varthabharthi

ನೇಸರ ನೋಡು

ಕಾಶೀನಾಥ ಎಂಬ ‘ತುಂಟರ’ಗಾಳಿ

ವಾರ್ತಾ ಭಾರತಿ : 21 Jan, 2018
ಜಿ.ಎನ್.ರಂಗನಾಥ ರಾವ್

ಹೊಸ ಬಗೆಯ ಕಥೆಗಳಂತೆ, ಹೊಸ ಪ್ರತಿಭೆಗಳ ಅನ್ವೇಷಣೆ ಕಾಶಿನಾಥರ ನಿರಂತರ ಪ್ರಯತ್ನವಾಗಿತ್ತು. ಅವರ ಪ್ರತೀ ಚಿತ್ರದಲ್ಲೂ ಏನಾದರೂ ಒಂದು ಹೊಸತನವಿದ್ದಂತೆ ಹೊಸ ಮುಖಗಳೂ ಇರುತ್ತಿದ್ದವು.


ಕಳೆದ ಶತಮಾನದ ಎಪ್ಪತ್ತರ ದಶಕ. ಕನ್ನಡ ಚಲನಚಿತ್ರೋದ್ಯಮ ಹೊಸ ಅಲೆಯ ಮಂದಗಾಮಿತ್ವದಿಂದ ಹಾಗೂ ಕಲೆ ಮತ್ತು ಬಾಕ್ಸ್ ಆಫೀಸಿಗೆ ಸಂಲಗ್ನ ಮಾಡಿಸುವ ಲಕ್ಷ್ಮೀನಾರಾಯಣ್, ಪುಟ್ಟಣ್ಣ ಕಣಗಾಲ್ ಸಿದ್ದಲಿಂಗಯ್ಯನವರಂಥ ನಿರ್ದೇಶಕರುಗಳ ಪ್ರಯತ್ನಗಳ ಮಲಯ ಮಾರುತಗಳಿಂದ ಚಿತ್ರ ನೌಕೆಯನ್ನು ಹಾಯಿಸುತ್ತಿದ್ದ ದಿನಗಳು. ಜಡವಾಗಿ ಸಾಗಿದ್ದ ಈ ಕನ್ನಡ ಚಲನಚಿತ್ರ ನೌಕೆಗೆ ಕಾಶೀನಾಥ ಎಂಬ ‘ತುಂಟರ’ಗಾಳಿ ಧಿಡೀರನೆ ಅಪ್ಪಳಿಸಿ,ಸುಂಟರಗಾಳಿಯಂತೆ ಅಲ್ಲೋಲಕಲ್ಲೋಲ ಉಂಟುಮಾಡಿದ್ದು ಈಗ ಇತಿಹಾಸ. ಈ ‘ತುಂಟರ’ಗಾಳಿ ಮೊನ್ನೆ 18ರಂದು ಇತಿಹಾಸದ ಪುಟಗಳನ್ನು ಸೇರಿದ ಚಲಚಿತ್ರ ನಿರ್ದೇಶಕ ಕಾಶೀನಾಥ್ ಹೊರತು ಬೇರಾರೂ ಅಲ್ಲ.

‘ಬಂತೈ!ಬಂತೈ!ಇದೆ!ಇದೆ! ಬಂತೈ!’ ತೆಂಕಣ ಗಾಳಿಯಾಟದ ಕಡಲ ತೀರದ ದಕ್ಷಿಣ ಕನ್ನಡಿಗ ಕಾಶೀನಾಥ್ ಹುಟ್ಟಿದ್ದು ಕೋಟೇಶ್ವರ ಸಮೀಪದ ಕುಂದಾಪುರದಲ್ಲಿ(1951).ಹೋಟೆಲ್ ಉದ್ಯಮಿ ವಾಸುದೇವರಾವ್ ಮತ್ತು ಸರಸ್ವತಿಯವರ ಸುಪುತ್ರ. ತೆಳ್ಳಬೆಳ್ಳಗಿನ ಈ ಮಾಣಿ ಮಿಡ್ಲ್ ಸ್ಕೂಲ್, ಹೈ ಸ್ಕೂಲ್ ದಿನಗಳಲ್ಲಿ ನಾಟಕಗಳಲ್ಲಿ ಹೆಣ್ಣು ಪಾತ್ರಿಯಾಗಿ ರಂಜಿಸಿದ್ದೂ ಉಂಟು. ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ವಿಜ್ಞಾನ ಓದುವಾಗ ಕಂಡದ್ದು ವಿಜ್ಞಾನಿಯಾಗುವ ಕನಸು, ಅಮೆರಿಕಕ್ಕೆ ಹಾರುವ ಕನಸು.

ಆದರೆ ಥರ್ಡ್ ಕ್ಲಾಸಿನಲ್ಲಿ ಬಿ.ಎಸ್‌ಸಿ., ಪದವೀಧರನಾಗುವ ವೇಳೆಗೆ ಈ ಕನಸು ನಾಟಕದ ಆಕರ್ಷಣೆಯ ಮುಂದೆ ಕರಗಿ ಹೋಗಿತ್ತು. ಕಾಲೇಜಿನಲ್ಲಿ ಎರಡನೆಯ ವರ್ಷದ ವಿದ್ಯಾರ್ಥಿಯಾಗಿದ್ದಾಗ ನಾಟಕಗಳಲ್ಲಿ ಪಾತ್ರವಹಿಸುವ ಮೂಲಕ ರಂಗಭೂಮಿಯಲ್ಲಿ ಆಸಕ್ತಿ ಕುದುರಿತು. ಬಿ.ಎಸ್‌ಸಿ., ಮುಗಿಸಿದಾಗ ಮುಂದಿದ್ದ ದಾರಿ ಉದ್ಯೋಗ ಹುಡುಕುವುದಾಗಿತ್ತು. ಕೋಟೇಶ್ವರ ಖ್ಯಾತಿಯ ಹೋಟೆಲ್ ಉದ್ಯಮವೋ ದಕ್ಷಿಣ ಕನ್ನಡ ಮತ್ತೊಂದು ಖ್ಯಾತಿಯಾದ ಬ್ಯಾಂಕ್ ಉದ್ಯೋಗವೋ ಎಲ್ಲಾದರೂಂದು ಕಡೆ ನೆಲೆಕಂಡುಕೊಂಡು ಮಗ ಚತುರ್ಭುಜನಾಗಲೀ ಎಂಬುದು ತಂದೆತಾಯಿಗಳ ಅಪೇಕ್ಷೆಯಾಗಿತ್ತು. ಆದರೆ ಮಗನನ್ನು ಕೈಬೀಸಿ ಕರೆದದ್ದು ಯಕ್ಷಗಾನ ಖ್ಯಾತಿಯ ದಕ್ಷಿಣ ಕನ್ನಡದ ಮಣ್ಣಿನ ಮತ್ತೊಂದು ಗುಣವಾದ ಕಲೆ.

ತಲೆಯಲ್ಲಿ ಸಿನೆಮಾನಾಟಕಗಳ ಗುಂಗಿನ ‘ಯಕ್ಷಗಾನ’ ನಡೆಯುತ್ತಿದ್ದಾಗ ಪರಿಚಯವಾದದ್ದು ಇದೇ ಗುಂಗಿನಲ್ಲಿದ್ದ ಸುರೇಶ್ ಹೆಬ್ಳೀಕರ್. ಇಬ್ಬರೂ ಸೇರಿ ‘ಅಸೀಮಾ’ಎನ್ನುವ ಹವ್ಯಾಸಿ ಕಲಾ ತಂಡವೊಂದನು ಕಟ್ಟಿದರು. ಸಿನೆಮಾ-ನಾಟಕಗಳ ನೋಡು-ಓದು-ಅಧ್ಯಯನ. ಈ ಗೆಳೆಯರ ಬಳಗ ಬೆಳಗೂಬೈಗೂ ನಡೆಸುತ್ತಿದ್ದ ಏಕೈಕ ಚಟುವಟಿಕೆ. ಹೀಗೆ ದೃಶ್ಯ ಮಾಧ್ಯಮದ ಪ್ರಾಥಮಿಕಗಳನ್ನು ಕಲಿತರು. ಈ ಅಧ್ಯಯನ ಕಿರುಚಿತ್ರಗಳ ತಯಾರಿಕೆಗೆ ಪ್ರೇರಣೆ ಒದಗಿಸಿತು. ಸುರೇಶ್ ಹೆಬ್ಳೀಕರ್ ಮೊದಲಾದ ಗೆಳೆಯರೊಂದಿಗೆ ಸೇರಿ ಕಾಶೀನಾಥ್ ಕಿರುಚಿತ್ರವೊಂದನ್ನು ತಯಾರಿಸಿದರು. ಗೆಳೆಯರ ಬಳಗ ತಯಾರಿಸಿದ ಈ ಕಿರು ಚಿತ್ರಗಳ ಒಂದು ಪ್ರದರ್ಶನೋತ್ಸವವೂ ಬೆಂಗಳೂರಿನ ಬಾಲಭವನದಲ್ಲಿ ನಡೆದು, ಕಾಶೀನಾಥರ ಚಿತ್ರ ವಿದೇಶಿ ಚಿತ್ರ ವಿಮರ್ಶಕರೊಬ್ಬರ ಮೆಚ್ಚುಗೆಗೂ ಪಾತ್ರವಾಯಿತು. ಕಾಶೀನಾಥರಿಗೆ ಉಳಿದದ್ದು ಆಕಾಶಕ್ಕೆ ಮೂರೇ ಗೇಣು. ಪೂರ್ಣಪ್ರಮಾಣದ ಕಥಾಚಿತ್ರ ಮಾಡುವ ದೊಡ್ಡ ಕನಸು ಅವರ ಮನಸ್ಸಿನಲ್ಲಿ ಮೂಡಿ ಖಾಯಮ್ಮಾಗಿ ಅಲ್ಲೇ ಬಿಡಾರ ಮಾಡಿತು. ಅಪ್ಪನ ಮುನಿಸಿಗೆ ಮಣಿಯದ ಅಮ್ಮನ ಮಾತೃವಾತ್ಸಲ್ಯ, ಮಗನ ಕೈಯಲ್ಲಿ ಒಂದಿಷ್ಟು ಹಣ ಇರಿಸಿ ಕನಸು ನನಸಾಗಲಿ ಎಂದು ಹರಸಿತು. ಗೆಳೆಯರ ಗುಂಪೂ ಬೆನ್ನು ತಟ್ಟಿ ಪ್ರೋತ್ಸಾಹಿಸಿತು.

ಇದು ಮುಂದೆ ಹಲವಾರು‘ಅವಾಂತರ’ಗಳಿಗೆ ನಾಂದಿ ಹಾಡೀತೆಂದು ಅವರಾರೂ ಕನಸು ಕಂಡಿರಲಿಕ್ಕಿಲ್ಲ. ‘ಅಪರೂಪದ ಅತಿಥಿ’ಗಳಿಂದ 1976ರರಲ್ಲಿ ಕಾಶೀನಾಥರ ಸಿನೆಮಾ ಸಾಹಸಗಾಥೆ ಶುರುವಾಯಿತು.ಈ ಚಿತ್ರದ ಹಿಂದಿನ ಸ್ಫೂರ್ತಿ ‘ಕ್ರೇಜಿ ಬಾಯ್ಸಿ’ಹಾಲಿವುಡ್ ಚಿತ್ರ. ಈ ಪ್ರಥಮದಿಂದ ಕಾಶೀನಾಥರಿಗೆ ದಂತಭಗ್ನವೇನೂ ಆಗಲಿಲ್ಲ. ಇದು ಹವ್ಯಾಸಿ ಕಿರುಚಿತ್ರಕಾರನಾದ ಅವರಲ್ಲಿ ವೃತ್ತಿಪರ ನಿರ್ದೇಶಕನಾಗಬಲ್ಲೆ ಎಂಬ ಆತ್ಮವಿಶ್ವಾಸವನ್ನು ಮೂಡಿಸಿತು. ಜೊತೆಗೆ ದ್ವಿತೀಯ ವಿಘ್ನವಾಗದಂತೆ ಮತ್ತೊಂದು ಚಿತ್ರಕ್ಕೆ ಕೈಹಾಕುವಷ್ಟು ಹಣಕಾಸಿನ ಧೈರ್ಯವನ್ನೂ ತಂದುಕೊಟ್ಟಿತು. ಪರಿಣಾಮವಾಗಿ ಕನ್ನಡ ರಜತ ಪರದೆಯ ಮೇಲೆ ‘ಅಪರಿಚಿತ’ನ(1978) ಸಾಕ್ಷಾತ್ಕಾರವಾಯಿತು. ಕನ್ನಡ ಚಲಚಿತ್ರ ರಸಿಕರಿಗೂ ‘ಅಪರಿಚಿತ’ನಿಂದ ಲವಲವಿಕೆಯ ಹೊಸ ಅನುಭವ.ಇದು ನಿರ್ದೇಶಕ, ಪ್ರೇಕ್ಷಕರಿಬ್ಬರಲ್ಲೂ ಹೊಸ ಭರವಸೆಯನ್ನು ಮೂಡಿಸಿತು. ಮುಂದೆ ಬಂದದ್ದೇ ‘ಅನುಭವ’. ‘ಅನುಭವ’ವನ್ನು ಹಿಂಬಾಲಿಸಿ ಬಂದವು,‘ಅನಂತನ ಅವಾಂತರ’,‘ಅಜಗ ಜಾಂತರ’,‘ಅನಾಮಿಕ’,ಅವಳೇ ನನ್ನ ಹೆಂಡತಿ’,ಹೆಂಡ್ತಿ ಅಂದರೆ ಹೀಗಿರಬೇಕು’, ‘ಲವ್ ಮಾಡಿ ನೋಡು’, ‘ಅಮರ ಮಧುರಾ ಪ್ರೇಮ’ ಮೊದಲಾದ ಚಿತ್ರಗಳು.

 ಕಾಶೀನಾಥರ ಚಿತ್ರಗಳು ಹಸಿಹಸಿ ಮನಸ್ಸುಗಳ ಬಿಸಿಬಿಸಿ ರಾಗಗಳ ಹೊಸಹೊಸ ಚಿತ್ರಗಳು. ಇವು,ಆಗಷ್ಟೆ ಕನ್ನಡದಲ್ಲಿ ನೆಲೆಯೂರುತ್ತಿದ್ದ ಹೊಸ ಅಲೆಯ ಚಿತ್ರಗಳ ಮತ್ತೊಂದು ಆಯಾಮವಾಗಿ ಪ್ರೇಕ್ಷಕರ, ವಿಶೇಷವಾಗಿ ಯುವಪ್ರೇಕ್ಷಕರ ಮನ ಸೂರೆಗೊಂಡವು. ಆಗ ಈ ಚಿತ್ರಗಳನ್ನು ನೋಡಿದ ವಿಮರ್ಶಕರು, ಈ ಕಾಶೀನಾಥರು, ಬದುಕಿನಲ್ಲಿ ಕಾಮವೇ ಪ್ರಾಧಾನ, ನಮ್ಮ ವ್ಯಕ್ತಿತ್ವವನ್ನು ರಕ್ತದೊಳಗಣ ನಮ್ಮ ಕಾಮ ಪ್ರವೃತ್ತಿಯೇ ರೂಪಿಸುತ್ತದೆ. ಉಳಿದವೆಲ್ಲವೂ ಗೌಣ ಎನ್ನುವ ದಿವ್ಯಕಾಮದ ಸಿದ್ಧಾಂತಿಯಾದ ಪಾಶ್ಚಾತ್ಯ ಕಾದಂಬರಿಕಾರ ಡಿ.ಎಚ್.ಲಾರೆನ್ಸ್‌ನ ವಂಶಜನಿರಬಹುದೆ ಎಂದು ಕುಹಕವಾಡಿದ್ದೂ ಉಂಟು. ಕಾಶೀನಾಥ್ ಪೌಗಂಡ ವಯಸ್ಕರ(ಅಡೊಲೆಸೆಂಟ್ಸ್) ಲಿಬಿಡೋಗೆ (ಲೈಂಗಿಕ ಬಯಕೆ) ಕೈಹಾಕಿದ್ದಂತೂ ನಿಜ.

ಅವರು ತಮ್ಮ ಪ್ರಾರಂಭದ ಚಿತ್ರಗಳಲ್ಲಿ ಪಡ್ಡೆ ಹುಡುಗ-ಹುಡುಗಿಯರ ಕಾಮಾಸಕ್ತಿ, ಕಾಮಕುತೂಹಲ, ಸಾಹಸಗಳು,ರೋಮಾಂಚನಗಳಿಗೆ ಅಭಿವ್ಯಕ್ತಿ ನೀಡಿದರು. ಯವ್ವನದ ದಿನಗಳ ಕುತೂಹಲಗಳು, ಜೊತೆಗೆ ಅದಮ್ಯ ಜೀವನೋತ್ಸಾಹ ಮತ್ತು ಲವಲವಿಕೆಗಳು, ವಿನೋದ ಲಹರಿಗಳು, ತುಂಟಾಟಗಳು ಕಾಶಿನಾಥರ ಚಿತ್ರ ಶೈಲಿಯಾಗಿ ಯುವ ಮನಸ್ಸುಗಳು ತೆರೆದುಕೊಂಡವು, ಯುವ ಮನಸ್ಸುಗಳಿಗೆ ತೆರೆದುಕೊಂಡವು. ಇದು ಬಾಕ್ಸಾಫೀಸ್‌ನಲ್ಲಿ ವಿಜಯ ಸಾಧಿಸುವ ಕಾಶೀನಾಥ್ ಅವರ ಟ್ರಂಪ್ ಕಾರ್ಡ್ ಎನ್ನುವಷ್ಟರ ಮಟ್ಟಿಗೆ ಅವರು ಈ ವಸ್ತುವಿನ್ಯಾಸ ಮತ್ತು ಶೈಲಿಗಳನ್ನು ಗಟ್ಟಿಯಾಗಿ ರೂಢಿಸಿಕೊಂಡರು.ಅದರಲ್ಲಿ ಯಶಸ್ವಿಯಾದರು ಕೂಡ. ಕಾಶೀನಾಥರ ಈ ಚಿತ್ರಗಳಲ್ಲಿನ ಹದಿವಯಸ್ಕರ ಮನೋಗತಗಳ ನಿರೂಪಣೆ, ವಸ್ತು ವಿನ್ಯಾಸ ವಿಧಾನ, ಸಂಭಾಷಣೆಗಳಲ್ಲಿನ ದ್ವಂದ್ವಾರ್ಥಗಳನ್ನು ಕಂಡು ಮಡಿವಂತರು ‘ಅಶ್ಲೀಲ’ಎಂದು ಮೂಗು ಮುರಿದರು. ಹೀಗೆ ಮೂಗು ಮುರಿದವರು ಗುಟ್ಟಾಗಿ ಆನಂದಿಸಿದ್ದೂ ಉಂಟು. ಸೆನ್ಸಾರ್‌ನವರಂತೂ, ‘ನಮಗೆ ಅಡ್ಡಿಯಿಲ್ಲ’, ಆದರೆ ಸಾರ್ವಜನಿಕರಿಗೆ ಬೇಡ ಎಂದು ಗುಟ್ಟಾಗಿ ಹೇಳಿದ್ದುಂಟು.

ಸರಿಯಾದ ಲೈಂಗಿಕ ಶಿಕ್ಷಣವಿಲ್ಲದ ಸುಸಂಸ್ಕೃತ ಭಾರತೀಯ ಹೆಣುಗಂಡುಗಳ ಮೊದಲ ರಾತ್ರಿಯ ಪಡಿಪಾಟಲುಗಳ ಸಾಹಿತ್ಯಕ್ಕೇನೂ ನಮ್ಮಲ್ಲಿ ಬರವಿಲ್ಲ. ಅಂಥದೊಂದು ಪ್ರಸಂಗವನ್ನು ಕಾಶೀನಾಥ್ ‘ಅನುಭವ’ ಚಿತ್ರವಾಗಿಸಿದಾಗ ಸೆನ್ಸಾರ್ ಅಧಿಕಾರಿಯೊಬ್ಬರು ‘ಇಷ್ಟು ಕೊಳಕು ಚಿತ್ರವನ್ನು,ಅಸಭ್ಯ ಚಿತ್ರವನ್ನು ನಾನು ನೋಡಿದ್ದು ಇದೇ ಮೊದಲು’ಎಂದು ಬಾಯಿಬಾಯಿ ಬಿಟ್ಟರಂತೆ. ಇದಕ್ಕೆ ಸೆನ್ಸಾರ್‌ನ ‘ಸಾರ್ವಜನಿಕ ವೀಕ್ಷಣೆಗೆ ಯೋಗ್ಯ’ ಎಂಬ ಅರ್ಹತಾ ಪತ್ರ ಪಡೆಯಲು ಕಾಶೀನಾಥ್ ಹಲವು ಸನ್ನಿವೇಶಗಳಿಗೆ ಕತ್ತರಿ ಪ್ರಯೋಗ ಮಾಡಬೇಕಾಯಿತು. ಚಿತ್ರ ಬಿಡುಗಡೆಯಾಯಿತು. ಕಾಶೀನಾಥರೇ ಹೇಳಿರುವಂತೆ, ನೋಡಿದ ಪ್ರೇಕ್ಷಕರು ಕೆಲವರಿಗೆ ಮುಜುಗರವಾಯಿತಂತೆ, ಇನ್ನು ಕೆಲವರು ಇದು ನಮ್ಮ ಸಂಸ್ಕೃತಿಯಲ್ಲ ಎಂದು ಟೀಕಿಸಿದರಂತೆ, ಮತ್ತೆ ಕೆಲವರು ‘ಇದು ನಮ್ಮದೇ ಅನುಭವ’ ಎಂದು ಒಳಗೊಳಗೇ ಖುಷಿ ಪಟ್ಟರಂತೆ.

ಉಮಾಶ್ರೀ(ಈಗಿನ ಕನ್ನಡ ಸಂಸ್ಕೃತಿ ಸಚಿವೆ) ಮತ್ತು ಎನ್.ಎಸ್.ರಾವ್ ಅಭಿನಯ ‘ಅನುಭವ’ದ ಇನ್ನೊಂದು ಆಕರ್ಷಣೆ. ಕಾಶೀನಾಥ್ ಈ ಚಿತ್ರದ ಮೂಲಕ ನವ ಪ್ರತಿಭೆಗಳಾದ ಅಭಿನಯ, ಅರವಿಂದ ಅವರುಗಳನ್ನು ಪರಿಚಯಿಸಿದರು. ಅರವಿಂದ್ ಹಾಗೂ ಕಾಮಿನಿಧರನ್ ಉತ್ತಮ ಅಭಿನಯಕ್ಕಾಗಿ ಪ್ರಶಸ್ತಿಯನ್ನೂ ಪಡೆದರು. ಹೊಸ ಬಗೆಯ ಕಥೆಗಳಂತೆ, ಹೊಸ ಪ್ರತಿಭೆಗಳ ಅನ್ವೇಷಣೆ ಕಾಶಿನಾಥರ ನಿರಂತರ ಪ್ರಯತ್ನವಾಗಿತ್ತು. ಅವರ ಪ್ರತೀ ಚಿತ್ರದಲ್ಲೂ ಏನಾದರೂ ಒಂದು ಹೊಸತನವಿದ್ದಂತೆ ಹೊಸ ಮುಖಗಳೂ ಇರುತ್ತಿದ್ದವು. ‘ಅಪರಿಚಿತ’ಚಿತ್ರದಲ್ಲಂತೂ ಶೋಭಾ, ಸುರೇಶ್ ಹೆಬ್ಳೀಕರ್, ಎಂ.ವಿ.ವಾಸುದೇವ ರಾವ್, ಕೋಕಿಲಾ ಮೋಹನ್ ಹೀಗೆ ಹೊಸ ಪ್ರತಿಭೆಗಳ ಒಂದು ಪಟಾಲಮ್ಮೇ ಇದೆ. ಇವತ್ತು ಕನ್ನಡ ಚಿತ್ರ ರಂಗದಲ್ಲಿ ನಿರ್ದೇಶನ, ಸಂಗೀತ, ಅಭಿನಯಗಳಲ್ಲಿ ಖ್ಯಾತನಾಮರಾಗಿರುವ ಉಪೇಂದ್ರ, ಬ್ಯಾಂಕ್ ಜನಾರ್ದನ್, ವನಿತಾ ವಾಸು, ಸುನಿಲ್ ಕುಮಾರ್ ದೇಸಾಯಿ, ಸಂಗೀತ ನಿರ್ದೇಶಕ ಮನೋಹರ್ ಮೊದಲಾದವರನ್ನು ಬೆಳ್ಳಿ ತೆರೆಗೆ ಪರಿಚಯಿಸಿದ ಖ್ಯಾತಿ ಕಾಶೀನಾಥರದು.

ಕನ್ನಡ ಚಿತ್ರೋದ್ಯಮ ಸಿನೆಮಾಗಳನ್ನು ಕಲಾತ್ಮಕ ಚಿತ್ರಗಳು ಮತ್ತು ಬಾಕ್ಸಾಫೀಸಿನಲ್ಲಿ ಹಣ ಮಾಡುವ ವ್ಯಾಪಾರಿ ಚಿತಗ್ರಳು ಎಂದು ವರ್ಗೀಕರಿಸಿ ನೋಡುತ್ತಿದ್ದ ದಿನಗಳಲ್ಲಿ, ‘ಸಿನೆಮಾ ಎಂದರೆ ಹೀರೋ ಇರಬೇಕು, ಈ ಹೀರೋ ಜನಪ್ರಿಯ ವರ್ಚಸ್ವೀ ನಟನೇ ಆಗಿರಬೇಕು, ಡಿಶುಂಡಿಶುಂ ಇರಲೇಬೇಕು’ಎನ್ನುವ ಪರಿಕಲ್ಪನೆ ಇದ್ದ ದಿನಗಳಲ್ಲಿ, ‘ನಾಯಕ-ಪ್ರತಿನಾಯಕ’ ಕಲ್ಪನೆಗಳನ್ನು ಭಂಗಿಸಿ ‘ಸಿನೆಮಾದಲ್ಲಿ ಚಿತ್ರ ಕಥೆಯೇ ಹೀರೋ’ ಎಂಬ ಹೊಸ ಪರಿಕಲ್ಪನೆಯಿಂದ ಕನ್ನಡ ಚಿತ್ರ ರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದವರು ಕಾಶೀನಾಥ್.

ಕಾಶೀನಾಥ್ ಮುಖ್ಯವಾಗಿ ಚಿತ್ರ ನಿರ್ದೇಶಕರು. ಸಾಮಾನ್ಯವಾಗಿ ಎಲ್ಲ ಚಿತ್ರ ನಿರ್ದೇಶಕರುಗಳೂ ಮಾಡುವಂತೆ ಅವರೇ ತಮ್ಮ ಸಿನೆಮಾಗಳಿಗೆ ತಾವೇ ಚಿತ್ರ ಕಥೆ ರಚಿಸಿದ್ದಾರೆ; ಸಂಭಾಷಣೆಗಳನ್ನು ಬರೆದಿದ್ದಾರೆ; ಹಾಡುಗಳನ್ನು ಬರೆದಿದ್ದಾರೆ.ತಮ್ಮ ಚಿತ್ರಗಳಿಗೆ ಆಯ್ಕೆ ಮಾಡಿಕೊಂಡಿರುವ ವಸ್ತು, ಅವರ ಚಿತ್ರ ಕಥೆಗಳು, ಅವರ ಸಂಭಾಷಣೆಗಳು ಅವರನ್ನು ವಿವಾದ ಕೇಂದ್ರಿತವಾಗಿಸಿವೆ. ಕಾಶೀನಾಥರ ಸಂಭಾಷಣೆಗಳಲ್ಲಿನ ದ್ವಂದ್ವಾರ್ಥಗಳು, ಈ ಸಂಭಾಷಣೆಗಳಲ್ಲಿನ ಲೈಂಗಿಕ ಧ್ವನಿಗಳು ಮಡಿವಂತ ಪ್ರೇಕ್ಷಕರನ್ನು ಬೆಚ್ಚಿಬೀಳಿಸಿರುವುದೂ ಉಂಟು. ಅಂತೆಯೇ ಯುವ ಜನಾಂಗಕ್ಕೆ ಖುಷಿ ಕೊಟ್ಟಿರುವುದೂ ನಿಜ. ಲೈಂಗಿಕ ದನಿಗಳಿರಬಹುದಾದ ಸಂಭಾಷಣೆಗಳಷ್ಟನ್ನೇ ಅಲಾಯಿದವಾಗಿ ನೋಡಿ ‘ಅಶ್ಲೀಲ’ಎಂಬ ಹಣೆಪಟ್ಟಿಕಟ್ಟುವುದು ಅನ್ಯಾಯದ ವಿಮರ್ಶೆಯಾಗುತ್ತದೆ.

ಕಾಶೀನಾಥರ ಚಿತ್ರಗಳಲ್ಲಿ ಪೌಗಂಡ ವಯಸ್ಕರ ಮನೋಚಿತ್ರಗಳಿರುವಂತೆಯೇ ಸಾಮಾಜಿಕ ವಿಮರ್ಶೆಯೂ ಇದೆ.ಇದಕ್ಕೆ ನಿದರ್ಶನವಾಗಿ ‘ಅವಳೇ ನನ್ನ ಹೆಂಡ್ತಿ’ ಚಿತ್ರವನ್ನು ಗಮನಿಸಬಹುದು. ಇಲ್ಲಿ ಮನೋರಂಜನೆಯಿದ್ದರೂ ವರದಕ್ಷಿಣೆ ವಿರುದ್ಧ ಪ್ರತಿಭಟನೆಯೇ ಮುಖ್ಯ ದನಿ. ಚರ್ಚಿಸಬಹುದಾದ ಇಂಥ ಇನ್ನೂ ಕೆಲವು ಚಿತ್ರಗಳನ್ನು ಕಾಶೀನಾಥ್ ಮಾಡಿದ್ದಾರೆ. ಹಾಲಿವುಡ್/ಬಾಲಿವುಡ್ ಚಿತ್ರಗಳಲ್ಲಿ ಇಂದು ನಾವು ಪ್ರಧಾನವಾಗಿ ಕಾಣುವ ಕ್ರೌರ್ಯ-ಹಿಂಸಾಚಾರಗಳು ಕಾಶೀನಾಥರ ಪ್ರಿಯವಾದ ಪೇಯವಲ್ಲ. ಕ್ರೌರ್ಯ ನನಗಿಷ್ಟವಿಲ್ಲ. ಎಂದೇ ಹಾಸ್ಯ ಚಿತ್ರಗಳನ್ನು ಮಾಡುತ್ತೇನೆ ಎಂದಿರುವ ಕಾಶೀನಾಥರ ಮುಖ್ಯ ಕಾಳಜಿ ಯುವ ಮನಸ್ಸುಗಳ ಮೂಲಕ ಸಮಾಜವನ್ನು ತೆರೆದು ತೋರುವುದೇ ಆಗಿದೆ. ಈ ದರ್ಶನದಲ್ಲಿ, ಅಕ್ಷತ ಯುವಮನಸ್ಸುಗಳ ಅನಾವರಣ, ಸಾಮಾಜಿಕ ವಿಡಂಬನೆ, ವಿಮರ್ಶೆಗಳು ಅನಾವರಣಗೊಳ್ಳುತ್ತವೆ.

ಎಂದೇ ಕಾಶೀನಾಥರ ಚಿತ್ರಗಳನ್ನು ಪೋಲಿ ಚಿತ್ರಗಳು ಎಂದು ಕರೆಯುವ ಬದಲು ಚಾರ್ಲಿಚಾಪ್ಲಿನ್ ಮಾದರಿಯ ಸ್ವವಿಮರ್ಶೆಯ ಸಾಮಾಜಿಕ ನಿರೂಪಣೆಗಳೆಂಬ ನಿಟ್ಟಿನಲ್ಲಿ ನೋಡುವುದು ಯೋಗ್ಯವಾದೀತು. ‘ಚೌಕ’(2017) ಕಾಶೀನಾಥರ ಕೊನೆಯ ಚಿತ್ರ. ಹನ್ನೊಂದು ಕನ್ನಡ, ಒಂದು ಹಿಂದಿ ಮತ್ತು ಒಂದು ತೆಲುಗು ಚಿತ್ರಗಳನ್ನು ನಿರ್ದೇಶಿಸಿದ್ದ ಕಾಶೀನಾಥರಿಗೆ ವಿಶ್ವಾತ್ಮ ವಸ್ತುವನ್ನೊಳಗೊಂಡ ಇಂಗ್ಲಿಷ್ ಚಿತ್ರವೊಂದನ್ನು ನಿರ್ದೇಶಿಸುವ ಆಸೆ ಇತ್ತು.ಕನ್ನಡ ಚಿತ್ರೋದ್ಯಮದಲ್ಲಿ ತಮ್ಮ ಹೆಜ್ಜೆಗುರುತುಗಳನ್ನು ಸ್ಪಷ್ಟವಾಗಿ ಬಿಟ್ಟು ಹೋಗಿರುವ ಕಾಶೀನಾಥರ ನಿಧನದಿಂದ ಒಬ್ಬ ಪ್ರಯೋಗಶೀಲ ಚಲಚಿತ್ರ ನಿರ್ದೇಶಕನನ್ನು ಕಳೆದುಕೊಂಡಂತಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)