varthabharthi

ಕರ್ನಾಟಕ

ಚಾಮರಾಜನಗರ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ವಡ್ಡಗೆರೆ ಚಿನ್ನಸ್ವಾಮಿ ವಿಷಾದ

ಕೃಷಿ ಕ್ಷೇತ್ರದ ನಿರ್ಲಕ್ಷದಿಂದಾಗಿ ಹಳ್ಳಿಗಳು ವೃದ್ಧಾಶ್ರಮಗಳಾಗಿವೆ

ವಾರ್ತಾ ಭಾರತಿ : 14 Jan, 2018

ಗುಂಡ್ಲುಪೇಟೆ, ಜ.13: ಗ್ರಾಮೀಣರ ಉದ್ಯೋಗವಾಗಿದ್ದ ಕೃಷಿ ಕ್ಷೇತ್ರ ಪ್ರಸ್ತುತ ನಿರ್ಲಕ್ಷ್ಯಕ್ಕೊಳಗಾದ ಪರಿಣಾಮ ಹಳ್ಳಿಗಳು ವೃದ್ಧಾಶ್ರಮಗಳಾಗಿವೆ. ಗ್ರಾಮೀಣ ಯುವಕರು ಪಟ್ಟಣದತ್ತ ವಲಸೆ ಹೋಗುತ್ತಿದ್ದಾರೆ ಎಂದು ಕೃಷಿ ಬರಹಗಾರ ಹಾಗೂ ಸಾಹಿತಿ ವಡ್ಡಗೆರೆ ಚಿನ್ನಸ್ವಾಮಿ ವಿಷಾದ ವ್ಯಕ್ತಪಡಿಸಿದರು.

 8ನೇ ಚಾಮರಾಜನಗರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಂಗವಾಗಿ ಪಟ್ಟಣದ ಗುರುಭವನದಲ್ಲಿ ನಡೆದ ಎರಡನೇ ದಿನದ ನುಡಿಜಾತ್ರೆ ಅಂಗವಾಗಿ ಶನಿವಾರ ನಡೆದ ರೈತಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರಿ ಕೆಲಸದಲ್ಲಿರುವ ಉದ್ಯೋಗಿಗಳು ಪಟ್ಟಣದಲ್ಲಿ ನೆಲೆಸಿ ನೂರಾರು ಕಿ.ಮೀ. ಕ್ರಮಿಸಿ ತಮ್ಮ ಕೆಲಸದ ಸ್ಥಳಕ್ಕೆ ತೆರಳುತ್ತಿದ್ದಾರೆ. ಮಕ್ಕಳ ವಿದ್ಯಾಭ್ಯಾಸದ ನೆಪದಲ್ಲಿ ಗ್ರಾಮೀಣರು ಪಟ್ಟಣಕ್ಕೆ ವಲಸೆಹೋಗುತ್ತಿದ್ದಾರೆ. ಕೃಷಿ ಎಂದಿಗೂ ನಷ್ಟವನ್ನುಂಟುಮಾಡುವುದಿಲ್ಲ. ಸಾಫ್ಟ್‌ವೇರ್ ಉದ್ಯೋಗದಲ್ಲಿ ಹೆಚ್ಚಿನ ಸಂಪಾದನೆಯಿದ್ದರೂ ಪ್ರತಿಭಾ ನಾಗವಾರ ಕೆಲಸ ಬಿಟ್ಟು ಕನಕಪುರದ ತಮ್ಮ ಜಮೀನಿನಲ್ಲಿ ದುಡಿಯುತ್ತಿದ್ದಾರೆ, ಪ್ರಫುಲ್ಲಚಂದ್ರರಂಥಾ ರೈತರು ದೇಶದ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಎಲ್ಲರೂ ಅಚ್ಚರಿಪಡುವ ಮಟ್ಟಕ್ಕೆ ಕೃಷಿಯಲ್ಲಿ ತೊಡಗಿದ್ದಾರೆ. ಇಂತಹ ನೂರಾರು ಉದಾಹರಣೆಗಳಿದ್ದರೂ ಯುವಕರು ಕ್ರಿಯಾಶೀಲತೆ, ಪ್ರಯೋಗ ಮನೋಭಾವದಿಂದ ತಮ್ಮ ಸುತ್ತಲಿನ ಪ್ರಕೃತಿಯನ್ನು ಅರಿಯದ ಪರಿಣಾಮ ತಮ್ಮ ಜಮೀನಿನ ಮಣ್ಣಿನ ಬಗ್ಗೆ ಕಾಳಜಿ ವಹಿಸದೆ ನಷ್ಟ ಅನುಭವಿಸುತ್ತಿದ್ದಾರೆಂದು ವಿಷಾದಿಸಿದರು.

 ಜಿಲ್ಲೆಯಲ್ಲಿನ ಕೆರೆಗಳಿಗೆ ನದಿಮೂಲದಿಂದ ನೀರು ತುಂಬಿಸಲಾಗುತ್ತಿದೆ. ಬೇಸಾಯಕ್ಕೆ ಅಗತ್ಯವಾದ ನೀರಿನ ಕೊರತೆಯಿಂದ ಹಿಂದೆ ಬಿದ್ದಿದ್ದ ಕೃಷಿ ಕ್ಷೇತ್ರ ಮುಂದಿನ ವರ್ಷಗಳಲ್ಲಿ ಮೈಕೊಡವಿ ಚೇತರಿಸಿಕೊಂಡು ಸುವರ್ಣಯುಗ ಪ್ರವೇಶಿಸಲಿದೆ ಎಂದ ಅವರು, ಯುವಕರು ಸಿನಿಕತೆ ಬಿಟ್ಟು ಬೇಸಾಯ ಮಾಡಿದರೆ ಸ್ವಾಭಿಮಾನ ಹಾಗೂ ತಮ್ಮಿಚ್ಚೆಯಂತೆ ಬದುಕಲು ಸಾಧ್ಯವಿದೆ ಎಂದರು.

 ಪ್ರಗತಿಪರ ರೈತ ಕೆ.ರಾಮಕೃಷ್ಣಪ್ಪ ಮಾತನಾಡಿ, ಡಾ.ಅಶೋಕ ದಳವಾಯಿಯವರ ಕೃಷಿ ಅಧ್ಯಯನ ವರದಿಯು ಕೃಷಿ ಕ್ಷೇತ್ರದ ಸಮಗ್ರ ಸಮಸ್ಯೆಗಳಿಗೆ ಕಾರಣಗಳು ಹಾಗೂ ನಿವಾರಣೆಯ ಬಗ್ಗೆ ವಿವರವಾದ ಮಾಹಿತಿ ಇದೆ. ಹಸಿರು ಕ್ರಾಂತಿಯ ನಂತರ ಕೃಷಿ ಕ್ಷೇತ್ರವು ತನ್ನ ಚಲನಶೀಲತೆ ಕಳೆದುಕೊಂಡು ನಿಂತ ನೀರಾಗಿದೆ. ಪರಸ್ಪರ ಅವಿನಭಾವ ಸಂಬಂಧ ಹೊಂದಿದ್ದ ಮಣ್ಣು, ಇದರಲ್ಲಿನ ಸೂಕ್ಷ್ಮ ಜೀವಿಗಳು, ದನಕರುಗಳು, ಗಿಡಮರಗಳು ಹಾಗೂ ಸುತ್ತಲಿನ ಪ್ರಾಕೃತಿಕ ಸಂಬಂಧ ಬೇರ್ಪಟ್ಟಿದೆ. ಸ್ವಾತಂತ್ರ ಪೂರ್ವದಲ್ಲಿದ್ದ ನಗರ ಪ್ರದೇಶ ತಮ್ಮ ವ್ಯಾಪ್ತಿಮೀರಿ ಬೆಳೆಯುತ್ತಿದ್ದು, ತದ್ವಿರುದ್ದವಾಗಿ ಕೃಷಿ ಕ್ಷೇತ್ರವು ಕಡಿಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚುತ್ತಿರುವ ನಗರವಾಸಿಗಳಿಗೆ ಆಹಾರ ಒದಗಿಸುವ ಸಮಸ್ಯೆ ತೀವ್ರವಾಗಲಿದೆ. ಮುಂದಿನ ವಷರ್ರ್ಗಳಲ್ಲಿ ಹಣ್ಣುಗಳಿಗೆ ಶೇ 198, ಹಾಲು ಹಾಗೂ ಹೈನು ಉತ್ಪನ್ನಗಳಿಗೆ 135, ಮೀನು ಹಾಗೂ ಮಾಂಸ ಉತ್ಪಾದನೆಗಳಿಗೆ 82, ತರಕಾರಿಗಳಿಗೆ 78ರಷ್ಟು ಬೆಲೆ ಹೆಚ್ಚಳವಾಗಲಿದೆ. ಕೃಷಿ ಚಟುವಟಿಕೆಯಲ್ಲಿ ಅವಸರ ಸಲ್ಲದು, ತಾಳ್ಮೆ ಹಾಗೂ ಯಾವುದೇ ಭೀತಿಯಿಲ್ಲದೆ ಭವಿಷ್ಯದ ಬಗ್ಗೆ ಭರವಸೆಯಿಂದ ಬೇಸಾಯ ಮಾಡಿದರೆ ಲಾಭ ದೊರಕಲಿದೆ ಎಂದರು.

ವೇದಿಕೆಯಲ್ಲಿ ಸರ್ವಾಧ್ಯಕ್ಷ ಜಿ.ಜಿ.ಮಂಜುನಾಥ್, ತಹಶೀಲ್ದಾರ್ ಕೆ.ಸಿದ್ದು, ಜಿಪಂ ಸದಸ್ಯ ಬಿ.ಕೆ.ಬೊಮ್ಮಯ್ಯ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಸ್.ಎಂ.ಮಲ್ಲಿಕಾರ್ಜುನಸ್ವಾಮಿ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಪಿ.ಸುನಿಲ್ ಮತ್ತಿತರರು ಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಈರುಳ್ಳಿ ಬೆಲೆ ಏರಿಕೆಯಾದ ಕೂಡಲೇ ಬೊಬ್ಬೆ ಹಾಕುವ ಗ್ರಾಹಕರು ಟೊಮಾಟೊ ಬೆಲೆ ಇಳಿಕೆಯಾಗಿ ಬೀದಿಗೆ ಸುರಿಯುತ್ತಿದ್ದರೂ ರೈತರ ಬಗ್ಗೆ ಜನರಿಗೆ ಅನುಕಂಪ ತೋರುವುದಿಲ್ಲ. ರೈತನಿಗೆ ಪೂರಕವಾದ ಮಾರುಕಟ್ಟೆ ಬೆಲೆ ದೊರಕದ ಕಾರಣದಿಂದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಸರಕಾರಗಳು ಕೃಷಿ ಕಲ್ಯಾಣ ಕೇಂದ್ರಗಳನ್ನು ಪ್ರಾರಂಭಿಸಿ ರೈತರಿಗೆ ಅಗತ್ಯವಾದ ಮಾರ್ಗದರ್ಶನ, ಮಾಹಿತಿಗಳನ್ನು ನೀಡುವ ಅಗತ್ಯವಿದೆ.

ಕೆ.ರಾಮಕೃಷ್ಣಪ್ಪ, ಪ್ರಗತಿಪರ ಕೃಷಿಕ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)