ನೀಲಿಚಿತ್ರ ನಟಿ ಜೊತೆ ಟ್ರಂಪ್ಗೆ ನಂಟಿತ್ತು : ವಾಲ್ಸ್ಟ್ರೀಟ್ ಜರ್ನಲ್ ವರದಿ
►ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ನಟಿಗೆ ಮಾಸಿಕವಾಗಿ 1.30 ಲಕ್ಷ ಡಾಲರ್ ಪಾವತಿಸುತ್ತಿದ್ದ ಟ್ರಂಪ್
►ಆರೋಪ ನಿರಾಕರಿಸಿದ ಟ್ರಂಪ್ರ ನ್ಯಾಯವಾದಿ
ವಾಶಿಂಗ್ಟನ್,ಜ.13: ಡೊನಾಲ್ಡ್ ಟ್ರಂಪ್ ಅವರು 2016ರಲ್ಲಿ ಅಮೆರಿಕ ದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ ಸಂದರ್ಭದಲ್ಲಿ ತನ್ನ ಖಾಸಗಿ ವಕೀಲರ ಮೂಲಕ ನೀಲಿಚಿತ್ರಗಳ ನಟಿಯೊಬ್ಬಳಿಗೆ 1.30 ಲಕ್ಷ ಡಾಲರ್ ಹಣವನ್ನು ಮಾಸಿಕವಾಗಿ ಪಾವತಿಸುತ್ತಿದ್ದರೆಂದು ಅಮೆರಿಕದ ದೈನಿಕವೊಂದು ಶನಿವಾರ ವರದಿ ಮಾಡಿದೆ.
ತನ್ನೊಂದಿಗೆ ಲೈಂಗಿಕ ಸಂಬಂಧವಿರುವುದನ್ನು ಬಹಿರಂಗಪಡಿಸಬಾರದೆಂಬ ಉದ್ದೇಶದಿಂದ ಟ್ರಂಪ್ ಅವರು ಬ್ಲೂಫಿಲ್ಮ್ ನಟಿಗೆ ಹಣವನ್ನು ಪಾವತಿಸುತ್ತಿದ್ದರೆಂದು ವಾಲ್ಸ್ಟ್ರೀಟ್ ಜರ್ನಲ್ ಶುಕ್ರವಾರ ಪ್ರಕಟಿಸಿದ ವರದಿಯಲ್ಲಿ ತಿಳಿಸಿದೆ.
ಆದರೆ ಈ ವರದಿಗೆ ಪ್ರತಿಕ್ರಿಯೆ ನೀಡಲು ಶ್ವೇತಭವನ ನಿರಾಕರಿಸಿದೆ. ಆದಾಗ್ಯೂ, ಟ್ರಂಪ್ ಪರವಾಗಿ ನಟಿಗೆ ಹಣವನ್ನು ಪಾವತಿಸದ್ದರೆನ್ನಲಾದ ನ್ಯಾಯವಾದಿ ಮೈಕೆಲ್ ಕೊಹೆನ್ ಅವರು ಈ ಆರೋಪವನ್ನು ನಿರಾಕರಿಸಿದ್ದಾರೆ. ಇದೊಂದು ‘ವಿಲಕ್ಷಣ’ ಆರೋಪವೆಂದು ಅವರು ಬಣ್ಣಿಸಿದ್ದಾರೆ.
‘‘ ನನ್ನ ಕಕ್ಷಿದಾರರ ವಿರುದ್ಧ ಇಂತಹ ವಿಲಕ್ಷಣ ಆರೋಪವನ್ನು ಹೊರಿಸುತ್ತಿರುವುದು ಇದು ಎರಡನೇ ಸಲವಾಗಿದೆ. ಈ ಸುಳ್ಳು ನಿರೂಪಣೆಯನ್ನು ಶಾಶ್ವತವಾಗಿಸಲು ತಾವು ಕಳೆದೊಂದು ವರ್ಷದಿಂದ ಶ್ರಮಿಸುತ್ತಿದ್ದೀರಿ’’ ಎಂದು ಕೊಹೆನ್ ಹೇಳಿರುವುದಾಗಿ ವರದಿಯಾಗಿದೆ.
2006ರ ಜುಲೈನಲ್ಲಿ ಲೇಕ್ಟಾಹೊ ಎಂಬಲ್ಲಿ ಸಿಲೆಬ್ರಿಟಿ ಗಾಲ್ಫ್ ಕ್ರೀಡಾಕೂಟ ನಡೆದ ಸಂದರ್ಭದಲ್ಲಿ ಟ್ರಂಪ್, ನೀಲಿ ಚಿತ್ರ ನಟಿಯ ಜೊತೆ ದೈಹಿಕ ಸಂಪರ್ಕ ಹೊಂದಿದ್ದರೆಂದು ವಾಲ್ಸ್ಟ್ರೀಟ್ ಜರ್ನಲ್ ಪತ್ರಿಕೆ ವರದಿ ಮಾಡಿತ್ತು.