varthabharthi

ಬೆಂಗಳೂರು

ಬೆಂಗಳೂರು: ಅರಮನೆ ಮೈದಾನದಲ್ಲಿ ಜ.19ರಿಂದ ಅಂತಾರಾಷ್ಟೀಯ ಸಿರಿಧಾನ್ಯ ಮೇಳ

ವಾರ್ತಾ ಭಾರತಿ : 13 Jan, 2018

ಬೆಂಗಳೂರು, ಜ.13: ಸಾವಯವ ಕಷಿ ಮತ್ತು ಸಿರಿಧಾನ್ಯ ಬೆಳೆಗಳಿಗೆ ಉತ್ತೇಜನ ನೀಡಿ, ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ನಗರದ ಅರಮನೆ ಮೈದಾನದಲ್ಲಿ ಜ.19ರಿಂದ 21ರವರೆಗೆ ಅಂತಾರಾಷ್ಟ್ರೀಯ ಮಟ್ಟದ ಸಾವಯವ ಮತ್ತು ಸಿರಿಧಾನ್ಯ ಮೇಳ-2018ವನ್ನು ಆಯೋಜಿಸಲಾಗಿದೆ. ಶನಿವಾರ ನಗರದ ಅರಮನೆ ಮೈದಾನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೃಷಿ ಸಚಿವ ಕೃಷ್ಣ ಭೈರೇಗೌಡ, ರೈತರ ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ‘ಅಂತಾರಾಷ್ಟ್ರೀಯ ಮಟ್ಟದ ಸಾವಯವ ಮತ್ತು ಸಿರಿಧಾನ್ಯ ಮೇಳ’ ಆಯೋಜಿಸಲಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಳವನ್ನು ಉದ್ಘಾಟಿಸಲಿದ್ದಾರೆ. ಉದ್ದಿಮೆದಾರರು, ವಿಜ್ಞಾನಿಗಳು, ಮಾರುಕಟ್ಟೆ ವ್ಯವಸ್ಥಾಪಕರು ವೇದಿಕೆಯಲ್ಲಿ ಉಪಸ್ಥಿತರಿರುತ್ತಾರೆ. ಮೂರು ದಿನಗಳ ಕಾಲ ಆಯೋಜಿಸಿರುವ ಮೇಳದಲ್ಲಿ ರಾಜ್ಯದಾದ್ಯಂತ 10 ಸಾವಿರಕ್ಕೂ ಹೆಚ್ಚು ರೈತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ವಾಣಿಜ್ಯೋದಮಿಗಳು ಹಾಗೂ ರೈತರ ನಡುವೆ ನೇರಸಂಪರ್ಕ ಕಲ್ಪಿಸಿ, ಸಾರ್ವಜನಿಕರಲ್ಲಿ ಸಿರಿಧಾನ್ಯಗಳ ಬಗ್ಗೆ ಅರಿವು ಮೂಡಿಸುವುದು ಮೇಳದ ಪ್ರಮುಖ ಉದ್ದೇಶವಾಗಿದೆ. ಅಮೆರಿಕ, ಜರ್ಮನಿ, ಸ್ವಿಡ್ಜರ್ಲೆಂಡ್, ಯುಎಇ, ದಕ್ಷಿಣ ಕೊರಿಯಾ, ಉಗಾಂಡ, ಚೀನಾ ಮತ್ತು ಮಲೇಷ್ಯಾ ಸೇರಿದಂತೆ ವಿವಿಧ ದೇಶಗಳ 225 ಕಂಪನಿಗಳು ಮೇಳದಲ್ಲಿ ಭಾಗವಹಿಸಲಿವೆ. ಬ್ರಿಟಾನಿಯಾ, ನೆಸ್ಲೆ, ಮಯ್ಯೆಸ್, ನಾಮಧಾರಿ, ಫ್ಲಿಪ್‌ಕಾರ್ಟ್‌ನಂತಹ ಬಹತ್ ಕಾರ್ಪೊರೇಟ್ ಕಂಪನಿಗಳು ಸೇರಿದಂತೆ ಹಾಗೂ ಕೆಲವು ಚಿಲ್ಲರೆ ವಹಿವಾಟು ಕಂಪನಿಗಳ ಪ್ರಮುಖರು ಭಾಗವಹಿಸಲಿದ್ದಾರೆ. ಏಕಕಾಲದಲ್ಲಿ 4 ವಿಚಾರಗೋಷ್ಠಿಗಳು ನಡೆಯಲಿದ್ದು, ಒಟ್ಟು 63ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಸಿರಿಧಾನ್ಯಗಳಿಂದ ತಯಾರಿಸಿದ ಸಾಂಪ್ರದಾಯಿಕ ಆಹಾರ ಪದಾರ್ಥಗಳನ್ನು ಮೇಳದಲ್ಲಿ ಪರಿಚಯಿಸಲಾಗುವುದು. ಸಿರಿಧಾನ್ಯಗಳ ಅಡುಗೆ, ಪೋಷಕಾಂಶಗಳ ಬಗ್ಗೆ ಮಾಹಿತಿ ನೀಡುವ ವಿಚಾರಗೋಷ್ಠಿ ಆಯೋಜಿಸಲಾಗಿದೆ ಎಂದರು.

ಪ್ರಶಸ್ತಿ ಪ್ರದಾನ: ಮೊದಲ ಬಾರಿಗೆ ರಾಷ್ಟ್ರಮಟ್ಟದ ಜೈವಿಕ್ ಇಂಡಿಯನ್ ಪ್ರಶಸ್ತಿಯನ್ನು ಕೃಷಿ, ರಫ್ತು ಬ್ರಾಂಡಿಂಗ್, ರಿಟೇಲ್ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಕೃಷ್ಣಭೈರೇಗೌಡ ತಿಳಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಪೋಸ್ಟರ್ ತಯಾರಿ ಸ್ಪರ್ಧೆ, ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸರಕಾರದ ಕೃಷಿ ಇಲಾಖೆ ಆಯುಕ್ತ ಸತೀಶ್, ಹಾಸನ ಕೃಷಿ ವಿವಿ ಡೀನ್ ಡಾ.ದೇವಕುಮಾರ್, ಮನೋಜ್ ಮೆನನ್, ಪ್ರಿಯಾ ಅರ್ಜುನ್ ಸೇರಿದಂತೆ ಪ್ರಮುಖರಿದ್ದರು.

ಬಾಕ್ಸ್....

ಸಿರಿಧಾನ್ಯ ಮೇಳದಲ್ಲಿ 350 ಮಳಿಗೆಗಳನ್ನು ತೆರೆಯಲು ವ್ಯವಸ್ಥೆ ಮಾಡಲಾಗಿದೆ. ಕಾರ್ಪೊರೇಟ್ ಕಂಪನಿಗಳ 250 ಮಳಿಗೆಗಳಲ್ಲಿ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಾಡಲಿದ್ದಾರೆ. 8ರಿಂದ 10 ದೇಶಗಳ ನೂರು ಉದ್ಯಮಿಗಳು ಖರೀದಿದಾರರಾಗಿ ಪಾಲ್ಗೊಳ್ಳಲಿದ್ದಾರೆ.

-ಕೃಷ್ಣ ಭೈರೇಗೌಡ ಕೃಷಿ ಸಚಿವ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)