varthabharthi

ಸುಗ್ಗಿ

ನಾನು ಓದಿದ ಪುಸ್ತಕ

ಮಮತಾ ಅನ್ವೇಷಣೆಯಲ್ಲಿ ಜಯಂತ್ ಕಥನಾವರಣ

ವಾರ್ತಾ ಭಾರತಿ : 14 Jan, 2018
ಶ್ಯಾಮಲಾ ಮಾಧವ

ಮುಂಬೈ ಸಾಹಿತಿ, ವಿಮರ್ಶಕಿ ಮಮತಾ ರಾವ್ ಅವರು, ತಮ್ಮ ಭಾವನಾ ಲೋಕವನ್ನು ಪುನಶ್ಚೇತರಿಸಿ, ಅಪಾರವಾಗಿ ಪ್ರಭಾವಿಸಿ, ತನ್ನ ದೃಷ್ಟಿಕೋನವನ್ನೇ ಬದಲಾಯಿಸಿದ ಜಯಂತ ಕಾಯ್ಕಿಣಿಯವರ ಕಥನಾವರಣ ಕೂಲಂಕಷ ಅಧ್ಯಯನಗೈದು ಸವಿಸ್ತಾರವಾಗಿ ತಮ್ಮ ಅನಿಸಿಕೆಗಳನ್ನು ಇಲ್ಲಿ ತೆರೆದಿಟ್ಟಿದ್ದಾರೆ. ಕನ್ನಡ ಕಥನಲೋಕದ ದಿಗ್ಗಜರಾದ ಮಾಸ್ತಿ ಮತ್ತು ಚಿತ್ತಾಲರ ಜೀವನದರ್ಶನದ ಹಾದಿಯಲ್ಲೇ ಹೆಜ್ಜೆ ಇಟ್ಟರೂ, ಅವರಿಗಿಂತ ಭಿನ್ನ ಶೈಲಿಯಲ್ಲಿ, ವಿಶಿಷ್ಟ ಭಾಷೆಯಲ್ಲಿ ಅನೂಹ್ಯ ಅನುಭವ ಪ್ರಪಂಚವನ್ನು ತಮ್ಮ ಕಥೆಗಳ ಮೂಲಕ ಕಟ್ಟಿಕೊಟ್ಟು, ಕನ್ನಡ ಕಥಾಲೋಕದ ಕ್ಷಿತಿಜವನ್ನು ವಿಸ್ತರಿಸಿ ಸಮೃಧ್ಧಗೊಳಿಸಿದ ಶ್ರೇಯ ಜಯಂತ್ ಅವರಿಗೆ ಸಲ್ಲುತ್ತದೆಂದು ವಿಮರ್ಶಕಿ ಮಮತಾ ಇಲ್ಲಿ ಹೇಳಿದ್ದಾರೆ. ಮುಂಬೈಯ ಏಕತಾನತೆ ಹಾಗೂ ಯಾಂತ್ರಿಕತೆಯ ನಡುವೆಯೂ ನಲುಗದೆ ಉಸಿರಾಡುತ್ತಿರುವ ಮಾನವೀಯ ಸಂಬಂಧಗಳನ್ನು, ಅಪರಿಚಿತ ಮುಖಗಳ ಹಿಂದಿನ ಹೃದಯವಂತಿಕೆಯನ್ನು, ಇಲ್ಲಿಯ ಕಾಂಕ್ರಿಟ್ ಧೂಳಿನಡಿ ಕಳೆದು ಹೋಗದ ಪ್ರೀತಿಯ ಸೆಲೆಗಳನ್ನು, ಶೋಷಣೆಯ ಚಕ್ರದಡಿ ಸಿಲುಕಿಯೂ ನಲುಗದ ಆತ್ಮವಿಶ್ವಾಸವನ್ನು, ಅನಿರೀಕ್ಷಿತ ಆಘಾತಗಳ ತಾಪಕ್ಕೆ ಕರಗಿ ಆವಿಯಾಗದ ಆಸೆ, ಆಕಾಂಕ್ಷೆಗಳನ್ನು ಸಜೀವವಾಗಿ ಜಯಂತರಂತೆ ಚಿತ್ರಿಸಿದ ಲೇಖಕರು ಕನ್ನಡದಲ್ಲಿ ಇನ್ನೊಬ್ಬರಿಲ್ಲ, ಎಂದು ಮಮತಾ ಪ್ರತಿಪಾದಿಸಿದ್ದಾರೆ.

 

        ಡಾ.ಮಮತಾ ರಾವ್

 

           ಜಯಂತ ಕಾಯ್ಕಿಣಿ

ಜಯಂತ್ ಕಥೆಗಳನ್ನು ಗೋಕರ್ಣದ ಹಿನ್ನೆಲೆಯ ಕಥೆಗಳು ಮತ್ತು ಮುಂಬೈ ಕಥೆಗಳು ಎಂದು ವಿಂಗಡಿಸಿ ಪರಿಚಯಿಸಿದ ಪುಟಗಳ ಬಳಿಕ, ಜಯಂತ್ ಕಥೆಗಳಲ್ಲಿ ನಗರ ಜಾನಪದ ಹಾಗೂ ಜಯಂತರ ಕಥೆಗಳ ಅನನ್ಯತೆ ಎಂದು ಸೂಕ್ಷ್ಮವಾಗಿ ಅವಲೋಕಿಸಿ ಬರೆದ ಅಧ್ಯಯನಶೀಲ ವಿಶ್ಲೇಷಣೆ ಇಲ್ಲಿ ತೆರೆದು ಕೊಂಡಿದೆ.

 ಚಿಂತನಶೀಲ ಸಾಹಿತ್ಯದ ಆದ್ಯ ಪ್ರವರ್ತಕ ಗೌರೀಶ ಕಾಯ್ಕಿಣಿ ಅವರ ಮಗನಾಗಿ ಸಾಹಿತಿಗಳನ್ನು ಕಾಣುತ್ತಲೇ ಬೆಳೆದ ಜಯಂತರು ಹತ್ತೊಂಬತ್ತರ ಹರೆಯದಲ್ಲೇ ಪ್ರಥಮ ಕವನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ ಪಡೆದರೂ, ವಿಸ್ತೃತ ಚಿತ್ರಣಕ್ಕಾಗಿ ಮತ್ತೆ ಕಥಾಪ್ರಕಾರವನ್ನು ಆಯ್ದು ಕೊಂಡರೆಂದು ಲೇಖಕಿ ಬರೆಯುತ್ತಾರೆ. ನಮ್ಮ ಊರು, ನಮ್ಮ ಪರಿಸರ, ನಮ್ಮ ಮಾತು ಯಾವತ್ತೂ ಜೀವಕ್ಕೆ ಒಳ್ಳೆಯದು, ಎನ್ನುವ ಜಯಂತರ ಗೋಕರ್ಣದ ಹಿನ್ನೆಲೆಯ ಕಥೆಗಳು, ಅಲ್ಲಿನ ಸಮುದ್ರದ ಪರಿಸರ, ನೈತಿಕ ಪ್ರಜ್ಞೆಯನ್ನು ಪ್ರತಿನಿಧಿಸುವ ಮಾಸ್ತರರು, ಕಂಡ ಜೀವನ ಮೌಲ್ಯಗಳು ಮತ್ತು ಕಲಿತ ಬದುಕಿನ ಪಾಠಗಳನ್ನು ಸ್ಫುಟವಾಗಿ ತೆರೆದಿಟ್ಟಿವೆ ಎನ್ನುವ ಲೇಖಕಿ, ಜಯಂತರನ್ನು ಒಬ್ಬ ಪ್ರತಿಭಾವಂತ ಕಥೆಗಾರನನ್ನಾಗಿಸಿದ ಅವರ ಪ್ರಥಮ ಕಥೆ, ಇದ್ದಾಗ ಇದ್ದಾಂಗವನ್ನು ವಿಸ್ತೃತವಾಗಿ ವಿಶ್ಲೇಷಿಸಿದ್ದಾರೆ. ಅಂತೆಯೇ ಜಯಂತರ ಚುಕ್ಕಾಣಿ, ತೀರ, ಚಂದ್ರಶಾಲೆ, ಸಮುದ್ರ, ಉನ್ನಿಕೃಷ್ಣನ್ ಬಂದು ಹೋದ, ಟ್ರೈಸಿಕ್‌ಲ್, ತೆರೆದಷ್ಟೇ ಬಾಗಿಲು, ಬಿಡು ಬಿಡು ನಿನ್ನಯ ಹಾಗೂ ಇನ್ನಿತರ ಕಥೆಗಳನ್ನು ಮಮತಾ ಅತ್ಯಂತ ಆಸ್ಥೆಯಿಂದ ಇಲ್ಲಿ ಪರಿಚಯಿಸಿದ್ದಾರೆ. ಗೋಕರ್ಣ, ಬಂಕಿಕೊಡ್ಲ, ಕೋಟಿತೀರ್ಥ ಮತ್ತು ತದಡಿ ಜಯಂತರ ಜೀವನದ ಅವಿಭಾಜ್ಯ ಅಂಗಗಳಾಗಿರುವುದು ಅವರ ಕಥೆಗಳಲ್ಲಿ ತಾನೇ ತಾನಾಗಿ ವ್ಯಕ್ತವಾಗಿದೆ. ಬಿಡು ಬಿಡು ನಿನ್ನಯ ...., ಜಯಂತರು ಮಾತ್ರ ಬರೆಯಬಹುದಾದ ಅಸಾಧಾರಣ ಕತೆ, ಎಂದು ಚಿತ್ತಾಲರು ಶ್ಲಾಘಿಸಿದ್ದನ್ನೂ ಲೇಖಕಿ ನೆನಪಿಸಿ ಕೊಳ್ಳುತ್ತಾರೆ. ನಗರ ಸಂವೇದನೆಯ ಕಥೆಗಳನ್ನು ಕೊಟ್ಟ ಜಯಂತರು ಹುಟ್ಟೂರ ಹಿನ್ನೆಲೆಯಲ್ಲಿ ಬರೆದ ಕಥೆಗಳು ಕಡಿಮೆಯಾದರೂ, ಅವರು ಎತ್ತಿಕೊಂಡ ಗ್ರಾಮೀಣ ವಸ್ತುಗಳು ಅನನ್ಯವಾದವು ಎಂದಿದ್ದಾರೆ ಮಮತಾ. ನಗರ ಸಂವೇದನೆಯನ್ನು ಕನ್ನಡಕ್ಕೆ ಯಶಸ್ವಿಯಾಗಿ ಪರಿಚಯಿಸಿದ ಯಶವಂತ ಚಿತ್ತಾಲ ಹಾಗೂ ವ್ಯಾಸರಾಯ ಬಲ್ಲಾಳರ ಬಳಿಕ ಜಯಂತರ ವಿಭಿನ್ನವಾದ ವಸ್ತುವಿನ ಆಯ್ಕೆ, ಅಲ್ಲಿ ಅವರು ಪ್ರಯೋಗಿಸುವ ವಿಶಿಷ್ಟ ಭಾಷೆ, ಸಾಮಾನ್ಯರ ಬದುಕಿನ ಕಾಣ್ಕೆ ಹಾಗೂ ಅಲ್ಲಿ ಅಡಕವಾದ ಮಾನವೀಯತೆಯ ಬಗ್ಗೆ ನುಡಿವ ಲೇಖಕಿ, ಜಯಂತರ ಕಥೆಗಳನ್ನು ಸಮನ್ವಯದ ಕಥೆಗಳೆಂದು ಕರೆದಿದ್ದಾರೆ. ಪಾರ್ಟ್‌ನರ್, ದಿಗಂಬರ, ಸಂತೆಯ ದಿನ, ಆರೋಹ, ತನ್ಮಯಿಯ ಸೂಟಿ, ಬಣ್ಣದ ಕಾಲು, ದಿಟ್ಟಿಬೊಟ್ಟು, ಅಮೃತಬಳ್ಳಿ ಕಷಾಯ, ಪ್ರಕಾಶವರ್ಷ, ಚಂದಿರನೇತಕೆ ಓಡುವನಮ್ಮಾ ಮುಂತಾದ ಜಯಂತರ ಕಥೆಗಳ ಒಳಹೊಕ್ಕು ಲೇಖಕಿ ತಾವು ಕಂಡ ನೋಟವನ್ನಿಲ್ಲಿ ತೆರೆದಿರಿಸಿದ್ದಾರೆ. ಇಲ್ಲಿ ಯಾರೂ ಅಮುಖ್ಯರಲ್ಲ, ಯಾರೂ ಪರಿಪೂರ್ಣರೂ ಅಲ್ಲ ಎಂಬುದನ್ನು ತಮ್ಮ ಕಥೆಗಳಲ್ಲಿ ಪ್ರತಿಪಾದಿಸುತ್ತಾ ಬಂದ ಜಯಂತರ ತೂಫಾನ್ ಮೇಲ್, ಒಪೆರಾ ಹೌಸ್, ಗೇಟ್ ವೇ, ಮಧುಬಾಲಾ, ಚಾರ್ ಮಿನಾರ್ ಮುಂತಾದ ಅಪ್ರತಿಮ ಕಥೆಗಳನ್ನು ಪರಿಚಯಿಸುತ್ತಾ ಜಯಂತರ ಮಟ್ಟಿಗೆ ಮುಂಬೈ ಒಂದು ಮನುಷ್ಯ ಸ್ವಾತಂತ್ರ ಎಂಬ ಅಪ್ಪಟ ಸತ್ಯವನ್ನು ಇಲ್ಲಿ ತೆರೆದಿಡಲಾಗಿದೆ.

ಜಯಂತ ಕಾಯ್ಕಿಣಿ ಅವರನ್ನು ಓದುವುದೆಂದರೆ ಹೊಸದೊಂದು ಬಾಗಿಲನ್ನು ಬೆಳಕಿನೆಡೆಗೆ ತೆರೆದಂತೆ, ಎಂಬ ಅಮೂಲ್ಯ ನುಡಿಯೊಂದಿಗೆ ಓದುಗರು ಮತ್ತೆ ಮತ್ತೆ ಜಯಂತರನ್ನು ಕೈಗೆತ್ತಿಕೊಳ್ಳುವಂತೆ ಮಾಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)