ಬೆಲ್ಜಿಯಂನಲ್ಲಿ ಸ್ಫೋಟ: 2 ಸಾವು
ಬ್ರಸೆಲ್ಸ್, ಜ. 16: ಬೆಲ್ಜಿಯಂನ ಆ್ಯಂಟ್ವರ್ಪ್ ನಗರದಲ್ಲಿ ಸಂಭವಿಸಿದ ಸ್ಫೋಟವೊಂದರಲ್ಲಿ ಮೂರು ಕಟ್ಟಡಗಳು ಧ್ವಂಸಗೊಂಡಿದ್ದು ಇಬ್ಬರು ಮೃತಪಟ್ಟಿದ್ದಾರೆ ಹಾಗೂ 14 ಮಂದಿ ಗಾಯಗೊಂಡಿದ್ದಾರೆ.
ಸೋಮವಾರ ಸಂಜೆ ಸ್ಫೋಟ ಸಂಭವಿಸಿದ್ದು, ಕಟ್ಟಡಗಳ ಅವಶೇಷಗಳಲ್ಲಿ ಮಂಗಳವಾರ ಎರಡು ಮೃತದೇಹಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದರು.
ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಹಾಗೂ ಇನ್ನೋರ್ವನ ಸ್ಥಿತಿ ಚಿಂತಾಜನಕವಾಗಿದೆ.
ಸ್ಫೋಟದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದರು. ಸ್ಫೋಟವು ಭಯೋತ್ಪಾದಕ ದಾಳಿಯಾಗಿರುವ ಸಾಧ್ಯತೆಯಿಲ್ಲ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.
ಅದು ಅನಿಲ ಸ್ಫೋಟವಾಗಿರಬಹುದು ಎಂದು ಬೆಲ್ಜಿಯಂ ಮಾಧ್ಯಮಗಳು ಹೇಳಿವೆ.
2016ರ ಭೀಕರ ಆತ್ಮಹತ್ಯಾ ಬಾಂಬ್ ದಾಳಿಗಳ ಬಳಿಕ ಬೆಲ್ಜಿಯಂ ಕಟ್ಟೆಚ್ಚರದಲ್ಲಿದೆ.
Next Story