varthabharthi

ಬೆಂಗಳೂರು

ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಜಾರಿಗೆ ನಿರ್ಲಕ್ಷ: ಮಂಗ್ಳೂರು ವಿಜಯ

ವಾರ್ತಾ ಭಾರತಿ : 13 Jan, 2018

ಬೆಂಗಳೂರು, ಜ.13: ರಾಜ್ಯದಲ್ಲಿ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ. ಹೀಗಾಗಿ ದಲಿತರ ಮೇಲಿನ ದೌರ್ಜನ್ಯ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ ಎಂದು ಹಿರಿಯ ಹೋರಾಟಗಾರ ಮಂಗ್ಳೂರು ವಿಜಯ ಆತಂಕ ವ್ಯಕ್ತಪಡಿಸಿದ್ದಾರೆ.

 ಶನಿವಾರ ಬೆಂಗಳೂರು ದಲಿತ್ ಫೋರಂ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ದಲಿತ ಸಮುದಾಯದ ಸ್ಥಿತಿಗತಿಗಳ ಕುರಿತ ಅವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿವರ್ಷ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಜನವರಿ ಹಾಗೂ ಜುಲೈ ತಿಂಗಳಿನಲ್ಲಿ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಗೆ ಸಂಬಂಧಿಸಿದ ಸಭೆಗಳು ನಡೆಯಬೇಕು. ಆದರೆ, ಅವುಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

 ಜಾತಿವಾದಿಗಳು ದಲಿತ ಮೇಲೆ ನಿರಂತರವಾಗಿ ಹಲ್ಲೆಗಳನ್ನು ನಡೆಸುತ್ತಿವೆ. ದೌರ್ಜನ್ಯ ನಡೆಸಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾದ ಪೊಲೀಸ್ ವ್ಯವಸ್ಥೆ, ನ್ಯಾಯಾಂಗ ವ್ಯವಸ್ಥೆ ನಿಷ್ಕ್ರಿಯಗೊಂಡಿದೆ. ಇದಕ್ಕೆ ಏನು ಕಾರಣವೆಂಬುದನ್ನು ಪರಿಶೀಲಿಸಿ ಅಧಿಕಾರಿಗಳ ಮೇಲೆ ಒತ್ತಡ ಹಾಕಿ, ದೌರ್ಜನ್ಯ ಪೀಡಿತರಿಗೆ ನ್ಯಾಯ ಒದಗಿಸಿಕೊಡಬೇಕಾದ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಸಮಿತಿಯ ಅಧ್ಯಕ್ಷರು, ಸದಸ್ಯರು ಸಭೆಗಳನ್ನೆ ಮಾಡದೆ, ನಿರ್ಲಕ್ಷ ವಹಿಸಿದ್ದಾರೆ. ಇಂತಹ ಸಂದರ್ಭದಲ್ಲಿ ದಲಿತರ ಮೇಲಿನ ದೌರ್ಜನ್ಯ ತಡೆಯವುದಾದರು ಹೇಗೆ ಎಂದು ಅವರು ಪ್ರಶ್ನಿಸಿದರು.

  ದಲಿತರ ಮೇಲೆ ದೌರ್ಜನ್ಯ ನಡೆದಿಸಿರುವ ಶೇ.90ಕ್ಕೂ ಹೆಚ್ಚು ಆರೋಪಿಗಳಿಗೆ ಶಿಕ್ಷೆಯೇ ಆಗುವುದಿಲ್ಲ. ಇದರಿಂದ ದೌರ್ಜನ್ಯ ನಡೆಸುವವರಿಗೆ ದೌರ್ಜನ್ಯ ನಡೆಸಲು ಕುಮ್ಮಕ್ಕು ಕೊಟ್ಟಂತಾಗುತ್ತದೆ. ಹೀಗಾಗಿ ದಲಿತ ಸಂಘಟನೆಗಳು, ಪೊಲೀಸ್, ನ್ಯಾಯಾಂಗ ವ್ಯವಸ್ಥೆ ದಲಿತ ಸಮುದಾಯದ ಸ್ಥಿತಿಗತಿಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು, ಪ್ರಾಮಾಣಿಕವಾಗಿ ಕೆಲಸ ಮಾಡಬೇಕಾಗಿದೆ ಎಂದು ಅವರು ಆಶಿಸಿದರು.

 ಪ್ರೊ.ಎಂ.ನಾರಾಯಣ ಸ್ವಾಮಿ ಮಾತನಾಡಿ, ದಲಿತ ಸಮುದಾಯದ ಪ್ರತಿಯೊಬ್ಬರು ಜೊತೆ-ಜೊತೆಯಾಗಿ ನೆರವು-ಪ್ರೋತ್ಸಾಹವನ್ನು ನೀಡುವುದು-ಪಡೆಯುವುದರ ಮೂಲಕ ಬೆಳೆಯಬೇಕಾಗಿದೆ. ವ್ಯಕ್ತಿಯೊಬ್ಬ ದುರ್ಬಲ ಇರಬಹುದು. ಆದರೆ, ಸಮುದಾಯ ಬಲಿಷ್ಠವಾಗಿದೆ. ಹೀಗಾಗಿ ದಲಿತ ಸಮುದಾಯದ ವ್ಯಕ್ತಿಗಳು ಬಿಡಿಬಿಡಿಯಾಗಿರದೆ ಸಮುದಾಯವಾಗಿ ಬಲಿಷ್ಠಗೊಳ್ಳಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಮುಖಂಡ ಚಳವಳಿಯಲ್ಲಿ ಯುವ ಸಮುದಾಯದ ಪಾಲ್ಗೊಳ್ಳುವಿಕೆಯ ಕುರಿತು ಮಾತನಾಡಿದರು. ಈ ವೇಳೆ ಬೆಂಗಳೂರು ದಲಿತ ಫೋರಂನ ಗಜೇಂದ್ರ, ನಾರಾಯಣ ಮೂರ್ತಿ, ಚೇತನ್ ಕುಮಾರ್ ಮತ್ತಿತರರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)