varthabharthi

ವೈವಿಧ್ಯ

ತ್ರಿವಳಿ ತಲಾಖ್ ಆಚರಣೆಯನ್ನು ಅಪರಾಧೀಕರಿಸುವುದು ಮುಸ್ಲಿಮರನ್ನು ಮತ್ತು ವಿರೋಧಪಕ್ಷಗಳನ್ನು ವಿಭಜಿಸುವ ಚಾಣಾಕ್ಷ ತಂತ್ರವಾಗಿದೆ.

ವಿಭಜಿಸು ಮತ್ತು ವಿಭ್ರಾಂತಿಗೊಳಪಡಿಸು

ವಾರ್ತಾ ಭಾರತಿ : 14 Jan, 2018
ಅನು: ಶಿವಸುಂದರ್

ಮುಸ್ಲಿಂ ಸಮುದಾಯದ ಬಗ್ಗೆ ಯಾವುದೇ ಕಾಳಜಿಯಿಲ್ಲದ, ಇಡೀ ಸಮುದಾಯವನ್ನೇ ತನ್ನ ಚುನಾವಣಾ ಯೋಜನೆಗಳಿಂದ ಹೊರಗಿಟ್ಟ, ಮುಸ್ಲಿಂ ಸಮುದಾಯದ ಮೇಲೆ ತನ್ನ ಸದಸ್ಯರು ಮಾಡುವ ದ್ವೇಷಪೂರಿತ ಭಾಷಣಗಳನ್ನು ಮತ್ತು ಆಕ್ರಮಣಗಳನ್ನು ತಡೆಯಲು ಯಾವ ಕ್ರಮಗಳನ್ನೂ ತೆಗೆದುಕೊಳ್ಳದ ಪಕ್ಷವೊಂದು ತನಗೆ ಮುಸ್ಲಿಂ ಮಹಿಳೆಯರ ಬಗ್ಗೆ ಅಪಾರ ಕಾಳಜಿಯಿದೆಯೆಂದು ನಂಬಿಸಲು ಪ್ರಯತ್ನಿಸುತ್ತಿದೆ!

ಹೊಸ ವರ್ಷದ ಪ್ರಾರಂಭದ ದಿನ ಪ್ರಧಾನಿ ನರೇಂದ್ರ ಮೋದಿಯವರು ಇನ್ನುಮುಂದೆ ಭಾರತದ ಮುಸ್ಲಿಂ ಹೆಣ್ಣುಮಕ್ಕಳು ಗಂಡಸಿನ ರಕ್ಷಣೆಯಿಲ್ಲದೆ ಸ್ವತಂತ್ರವಾಗಿ ಹಜ್‌ಗಾಗಿ ಕಕ್ಕಾಗೆ ಹೋಗಲು ಬೇಕಾದ ಖಾತರಿಯನ್ನು ತಮ್ಮ ಸರಕಾರವು ಒದಗಿಸಲಿದೆ ಎಂದು ಘೋಷಿಸಿದರು. ಇದು ಸುಳ್ಳಿಗೆ ಸತ್ಯದ ಕುಸುರಿ ತೊಡಿಸುವ ಮತ್ತೊಂದು ಕಸೂತಿ ಕೆಲಸವಾಗಿತ್ತು ಅಥವಾ ಇನ್ನು ನೇರವಾಗಿ ಹೇಳಬೇಕೆಂದರೆ ಅದು ಒಂದು ಹಸಿಹಸಿ ಸುಳ್ಳಾಗಿತ್ತು. 2015ರಲ್ಲಿ ಸೌದಿ ಅರೇಬಿಯಾದ ಸರಕಾರವು ಇನ್ನುಮುಂದೆ ಹಜ್ ಯಾತ್ರೆ ಮಾಡುವ ಮಹಿಳೆಯರು 45 ವರ್ಷ ದಾಟಿದ್ದು ನಾಲ್ಕು ಜನರ ಗುಂಪಿನಲ್ಲಿದ್ದರೆ ಪುರುಷರ ಜೊತೆಗೇ ಪ್ರಯಾಣಿಸಬೇಕಿರುವುದು ಕಡ್ಡಾಯವಲ್ಲವೆಂದು ತನ್ನ ಕಾನೂನಿಗೆ ತಿದ್ದುಪಡಿಯನ್ನು ಮಾಡಿತ್ತು. ಯಾವ ದೇಶದ ಸರಕಾರವೂ ಮತ್ತೊಂದು ದೇಶದ ಪ್ರವೇಶಕ್ಕೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ತನ್ನ ದೇಶದ ಪ್ರವೇಶದ ನಿಯಮಗಳ ಬಗ್ಗೆ ತೀರ್ಮಾನ ತೆಗೆದುಕೊಂಡಿರುವುದು ಸೌದಿ ಅರೇಬಿಯಾ. ಇರಲಿ. ಈ ಎಲ್ಲಾ ಕಂತೆ ಪುರಾಣಗಳನ್ನು ಒತ್ತಟ್ಟಿಗೆ ಸರಿಸಿ ನೋಡುವುದಾದರೂ, ತಾನು ಅಧಿಕಾರಕ್ಕೆ ಬಂದಾಗಿನಿಂದ ಗೋವಿನ ಹೆಸರಿನಲ್ಲಿ ಮುಸ್ಲಿಂ ಪುರುಷರು ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಮೌನವಾಗಿರುವ ಪ್ರಧಾನಿ ಮೋದಿ ಮತ್ತು ಬಿಜೆಪಿ ಸರಕಾರ ಈಗ ಇದ್ದಕ್ಕಿದ್ದಂತೆ ಮುಸ್ಲಿಂ ಮಹಿಳೆಯರ ಅಭ್ಯುದಯದ ಬಗ್ಗೆ ತೋರುತ್ತಿರುವ ಕಾಳಜಿಯನ್ನು ಹೇಗೆ ಅರ್ಥಮಾಡಿಕೊಳ್ಳಬೇಕು?

ಲೋಕಸಭೆಯಲ್ಲಿ ಮಂಡನೆಯಾಗಿ ಯಾವುದೇ ಚರ್ಚೆಯಿಲ್ಲದೆ ಅನುಮೋದನೆಯಾಗಲ್ಪಟ್ಟ ಮುಸ್ಲಿಂ ಮಹಿಳೆಯರು (ವಿವಾಹ ಹಕ್ಕಿನ ರಕ್ಷಣೆ) ಮಸೂದೆ -2017ಯೂ ಸಹ ಇದೇ ಬಗೆಯ ‘ಕಾಳಜಿ’ಯ ವಿಸ್ತರಣೆಯಾಗಿದೆ. ಸರಕಾರದ ಕಾಳಜಿಯು ನೈಜವಾಗಿದ್ದಾಗಿದ್ದಲ್ಲಿ ಈ ಕಾನೂನನ್ನು ರೂಪಿಸುವಾಗ ತ್ರಿವಳಿ ತಲಾಖ್ (ತಲಾಖೆ ಬಿದ್‌ಅತ್)ಅನ್ನು ವಿರೋಧಿಸುತ್ತಿರುವ ಆ ಮುಸ್ಲಿಂ ಮಹಿಳಾ ಸಂಘಟನೆಗಳ ಜೊತೆ ಏಕೆ ಸಮಾಲೋಚನೆಯನ್ನು ಮಾಡಲಿಲ್ಲ? ಈ ಮಸೂದೆಯನ್ನು ಸದನದಲ್ಲಿ ಮಂಡಿಸುವ ಕೆಲವೇ ವಾರಗಳ ಮುಂಚೆ ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಿದ್ದವರಲ್ಲಿ ಒಬ್ಬರಾಗಿದ್ದ ಮುಸ್ಲಿಂ ಮಹಿಳಾ ಗುಂಪೊಂದು ಮಸೂದೆಯನ್ನು ಅಂತಿಮಗೊಳಿಸುವ ಮುಂಚೆ ಅದರ ಬಗ್ಗೆ ವಿಸ್ತೃತ ಚರ್ಚೆಯಾಗಬೇಕೆಂದು ಆಗ್ರಹಿಸಿತ್ತು. ಅಷ್ಟುಮಾತ್ರವಲ್ಲದೆ ಆ ಗುಂಪು ತ್ರಿವಳಿ ತಲಾಖ್ ಪದ್ಧತಿಯನ್ನು ಅಪರಾಧೀಕರಿಸುವುದನ್ನು ವಿರೋಧಿಸಿತ್ತು ಮತ್ತು ಈ ಬಗೆಯ ಮಹಿಳಾ ಸಂಬಂಧಿ ಕಾನೂನನ್ನು ತರುವಾಗ ಸಂಬಂಧಿಸಿದ ಮಹಿಳಾ ಗುಂಪುಗಳೊಂದಿಗೆ ವಿಸ್ತೃತ ಸಮಾಲೋಚನೆಗಳು ನಡೆದದ್ದನ್ನು ಸರಕಾರದ ಗಮನಕ್ಕೆ ತಂದಿದ್ದರು. ಹಾಗೂ ‘‘ಮದುವೆಯೆಂಬುದು ಒಬ್ಬ ವಯಸ್ಕ ಪುರುಷ ಮತ್ತು ವಯಸ್ಕ ಮಹಿಳೆಯ ನಡುವಿನ ಒಪ್ಪಂದವಾಗಿರುವುದರಿಂದ ಈ ಒಪ್ಪಂದದ ಉಲ್ಲಂಘನೆಯ ವಿಷಯಗಳನ್ನು ಒಂದು ಸಿವಿಲ್ ತಕರಾರಿನ ಸ್ವರೂಪದಲ್ಲಿ ಪರಿಗಣಿಸುವುದರ ಮೂಲಕ ಮಾತ್ರ ಮುಸ್ಲಿಂಮಹಿಳೆಯರ ಸಬಲೀಕರಣವಾಗುತ್ತದೆ, ಇಲ್ಲವಾದಲ್ಲಿ ಮುಸ್ಲಿಂ ಮಹಿಳೆಯರು ಮತ್ತಷ್ಟು ಅತಂತ್ರವಾಗುತ್ತಾರೆ’’ ಎಂದು ಸ್ಪಷ್ಟಪಡಿಸಿತ್ತು.

ಇದೇ ಗುಂಪುಗಳು ಮತ್ತಿತರ ಮುಸ್ಲಿಂ ಮಹಿಳೆಯರು ಹೂಡಿದ ದಾವೆಯ ಬಗ್ಗೆ ಕಳೆದ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟು ಪೀಠದ ಬಹುಸಂಖ್ಯಾತ ನ್ಯಾಯಾಧೀಶರು ತ್ರಿವಳಿ ತಲಾಖ್‌ನ್ನು ಕಾನೂನುಬಾಹಿರವೆಂದು ಘೋಷಿಸಿ ಆದೇಶ ನೀಡಿರುವಾಗ ಇಷ್ಟು ತರಾತುರಿಯಲ್ಲಿ ಕಾನೂನನ್ನು ಜಾರಿಗೆ ತರುವ ಅಗತ್ಯವೇನಿತ್ತು? ಒಂದು ವೇಳೆ ಕಾನೂನನ್ನು ತರುವ ಜರೂರೇ ಇದ್ದಲ್ಲಿ, ಒಂದು ಸಿವಿಲ್ ತಗಾದೆಯನ್ನು ಬಗೆಹರಿಸುವ ವಿಷಯದಲ್ಲಿ ಕ್ರಿಮಿನಲ್ ಕಾನೂನು ತರುವ ಅಗತ್ಯವೇನಿತ್ತು? ಹಾಗಿದ್ದಲ್ಲಿ ಯಾವುದೇ ಸಿವಿಲ್ ಪರಿಹಾರವು ಸಾಧ್ಯವಿರಲಿಲ್ಲ ಎಂದು ಅರ್ಥವೇ? ಅಂಥ ಒಂದು ಸಿವಿಲ್ ಪರಿಹಾರದ ಸಾಧ್ಯತೆಯನ್ನು ಹುಡುಕುವ ಕನಿಷ್ಠ ಪ್ರಯತ್ನವನ್ನಾದರೂ ಮಾಡಲಾಯಿತೇ?

ಅಂಥದ್ದೇನೂ ನಡೆದಿಲ್ಲದಿರುವಾಗ ಸರಕಾರವು ಮುಸ್ಲಿಂ ಮಹಿಳೆಯರ ಮೇಲೆ ತೋರುತ್ತಿರುವ ಕರುಣೆಯು ಕೃತಕವಾದದ್ದೆಂದೂ ಬದಲಿಗೆ ಈ ಇಡೀ ಪ್ರಯತ್ನಗಳು ಸಂಕುಚಿತ ರಾಜಕೀಯ ಲೆಕ್ಕಾಚಾರಗಳಿಂದ ಕೂಡಿದೆಯೆಂದೂ ತೀರ್ಮಾನಕ್ಕೆ ಬರದೆ ಗತ್ಯಂತರವಿಲ್ಲ. ಸ್ಪಷ್ಟವಾಗಿ ಕಾಣುವಂತೆ ಮುಸ್ಲಿಂ ಮಹಿಳೆಯರನ್ನು ನೇರವಾಗಿ ಉದ್ದೇಶಿಸುವುದರ ಮೂಲಕ ಆ ಸಮುದಾಯವನ್ನು ವಿಭಜಿಸುವುದು ಬಿಜೆಪಿಗೆ ಅನುಕೂಲವನ್ನು ಮಾಡಿಕೊಡುತ್ತದೆ. ದಿಢೀರ್ ತಲಾಖ್‌ನ್ನು ರದ್ದುಮಾಡಲು ಕ್ರಮಗಳನ್ನು ತೆಗೆದುಕೊಳ್ಳಬೇಕೆಂಬ ಮುಸ್ಲಿಂ ಮಹಿಳೆಯರ ಅಹವಾಲನ್ನು ನಿರ್ಲಕ್ಷಿಸುತ್ತಾ ಬಂದ ಮುಸ್ಲಿಂ ಪುರೋಹಿತಶಾಹಿಗಳು ನಿರೀಕ್ಷಿಸಿದಂತೆ ಈ ಮಸೂದೆಯನ್ನು ವಿರೋಧಿಸಿವೆ. ಹೀಗಾಗಿ ಮುಸ್ಲಿಂ ಮಹಿಳೆಯರಿಗೆ ಆಯ್ಕೆಯ ಹಕ್ಕನ್ನೇ ನಿರಾಕರಿಸಿ ಅವರನ್ನು ಅತಂತ್ರಗೊಳಿಸುವ ಪದ್ಧತಿ ಒಂದೆಡೆ ಇದ್ದರೆ, ಮತ್ತೊಂದೆಡೆ ಮುಸ್ಲಿಂ ಸಮುದಾಯದ ಹಕ್ಕುಗಳು ಮತ್ತು ಅಗತ್ಯಗಳ ಬಗ್ಗೆ ಯಾವುದೇ ಕಾಳಜಿಯಿರದ ರಾಜಕೀಯ ಪಕ್ಷವು ಕೇವಲ ಈ ನಿರ್ದಿಷ್ಟ ವಿಷಯದತ್ತ ಮಾತ್ರ ಆಸಕ್ತಿ ಹೊಂದಿುವ ಸಂದರ್ಭವೊಂದು ಎದುರಾಗಿದೆ.

ಈ ರಾಜಕಿಯ ಕುತಂತ್ರವು ಈಗಾಗಲೇ ಫಲನೀಡತೊಡಗಿದೆ. ತ್ರಿವಳಿ ತಲಾಖ್‌ನ್ನು ಅಪರಾಧೀಕರಿಸುವ ಈ ಮಸೂದೆಯನ್ನು ಯಾವ ರಾಜಕೀಯ ಪಕ್ಷಗಳೂ ವಿರೋಧಿಸಲಿಲ್ಲ. ಇಡೀ ವಿಷಯವನ್ನು ಮುಸ್ಲಿಂ ಮಹಿಳೆಯರನ್ನು ಮುಸ್ಲಿಂ ಪುರುಷರಿಂದ ರಕ್ಷಿಸುವ ವಿಷಯವೆಂಬಂತೆ ಸಂಕುಚಿತಗೊಳಿಸಿದಾಗ ವಿರೋಧ ಮಾಡಲು ಹೆಚ್ಚಿಗೆ ಅವಕಾಶವಿರುವುದಿಲ್ಲ. ಮಾತ್ರವಲ್ಲದೆ ಈ ಮೂಲಕ ಇಡೀ ಮುಸ್ಲಿಂ ಸಮುದಾಯವನ್ನು ಸೈತಾನೀಕರಿಸಿಬಿಡುವುದು ಬಿಜೆಪಿ ಬಯುವಂಥ ಅಡ್ಡ ಪರಿಣಾಮವೇ ಆಗಿದೆ.

ಆದರೆ ಈ ಒಟ್ಟಾರೆ ವಿಷಯದಲ್ಲಿ ತ್ರಿವಳಿ ತಲಾಖ್ ವಿಷಯವನ್ನು ಎತ್ತಿದ್ದು ಮುಸ್ಲಿಂ ಮಹಿಳೆಯರೇ ವಿನಃ ಈ ಸರಕಾರವಲ್ಲವೆಂಬುದನ್ನು ಮರೆಮಾಚಲಾಗುತ್ತಿದೆ. ಈ ಪದ್ಧತಿಯಿಂದ ಭಾರತದ ನಾಗರಿಕರಾಗಿ ತಮ್ಮ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತಿದೆಯೆಂದು ಅವರು ಸುಪ್ರೀಂ ಕೋರ್ಟಿನ ಮೊರೆಹೋಗಿದ್ದರು ಹಾಗೂ ಆ ದಾವೆಯಲ್ಲಿ ಅವರು ಗೆದ್ದರು. ಆದರೆ ಅವರು ಈ ಪದ್ಧತಿಯನ್ನು ಕ್ರಿಮಿನಲ್ ಅಪರಾಧವೆಂದು ನೋಡಬೇಕೆಂದು ಆಗ್ರಹಿಸಿರಲಿಲ್ಲ. ಹೀಗಾಗಿ ಆ ಗುಂಪುಗಳು ಈಗ ಒಂದು ಇಬ್ಬಂದಿತನದಲ್ಲಿ ಸಿಲುಕಿಕೊಂಡಿವೆ. ಒಂದೆಡೆ ತ್ರಿವಳಿ ತಲಾಖ್‌ನ್ನು ತಡೆಯುವ ಕಠಿಣ ಕಾನೂನಿರುವುದರ ಭೀತಿಯು ತಮ್ಮನ್ನು ರಕ್ಷಿಸುತ್ತದೆಂದು ಹಲವಾರು ಮುಸ್ಲಿಂ ಮಹಿಳೆಯರು ಸಂತೋಷಪಡುತ್ತಿದ್ದಾರೆ. ಆದರೆ ಮತ್ತೊಂದೆಡೆ ಅವರು ತಿಳಿದುಕೊಳ್ಳಬೇಕಿರುವುದೇನೆಂದರೆ ಈ ಕಾನೂನಿನಲ್ಲಿ ಹಲವಾರು ಲೋಪಗಳಿವೆ. ಉದಾಹರಣೆಗೆ ಅದು ಜೀವನ ನಿರ್ವಹಣೆಯ ಪರಿಹಾರದ ಬಗ್ಗೆ ಏನನ್ನೂ ಹೇಳುವುದಿಲ್ಲ ಹಾಗೂ ಒಮ್ಮೆ ಪುರುಷನಿಗೆ ಜೈಲು ಶಿಕ್ಷೆಯಾದಲ್ಲಿ ಮತ್ತೆ ಅವರಿಬ್ಬರ ನಡುವೆ ಸಂಧಾನದ ಸಾಧ್ಯತೆಯನ್ನೇ ಸಂಪೂರ್ಣವಾಗಿ ತಳ್ಳಿಹಾಕುತ್ತದೆ. ಇಂತಹ ಕಠಿಣ ಕ್ರಮಗಳು ಮಹಿಳೆಯರಿಗೇ ಮುಳುವಾಗಬಹುದು. ಈ ಕಾನೂನಿನ ಪ್ರಕಾರ ಮೂರನೇ ವ್ಯಕ್ತಿಯೋರ್ವನ ದೂರಿನ ಅನ್ವಯವೂ ಪೊಲೀಸರು ಮುಸ್ಲಿಂ ಪುರುಷನ ಮೇಲೆ ಕ್ರಮವನ್ನು ಜರುಗಿಸಬಹುದು. ಈಗಾಗಲೇ ಹಲವಾರು ಕಾನೂನು ಪಂಡಿತರು ಗುರುತಿಸಿರುವಂತೆ ಈ ಕಾನೂನು ತ್ರಿವಳಿ ತಲಾಖ್ ಪದ್ಧತಿಯನ್ನು ನಿಲ್ಲಿಸುವ ಬದಲಿಗೆ ಪುರುಷರು ತಲಾಖ್‌ನ್ನು ಘೋಷಿಸದೆ ಸುಮ್ಮನೆ ತಮ್ಮ ಹೆಂಡತಿಯನ್ನು ತ್ಯಜಿಸಿಬಿಡುವಂಥ ಪ್ರಕರಣಗಳನ್ನು ಹೆಚ್ಚಿಸಿಬಿಡುವಂಥ ಸಾಧ್ಯತೆಗಳಿವೆ.

ಕೊನೆಯಲ್ಲಿ ನೋಡುವುದಾದರೆ ಈ ಇಡೀ ಪ್ರಕ್ರಿಯೆಯಲ್ಲಿರುವ ಸಿನಿಕತೆ ಅಪಾರ ವಿಷಾದವನ್ನು ಹುಟ್ಟುಹಾಕುತ್ತದೆ. ಮುಸ್ಲಿಂ ಸಮುದಾಯದ ಬಗ್ಗೆ ಯಾವುದೇ ಕಾಳಜಿಯಿಲ್ಲದ, ಇಡೀ ಸಮುದಾಯವನ್ನೇ ತನ್ನ ಚುನಾವಣಾ ಯೋಜನೆಗಳಿಂದ ಹೊರಗಿಟ್ಟ, ಮುಸ್ಲಿಂ ಸಮುದಾಯದ ಮೇಲೆ ತನ್ನ ಸದಸ್ಯರು ಮಾಡುವ ದ್ವೇಷಪೂರಿತ ಭಾಷಣಗಳನ್ನು ಮತ್ತು ಆಕ್ರಮಣಗಳನ್ನು ತಡೆಯಲು ಯಾವ ಕ್ರಮಗಳನ್ನೂ ತೆಗೆದುಕೊಳ್ಳದ ಪಕ್ಷವೊಂದು ತನಗೆ ಮುಸ್ಲಿಂ ಮಹಿಳೆಯರ ಬಗ್ಗೆ ಅಪಾರ ಕಾಳಜಿಯಿದೆಯೆಂದು ನಂಬಿಸಲು ಪ್ರಯತ್ನಿಸುತ್ತಿದೆ!

ಕೃಪೆ: Economic and Political Weekly

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)