರಿಸಲಾಗುವುದು. ಅಲ್ಲದೆ, ಮೃತರ ವಾರಸುದಾರರಿಗೆ ನಿಗಮದಿಂದ ತಲಾ 15 ಸಾವಿರ ರೂ.ಮಧ್ಯಂತರ ಪರಿಹಾರವನ್ನು ವಿತರಣೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಸದರಿ ವಾಹನವು ನಿನ್ನೆ ರಾತ್ರಿ 11:45ರ ಸುಮಾರಿಗೆ ಬೆಂಗಳೂರಿನಿಂದ ಹೊರಟಿದ್ದು, ಬೆಳಗಿನಜಾವ 3:30ರ ಸುಮಾರಿಗೆ ಹಾಸನದ ಶಾಂತಿಗ್ರಾಮ, ಕಾರೆಕೆರೆ ಬಳಿಯ ಕೃಷಿ ವಿಶ್ವ ವಿದ್ಯಾಲಯದ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಮುಗುಚಿಬಿದ್ದ ಪರಿಣಾಮ ಬಸ್ಸಿನಲ್ಲಿದ್ದ 45ಮಂದಿ ಪ್ರಯಾಣಿಕರ ಪೈಕಿ ಚಾಲಕ ಮತ್ತು ಚಾಲಕ ಕಂ ನಿವಾರ್ಹಕ ಸೇರಿದಂತೆ 7ಮಂದಿ ಸ್ಥಳದಲ್ಲೆ ಸಾವನ್ನಪ್ಪಿದ್ದು, ಮತ್ತೊಬ್ಬ ಪ್ರಯಾಣಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ವಾಹನದ ಅರ್ಹತಾ ಪತ್ರ 2018ರ ಎಪ್ರಿಲ್ 12ರ ವರೆಗೆ ಚಾಲ್ತಿಯಲ್ಲಿದ್ದು, ಅಪಘಾತ ಸಂಭವಿಸುವ ಸಮಯದಲ್ಲಿ ವಿಟಿಎಂಎಸ್ ಪ್ರಕಾರ ವಾಹನದ ವೇಗವು 59 ಕಿ.ಮೀ(ಗಂಟೆಗೆ)ಗಳಲ್ಲಿ ಇತ್ತು. ಈಗಾಗಲೇ ಅಪಘಾತ ಸ್ಥಳಕ್ಕೆ ಉಪ ನಿರ್ದೇಶಕರು, ಪ್ರಧಾನ ವ್ಯವಸ್ಥಾಪಕರು ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಸಾರಿಗೆ ಇಲಾಖೆ ಪ್ರಕಟಣೆ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)