varthabharthi

ಬೆಂಗಳೂರು

ಮುಖ್ಯ ನ್ಯಾಯಮೂರ್ತಿ ರಾಜೀನಾಮೆಗೆ ಎಸ್‌ಡಿಪಿಐ ಒತ್ತಾಯ

ವಾರ್ತಾ ಭಾರತಿ : 13 Jan, 2018

ಬೆಂಗಳೂರು. ಜ. 13: ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಿರುದ್ಧ ನಾಲ್ವರು ನ್ಯಾಯಾಧೀಶರು ಗಂಭೀರ ಸ್ವರೂಪದ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿಗಳು ಕೂಡಲೇ ಆ ಹುದ್ದೆಯಿಂದ ಕೆಳಗಿಳಿಯಬೇಕು ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಆಗ್ರಹಿಸಿದೆ.

ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರಸಕ್ತ ಬೆಳವಣಿಗೆಗಳ ಬಗ್ಗೆ ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿರುವ ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎ.ಸಯೀದ್, ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದ್ದು, ಅದರ ರಕ್ಷಣೆಗೆ ಜನತೆ ಒಗ್ಗೂಡಬೇಕು ಎಂದು ಹೇಳಿದ್ದಾರೆ.

ನ್ಯಾಯಾಂಗ ವ್ಯವಸ್ಥೆ ಪಕ್ಷಪಾತ ರಹಿತ, ಪಾರದರ್ಶಕ, ಸ್ವತಂತ್ರವೂ ಆಗಿರಬೇಕು. ಆದರೆ, ಅದು ಪೂರ್ವಗ್ರಹ ಪೀಡಿತ, ಪಕ್ಷಪಾತೀಯ ಹಾಗೂ ಸ್ವಹಿತಾಸಕ್ತಿ ಒಳಗೊಂಡಿರುವುದು ನಾಲ್ವರು ನ್ಯಾಯಾಧೀಶರ ಆರೋಪಗಳಿಂದ ಬಹಿರಂಗವಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆ, ದೇಶದ ಸಮಗ್ರತೆ ಹಾಗೂ ವೈವಿಧ್ಯತೆಗೆ ಮಾರಕ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ಕೋರ್ಟಿನ ನಾಲ್ವರು ನ್ಯಾಯಾಧೀಶರು ಮಾಡಿರುವ ಐದು ಆರೋಪಗಳ ಪೈಕಿ ಆದೇಶಗಳ ಅವ್ಯವಸ್ಥಿತ ವರ್ಗಾವಣೆ, ಮನಸೋ ಇಚ್ಛೆ ಪ್ರಕರಣಗಳನ್ನು ವಹಿಸುವುದು ಬೆಳಕಿಗೆ ಬಂದಿದೆ. ಅದರಲ್ಲೂ ವಿಶೇಷವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮೇಲಿದ್ದ ಹತ್ಯೆ ಪ್ರಕರಣವನ್ನು ಕೈಗೆತ್ತಿ ಕೊಂಡಿದ್ದ ಸಿಬಿಐ ನ್ಯಾ.ಬಿ.ಎಚ್. ಲೋಯಾರ ನಿಗೂಢ ಸಾವಿನ ಪ್ರಕರಣ ದೇಶದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಅವರು ಪ್ರಕಟಣೆಯಲ್ಲಿ ಸಂಶಯ ವ್ಯಕ್ತಪಡಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

 

Comments (Click here to Expand)