varthabharthi

ಕರ್ನಾಟಕ

ನ್ಯಾಯಾಂಗ ಬಿಕ್ಕಟ್ಟು: ಕೇಂದ್ರದ ಪಲಾಯನವಾದ ಸರಿಯಲ್ಲ - ಎಸ್.ಪಿ. ಮುದ್ದಹನುಮೇಗೌಡ

ವಾರ್ತಾ ಭಾರತಿ : 13 Jan, 2018
Varthabharathi

ತುಮಕೂರು.ಜ.13:ಸುಪ್ರಿಂಕೋರ್ಟಿನ ಅತ್ಯಂತ ನಂಬಿಕಾರ್ಹ ವ್ಯವಸ್ಥೆಯಾಗಿರುವ ಕೊಲ್ಜಿಯಂನ ಒಳಗೆ ತೀರ್ಮಾನವಾಗಬೇಕಾದ ವಿಚಾರ,ಮಾಧ್ಯಮಗಳ ಮುಂದೆ ಚರ್ಚೆಯಾಗಿ,ಇಡೀ ಪ್ರಪಂಚವೇ ಭಾರತದ ನ್ಯಾಯಾಂಗ ವ್ಯವಸ್ಥೆಯನ್ನು ಒಂದು ರೀತಿ ಅಪನಂಬಿಕೆಯಿಂದ ನೋಡುವಂತಾಗಿದ್ದು, ಕೂಡಲೇ ಪ್ರಧಾನಿ ಮತ್ತು ರಾಷ್ಟ್ರಪತಿ ಮದ್ಯ ಪ್ರವೇಶಿಸಿ ಸಮಸ್ಯೆಯನ್ನು ಇತ್ಯರ್ಥಗೊಳಿಸಬೇಕೆಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಕಳೆದ 70ವರ್ಷಗಳಲ್ಲಿ ಇಂತಹ ಘಟನೆ ನಡೆದಿರಲಿಲ್ಲ. ನಿಜಕ್ಕು ಇದು ಆತಂಕಕಾರಿ ವಿಚಾರ. ಕೇಂದ್ರದ ಕಾನೂನು ಸಚಿವರು ಇದು ಕೊಲ್ಜಿಯಂನ ಅಂತರಿಕ ವಿಚಾರ ಎಂದು ಹೇಳಿರುವುದು ಸರಿಯಲ್ಲ. ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳ ನಡುವೆ ಬಿಕ್ಕಟ್ಟು ಸಂಭವಿಸಿದಾಗ, ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡಬೇಕಾಗುತ್ತದೆ. ಆದ್ದರಿಂದ ಕೂಡಲೇ ಶಾಸಕಾಂಗದ ಮುಖ್ಯಸ್ಥರಾದ ಪ್ರಧಾನಿಗಳು ಹಾಗೂ ಕಾರ್ಯಾಂಗದ ಮುಖ್ಯಸ್ಥರಾದ ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು, ಇಲ್ಲದಿದ್ದಲ್ಲಿ ಇಡೀ ನ್ಯಾಯಾಂಗ ವ್ಯವಸ್ಥೆಯೇ ಕುಸಿದು ಬೀಳಲಿದೆ ಎಂದು ಎಚ್ಚರಿಸಿದರು.

ಸುಪ್ರಿಂಕೋರ್ಟಿನ ಮುಖ್ಯ ನ್ಯಾಯಾಮೂರ್ತಿಗಳ ವಿರುದ್ದ ಬಂಡೆದ್ದು ನಾಲ್ವರು ಹಿರಿಯ ನ್ಯಾಯಾಧೀಶರು ಸಾರ್ವಜನಿಕರ ಮುಂದೆ ಹೇಳಿಕೆ ನೀಡಿರುವುದು ಸಮಂಜಸವಲ್ಲ, ಹಾಗೆಯೇ ಹಿರಿಯ ನ್ಯಾಯಾಧೀಶರ ಮನವಿಯನ್ನು ಗಂಭೀರವಾಗಿ ಪರಿಗಣಿಸದಿರುವುದು ಅಷ್ಟೇ ತಪ್ಪು. ಇಡೀ ದೇಶಕ್ಕೆ ನ್ಯಾಯ ನೀಡಬೇಕಾದವರೆ ಸಾರ್ವಜನಿಕರ ಮುಂದೆ ನ್ಯಾಯ ಕೇಳಿದರೇ ದೇಶದ ಪರಿಸ್ಥಿತಿ ಹೇಗಾಗಬೇಡ ಎಂದು ಅವರು, ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗಗಳು ಜನರ ನಂಬಿಕೆ ಕೇಳಿದರೆ ಪ್ರಪಂಚದ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದರು.

ಕರ್ನಾಟಕ ಹೈಕೋರ್ಟಿನಲ್ಲಿರುವ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಶ್ರೀಗಳ ಕೇಸಿನ ವಿಚಾರಣೆಯಿಂದ ಇದುವರೆಗೂ 9 ಜನ ನ್ಯಾಯಾಧೀಶರು ಹಿಂದೆ ಸರಿದಿದ್ದಾರೆ. ನ್ಯಾಯಾಧೀಶರೆಂದರೆ ಎಂತಹ ಸಂದರ್ಭದಲ್ಲಿಯೂ ಯಾವುದೇ ರೀತಿಯ ವ್ಯಾಮೋಹಕ್ಕೆ ಒಳಗಾಗಬಾರದು. ಈ ಘಟನೆ ನೋಡಿದರೆ ನಿಜಕ್ಕೂ ಸೋಜಿಗವೆನಿಸುತ್ತದೆ. ಭ್ರಷ್ಟಾಚಾರ ನಗದು ರೂಪದಲ್ಲಿಯೇ ನಡೆಯಬೇಕೆಂದಿನಿಲ್ಲ. ಜಾತಿ, ಧರ್ಮದ ಕಾರಣಕ್ಕೆ ನಡೆಯುವ ಪಕ್ಷಪಾತವೂ ಭ್ರಷ್ಟಾಚಾರವೆನಿಸಿಕೊಳ್ಳುತ್ತವೆ ಎಂದು ಮಾರ್ಮಿಕವಾಗಿ ನುಡಿದರು. 

ಸುದ್ದಿಗೋಷ್ಠಿಯಲ್ಲಿ ಶಾಸಕ ಡಾ.ರಫೀಕ್ ಅಹಮದ್, ಮಾಜಿ ಶಾಸಕ ಹೆಚ್.ನಿಂಗಪ್ಪ, ಮುಖಂಡರಾದ ರಾಯಸಚಿದ್ರ ರವಿಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಟೋ ರಾಜು ಮತ್ತಿತರರು ಉಪಸ್ಥಿತರಿದ್ದರು.

 

Comments (Click here to Expand)