varthabharthi

ನೇಸರ ನೋಡು

‘ದುರ’ಭಿವ್ಯಕ್ತಿ ಸ್ವಾತಂತ್ರ

ವಾರ್ತಾ ಭಾರತಿ : 28 Jan, 2018
ಜಿ.ಎನ್.ರಂಗನಾಥ ರಾವ್

ಸಂವಿಧಾನದ ಪ್ರಕಾರ ಎಲ್ಲ ಪ್ರಜೆಗಳಿಗೂ ಸಮಾನವಾಗಿ ಅಭಿವ್ಯಕ್ತಿ ಸ್ವಾತಂತ್ರವಿದೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಎನ್ನುವುದು ಬಲಾಢ್ಯರಿಗೆ ಮಾತ್ರ ಎನ್ನುವಂತಾಗಿದೆ. ಇದರಿಂದಾಗಿ ಅಭಿವ್ಯಕ್ತಿ ಸ್ವಾತಂತ್ರ ಎನ್ನುವುದು ಇಂದು ಸಮಾನ ಹಕ್ಕಿನ ಸ್ವಾತಂತ್ರವಾಗಿ ಉಳಿದಿಲ್ಲ. ಅದು ಒಂದು ಗುಂಪು ಅಥವಾ ಒಂದು ಸಮುದಾಯದ ಪ್ರಾಬಲ್ಯದ ಉಗ್ರಸ್ವರೂಪಿ ಪ್ರತಿಪಾದನೆಯ ಅಸ್ತ್ರವಾಗಿ ಪರಿಣಮಿಸಿದೆ. ಕೆಲವೇ ಜನರು ತಮ್ಮ ತೋಳ್ಬಲ, ಧನಬಲ ಮೊದಲಾದ ಪ್ರಭುತ್ವ-ಪ್ರಾಬಲ್ಯಗಳ ಪ್ರದರ್ಶನಕ್ಕಾಗಿ ಅಭಿವ್ಯಕ್ತಿ ಸ್ವಾತಂತ್ರವನ್ನು ಬಲಿಪಶುಮಾಡಿದ್ದಾರೆ. ಅಧಿಕಾರದಲ್ಲಿರುವ ರಾಜಕೀಯ ಪಕ್ಷದ ಬೆಂಬಲವುಳ್ಳ ಸಣ್ಣಪುಟ್ಟ ಗುಂಪುಗಳು/ಸಂಘಟನೆಗಳು, ನ್ಯಾಯಾಂಗವೂ ಸೇರಿದಂತೆ ಎಲ್ಲರೂ ತಮ್ಮ ಇಷ್ಟ-ಅನಿಷ್ಟಗಳಿಗೆ ತಲೆಬಾಗಬೇಕೆಂದು ನಿರೀಕ್ಷಿಸುತ್ತವೆ.


ಮನುಷ್ಯರು ಹೆಚ್ಚುಹೆಚ್ಚು ವಿದ್ಯಾವಂತರೂ ಪ್ರಜ್ಞಾವಂತರೂ ಆದಂತೆ, ರಾಜಕೀಯ ಪ್ರಬುದ್ಧತೆ ಗಳಿಸಿದಂತೆ ಹತ್ತೊಂಬತ್ತು ಇಪ್ಪತ್ತನೆಯ ಶತಮಾನಗಳಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಸಂಗತಿಗಳೆಂದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ವೈಜ್ಞಾನಿಕ ಮನೋಭಾವ. ಇಂದು ಯಾವುದೇ ನಾಗರಿಕ ಸಮಾಜ ಮಾತನಾಡುವ ಮುಕ್ತ ಸ್ವಾತಂತ್ರ್ಯವನ್ನು ಬಯಸುತ್ತದೆ. ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಲು ಇಷ್ಟಪಡುತ್ತದೆ. ಹೀಗಾಗಿ ಇವೆರಡೂ ಇವತ್ತಿನ ಜೀವನ ಮೌಲ್ಯಗಳಾಗಿ ಪರಿಣಮಿಸಿವೆ. ಈ ಮಾತಿಗೆ ನಮ್ಮ ದೇಶವೂ ಹೊರತಲ್ಲ. ಈಚಿನ ದಿನಗಳಲ್ಲಂತೂ ನಾವು ಈ ಮೌಲ್ಯಗಳ ಬಗ್ಗೆ ಹೆಚ್ಚು ಜಾಗೃತರಾಗಿ ಚರ್ಚಿಸುತ್ತಿದ್ದೇವೆ.

 ಅಭಿವ್ಯಕ್ತಿ ಸ್ವಾತಂತ್ರ್ಯ ನಮಗೆ ಸಂವಿಧಾನದತ್ತವಾದುದು. ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕಾದ ಅಗತ್ಯವನ್ನು ನಮ್ಮ ಸಂವಿಧಾನದ ಮೂಲಭೂತ ಕರ್ತವ್ಯಗಳ ಪರಿಚ್ಛೇದದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ನಮ್ಮ ಮಂತ್ರಿಮಹೋದಯರು, ನೇತಾರರು, ರಾಜಕೀಯ ಕೃಪಾಪೋಷಿತ ಸಂಘಟನೆಗಳ ಸ್ವಘೋಷಿತ ಮುಖಂಡರುಗಳು ಇವತ್ತು ಮಾತನಾಡುತ್ತಿರುವ ವೈಖರಿ ಗಮನಿಸಿದರೆ ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಒಂದು ತೂಕ ಹೆಚ್ಚಾಗಿಯೇ ಇದೆ ಎಂದೆನ್ನಿಸಲೂಬಹುದು. ಸಂವಿಧಾನದಂತೆ ನಡೆದುಕೊಳ್ಳುವುದಾಗಿ ಪ್ರಮಾಣ ವಚನ ಸ್ವೀಕರಿಸಿರುವ ಮಂತ್ರಿಯೇ ಸಂವಿಧಾನವನ್ನು ಬದಲಾಯಿಸುವುದಾಗಿ ಹೇಳುತ್ತಾರೆ; ತಮ್ಮ ರಾಜ್ಯದ ಮುಖ್ಯ ಮಂತ್ರಿಗಳಿಗೆ ‘ಮುಂದಿದೆ ಮಾರಿಹಬ್ಬ’ ಎಂದು ಹಿಂಸಾಚಾರದ ಬೆದರಿಕೆ ಹಾಕುತ್ತಾರೆ; ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಪ್ರಜೆಗಳ ಹಕ್ಕು ಎಂಬುದನ್ನು ಮರೆತು ಪ್ರತಿಭಟನಾಕಾರರನ್ನು ಬೀದಿ ನಾಯಿಗಳೆಂದು ಹೀಗಳೆಯುತ್ತಾರೆ. ರಾಜ್ಯವೊಂದರ ಮುಖ್ಯಮಂತ್ರಿ ಮತ್ತೊಂದು ರಾಜ್ಯಕ್ಕೆ ಬಂದು, ಎಲ್ಲ ಶಿಷ್ಟಾಚಾರಗಳನ್ನೂ ಮರೆತು, ಆ ರಾಜ್ಯದ ಮುಖ್ಯಮಂತ್ರಿಗೆ ತಾನು ಹಿಂದೂ ಎಂಬುದನ್ನು ಋಜುವಾತುಪಡಿಸುವಂತೆ ಸವಾಲೊಡ್ಡುತ್ತಾರೆ. ಇನ್ನು ಕೆಲವು ಮಂದಿ ನೇತಾರರಂತೂ ಒಲ್ಲದ ಸಂಗತಿಗಳ ವಿರುದ್ಧ, ಇಷ್ಟವಾಗದವರ ವಿರುದ್ಧ ಖಂಡನೆ-ನಿಂದನೆಗಳ ಮುಕ್ತಾಫಲಗಳನ್ನೇ ಉದುರಿಸುತ್ತಾರೆ; ತಲೆ ತೆಗೆಯುವುದಾಗಿ ಹೇಳುತ್ತಾರೆ, ತಲೆ ತಂದುಕೊಟ್ಟವರಿಗೆ ಲಕ್ಷಲಕ್ಷ ರೂ. ಬಹುಮಾನ ಘೋಷಿಸುತ್ತಾರೆ.

ಈಚಿನ ದಿನಗಳಲ್ಲಿ ‘ಪದ್ಮಾವತಿ’ ಚಿತ್ರದ ಪ್ರಕರಣವಂತೂ ಸಮಕಾಲೀನ ಭಾರತೀಯ ಸಾಮಾಜಿಕ ಜೀವನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹಿಡಿದಿರುವ ಅಧಃಪತನದ ಹಾದಿಯನ್ನು ಸ್ಪಷ್ಟವಾಗಿ ಬಿಂಬಿಸುತ್ತಿದೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಮೌಲ್ಯದ ಬಗ್ಗೆ ನಾವೆಲ್ಲ ಗಾಢವಾಗಿ ಚಿಂತನಮಂಥನ ನಡೆಸಬೇಕಾದಂಥ ಪರಿಸ್ಥಿತಿ ಉದ್ಭವಿಸಿದೆ. ಇತ್ತೀಚಿನ ಈ ಎಲ್ಲ ಬೆಳವಣಿಗೆಗಳನ್ನೂ, ವಿದ್ಯಮಾನಗಳನ್ನೂ ಗಮನಿಸಿದಾಗ ಮೊದಲು ಅನ್ನಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯ ನಮಗೆಲ್ಲ ಎಷ್ಟು ಮುಖ್ಯ ಎಂಬುದು. ಅಭಿವ್ಯಕ್ತಿ ಸ್ವಾತಂತ್ರ್ಯದ ಮಹತ್ವದ ಅರಿವಿರುವುದು ಅದರ ಬಗ್ಗೆ ಕಾಳಜಿಯುಳ್ಳವರಿಗೆ ಮಾತ್ರವಲ್ಲ, ಅದನ್ನು ವಿರೋಧಿಸುವವರಿಗೂ, ಅದರ ಬಗ್ಗೆ ಲೇಷಮಾತ್ರವೂ ಗೌರವ ಇಲ್ಲದವರಿಗೂ ಅದರ ಮಹತ್ವದ ಅರಿವು ಇದೆ. ಇದೊಂದು ವಿಪರ್ಯಾಸ. ‘ಪದ್ಮಾವತ್’ ಚಿತ್ರದ ನಿದರ್ಶನವನ್ನೇ ತೆಗೆದುಕೊಳ್ಳೋಣ.

ಈ ಚಿತ್ರ ಸೃಜನಶೀಲ ನಿರ್ದೇಶಕರೊಬ್ಬರ ಕಲ್ಪಿತ ಸೃಷ್ಟಿ-ಅನಾಮಧೇಯ ಲೇಖಕನೊಬ್ಬನ ಸ್ವಕಪೋಲ-ಕಲ್ಪಿತ ಕಥೆಯನ್ನು ಆಧರಿಸಿದ ಸಿನೆಮಾ. ಇದರಿಂದ ತಮ್ಮ ಭಾವನೆಗಳಿಗೆ ಘಾತವಾಗಲಿದೆ, ಇದನ್ನು ಪ್ರದರ್ಶಿಸಬಾರದೆಂಬುದು ‘ಪದ್ಮಾವತಿ’ ವಿರುದ್ಧ ಪ್ರತಿಭಟಿಸುತ್ತಿರುವವರ ಅಂಬೋಣ. ತಮ್ಮೀ ವಿರೋಧ/ಪ್ರತಿಭಟನೆಯನ್ನು ಅಧಿಕಾರಶಕ್ತಿಗೆ ಮುಟ್ಟಿಸಲು ಅವರ ನೆರವಿಗೆ ಬಂದದ್ದು ಅಭಿವ್ಯಕ್ತಿ ಸ್ವಾತಂತ್ರ್ಯವೇ! ಅಷ್ಟೇ ಅಲ್ಲ ತಮ್ಮ ಪ್ರತಿಭಟನೆಯನ್ನು ಪ್ರಖರಗೊಳಿಸಲು ಹಾಗೂ ಪ್ರತಿಭಟನೆಯ ಬಿಸಿ ಮುಟ್ಟಿಸಲು ಅವರು ಅಭಿವ್ಯಕ್ತಿ ಸ್ವಾತಂತ್ರ್ಯದ ಎಲ್ಲ ಮಾಧ್ಯಮಗಳನ್ನೂ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ತಮ್ಮ ವಿರೋಧ ಪ್ರತಿಭಟನೆಗಳನ್ನು ವ್ಯಕ್ತಪಡಿಸಲು ಕರ್ಣಿ ಸೇನಾದಂಥ ಸಂಘಟನೆಗಳಿಗೆ ಆಡಳಿತ ಅವಕಾಶ ನಿರಾಕರಿಸಿದ್ದಿದ್ದರೆ, ಮುದ್ರಣ, ವಿದ್ಯುನ್ಮಾನ ಮೊದಲಾದ ಮಾಧ್ಯಮಗಳ ಲಾಭ ಪಡೆದುಕೊಳ್ಳದಂತೆ ತಡೆದಿದ್ದರೆ ಪ್ರತಿಭಟನಾಕಾರರಿಗೆ ತಮ್ಮ ಗುರಿ ಸಾಧಿಸುವುದು ಸಾಧ್ಯವಾಗುತ್ತಿರಲಿಲ್ಲ. ಪ್ರಜಾಪ್ರಭುತ್ವದಲ್ಲಿ ಅಭಿವ್ಯಕ್ತಿ ಸ್ವಾತಂತ್ರವೆನ್ನುವುದು ಎರಡು ಅಲುಗಿನ ಕತ್ತಿಯಿದ್ದಂತೆ. ಎಂದೇ ಅದನ್ನು ಎಚ್ಚರಿಕೆಯಿಂದ ಬಳಸಬೇಕಾಗುತ್ತದೆ.

ಇಲ್ಲವಾದಲ್ಲಿ ಎರಡೂ ಕಡೆ ಹಾನಿಯಾಗುವುದು ಖಚಿತ. ಅಭಿವ್ಯಕ್ತಿ ಮನುಷ್ಯರ ಸಹಜ ಪ್ರವೃತ್ತಿ. ತನ್ನ ಬಗ್ಗೆ, ತನಗನ್ನಿಸಿದ್ದರ ಬಗ್ಗೆ ಮಾತನಾಡುವುದು, ಪರರೊಂದಿಗೆ ತನ್ನ ಮತ-ಸಹಮತ-ವಿರೋಧಗಳನ್ನು ಹಂಚಿಕೊಳ್ಳುವ ತುಡಿತವನ್ನು ಎಲ್ಲ ಮಾನವ ಸಮುದಾಯಗಳಲ್ಲೂ ನಾವು ಕಾಣುತ್ತೇವೆ. ಅವರ ಈ ಅಭಿವ್ಯಕ್ತಿ ಮಾರ್ಗಗಳೂ ಹಲವಾರು. ಮಾತು, ಭಾಷಣ, ಸಂವಾದ, ಜಾನಪದ ಕಲೆ, ಶಿಷ್ಟಸಾಹಿತ್ಯ, ನಾಟಕ, ಸಿನೆಮಾ ಹೀಗೆ ಹಲವಾರು. ಆದರೆ ಎಷ್ಟೋ ವೇಳೆ ಇದು ತಲುಪಬೇಕಾದವರನ್ನು ತಲುಪದೇ ಹೋಗಬಹುದು ಅಥವಾ ಕೆಲವರು ಅದರಿಂದ ವಂಚಿತರಾಗಬಹುದು. ಆಗಷ್ಟೆ ಅದರ ಮಹತ್ವ ಅರಿವಿಗೆ ಬರುತ್ತದೆ. ಪ್ರಜಾಸತ್ತೆಯಲ್ಲಿ ಪ್ರತಿಯೊಬ್ಬ ಪ್ರಜೆಯ ಮಾತು, ಅಭಿಪ್ರಾಯಗಳೂ ಸರಕಾರದ ನೀತಿನಿರ್ಣಯಗಳಲ್ಲಿ ಮುಖ್ಯವಾಗುತ್ತವೆ. ಸಾರ್ವಜನಿಕ ಅಭಿಪ್ರಾಯಗಳು ಸಂಘಟಿತ ರೂಪದಲ್ಲಿ ವ್ಯಕ್ತವಾದಾಗ ಅದು ಹೆಚ್ಚು ಪರಿಣಾಮಕಾರಿಯಾಗಬಲ್ಲದು ಎಂಬುದಕ್ಕೆ ‘ಪದ್ಮಾವತಿ’ಯೇ ಒಂದು ಜ್ವಲಂತ ಉದಾಹರಣೆ. ಸಾರ್ವಜನಿಕ ಮಹತ್ವದ ವಿಷಯಗಳು ಸಂಘಟಿತ ಅಭಿವ್ಯಕ್ತಿ ಪಡೆದಾಗ ಮಾಧ್ಯಮಗಳು ಅವುಗಳನ್ನು ಕೈಗೆತ್ತಿಕೊಂಡು ನ್ಯಾಯ ದೊರಕಿಸಿಕೊಟ್ಟ ನಿದರ್ಶನಗಳೂ ಇವೆ. ಅಭಿವ್ಯಕ್ತಿ ಸ್ವಾತಂತ್ರ ಇಲ್ಲದ ದಿನಗಳಲ್ಲಿ ನಾವು ನಡೆಸಿದ ವಸಾಹತುಶಾಹಿ ವಿರೋಧಿ ಸತ್ಯಾಗ್ರಹಕ್ಕಿಂತ ಮಿಗಿಲಾದ ಇನ್ನೊಂದು ನಿದರ್ಶನಬೇಕಿಲ್ಲ. ಇದೆಲ್ಲದರಿಂದ ಅಭಿವ್ಯಕ್ತಿ ಸ್ವಾತಂತ್ರ ಪ್ರತಿಯೊಬ್ಬ ಪ್ರಜೆಯ ದೃಷ್ಟಿಯಿಂದಲೂ ಎಷ್ಟು ಮಹತ್ವದ್ದು ಎನ್ನುವುದು ಖಾತ್ರಿಯಾಗುತ್ತದೆ. ಆದರೆ ಅಭಿವ್ಯಕ್ತಿ ಸ್ವಾತಂತ್ರದ ಬಗ್ಗೆ ಇಷ್ಟೇಕೆ ಗಡಿಬಿಡಿಗೊಂದಲಗಳು, ಅಸಹನೆ-ಅಸಮಾಧಾನಗಳು?

ಅಭಿವ್ಯಕ್ತಿ ಸ್ವಾತಂತ್ರದ ಪರಿಣಾಮ/ಪ್ರತಿಪರಿಣಾಮಗಳು ಹೆಚ್ಚಾಗಿ ನಾವು ಈ ಮಹತ್ವಪೂರ್ಣ ಹತಾರವನ್ನು ಹೇಗೆ ಬಳಸುತ್ತೇವೆ ಎಂಬುದನ್ನೇ ಅವಲಂಬಿಸಿರುತ್ತದೆ. ಈ ಮಾತು ಜನಸಾಮಾನ್ಯರಿಗೆ, ಮಾಧ್ಯಮದವರಿಗೆ, ಸಾಹಿತಿ-ಕಲಾವಿದರಿಗೆ, ಸಿನೆಮಾದವರಿಗೆ, ತೀರ್ಪು ಬರೆಯುವ ನ್ಯಾಯಾಧೀಶರಿಗೆ ಎಲ್ಲರಿಗೂ ಸಮನಾಗಿ ಅನ್ವಯಿಸುವಂಥಾದ್ದು.ಇದನ್ನು ಯಾರೊಬ್ಬರೂ ಜವಾಬ್ದಾರಿ ಮರೆತು ಬೇಕಾಬಿಟ್ಟಿ ಬಳಸುವಂತಿಲ್ಲ.ಮಹಾತ್ಮ್ಮಾ ಗಾಂಧಿಯವರ ಈ ಮಾತುಗಳು ಇಂದಿನ ಪರಿಸ್ಥಿತಿಯಲ್ಲಿ ಮನನೀಯವಾದುದು:

‘‘ನನ್ನ ನಂಬಿಕೆಗಳಿಗೆ ಬದ್ಧನಾಗಿರುತ್ತಾ ನಾನು ಕೋಪದಿಂದಾಗಲಿ, ದ್ವೇಷದಿಂದಾಗಲೀ ಬರೆಯುವುದು ಸಾಧ್ಯವಿಲ್ಲ. ಜನರನ್ನು ಉದ್ರೇಕಗೊಳಿಸಲು ನಾನು ಬರೆಯಲಾರೆ. ವಾರವಾರವೂ ಬರೆಯುವಾಗ ವಿಷಯಗಳನ್ನು ಆರಿಸಿಕೊಳ್ಳುವುದರಲ್ಲಿಯೂ, ಭಾಷೆಯ ಬಳಕೆಯಲ್ಲೂ ಎಷ್ಟರಮಟ್ಟಿನ ಸಂಯಮವನ್ನು ನಾನು ತೋರಿಸಬೇಕಾಗುತ್ತದೆ ಎಂಬುದನ್ನು ಓದುಗರು ಊಹಿಸಲಾರರು. ನನಗೆ ಇದೊಂದು ಶಿಕ್ಷಣ. ನನ್ನೊಳಕ್ಕೆ ನಾನು ಇಣುಕಿ ನೋಡಿಕೊಳ್ಳುವುದಕ್ಕೂ, ನನ್ನ ದೌರ್ಬಲ್ಯಗಳನ್ನು ಅರಿಯುವುದಕ್ಕೂ ಇದು ಸಹಾಯಮಾಡುತ್ತದೆ...
   -(ಯಂಗ್ ಇಂಡಿಯಾ-1925).

ಬಾಪೂನ ಈ ಮಾತುಗಳು, ಭಾಷಣ, ಹೇಳಿಕೆ ಮೊದಲ್ಗೊಂಡು ಯಾವುದೇ ರೀತಿಯ ಅಭಿವ್ಯಕ್ತಿ ಕುರಿತಂತೆ ಎಲ್ಲರಿಗೂ ಅನ್ವಯಿಸುವ ಮಾತುಗಳು. ಸಾರ್ವಜನಿಕ ಅಭಿಪ್ರಾಯವನ್ನು ತಮ್ಮದೇ ಆದ ರೀತಿಯಲ್ಲಿ ಕ್ರೋಡೀಕರಿಸಿ ಮಂಡಿಸುವ ಸಂಘಟನೆಗಳೂ ಅದನ್ನು ಬಿಂಬಿಸುವ ಮಾಧ್ಯಮಗಳೂ ಮನನ ಮಾಡಬೇಕಾದ ಮಾತುಗಳು.ಸ್ವಹಿತಾಸಕ್ತಿ, ಸಮುದಾಯ ಹಿತಾಸಕ್ತಿ, ಅಹಂಕಾರ ಮೊದಲಾದ ದೌರ್ಬಲ್ಯಗಳಿಗೆ ಮಣಿದು, ಸಮಗ್ರ ಸಾಮಾಜಿಕ ಜವಾಬ್ದ್ದಾರಿಗಳನ್ನು ಮರೆತು, ಕೇವಲ ರಣೋತ್ಸಾಹದಿಂದ ಅಭಿವ್ಯಕ್ತಿ ಸ್ವಾತಂತ್ರವನ್ನು ಬಳಸಿದಾಗ ಅನಾಹುತಗಳೂ-ಅನ್ಯಾಯಗಳೂ ಆಗುತ್ತವೆ. ‘ಪದ್ಮಾವತ್’ ಹಗರಣದಲ್ಲಿ ನಾವು ಕಾಣುತ್ತಿರುವುದೂ ಇದನ್ನೇ.ಒಂದು ಸಮುದಾಯದ ಅಭಿವ್ಯಕ್ತಿ ಸ್ವಾತಂತ್ರದ ಹಕ್ಕು ಉಳಿದವರ ಹಕ್ಕಿಗಿಂತ ಹೆಚ್ಚಿನ ಪ್ರಾಶಸ್ತ್ಯ ಪಡೆದುಕೊಂಡಿರುವುದು ಈ ಹಗರಣದ ಮೂಲವ್ಯಾಧಿ. ಕರ್ಣಿ ಸೇನೆಯಂಥ ಸಂಘಟನೆಗಳಿಗೆ ಕಲಾವಿದನ ಸೃಜನಶೀಲ ಸ್ವಾತಂತ್ರ ಮತ್ತು ಅವನು ಆಯ್ದುಕೊಂಡಿರುವ ವಸ್ತುವಿನ ಬಗ್ಗೆ ಅವನ ತಟಸ್ಥ ಧೋರಣೆ ಈ ಸೂಕ್ಷ್ಮಗಳೆಲ್ಲ ಅರ್ಥವಾಗುವುದಿಲ್ಲ. ಪದ್ಮಿನಿ ಒಂದು ಕಾಲ್ಪನಿಕ ಪಾತ್ರ ಎಂಬುದನ್ನು ಅವರು ಒಪ್ಪುವುದಿಲ್ಲ. ಅವರಿಗೆ ಆ ಪಾತ್ರ ರಜಪೂತ ಸ್ತ್ರೀಯರ ಪ್ರಾತಿನಿಧಿಕವಾಗಿಯೇ ಕಾಣುತ್ತದೆ.

ಇತಿಹಾಸದ ರಜಪೂತ ರಾಣಿಯನ್ನೇ ಚಿತ್ರದಲ್ಲಿ ಬಿಂಬಿಸಲಾಗಿದೆ ಎಂದು ಚಿತ್ರ ನೋಡದೆಯೇ ನಂಬುತ್ತಾರೆ ಹಾಗೂ ತಮ್ಮ ಸಮುದಾಯದ ಕುರಿತು ಗುಣಾತ್ಮಕವಾದುದನ್ನು ಮಾತ್ರ ಹೇಳಬೇಕು, ದೌರ್ಬಲ್ಯಗಳನ್ನು ಅಭಿವ್ಯಕ್ತಿಸುವಂತಿಲ್ಲ. ತಮ್ಮ ಸಮುದಾಯದ ಭಾವನೆಗಳನ್ನು ಘಾಸಿಪಡಿಸುವಂಥ ನೇತ್ಯಾತ್ಮಕವಾದುದೇನನ್ನೂ ಹೇಳುವಂತಿಲ್ಲ. ಅಂದರೆ, ಸಂಘಟಿತವಾದ ಬಲಾಢ್ಯ ಸಮುದಾಯಕ್ಕೆ ತನ್ನ ಭಾವನೆಗಳನ್ನು ಅಭಿವ್ಯಕ್ತಗೊಳಿಸುವ ಸ್ವಾತಂತ್ರವಿದೆ-ಇದರ ಮುಂದೆ ಉಳಿದವರ ಅಭಿವ್ಯಕ್ತಿ ಸ್ವಾತಂತ್ರ ಗೌಣ.ಕಲೆ, ಸಾಹಿತ್ಯದಂಥ ಕಾಲ್ಪನಿಕ ಕಥನದಲ್ಲೂ ಇಂಥ ಸ್ವಾತಂತ್ರವಿರಕೂಡದು, ಕಲಾವಿದರ ದೃಷ್ಟಿಕೋನ ಎಷ್ಟೇ ನ್ಯಾಯಯುತವಾಗಿದ್ದರೂ ಸಮಂಜಸವಾಗಿದ್ದರೂ ಕೂಡದು ಎಂಬ ಊಳಿಗಶಾಹಿ ಶ್ರೇಣಿಬದ್ಧ ವ್ಯವಸ್ಥೆಯ ಮನೋಭಾವ ಈ ಧೋರಣೆಯಲ್ಲಿ ಸ್ಪಷ್ಟವಾಗುತ್ತದೆ. ಇಂಥ ಮನೋಭಾವದವರು ತಮ್ಮ ಸಮುದಾಯದ ಗೌರವಘನತೆಗಳ ನೆಪದಲ್ಲಿ ಅಭಿವ್ಯಕ್ತಿ ಸ್ವಾತಂತ್ರವನ್ನು ಹಿಂಸಾಚಾರ, ಬೆದರಿಕೆ ಹೀಗೆ ಯಾವ ಮಾರ್ಗದಲ್ಲಾದರೂ ಬಳಸಿಕೊಳ್ಳಬಹುದು, ನಾಗರಿಕ ಸಮಾಜವನ್ನು ನಿಯಂತ್ರಿಸಬಹುದು. ಸಂವಿಧಾನದ ಪ್ರಕಾರ ಎಲ್ಲ ಪ್ರಜೆಗಳಿಗೂ ಸಮಾನವಾಗಿ ಅಭಿವ್ಯಕ್ತಿ ಸ್ವಾತಂತ್ರವಿದೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಎನ್ನುವುದು ಬಲಾಢ್ಯರಿಗೆ ಮಾತ್ರ ಎನ್ನುವಂತಾಗಿದೆ.

ಇದರಿಂದಾಗಿ ಅಭಿವ್ಯಕ್ತಿ ಸ್ವಾತಂತ್ರ ಎನ್ನುವುದು ಇಂದು ಸಮಾನ ಹಕ್ಕಿನ ಸ್ವಾತಂತ್ರವಾಗಿ ಉಳಿದಿಲ್ಲ. ಅದು ಒಂದು ಗುಂಪು ಅಥವಾ ಒಂದು ಸಮುದಾಯದ ಪ್ರಾಬಲ್ಯದ ಉಗ್ರಸ್ವರೂಪಿ ಪ್ರತಿಪಾದನೆಯ ಅಸ್ತ್ರವಾಗಿ ಪರಿಣಮಿಸಿದೆ. ಕೆಲವೇ ಜನರು ತಮ್ಮ ತೋಳ್ಬಲ, ಧನಬಲ ಮೊದಲಾದ ಪ್ರಭುತ್ವ-ಪ್ರಾಬಲ್ಯಗಳ ಪ್ರದರ್ಶನಕ್ಕಾಗಿ ಅಭಿವ್ಯಕ್ತಿ ಸ್ವಾತಂತ್ರವನ್ನು ಬಲಿಪಶುಮಾಡಿದ್ದಾರೆ. ಅಧಿಕಾರದಲ್ಲಿರುವ ರಾಜಕೀಯ ಪಕ್ಷದ ಬೆಂಬಲವುಳ್ಳ ಸಣ್ಣಪುಟ್ಟ ಗುಂಪುಗಳು/ಸಂಘಟನೆಗಳು, ನ್ಯಾಯಾಂಗವೂ ಸೇರಿದಂತೆ ಎಲ್ಲರೂ ತಮ್ಮ ಇಷ್ಟ-ಅನಿಷ್ಟಗಳಿಗೆ ತಲೆಬಾಗಬೇಕೆಂದು ನಿರೀಕ್ಷಿಸುತ್ತವೆ. ‘ಪದ್ಮಾವತ್’ ಚಿತ್ರದ ನಟನಟಿಯರು, ನಿರ್ದೇಶಕರ ತಲೆದಂಡ/ಮೂಗುಮುಖಗಳ ದಂಡ ಕೇಳಿದ್ದು ಸಾಲದೆಂಬಂತೆ ಈ ಚಿತ್ರದ ಸಾರ್ವಜನಿಕ ಪ್ರದರ್ಶನಕ್ಕೆ ಅವಕಾಶವಿರಬೇಕೆಂದು ವಾದಿಸಿದ ಸುಪ್ರೀಂ ಕೋರ್ಟಿನ ಹಿರಿಯ ವಕೀಲರಿಗೆ, ಸೆನ್ಸಾರ್ ಮಂಡಳಿಯ ಅಧ್ಯಕ್ಷರಿಗೆ ಬೆದರಿಕೆ ಹಾಕಿರುವುದನ್ನು ಇಂಥ ಬಲಾಢ್ಯ ಧಾರ್ಷ್ಟ್ಯಕ್ಕೆ ನಿದರ್ಶನವಾಗಿ ಗಮನಿಸಬಹುದು. ಬಲಾಢ್ಯರ ಇಂಥ ಶಕ್ತಿಯ ಉಗ್ರ ಪ್ರದರ್ಶನದಿಂದಾಗಿ ಬಾಲಿವುಡ್ ಚಿತ್ರೋದ್ಯಮವೂ ಜುಜುಬಿ ಸಂಘಟನೆಗಳ ಮುಂದೆ ಮೊಣಕಾಲೂರ ಬೇಕಾಯಿತು. ಚಿತ್ರ ಪ್ರದರ್ಶನ ನಿಷೇಧಿಸಲು ನಿರಾಕರಿಸಿ, ಕಾಯ್ದೆ ಸುವ್ಯವಸ್ಥೆ ಪಾಲನೆ ರಾಜ್ಯ ಸರಕಾರಗಳ ಜವಾಬ್ದಾರಿಯೆಂದು ಸುಪ್ರೀಂ ಕೋರ್ಟ್ ಸ್ಪಷ್ಟ ತೀರ್ಪು ನೀಡಿದ ನಂತರವೂ ಕೆಲವು ರಾಜ್ಯಗಳು ‘ಪದ್ಮಾವತ್’ ಪ್ರದರ್ಶನಕ್ಕೆ ಅವಕಾಶ ನೀಡದಿರುವುದು ನ್ಯಾಯಾಂಗ ಮತ್ತು ಅಭಿವ್ಯಕ್ತಿ ಸ್ವಾತಂತ್ರದ ಬಗ್ಗೆ ಅವುಗಳಿಗಿರುವ ತಿರಸ್ಕಾರ ಮನೋಭಾವವನ್ನು ತೋರಿಸುತ್ತದೆ.

ಓಟು ಬ್ಯಾಂಕು ರಾಜಕಾರಣ, ಧರ್ಮಕಾರಣ ಮೊದಲಾದ ನೆಪಗಳಿಂದ ಇಂಥ ಜುಜುಬಿ ಸಂಘಟನೆಗಳ ಓಲೈಕೆ ಭಸ್ಮಾಸುರನನ್ನು ತಲೆಯಮೇಲೆ ಕೂಡಿಸಿಕೊಂಡಂತೆ ಎಂಬುದು ನಮ್ಮ ರಾಜಕೀಯ ಪಕ್ಷಗಳಿಗೆ ಇನ್ನೂ ಮನವರಿಕೆ ಆದಂತಿಲ್ಲ. ಎರಡು ಮೂರು ಬಿಜೆಪಿ ಆಳ್ವಿಕೆಯ ರಾಜ್ಯಗಳು ಹೊರತು ಉಳಿದೆಡೆಗಳಲ್ಲಿ ‘ಪದ್ಮಾವತ್’ ಪ್ರದರ್ಶನಗೊಳ್ಳುತ್ತಿದ್ದು, ಚಿತ್ರವನ್ನು ಜನ ಮೆಚ್ಚಿಕೊಂಡಿದ್ದಾರೆ. ಪದ್ಮಿನಿಯ ಪಾತ್ರ ನಿರೂಪಣೆ ಕಳಂಕರಹಿತ ಎಂದೂ ಚಿತ್ರರಸಿಕರು ಹೇಳುತ್ತಿದ್ದಾರೆ. ಪ್ರತಿಭಟನಾಕಾರರು ಮತ್ತು ಅವರನ್ನು ಬೆಂಬಲಿಸುತ್ತಿರುವವರ ಮುಖವಾಡಗಳು ಕಳಚಿಬಿದ್ದಿವೆ. ಅಭಿವ್ಯಕ್ತಿ ಸ್ವಾತಂತ್ರವನ್ನು ಹೀಗೆ ವಿಕೃತಗೊಳಿಸುವ ಪ್ರವೃತ್ತಿ ಯಕಃಶ್ಚಿತ್ ಕೆಲವು ಸಂಘಟನೆಗಳಿಗೆ ಮಾತ್ರ ಸೀಮಿತವಲ್ಲ. ನಮ್ಮ ಮಂತ್ರಿಮಹೋದಯರಲ್ಲೂ ಅಭಿವ್ಯಕ್ತಿ ಸಾತಂತ್ರ್ಯವಿದೆ ಎನ್ನುವ ಕಾರಣಕ್ಕಾಗಿ ಬಾಯಿಗೆ ಬಂದದನ್ನು ವದರಿ ತಮ್ಮ ಅಜ್ಞಾನ ಪ್ರದರ್ಶಿಸುವವರಿಗೇನೂ ಕೊರತೆ ಇಲ್ಲ. ಕೆಲವರ ಆರ್ಷೇಯ ಭಾರತದ ಮೇಲಿನ ಅಂಧ ಅಭಿಮಾನ ವಿಜ್ಞಾನತಂತ್ರಜ್ಞಾನಗಳ ಸಂಶೋಧನೆ-ಅನ್ವೇಷಣೆಗಳನ್ನು ತಳ್ಳಿಹಾಕುವಷ್ಟು ಪರಮಾವಧಿಗೇರಿರುವ ಉದಾಹರಣೆಗಳೂ ಇವೆ. ಈಚೆಗೆ ಕೇಂದ್ರ ಸಚಿವರೊಬ್ಬರು ಐನ್‌ಸ್ಟೈನ್‌ನ ಗುರುತ್ವಾಕರ್ಷಕ ಸಿದ್ಧಾಂತವನ್ನು ಅವನಿಗೂ ಮೊದಲು ಭಾರತೀಯರೇ ಕಂಡುಹಿಡಿದಿದ್ದರು ಎಂದು ಉಗ್ಗಡಿಸಿದ್ದುಂಟು. ಮಾನವ ಸಂಪನ್ಮೂಲ ಶಾಖೆಯ ಸಚಿವರಾದ ಸತ್ಯಪಾಲ ಸಿಂಗ್ ಅವರು ಡಾರ್ವಿನ್‌ನ ಮಾನವ ವಿಕಾಸ ಸಿದ್ಧಾಂತವನ್ನು ಅಲ್ಲಗಳೆದು ವಿಜ್ಞಾನಿಗಳನ್ನು ದಂಗುಬಡಿಸಿರುವುದು ದುರಭಿವ್ಯಕ್ತಿಯ ಮತ್ತೊಂದು ಪರಮಾವಧಿ.

‘‘ಡಾರ್ವಿನ್‌ನ ಸಿದ್ಧಾಂತ ತಪ್ಪು, ಅದನ್ನು ಶಾಲಾಕಾಲೇಜುಗಳ ಪಠ್ಯದಿಂದ ತೆಗೆದುಹಾಕಬೇಕು’’ ಎಂದು ಅಪ್ಪಣೆ ಕೊಡಿಸಿರುವ ಸಚಿವರು, ಮಾನವ ಸುಂದೋಪಸುಂದರನಾಗಿ ನೇರ ಧರೆಗಿಳಿದವನು ಎಂದು ನಂಬಿದಂತಿದೆ. ವಿಜ್ಞಾನ ಪದವೀಧರರಾದ ಈ ಸಚಿವರ ಬಗ್ಗೆ ಕನಿಕರ ಪಡುವಂತಾಗುತ್ತದೆ. ವಿಜ್ಞಾನಿಗಳು ಇಂಥ ಅಸಂಬದ್ಧ ಪ್ರಲಾಪಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿಲ್ಲ. ಆದರೆ, ಕೆಲವುವೇಳೆ ತರ್ಕವೈಚಾರಿಕತೆಗಳನ್ನು ಬದಿಗೆ ತಳ್ಳಿ ಇಂಥ ಅಸಂಬದ್ಧ ಪ್ರಲಾಪಗಳೇ ಮೇಲುಗೈ ಸಾಧಿಸುತ್ತಿರುವುದು ವರ್ತಮಾನದ ದುರಂತ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)