ಚೀನಾ ಅಧ್ಯಕ್ಷರನ್ನು ಟೀಕಿಸಿದ ಮಾನವಹಕ್ಕು ವಕೀಲನ ಬಂಧನ
ಬೀಜಿಂಗ್, ಜ. 19: ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ರನ್ನು ಟೀಕಿಸಿದ ಆ ದೇಶದ ಮಾನವಹಕ್ಕುಗಳ ವಕೀಲ ಯು ವೆನ್ಶೆಂಗ್ರನ್ನು ಶುಕ್ರವಾರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಮಾನವಹಕ್ಕುಗಳ ವಕೀಲರು ಹಾಗೂ ಹೋರಾಟಗಾರರ ಮೇಲೆ ದಮನ ಕಾರ್ಯಾಚರಣೆ ನಡೆಸುತ್ತಿರುವುದಕ್ಕಾಗಿ ಬೀಜಿಂಗ್ ವಕೀಲ ಹಾಗೂ ಮಾನವಹಕ್ಕುಗಳ ಹೋರಾಟಗಾರ ಯು ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ವಿರುದ್ಧ ನಿರಂತರವಾಗಿ ಕೆಂಡ ಕಾರುತ್ತಿದ್ದರು.
ಇತ್ತೀಚಿನ ವರ್ಷಗಳಲ್ಲಿ ಚೀನಾವು ನೂರಾರು ಮಾನವಹಕ್ಕುಗಳ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡು ಹತ್ತಾರು ಮಂದಿಯನ್ನು ಬಂಧಿಸಿರುವುದನ್ನು ಸ್ಮರಿಸಬಹುದಾಗಿದೆ.
ಅಧ್ಯಕ್ಷರನ್ನು ಟೀಕಿಸಿರುವುದಕ್ಕಾಗಿ ಯು ಅವರ ವಕೀಲ ಪರವಾನಿಗೆಯನ್ನು ಸೋಮವಾರ ಅಧಿಕಾರಿಗಳು ರದ್ದುಗೊಳಿಸಿರುವುದನ್ನು ಸ್ಮರಿಸಬಹುದಾಗಿದೆ.
ಶುಕ್ರವಾರ ಬೆಳಗ್ಗೆ ಯು ತನ್ನ ಮಗುವನ್ನು ಶಾಲೆಗೆ ಕರೆದೊಯ್ಯುತ್ತಿದ್ದಾಗ ನಾಲ್ಕು ವಾಹನಗಳಲ್ಲಿ ಬಂದ 10 ಪೊಲೀಸರು ತಡೆದು ನಿಲ್ಲಿಸಿ ತಮ್ಮ ವಶಕ್ಕೆ ತೆಗೆದುಕೊಂಡರು ಎಂದು ಯು ಅವರ ಪತ್ನಿ ಕ್ಸು ಯಾನ್ ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದರು.