varthabharthi

ಬೆಂಗಳೂರು

ತಾಕತ್ತಿದ್ದರೆ ಆರೆಸ್ಸೆಸ್ ನಿಷೇಧಿಸಿ: ಶೋಭಾ ಕರಂದ್ಲಾಜೆ

ವಾರ್ತಾ ಭಾರತಿ : 13 Jan, 2018

ಬೆಂಗಳೂರು, ಜ.13: ಬಿಜೆಪಿ ಮುಖಂಡರು ಹಾಗೂ ಆರೆಸ್ಸೆಸ್ ಯಾವುದೇ ರೀತಿಯ ಸಮಾಜಘಾತುಕ ಚಟುವಟಿಕೆಗಳಲ್ಲಿ ಸಾಬೀತಾಗಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಂಘಟನೆಗಳನ್ನು ನಿಷೇಧಿಸಲಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಸವಾಲು ಹಾಕಿದ್ದಾರೆ.

 ಶನಿವಾರ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬೆಂಗಳೂರು ನಗರ ಬಿಜೆಪಿ ಘಟಕ ವತಿಯಿಂದ ಬಿಜೆಪಿ ಮತ್ತು ಆರೆಸ್ಸೆಸ್‌ನವರು ಉಗ್ರಗಾಮಿಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ ಎನ್ನಲಾದ ಹೇಳಿಕೆ ಖಂಡಿಸಿ ಹಮ್ಮಿಕೊಳ್ಳಲಾಗಿದ್ದ 'ಜೈಲ್ ಬರೋ' ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಆರೆಸ್ಸೆಸ್ ಸಂಘಟನೆಯಿಂದ ದೀನ್ ದಯಾಳ್ ಉಪಾಧ್ಯಾಯ, ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾಣಿ, ನರೇಂದ್ರ ಮೋದಿ ಅವರಂತಹ ನಾಯಕರು ಬೆಳೆದು ಬಂದಿದ್ದಾರೆ. ಆರೆಸ್ಸೆಸ್ ಬಗ್ಗೆ ನಮಗೆ ಈಗಲೂ ಹೆಮ್ಮೆಯಿದೆ. ಒಂದು ವೇಳೆ ಭಯೋತ್ಪಾದನೆ ಸಂಘಟನೆಗಳಲ್ಲಿ ನಾವು ಭಾಗಿಯಾಗಿದ್ದರೆ ತಕ್ಷಣವೇ ನೀವು ನಿಷೇಧ ಹೇರಬೇಕು, ಇಲ್ಲದಿದ್ದರೆ ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದರು.

ಅಲ್ಪಸಂಖ್ಯಾತ ಸಮುದಾಯವನ್ನು ಓಲೈಸುವ ಭರದಲ್ಲಿ ಹಿಂದು ವಿರೋಧಿ ನೀತಿ ಅನುಸರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದ ಅವರು, ಪಂಡಿತ್ ಜವಹರ್ ಲಾಲ್ ನೆಹರೂ, ಇಂದಿರಾಗಾಂಧಿ ಅವರಿಂದಲೇ ನಮ್ಮ ಸಂಘಟನೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಇನ್ನು ಸಿದ್ದರಾಮಯ್ಯ ಅವರಿಂದ ಇದು ಸಾಧ್ಯವೇ ಎಂದು ಟೀಕಿಸಿದರು.

ಶಾಸಕ ವಿಜಯಕುಮಾರ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಮಂತ್ರ, ಮಾಟ ಮಾಡಿದರೂ ರಾಜ್ಯದಲ್ಲಿ ಈ ಬಾರಿ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಖಚಿತವಾಗಿದೆ. ಸಾಧನ ಸಮಾವೇಶ ನೆಪದಲ್ಲಿ ಬಿಜೆಪಿಯನ್ನು ಗುರಿಯಾಗಿಟ್ಟುಕೊಂಡು ಟೀಕೆ ಮಾಡುವುದು ಅವರಿಗೆ ಕಾಯಕವಾಗಿದೆ. ಜನರ ತೆರಿಗೆ ಹಣದಲ್ಲಿ ಯಾತ್ರೆ ಮಾಡುವ ಬದಲು ಕಾಂಗ್ರೆಸ್ ಪಕ್ಷದ ವತಿಯಿಂದ ಮಾಡಲಿ ಎಂದರು.

ಮಾಜಿ ವಿಧಾನಪರಿಷತ್ ಸದಸ್ಯ ಅಶ್ವಥ್ ನಾರಾಯಣ ಮಾತನಾಡಿ, ತಾವೊಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿ ಎಂಬುದನ್ನು ಮರೆತು ಹಾದಿಬೀದಿಯಲ್ಲಿ ನಾಟಕ ಮಾಡುತ್ತಾ ಮತದಾರರನ್ನು ಮೋಡಿ ಮಾಡಲು ಹೊರಟಿದ್ದಾರೆ. ಚುನಾವಣೆ ಬಂದಾಗ ನಿಮ್ಮ ಹಣೆಬರಹ ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

ಪ್ರತಿಭಟನೆಯಲ್ಲಿ ಶಾಸಕರಾದ ಸತೀಶ್ ರೆಡ್ಡಿ , ಮುನಿರಾಜು, ಮಾಜಿ ಶಾಸಕ ನಂದೀಶ್‌ರೆಡ್ಡಿ, ಮಾಜಿ ಮೇಯರ್ ನಟರಾಜ್, ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಸೇರಿ ಪ್ರಮುಖರಿದ್ದರು.

ಸಂಚಾರ ದಟ್ಟಣೆ

ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬಿಜೆಪಿ 'ಜೈಲ್ ಬರೋ' ಪ್ರತಿಭಟನೆ ನಡೆಸಿದರಿಂದ ಶನಿವಾರ ನಗರದ ಕೆ.ಜಿ.ರಸ್ತೆ, ಕಾರ್ಪೋರೇಷನ್ ವೃತ್ತ, ನೃಪತುಂಗ ರಸ್ತೆ ಸೇರಿ ನಾನಾ ರಸ್ತೆಗಳಲ್ಲಿ ಸಂಚಾರ ವ್ಯತ್ಯಯವಾಯಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)