varthabharthi

ದಿಲ್ಲಿ ದರ್ಬಾರ್

ದಿಲ್ಲಿ ದರ್ಬಾರ್

ವಾರ್ತಾ ಭಾರತಿ : 21 Jan, 2018

ಜನಪ್ರಿಯ ಯೋಗಿ
ಕರ್ನಾಟಕ ಚುನಾವಣಾ ಸಿದ್ಧತೆಯಲ್ಲಿ ಯೋಗಿ ಆದಿತ್ಯನಾಥ್ ಇನ್ನೂ ಏಕೆ ಕಾಯಂ ಆಗಿ ಬಿಂಬಿಸಲ್ಪಡುತ್ತಿದ್ದಾರೆ? ರಾಜ್ಯದಿಂದಾಚೆಗಿನ ಯೋಗಿ ಜನಪ್ರಿಯತೆಯ ಮೂಲಕ ಇದು ಸಾಧ್ಯ ಎನ್ನುವುದು ಅಮಿತ್ ಶಾ ಮತ್ತು ಬಿಜೆಪಿಯ ಇತರ ಮುಖಂಡರ ಲೆಕ್ಕಾಚಾರ. ಉತ್ತರ ಪ್ರದೇಶ ಮುಖ್ಯಮಂತ್ರಿ ಜನಪ್ರಿಯತೆಯ ಒಂದು ಸೂಚಕವೆಂದರೆ ಇತ್ತೀಚೆಗೆ ದಿಲ್ಲಿಯಲ್ಲಿ ನಡೆದ ವಿಶ್ವ ಪುಸ್ತಕ ಮೇಳದಲ್ಲಿ ಈ ಖಾವಿ ರಾಜಕಾರಣಿ ಬಗೆಗಿನ ಕೃತಿಗಳು ಹೆಮ್ಮೆಯ ಸ್ಥಾನ ಪಡೆದಿರುವುದು. ಒಂದರ್ಥದಲ್ಲಿ ಯೋಗಿ ಪ್ರಕಾಶಕರ ಪಾಲಿಗೆ ಮೋದಿಗಿಂತಲೂ ಅಚ್ಚುಮೆಚ್ಚು. ಕಳೆದ ವರ್ಷದ ಮೇಳದಲ್ಲಿ ಮೋದಿ ಬಗೆಗಿನ ಕೃತಿಗಳು ಬಿಸಿ ಕೇಕ್‌ನಂತೆ ಮಾರಾಟವಾಗಿದ್ದವು. ಈ ಬಾರಿ ಯೋಗಿ ಚಾರ್ಮ್, ಪುಸ್ತಕ ಮಾರಾಟಗಾರರ ಅದೃಷ್ಟ ಖುಲಾಯಿಸಲು ಕಾರಣವಾಗಿದೆ. ಆದರೆ ಎಲ್ಲರ ಕುತೂಹಲ ಇರುವುದು ಮೋದಿಗೆ ಈ ಬೆಳವಣಿಗೆ ಸಂತೋಷ ತಂದಿದೆಯೇ ಎನ್ನುವುದರಲ್ಲಿ. 2024ರ ಚುನಾವಣೆ ಬಳಿಕ ದಿಲ್ಲಿಯಲ್ಲಿ ಕೇಂದ್ರದ ಜವಾಬ್ದಾರಿ ಹೊರಲು ಸೂಕ್ತವಾದ ವ್ಯಕ್ತಿ ಎಂದು ಸಂಘ ಪರಿವಾರ ಈಗಾಗಲೇ ಯೋಗಿ ಬೆಂಬಲಕ್ಕೆ ನಿಂತಿದೆ. ಬಹುಶಃ ಯೋಗಿ ಈ ಪಾತ್ರಕ್ಕೆ ಸಜ್ಜಾಗುತ್ತಿದ್ದಾರೆ.


ಪ್ರಸಾದ್ ಸಿಡಿಮಿಡಿ
ಸುಪ್ರೀಂಕೋರ್ಟ್‌ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳ ಪತ್ರಿಕಾಗೋಷ್ಠಿ ನಡೆಯುತ್ತಿರುವುದನ್ನು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ತಮ್ಮ ಕಚೇರಿಯಲ್ಲಿ ಟಿವಿ ಮುಂದೆ ಕುಳಿತು ವೀಕ್ಷಿಸುತ್ತಿದ್ದರು. ಈ ಮಧ್ಯೆ ನ್ಯಾಯಮೂರ್ತಿಗಳ ಬಂಡಾಯದಿಂದ ತಲೆದೋರಿರುವ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಪ್ರಸಾದ್, ಪ್ರಧಾನಿ ಮೋದಿಯತ್ತ ಧಾವಿಸಿದ್ದಾರೆ ಎಂಬ ಸ್ಫೋಟಕ ಸುದ್ದಿಯನ್ನು ಕೆಲ ಸುದ್ದಿವಾಹಿನಿಗಳು ಬಿತ್ತರಿಸಿದವು. ಇಂಥ ಬ್ರೇಕಿಂಗ್ ನ್ಯೂಸ್ ಬಿತ್ತರಿಸುತ್ತಿದ್ದ ವಾಹಿನಿಗಳ ಕೆಲ ವರದಿಗಾರರು ತಮ್ಮ ಜೊತೆಗೇ ಇದ್ದುದು ಪ್ರಸಾದ್ ಸಿಡಿಮಿಡಿಗೆ ಕಾರಣವಾಯಿತು. ಕೆಲ ಪತ್ರಕರ್ತರು ತಮ್ಮ ಜೊತೆಗೇ ಕಚೇರಿಯಲ್ಲಿದ್ದರೂ, ಇಂಥ ಸುಳ್ಳು ಸುದ್ದಿ ಹೇಗೆ ಪ್ರಸಾರವಾಗುತ್ತಿದೆ ಎನ್ನುವುದು ಸಚಿವರಿಗೆ ಒಗಟಾಗಿ ಪರಿಣಮಿಸಿತು. ಆದರೆ ಬಳಿಕ ಕೆಲ ಚಾನಲ್‌ಗಳು ತಪ್ಪು ತಿದ್ದಿಕೊಂಡವು. ಪ್ರಸಾದ್ ಅವರು ಪ್ರಧಾನಿ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂಬ ಸುದ್ದಿ ಪ್ರಸಾರವಾಗತೊಡಗಿತು. ನ್ಯಾಯಾಂಗದ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಇರಾದೆ ಇಲ್ಲ ಎಂದು ಬಿಂಬಿಸಲು ಸರಕಾರ ಮುಂದಾಗಿದ್ದ ಹಿನ್ನೆಲೆಯಲ್ಲಿ ಪ್ರಸಾದ್, ಪ್ರಧಾನಿ ಜೊತೆಗೆ ಈ ಬಗ್ಗೆ ಮಾತನಾಡಿದ ವರದಿಗಳನ್ನು ಕೂಡಾ ಅಲ್ಲಗಳೆದರು. ಕಚೇರಿಯಿಂದ ಹೊರಹೋದರೆ ಪ್ರಧಾನಿಯನ್ನು ಭೇಟಿಯಾಗಲು ಹೊರಟಿದ್ದಾರೆ ಎಂಬ ವದಂತಿ ಹರಡುತ್ತದೆ ಎಂಬ ಕಾರಣಕ್ಕೆ ಅವರು ಮಧ್ಯಾಹ್ನದ ಊಟಕ್ಕೂ ಮನೆಗೆ ತೆರಳಲಿಲ್ಲ ಎನ್ನುವುದು ಆಪ್ತ ಸಿಬ್ಬಂದಿಯ ಅಂಬೋಣ!


ಕಳ್ಳ ಪತ್ರಕರ್ತನನ್ನು ಹಿಡಿದ ಅಧೀರ್
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜೊತೆ ಲಂಡನ್ ಪ್ರವಾಸಕ್ಕೆ ತೆರಳಿದ್ದ ಪತ್ರಕರ್ತನೊಬ್ಬ ತಾನು ತಂಗಿದ್ದ ಹೋಟೆಲ್‌ನಲ್ಲಿ ಬೆಳ್ಳಿಯ ಪಾತ್ರೆ ಕದ್ದು ಸಿಕ್ಕಿಹಾಕಿಕೊಂಡ ಸುದ್ದಿ ಕಳೆದ ವಾರ ವೈರಲ್ ಆಗಿತ್ತು. ಕೆಲ ದಿನಗಳ ಬಳಿಕ ಪಶ್ಚಿಮ ಬಂಗಾಳದ ಕಾಂಗ್ರೆಸ್ ಸಂಸದ ಅಧೀರ್ ಚೌಧರಿ ಪತ್ರಕರ್ತರಿಗೆ ಭೋಜನಕೂಟ ಏರ್ಪಡಿಸಿದ್ದರು. ಇದರಲ್ಲಿ ಪತ್ರಕರ್ತನೊಬ್ಬ ಮದ್ಯದ ಬಾಟಲಿ ಕದ್ದು, ಗಿಡಗಳ ಮಧ್ಯೆ ಅಡಗಿಸಿ ಇಟ್ಟದ್ದನ್ನು ಗಮನಿಸಿದ ಸಂಸದರ ಸಿಬ್ಬಂದಿ, ಬಾಟಲಿ ವಾಪಸು ತಂದಿಟ್ಟರು. ಮನೆಗೆ ಹೋಗುವ ಮುನ್ನ ಪತ್ರಕರ್ತ ಬಾಟಲಿ ಹುಡುಕುತ್ತಿದ್ದ. ಏನು ಹುಡುಕುತ್ತಿದ್ದೀರಿ ಎಂದು ಚೌಧರಿ ಆತನನ್ನು ಪ್ರಶ್ನಿಸಿದರು. ಇದರಿಂದ ಮುಜುಗರಕ್ಕೀಡಾದ ಪತ್ರಕರ್ತ ಏನೋ ಗೊಣಗಿದ. ಆದರೆ ವಿಶಾಲ ಹೃದಯದ ಚೌಧರಿ, ಹೊಸ ಮದ್ಯದ ಬಾಟಲಿಯನ್ನು ಆತನ ಕೈಗಿಟ್ಟರು. ಹುಟ್ಟುಗುಣ ಚಟ್ಟ ಹತ್ತಿದರೂ ಬಿಡದು.


ಮಧ್ಯಪ್ರದೇಶಕ್ಕೆ ರಾಹುಲ್ ತಂತ್ರಗಾರಿಕೆ
ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಸಜ್ಜಾಗುತ್ತಿದೆ. ಪಕ್ಷದ ಅಧ್ಯಕ್ಷ ರಾಹುಲ್‌ಗಾಂಧಿಯವರು ರಾಜ್ಯದ ಪ್ರಮುಖ ಕಾಂಗ್ರೆಸ್ ನಾಯಕರಾದ ದಿಗ್ವಿಜಯ ಸಿಂಗ್, ಜ್ಯೋತಿರಾದಿತ್ಯ ಸಿಂಧಿಯಾ, ಕಮಲನಾಥ್ ಮತ್ತಿತರರಿಗೆ ತಮ್ಮ ಪ್ರಭಾವದ ಪ್ರದೇಶಗಳಲ್ಲಿ ಯಾತ್ರೆ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂಬ ವದಂತಿ ದಟ್ಟವಾಗಿ ಹಬ್ಬಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಆಟದಲ್ಲೇ ಅವರಿಗೆ ಸೋಲುಣಿಸುವ ಇರಾದೆ ಕಾಂಗ್ರೆಸ್ ಪಕ್ಷದ್ದು. ಸಿಎಂ ಯಾತ್ರೆಗಳಿಗೆ ಹೆಸರಾದವರು. ಕಳೆದ 12 ವರ್ಷಗಳ ಅಧಿಕಾರಾವಧಿಯಲ್ಲಿ ಸಿಎಂ 50ಕ್ಕೂ ಹೆಚ್ಚು ಯಾತ್ರೆ ಕೈಗೊಂಡಿದ್ದಾರೆ. ಇತ್ತೀಚೆಗೆ ಅವರು ಖಾಂಡ್ವಾ ಜಿಲ್ಲೆಯ ಓಂಕಾರೇಶ್ವರದಲ್ಲಿ ಆದ ಶಂಕರಾಚಾರ್ಯರ 108 ಅಡಿಯ ಪ್ರತಿಮೆಗೆ ಲೋಹ ಸಂಗ್ರಹಿಸಲು ಏಕತಾ ಯಾತ್ರೆ ಕೈಗೊಂಡರು. ದಿಗ್ವಿಜಯ ಸಿಂಗ್ ಈಗಾಗಲೇ ನರ್ಮದಾ ಯಾತ್ರೆ ಕೈಗೊಂಡಿದ್ದಾರೆ. ಆದ್ದರಿಂದ ಅವರು ಈಗಾಗಲೇ ತಾಲೀಮು ನಡೆಸಿದ್ದಾರೆ. ಇದೀಗ ಸಿಂಧಿಯಾ ಹಾಗೂ ಕಮಲ್‌ನಾಥ್ ಸರದಿ.


ಮೋದಿ ನೆನಪು
ಇತ್ತೀಚೆಗೆ ನಡೆದ ಪೊಲೀಸ್ ಮಹಾನಿರ್ದೇಶಕರ ಸಮಾವೇಶದಲ್ಲಿ, ಇದುವರೆಗೆ ಒಮ್ಮೆಯೂ ಪ್ರಧಾನಿಯನ್ನು ಭೇಟಿಯಾಗದ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಸಮ್ಮೇಳನದಲ್ಲಿ ಹಂಚಿದ ಕಿರುಹೊತ್ತಗೆಯಲ್ಲಿ ಪ್ರಕಟವಾದ ಚಿತ್ರವೊಂದರಲ್ಲಿ ತಾವು ಪ್ರಧಾನಿಯ ಜೊತೆಗಿರುವಂತೆ ರೂಪಾಂತರಿಸಿದ್ದರು. ಸಮ್ಮೇಳನದಲ್ಲಿ ಭಾಗವಹಿಸಿದ್ದ ಕೆಲ ಅಧಿಕಾರಿಗಳ ಪ್ರಕಾರ, ಮೋದಿ ಆ ಅಧಿಕಾರಿಯನ್ನು ಕುರಿತು ಈ ಚಿತ್ರವನ್ನು ಯಾವಾಗ ತೆಗೆದಿರಿ? ನಾವು ಪರಸ್ಪರ ಭೇಟಯಾಗಲೇ ಇಲ್ಲ ಎಂದು ಕೇಳಿದಾಗ ಅಧಿಕಾರಿಗೆ ಮುಜುಗರದಿಂದ ತಲೆ ತಗ್ಗಿಸುವಂತಾಯಿತು. ಈ ಅಧಿಕಾರಿ ಬಳಿಕ ಕ್ಷಮೆ ಯಾಚಿಸುತ್ತಿದ್ದರು. ಇತರ ಅಧಿಕಾರಿಗಳು ಮೋದಿಯ ಸ್ಮರಣಶಕ್ತಿ ಬಗ್ಗೆ ಅಚ್ಚರಿಗೊಂಡರು. ಯಾರು ಭೇಟಿಯಾಗಿದ್ದಾರೆ ಯಾರು ಭೇಟಿಯಾಗಿಲ್ಲ ಎನ್ನುವುದನ್ನು ಹೇಗೆ ನೆನಪಿಟ್ಟುಕೊಳ್ಳಲು ಸಾಧ್ಯ!?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)