varthabharthi

ಕರ್ನಾಟಕ

ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಶೀಘ್ರದಲ್ಲೇ ನಿರ್ಮಾಣ: ರಮೇಶ್ ಜಾರಕಿಹೊಳಿ

ವಾರ್ತಾ ಭಾರತಿ : 13 Jan, 2018

ಬೆಳಗಾವಿ, ಜ.13: ಸಂಗೊಳ್ಳಿ ಹಾಗೂ ನಂದಗಡ ಗ್ರಾಮಗಳಲ್ಲಿ ಶೀಘ್ರವೇ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಯನ್ನು ನಿರ್ಮಿಸಲಾಗುವುದು ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

ಬೈಲಹೊಂಗಲದ ಸಂಗೊಳ್ಳಿ ಗ್ರಾಮದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಆಯೋಜಿಸಿದ್ದ ಸಂಗೊಳ್ಳಿ ರಾಯಣ್ಣ ಉತ್ಸವದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಗೆ ರಾಜ್ಯ ಸರಕಾರದಿಂದ ಈಗಾಗಲೇ ಸ್ಥಳವನ್ನು ಗುರುತಿಸಲಾಗಿದೆ. ಜನವರಿ 14 ರಂದು ಕೇಂದ್ರದ ತಂಡ ಸೈನಿಕ ಶಾಲೆಯ ಸ್ಥಳ ಹಾಗೂ ನಿರ್ಮಾಣದ ಕುರಿತು ಪರಿಶೀಲನೆ ನಡೆಸಲಿದೆ ಎಂದು ಅವರು ತಿಳಿಸಿದರು.

ಜಗತ್ತಿಗೆ ಮಾದರಿಯಾಗಿರುವ ಚನ್ನಮ್ಮನ ಬಲಗೈ ಬಂಟ ಸಂಗೊಳ್ಳಿ ರಾಯಣ್ಣನ ಉತ್ಸವ ಬರೀ ಉತ್ಸವಕ್ಕೆ ಸೀಮಿತಗೊಳ್ಳಬಾರದು. ಸಂಗೊಳ್ಳಿ ರಾಯಣ್ಣನ ಆದರ್ಶವನ್ನು ಎಲ್ಲರೂ ಪಾಲಿಸಬೇಕು. ಕಳೆದ ವರ್ಷ ಉತ್ಸವದಲ್ಲಿ ಮುಖ್ಯಮಂತ್ರಿ ಘೋಷಣೆ ಮಾಡಿರುವ ಎಲ್ಲ ಯೋಜನೆಗಳನ್ನು ಕೂಡಲೇ ಅನುಷ್ಠಾನಗೊಳಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ವಿಶ್ವನಾಥ ಪಾಟೀಲ್ ಮಾತನಾಡಿ, ದಿನಾಚರಣೆ ಹಾಗೂ ಉತ್ಸವಗಳನ್ನು ಒಂದು ಸಮುದಾಯ ಅಥವಾ ಪಕ್ಷಕ್ಕೆ ಸೀಮಿತಗೊಳಿಸದೆ ಎಲ್ಲರೂ ಸೇರಿ ಆಚರಿಸಿದಾಗ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯ ಎಂದರು.

ಸಂಗೊಳ್ಳಿ ಗ್ರಾಮದಲ್ಲಿ ಸಣ್ಣ ಪ್ರಮಾಣದಲ್ಲಿ ಆಚರಿಸಲಾಗುತ್ತಿದ್ದ ಉತ್ಸವವನ್ನು ಇಂದು ರಾಜ್ಯ ಸರಕಾರದಿಂದ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ರಾಯಣ್ಣನ ಪರಾಕ್ರಮ ಹಾಗೂ ದೇಶದ ಚರಿತ್ರೆಯನ್ನು ಪರಿಚಯಿಸುವುದು ಉತ್ಸವದ ಆಶಯವಾಗಿದೆ ಎಂದು ಅವರು ಹೇಳಿದರು.

ಸಂಗೊಳ್ಳಿ ರಾಯಣ್ಣ ಅಪ್ರತಿಮ ವೀರ ಹಾಗೂ ಹುಟ್ಟು ಹೋರಾಟಗಾರನಾಗಿದ್ದರು. ಅವರ ಧೈರ್ಯ, ಸಾಹಸ ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಯುವಜನರಿಗೆ ಸೂಕ್ತ ಮಾರ್ಗದರ್ಶನ ನೀಡಿದರೆ ಬಲಿಷ್ಠ ಭಾರತ ನಿರ್ಮಾಣ ಸಾಧ್ಯವಾಗಲಿದೆ. ಸಂಗೊಳ್ಳಿ ರಾಯಣ್ಣನ ಹೆಸರು ದೇಶಾದ್ಯಂತ ಚಿರಪರಿಚಿತವಾಗುವ ನಿಟ್ಟಿನಲ್ಲಿ ಸರಕಾರ ವಿವಿಧ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಸಂಗೊಳ್ಳಿ-ಬೇನಕೊಪ್ಪನಡುವಿನ ಸೇತುವೆ ನಿರ್ಮಾಣಕ್ಕೆ ಮುಖ್ಯಮಂತ್ರಿಗಳು 40 ಕೋಟಿ ರೂ.ಘೋಷಣೆ ಮಾಡಿದ್ದ ಪ್ರಕಾರ, ಹಣ ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ನಡೆದಿದೆ. ಸಂಗೊಳ್ಳಿ ಗ್ರಾಮದಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳನ್ನು ಇನ್ನಷ್ಟು ತ್ವರಿತಗತಿಯಲ್ಲಿ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. ಸಂಗೊಳ್ಳಿಯ ಗುರು ಸಿದ್ಧಲಿಂಗೇಶ್ವರ ಸಂಸ್ಥಾನ ಹಿರೇಮಠದ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿ ಮಾತನಾಡಿ, ಸಂಗೊಳ್ಳಿಯ ರಾಯಣ್ಣನ ಕುರಿತು ಚಿಂತನ-ಮಂಥನ ಇಂದು ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ಉತ್ಸವದ ಎರಡನೇ ದಿನ ಯುವಜನೋತ್ಸವ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಅದರಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಯುವಕರು ದುಶ್ಚಟಗಳಿಗೆ ಬಲಿಯಾಗದೇ, ರಾಯಣ್ಣನ ದೇಶಪ್ರೇಮ ಹಾಗೂ ಸದ್ಗುಣಗಳನ್ನು ಪಾಲಿಸಬೇಕು. ಸಂಗೊಳ್ಳಿ ಉತ್ಸವದಲ್ಲಿ ಪ್ರತಿವರ್ಷ ಒಬ್ಬ ಯೋಧರಿಗೆ ಸಂಗೊಳ್ಳಿ ರಾಯಣ್ಣ ಪ್ರಶಸ್ತಿಯನ್ನು ನೀಡಬೇಕೆಂದು ಗ್ರಾಮಸ್ಥರ ಬೇಡಿಕೆಯಾಗಿತ್ತು, ಮುಂಬರುವ ವರ್ಷಗಳಲ್ಲಿ ಆದರೂ ಸರಕಾರ ಈ ಪ್ರಶಸ್ತಿಯನ್ನು ನೀಡಬೇಕೆಂದು ಅವರು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಸ್.ಝಿಯಾವುಲ್ಲಾ, ತಾ.ಪಂ.ಅಧ್ಯಕ್ಷೆ ಶೈಲಾ ಶಿದ್ರಾಮಣಿ, ಉಪಾಧ್ಯಕ್ಷ ಬಸವನಗೌಡ ಪಾಟೀಲ್, ಜಿ.ಪಂ.ಸದಸ್ಯರಾದ ಅನಿಲ ಮೇಕಲಮರಡಿ, ರಾಧಾಶಾಮ ಖಾದ್ರೋಳ್ಳಿ, ಗೌಸ್‌ಸಾಬ್ ಬುಡ್ಡೆಮುಲ್ಲಾ, ಗ್ರಾ.ಪಂ.ಅಧ್ಯಕ್ಷೆ ಯಲ್ಲವ್ವ ಹಳೇಮನಿ, ಉಪಾಧ್ಯಕ್ಷ ಬಸವರಾಜ ಕೊಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)