varthabharthi

ಬೆಂಗಳೂರು

ಬಿಎಸ್ಪಿಯಿಂದ ‘ಪ್ರಜಾಪ್ರಭುತ್ವ ಉಳಿಸಿ’ ಜನಜಾಗೃತಿ ರ್ಯಾಲಿ

ವಾರ್ತಾ ಭಾರತಿ : 13 Jan, 2018

ಬೆಂಗಳೂರು, ಜ.13: ಬಹುಜನ ಸಮಾಜ ಪಕ್ಷದ ವತಿಯಿಂದ ಪ್ರಜಾಪ್ರಭುತ್ವ ಉಳಿಸುವ ಕಡೆಗೆ- ಆನೆಯ ನಡಿಗೆ ಎಂಬ ರಾಜ್ಯಾದ್ಯಂತ ಜನಜಾಗೃತಿ ಬೈಕ್ ರ್ಯಾಲಿಯನ್ನು ಜ.15 ರಿಂದ 26 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಗುರುಮೂರ್ತಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಯಾವತಿ ಅವರ ಜನ್ಮದಿನಾಚರಣೆ ದಿನವಾದ ಜ.15 ರಿಂದ ಆರಂಭ ಮಾಡಿ ಸಂವಿಧಾನ ಜಾರಿ ದಿನವಾದ ಜ.26 ರವರೆಗೆ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ರ್ಯಾಲಿ ಮೂಲಕ ಪ್ರಜಾಪ್ರಭುತ್ವದಲ್ಲಿ ಆಡಳಿತ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸಬೇಕು ಹಾಗೂ ಇಂದಿನ ಸರಕಾರಗಳು ಏನು ಮಾಡುತ್ತಿವೆ ಎಂಬ ವಿಷಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದು ಹೇಳಿದರು.

ದೇಶದಲ್ಲಿ ಶೇ.1 ರಷ್ಟು ಜನರ ಕೈನಲ್ಲಿ ಶೇ.58 ಕ್ಕೂ ಅಧಿಕ ಸಂಪತ್ತು ಇದೆ. ಅದೇ ರೀತಿ ಶೇ.50 ರಷ್ಟು ಜನರ ಕೈನಲ್ಲಿ ಶೇ.2 ರಷ್ಟು ಸಂಪತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಶೇ.50 ರಷ್ಟು ಕುಟುಂಬಗಳಲ್ಲಿ ಶೇ.3 ರಷ್ಟು ಭೂಮಿ ಇದೆ. ಶೇ.10 ರಷ್ಟು ಕುಟುಂಬಗಳ ಕೈನಲ್ಲಿ 54 ರಷ್ಟು ಭೂಮಿ ಇದೆ. ಅಲ್ಲದೆ, ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಶೇ.20 ರಷ್ಟು ಕುಟುಂಬಗಳು ಭೂ ರಹಿತರಾಗಿದ್ದಾರೆ. ಅಲ್ಲದೆ, 40 ವರ್ಷಗಳ ಹಿಂದೆ ಎಲ್ಲರಿಗೂ ಸಿಗುತ್ತಿದ್ದ ಶಿಕ್ಷಣ ಇಂದು ಕೇವಲ ಉಳ್ಳವರಿಗೆ ಎಂದಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ ಅಧಿಕಾರ ನಡೆಸುತ್ತಿರುವ ಸರಕಾರಗಳು ಪ್ರಜಾಪ್ರಭುತ್ವಕ್ಕೆ ಮಾರಕವಾದ, ಸಂವಿಧಾನದ ಆಶಯಗಳಿಗೆ ವಿರುದ್ಧವಾದ ನೀತಿಗಳನ್ನು ಜಾರಿ ಮಾಡಲಾಗುತ್ತಿದೆ. ಸರಕಾರಿ ವಲಯವನ್ನು ಖಾಸಗೀಕರಣ ಮಾಡಲಾಗುತ್ತಿದೆ. ರೈತ ಸಮುದಾಯ ಆತ್ಮಹತ್ಯೆಯ ಹಾದಿ ಹಿಡಿದಿದ್ದರೂ ಸರಕಾರಗಳು ರೈತ ಪರವಾದ ನಿಲುವುಗಳನ್ನು ತೆಗೆದುಕೊಳ್ಳುತ್ತಿಲ್ಲ. ಮತ್ತೊಂದು ಕಡೆ ಕಾವೇರಿ, ಕೃಷ್ಣ, ಮಹಾದಾಯಿ ನೀರಿನ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ರಾಜಕೀಯ ಮಾಡುತ್ತಿವೆ ಎಂದು ಅವರು ಆರೋಪಿಸಿದರು.

ದೇಶದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಮತ್ತು ಬಿಜೆಪಿ ಸರಕಾರಗಳು ಜನವಿರೋಧಿ ನೀತಿಗಳನ್ನು ಜನರಿಗೆ ಸರಿಯಾದ ಜಾಗೃತಿ ಇಲ್ಲದೇ ಇರುವುದರಿಂದ ಅದಕ್ಕೆ ಪ್ರತಿರೋಧ ವ್ಯಕ್ತಪಡಿಸುತ್ತಿಲ್ಲ. ಈ ನಿಟ್ಟಿನಲ್ಲಿ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಈ ರ್ಯಾಲಿ ಆಯೋಜಿಸಲಾಗಿದೆ. ಅಲ್ಲದೆ, ಈ ರ್ಯಾಲಿಯ ನಂತರ ಜ.28 ರಂದು ನಗರದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

 

Comments (Click here to Expand)