ಬಾಲಿವುಡ್ ನಲ್ಲಿ ದುಲ್ಖರ್ ಸಲ್ಮಾನ್ ಎರಡನೇ ಚಿತ್ರಕ್ಕೆ ನಾಯಕಿ ಯಾರು ?
ಮುಂಬೈ,ಜ.24 : ಖ್ಯಾತ ಮಲಯಾಳಂ ನಟ ಮಮ್ಮುಟ್ಟಿ ಅವರ ಪುತ್ರ ಹಾಗೂ ಮಲಯಾಳಂನ ಸ್ಟಾರ್ ನಟ ದುಲ್ಖರ್ ಸಲ್ಮಾನ್ ಅವರು ಆಕಾಶ್ ಖುರಾನ ಅವರ ಹೊಸ ಚಿತ್ರ 'ಕ್ಯಾರವಾನ್' ಮೂಲಕ ಬಾಲಿವುಡ್ ಗೆ ಎಂಟ್ರಿ ನೀಡುತ್ತಿರುವುದು ಈಗಾಗಲೇ ತಿಳಿದಿರುವ ವಿಚಾರ. ಈ ರೊಮ್ಯಾಂಟಿಕ್ ಕಾಮಿಡಿ ಚಿತ್ರದಲ್ಲಿ ಇರ್ಫಾನ್ ಖಾನ್ ಹಾಗೂ ಮಿಥಿಲಾ ಪಾಲ್ಕರ್ ಅವರಿಗೂ ಪ್ರಮುಖ ಪಾತ್ರಗಳಿವೆ. ಇದೀಗ ಹೊರಬಿದ್ದಿರುವ ಇನ್ನೊಂದು ಸುದ್ದಿಯೆಂದರೆ ದುಲ್ಖರ್ ಪಾಲಿಗೆ ಈಗ ಇನ್ನೊಂದು ಬಾಲಿವುಡ್ ಚಿತ್ರ ಒಲಿದು ಬಂದಿದೆ. ಈ ಚಿತ್ರದಲ್ಲಿ ಅವರಿಗೆ ಸೋನಂ ಕಪೂರ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅನುಜಾ ಚೌಹಾಣ್ ಅವರ 2008ರ ಕಾದಂಬರಿ ಝೋಯಾ ಫ್ಯಾಕ್ಟರ್ ಆಧರಿತ ಚಿತ್ರ ಇದಾಗಲಿದ್ದು ಅಭಿಷೇಕ್ ಶರ್ಮಾ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.
ಚಿತ್ರದಲ್ಲಿ ಪಿಆರ್ ಎಕ್ಸಿಕ್ಯುಟಿವ್ ಝೋಯಾ ಸಿಂಗ್ ಸೋಳಂಕಿ ಪಾತ್ರದಲ್ಲಿ ಸೋನಂ ಕಾಣಿಸಿಕೊಳ್ಳಿದ್ದಾರೆ. 1983ರಲ್ಲಿ ಭಾರತ ವಿಶ್ವ ಕಪ್ ಗೆದ್ದ ಕ್ಷಣದಲ್ಲಿಯೇ ಹುಟ್ಟಿದ್ದ ಝೋಯಾ ಖಾನ್ ಗೆ ಒಮ್ಮೆ ಭಾರತದ ಕ್ರಿಕೆಟ್ ತಂಡದ ಜತೆ ಉಪಾಹಾರ ಸೇವಿಸಲು ಆಹ್ವಾನ ದೊರೆಯುತ್ತದೆ. ಆ ದಿನದ ಪಂದ್ಯದಲ್ಲಿ ಭಾರತೀಯ ತಂಡ ಗೆದ್ದಾಗ, ತಂಡ ಹಾಗೂ ಮಾಧ್ಯಮ ಝೋಯಾಳನ್ನು ಅದೃಷ್ಟ ದೇವತೆ ಎಂದು ಹೊಗಳುತ್ತದೆ, ಆದರೆ ತಂಡದ ನಾಯಕ ನಿಖಿಲ್ ಖೋಡಾ ಮಾತ್ರ ಇದು ಅದೃಷ್ಟವಲ್ಲ ನಮ್ಮ ನಿರ್ವಹಣೆಯಿಂದಾಗಿ ದೊರೆತ ವಿಜಯ ಎಂದು ಹೇಳುತ್ತಾನೆ. ಝೋಯಾ ಚಿತ್ರದುದ್ದಕ್ಕೂ ಕ್ರಿಕೆಟ್ ನಾಯಕನ ಜತೆಗೆ ಲವ್-ಹೇಟ್ ಸಂಬಂಧ ಹೊಂದುತ್ತಾಳೆ. ಖೋಡಾ ಪಾತ್ರದಲ್ಲಿ ದುಲ್ಖರ್ ಕಾಣಿಸಿಕೊಳ್ಳಲಿದ್ದಾರೆ.